ಉಡುಪಿ: ಚಿಕ್ಕ ವಯಸ್ಸಿನಲ್ಲಿಯೇ ಮನೆಯವರಿಂದ ದೂರವಾಗಿ ಸರಕಾರದ ಆಶ್ರಯದಲ್ಲಿ ಬೆಳೆದಿದ್ದ ಯುವತಿಗೆ ಜಿಲ್ಲಾಡಳಿತವೇ ಮುಂದೆ ನಿಂತು ಶುಕ್ರವಾರ (ಆ23) ಶುಭ ಮುಹೂರ್ತದಲ್ಲಿ ಮದುವೆ ಕಾರ್ಯ ನೆರವೇರಿಸಿದೆ.
ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೆತ್ತವರ ಸ್ಥಾನದಲ್ಲಿ ನಿಲ್ಲುವ ಮೂಲಕ ಯುವತಿಯ ಸಾಂಸಾರಿಕ ಬದುಕಿಗೆ ದಾರಿ ಮಾಡಿಕೊಟ್ಟಿದ್ದಾರೆ. ಮಹಿಳಾ ನಿಲಯದ ಸಭಾಂಗಣದಲ್ಲಿ ಪ್ರಸನ್ನ ಭಟ್ ಮೂಡುಬೆಳ್ಳೆ ಅವರ ಪೌರೋಹಿತ್ಯದಲ್ಲಿ ಶಾಸ್ತ್ರೋಕ್ತವಾಗಿ ವಿವಾಹ ನೆರವೇರಿತು. ಜಿಲ್ಲಾಧಿಕಾರಿ ಡಾ ಕೆ.ವಿದ್ಯಾಕುಮಾರಿ ಅವರು ಧಾರೆ ಎರೆಯುವ ಮೂಲಕ ಹೆತ್ತಮ್ಮನ ಸ್ಥಾನ ತುಂಬಿದರು.
ಗುಜರಾತ್ ಮೂಲದ ಆರು ವರ್ಷದ ಬಾಲಕಿಯಿದ್ದಾಗ ಮನೆಯವರಿಂದ ದೂರವಾಗಿದ್ದ ಖುಷ್ಬು ಸುಮೇರ ಅವರು ಮೊದಲಿಗೆ ಕಾರವಾರದಲ್ಲಿದ್ದು, ಅನಂತರ ಉಡುಪಿ ಬಾಲಕಿಯರ ಮಂದಿರದಲ್ಲಿ ಆಶ್ರಯ ಪಡೆದಿದ್ದರು. ಪಿಯುಸಿವರೆಗೆ ಶಿಕ್ಷಣ ಪೂರೈಸಿದ್ದ ಇವರು ನಿಟ್ಟೂರು ಮಹಿಳಾ ನಿಲಯದಲ್ಲಿ ನಿವಾಸಿನಿಯಾಗಿ ಮಕ್ಕಳ ರಕ್ಷಣ ಘಟಕದಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದರು. ತೀರ್ಥಹಳ್ಳಿ ನಿವಾಸಿ ಮಧುರಾಜ್ ಎ. ಡಿ.ಅವರೊಂದಿಗೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.
ಮಧುರಾಜ್ ಅವರು ತೀರ್ಥಹಳ್ಳಿಯಲ್ಲಿ 4 ಎಕ್ರೆ ಕೃಷಿ ಭೂಮಿ ಮತ್ತು ಸ್ವಂತ ಕ್ಯಾಟರಿಂಗ್ ಉದ್ಯಮವನ್ನು ನಡೆಸುತ್ತಿದ್ದಾರೆ. ವಿವಾಹ ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು, ವಿವಿಧ ಗಣ್ಯರು, ಪತ್ರಕರ್ತರು, ವರನ ಕುಟುಂಬಸ್ಥರು ಸಾಕ್ಷಿಯಾಗಿ ಜೋಡಿಗಳಿಗೆ ಶುಭಹಾರೈಸಿದರು. ಮಹಿಳಾ ನಿಲಯದ ಅಧೀಕ್ಷಕಿ ಪುಷ್ಪಾರಾಣಿ ಅವರ ಉಪಸ್ಥಿತಿಯೊಡನೆ ಉಪ ನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿ ಪ್ರಕ್ರಿಯೆ ನಡೆಯಿತು.
ಶಾಸಕ ಯಶ್‌ಪಾಲ್ ಸುವರ್ಣ, ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ. ಪುರುಷೊತ್ತಮ್, ಎಎಸ್‌ಪಿ ಸಿದ್ದಲಿಂಗಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಶ್ಯಾಮಲಾ, ಇಲಾಖೆ ಅಧೀನದಲ್ಲಿ ವಿವಿಧ ಘಟಕದ ಅಧಿಕಾರಿ, ಸಿಬಂದಿ ಭಾಗವಹಿಸಿದ್ದರು.