Advertisement
ಕ್ಷೇತ್ರದ ಇತ್ತೀಚಿನ ಇತಿಹಾಸ ನೋಡಿದರೆ, ಕ್ಷೇತ್ರ ಪುನರ್ ವಿಂಗಡನೆಯ ಬಳಿಕ 2009ರಿಂದ 2019ರ ವರೆಗೆ ಇದು ಮೂರು ಸಾರ್ವತ್ರಿಕ ಚುನಾವಣೆ ಹಾಗೂ 1 ಉಪ ಚುನಾವಣೆಯನ್ನು ಕಂಡಿದೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ.
Related Articles
Advertisement
ಹೀಗಾಗಿ 2012ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆ ಬಿಜೆಪಿಯ ವಿ. ಸುನಿಲ್ ಕುಮಾರ್ ಅವರ ವಿರುದ್ಧ ಗೆಲುವು ಸಾಧಿಸಿದರು. 2014ರ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆಯವರು ಕಾಂಗ್ರೆಸ್‌ನ ಜಯಪ್ರಕಾಶ್ ಹೆಗ್ಡೆ ವಿರುದ್ಧ ಹಾಗೂ 2019ರಲ್ಲಿ ಶೋಭಾ ಅವರು ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿದ್ದ ಪ್ರಮೋದ್ ಮಧ್ವರಾಜ್ ವಿರುದ್ಧ ಗೆದ್ದಿದ್ದರು.
ವಿಶೇಷವೆಂದರೆ, ಉಡುಪಿ-ಚಿಕ್ಕಮಗಳೂರು ಒಂದೇ ಕ್ಷೇತ್ರವಿದ್ದಾಗಲೂ ಹಾಗೂ ಹಿಂದೆ ಪ್ರತ್ಯೇಕವಿದ್ದಾಗಲೂ ಮಹಿಳೆಯರಿಗೆ ಹೆಚ್ಚು ಮಣೆ ಹಾಕಿದೆ. 2014, 19ರಲ್ಲಿ ಶೋಭಾ ಕರಂದ್ಲಾಜೆ ಗೆದ್ದಿದ್ದಾರೆ. ಉಡುಪಿ ಪ್ರತ್ಯೇಕ ಕ್ಷೇತ್ರವಿದ್ದಾಗ 2004ರಲ್ಲಿ ಮನೋರಮಾ ಮಧ್ವರಾಜ್ ಬಿಜೆಪಿಯಿಂದ ಗೆದ್ದಿದ್ದರು. ಅವರು ಉಡುಪಿಯಿಂದ ಸಂಸತ್ತಿಗೆ ಆಯ್ಕೆಯಾದ ಮೊದಲ ಮತ್ತು ಏಕೈಕ ಮಹಿಳಾ ಜನಪ್ರತಿನಿಧಿ. ಅದರಂತೆಯೇ ಚಿಕ್ಕಮಗಳೂರು ಕ್ಷೇತ್ರ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಡಿ.ಕೆ.ತಾರಾದೇವಿ ಅವರನ್ನು ಗೆಲ್ಲಿಸಿತ್ತು.
ಉಡುಪಿ ಪ್ರತ್ಯೇಕವಾಗಿದ್ದಾಗ 1971ರಲ್ಲಿ ಆರ್.ರಂಗನಾಥ ಶೆಣೈ, 1977ರಲ್ಲಿ ಟಿ.ಎ.ಪೈ, 1980ರಿಂದ 1996ರ ವರೆಗೆ ಐದು ಅವಧಿಗೆ ಆಸ್ಕರ್ ಫೆರ್ನಾಂಡಿಸ್ ಕಾಂಗ್ರೆಸ್‌ನಿಂದ ಗೆದ್ದಿದ್ದರು. 1998ರಲ್ಲಿ ಐ.ಎಂ. ಜಯರಾಮ ಶೆಟ್ಟಿ ಬಿಜೆಪಿಯಿಂದ ಗೆದ್ದಿದ್ದು, 1999ರಲ್ಲಿ ವಿನಯಕುಮಾರ್ ಸೊರಕೆ ಅವರು ಈ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಮರಳಿ ತಂದುಕೊಟ್ಟರು. 2004ರಲ್ಲಿ ಮನೋರಮಾ ಮಧ್ವರಾಜ್ ಬಿಜೆಪಿಯಿಂದ ಸಂಸದರಾದರು.
1952ರಲ್ಲಿ ಕಾಫಿನಾಡು ಚಿಕ್ಕಮಗಳೂರು- ಹಾಸನ ಲೋಕಸಭಾ ಕ್ಷೇತ್ರವಾಗಿ ಮೊದಲ ಚುನಾವಣ ಭಾಗ್ಯ ಕಂಡಿತ್ತು. ಅನಂತರದಲ್ಲಿ 1967ರಲ್ಲಿ ಚಿಕ್ಕಮಗಳೂರು ಸ್ವತಂತ್ರ ಲೋಕಸಭಾ ಕ್ಷೇತ್ರವಾಯಿತು. 1952ರಿಂದ 1962ರ ವರೆಗೆ ಕಾಂಗ್ರೆಸ್‌ನ ಸಿದ್ದನಂಜಪ್ಪ, 1967ರಲ್ಲಿ ಪಿಎಸ್‌ಪಿಯ ಎಂ.ಹುಚ್ಚೇಗೌಡ, 1971ರಲ್ಲಿ ಎನ್‌ಸಿಜೆಯ ಡಿ.ಬಿ. ಚಂದ್ರೇಗೌಡ ಗೆದ್ದು, 1977ರಲ್ಲಿ ಕಾಂಗ್ರೆಸ್‌ನಿಂದ ಮತ್ತೆ ಗೆದ್ದಿದ್ದರು. 1978ರಲ್ಲಿ ಇಂದಿರಾ ಗಾಂಧಿ, 1980 ಮತ್ತು 1989ರಲ್ಲಿ ಡಿ.ಎಂ. ಪುಟ್ಟೇಗೌಡ ಗೆದ್ದಿದ್ದರು. 1984 ಮತ್ತು 1991ರಲ್ಲಿ ಡಿ.ಕೆ. ತಾರಾದೇವಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 1996ರಲ್ಲಿ ಜನತಾದಳದಿಂದ ಬಿ.ಎಲ್. ಶಂಕರ್, 1998ರಿಂದ 2004ರ ವರೆಗೆ ಬಿಜೆಪಿಯ ಡಿ.ಸಿ. ಶ್ರೀಕಂಠಪ್ಪ ಸಂಸದರಾಗಿದ್ದರು.
-ರಾಜು ಖಾರ್ವಿ ಕೊಡೇರಿ