Advertisement

ಉಡುಪಿ: ಅತಿವೇಗದಿಂದ ಬೈಕ್ ಚಲಾಯಿಸಿ ಅಪಘಾತ, ಮಹಿಳೆ ಸಾವು: ಆರೋಪಿಗೆ ಶಿಕ್ಷೆ

10:27 AM Apr 28, 2022 | Team Udayavani |

ಉಡುಪಿ:ಅತಿವೇಗ, ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಬೈಕ್‌ ಚಲಾಯಿಸಿ, ಹಿಂಬದಿ ಕುಳಿತಿದ್ದ ಮಹಿಳೆಯ ಸಾವಿಗೆ ಕಾರಣವಾದ ಆರೋಪಿಗೆ ನಗರದ ಒಂದನೇ ಹೆಚ್ಚುವರಿ ಸಿ.ಜೆ. ಮತ್ತು ಜೆ.ಎಂ. ಎಫ್.ಸಿ. ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

Advertisement

ಇದನ್ನೂ ಓದಿ:‘ಹಿಂದಿ ರಾಷ್ಟ್ರ ಭಾಷೆ ವಿವಾದ’; ಕಿಚ್ಚ ಸುದೀಪ್ ಗೆ ಕುಮಾರಸ್ವಾಮಿ ಬೆಂಬಲ

2017ರ ಅ. 21ರಂದು ಸಂಜೆ 5. 15ರ ಸುಮಾರಿಗೆ ಪ್ರತಾಪ ಸುದರ್ಶನ ಶೆಟ್ಟಿ ಎಂಬಾತ ಜಯಲಕ್ಷ್ಮೀ ಅವರನ್ನು ಬೈಕಿನ ಹಿಂಬದಿ ಕೂರಿಸಿಕೊಂಡು, ಅತಿವೇಗ, ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದಾಗ ಉಡುಪಿ ತಾ| ಪುತ್ತೂರು ಗ್ರಾಮದ ರೊಬೋಸಾಫ್ಟ್ ಟೆಕ್ನಾಲಜೀಸ್‌ ಪ್ರೈ ಲಿ. ಕಂಪೆನಿಯ ಎದುರು ಚಂದ್ರಾವತಿಯವರು ಚಲಾಯಿಸುತ್ತಿದ್ದ ಸ್ಕೂಟರ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಅವರು ಸ್ಕೂಟರ್‌ ಸಹಿತ ರಸ್ತೆಗೆ ಬಿದ್ದು ತಿರುಚಿದ ಗಾಯವಾಗಿತ್ತು. ಬೈಕ್‌ನಲ್ಲಿ ಸಹಸವಾರರಾಗಿದ್ದ ಜಯಲಕ್ಷ್ಮೀ ಅವರು ರಸ್ತೆಗೆ ಬಿದ್ದು, ತಲೆಗೆ ಮತ್ತು ದೇಹದ ಇತರ ಭಾಗಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಮೃತಪಟ್ಟಿರುವುದಾಗಿ ತಿಳಿಸಿದ್ದರು.

ಆರೋಪಿಯು ಅಪಘಾತದ ಅನಂತರ ಬೈಕನ್ನು ನಿಲ್ಲಿಸದೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸದೆ ಸ್ಥಳದಿಂದ ಪರಾರಿಯಾಗಿರುವ ಹಿನ್ನೆಲೆಯಲ್ಲಿ ಉಡುಪಿ ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಗರದ ಒಂದನೇ ಹೆಚ್ಚುವರಿ ಸಿ.ಜೆ. ಮತ್ತು ಜೆ.ಎಂ. ಎಫ್. ಸಿ. ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ ಪ್ರಕಾಶ್‌ ಅವರು ಆರೋಪಿ ಪ್ರತಾಪ ಸುದರ್ಶನ ಶೆಟ್ಟಿಗೆ 2 ವರ್ಷದ ಜೈಲು ಶಿಕ್ಷೆ ಹಾಗೂ 11,500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಮೋಹಿನಿ ಕೆ. ವಾದ ಮಂಡಿಸಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next