Advertisement

ನರೇಗಾ ರಾಜ್ಯ ರ್‍ಯಾಂಕಿಂಗ್‌: ಉಡುಪಿಗೆ 4ನೇ ಸ್ಥಾನ

10:50 AM Jun 25, 2020 | sudhir |

ಉಡುಪಿ: ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಬಿಡುಗಡೆಗೊಳಿಸಿದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯ ರಾಜ್ಯ ಮಟ್ಟದ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಉಡುಪಿ 4ನೇ ಹಾಗೂ ದ.ಕ. ಜಿಲ್ಲೆ 26ನೇ ಸ್ಥಾನ ಪಡೆದುಕೊಂಡಿವೆ.

Advertisement

ಜೂನ್‌ ತಿಂಗಳಿನ ಜಿಲ್ಲಾವಾರು ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಬಳ್ಳಾರಿ ಪ್ರಥಮ, ರಾಮನಗರ ದ್ವಿತೀಯ, ಉತ್ತರ ಕನ್ನಡ ತೃತೀಯ ಸ್ಥಾನದಲ್ಲಿವೆ.

ಇಲಾಖೆಯು ನರೇಗಾ ಯೋಜನೆಯಲ್ಲಿ ಜಿಲ್ಲಾ ಮಟ್ಟದಲ್ಲಿ ನೀಡಲಾದ ಮಾನವ ಶ್ರಮದ ಗುರಿ, ಕೆಲಸದ ಅವಧಿ, ಅನುಷ್ಠಾನ ಇಲಾಖೆಗಳ ಅಭಿವೃದ್ಧಿ, ಜಿಯೋ ಟ್ಯಾಗಿಂಗ್‌, ಕೂಲಿ ಮತ್ತು ಸಾಮಗ್ರಿಗಳ ಅನುಪಾತ 60:40 ಮಿತಿ ಕಾಯ್ದುಕೊಂಡ ಜಿಲ್ಲೆಗಳು ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿವೆ.

ಉಡುಪಿ ಜಿಲ್ಲೆ: 15,147 ಮಂದಿಗೆ ಕೂಲಿ
ನರೇಗಾದಲ್ಲಿ ಉಡುಪಿ ಜಿಲ್ಲೆಯಲ್ಲಿ 15,147 ಜನರು ಉದ್ಯೋಗ ಪಡೆದುಕೊಂಡಿದ್ದಾರೆ. 2020-21ನೇ ಸಾಲಿನಲ್ಲಿ ಇಲಾಖೆಯು 5.12 ಲಕ್ಷ ಮಾನವ ದಿನದ ಗುರಿ ನೀಡಿದೆ. ಅದರಲ್ಲಿ ಈಗಾಗಲೇ 1.63 ಲಕ್ಷ ಮಾನವ ದಿನದ ಗುರಿಯನ್ನು ಸಾಧಿಸಿದ್ದು, ವಾರ್ಷಿಕ ಗುರಿಯಲ್ಲಿ ಶೇ. 60ರಷ್ಟು ಸಾಧನೆ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ: 16,031 ಮಂದಿಗೆ ಕೂಲಿ
ದ.ಕ. ಜಿಲ್ಲೆಯು 9,482 ಕುಟುಂಬಗಳ 16,031 ಮಂದಿ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡಿದೆ. ಈ ಬಾರಿ ಇಲಾಖೆ ವಾರ್ಷಿಕ 16 ಲ. ಮಾನವ ದಿನದ ಗುರಿಯನ್ನು ನೀಡಿದ್ದು, ಈಗಾಗಲೇ 2.94 ಲ. ಮಾನವ ದಿನವನ್ನು ಪೂರೈಸಿದೆ. 2019-20ರಲ್ಲಿ ಈ ಯೋಜನೆಯಡಿ ಒಟ್ಟು 16 ಲಕ್ಷ ಮಾನವ ದಿನ ಗುರಿ ನೀಡಿದ್ದು 12.91 ಲಕ್ಷ ಮಾನವ ದಿನ ಗುರಿ ಸಾಧಿಸುವ ಮೂಲಕ ಶೇ. 81ರಷ್ಟು ಗುರಿ ಸಾಧನೆ ಮಾಡಿದೆ.

Advertisement

18 ಸಾವಿರ ಕುಟುಂಬಗಳು !
ಕೊರೊನಾ ಲಾಕ್‌ಡೌನ್‌ ಬಳಿಕ ಕೆಲಸವಿಲ್ಲದೆ ಪರದಾಡುತ್ತಿದ್ದ ಕಾರ್ಮಿಕರಿಗೆ ನರೇಗಾ ನೆರವು ನೀಡಿದೆ. ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಗ್ರಾಮೀಣ ಭಾಗಗಳು ಅಭಿವೃದ್ಧಿಯಾಗುತ್ತಿದ್ದು, ಕಳೆದ ಮೂರು ತಿಂಗಳಿನಲ್ಲಿ ಅವಿಭಜಿತ ದ.ಕ. ಜಿಲ್ಲೆಯ 18,230 ಕುಟುಂಬಗಳು ಸದುಪಯೋಗಪಡಿಸಿಕೊಂಡಿವೆ. ಇಲ್ಲಿ ದಿನಕ್ಕೆ ಒಬ್ಬ ವ್ಯಕ್ತಿಗೆ 275 ರೂ. ನೀಡಲಾಗುತ್ತಿದೆ. ಈ ಹಿಂದೆ 249 ರೂ. ನೀಡಲಾಗುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next