ಉಡುಪಿ: ಅಪಘಾತ ಎಸಗಿ ಸಾವಿಗೆ ಕಾರಣನಾದ ಆರೋಪಿ ಉಡುಪಿ -ಮಣಿಪುರದ ಮೊಹಮ್ಮದ್ ಆಸೀಫ್ನಿಗೆ (20) ಉಡುಪಿಯ 2ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಸೋಮನಾಥ್ ಅವರು 8 ತಿಂಗಳು ಸಾದಾ ಶಿಕ್ಷೆ ಹಾಗೂ 500 ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
2020ರಲ್ಲಿ ಆರೋಪಿ ಮೊಹಮ್ಮದ್ ಆಸೀಫ್(20) ತನ್ನ ಕಾರನ್ನು ಅಂಬಲಪಾಡಿ ಜಂಕ್ಷನ್ ಕಡೆಯಿಂದ ಕರಾವಳಿ ಜಂಕ್ಷನ್ ಕಡೆಗೆ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸೀತಾರಾಮ್ ಅವರಿಗೆ ಢಿಕ್ಕಿ ಹೊಡೆದಿದ್ದ ಪರಿಣಾಮ ತೀವ್ರ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದರು.
ಈ ಬಗ್ಗೆ ಉಡುಪಿ ಸಂಚಾರ ಠಾಣೆಯ ವೃತ್ತ ನಿರೀಕ್ಷಕರಾಗಿದ್ದ ಮಂಜುನಾಥ ಅವರು ತನಿಖೆ ನಡೆಸಿ ದೋಷಾರೋಪಣ ಪತ್ರ ಸಲ್ಲಿಸಿದ್ದರು.ಈ ಪ್ರಕರಣವು ಉಡುಪಿಯ 1ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಬಳಿಕ 2ನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು.
ಸಾಕ್ಷ್ಯ ಹಾಗೂ ವಾದ ವಿವಾದವನ್ನು ಆಲಿಸಿದ ಬಳಿಕ ಆರೋಪ ಸಾಬೀತಾದ ಕಾರಣ ಶಿಕ್ಷೆ ವಿಧಿಸಲಾಗಿದೆ. ಸರಕಾರದ ಪರವಾಗಿ ಹಿರಿಯ ಸರಕಾರಿ ಅಭಿಯೋಜಕಿ ಜಯಂತಿ ಕೆ.ವಾದ ಮಂಡಿಸಿದರು.