ಸಹಕಾರಿ ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ಒಟ್ಟು 54 ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳಿಂದ 23,950 ರೈತರು ಒಟ್ಟು 208 ಕೋ. ರೂ. ಅಲ್ಪಾವಧಿ ಸಾಲ ಪಡೆದಿದ್ದು, ಅದರಲ್ಲಿ ಈಗ ಒಟ್ಟು 83.80 ಕೋ. ರೂ. ಮನ್ನಾ ಆಗಲಿದೆ. ಆದರೆ ಜೂ. 19 ರೊಳಗೆ 4,455 ರೈತರು 43,508 ಕೋ. ರೂ. ಸಾಲ ಸಂದಾಯ ಮಾಡಿದ್ದು, ಅದರಲ್ಲಿ ಆದೇಶ ಪ್ರಕಾರ 50 ಸಾವಿರದಂತೆ ಒಟ್ಟು 18.78 ಕೋ. ರೂ. ಹಣ ಪಾವತಿಯಾಗಿದ್ದು, ಅದನ್ನು ಸರಕಾರ ಹೆಚ್ಚುವರಿಯಾಗಿ ನೀಡಲು ಯೋಚಿಸಿದರೆ ಸಾಲ ಪಡೆದ ಎಲ್ಲ ರೈತರೂ ಸಹ ಮನ್ನಾದ ಫಲಾನುಭವಿಗಳಾಗುತ್ತಾರೆ.
Advertisement
ಸರಕಾರ ಈ ಸಮಯದಲ್ಲಿ ಏಕಾಏಕಿ ಸಾಲ ಮನ್ನಾ ಘೋಷಣೆಯನ್ನು ಮಾಡಿರುವುದರಿಂದ ಹೆಚ್ಚಿನ ರೈತರಿಗೆ ಪ್ರಯೋಜನ ಕಡಿಮೆ ಎನ್ನಲಾಗುತ್ತಿದೆ. ಕಾರಣ ಈಗ ರೈತರ ಸಾಲ ಮನ್ನಾ ಆದರೂ ಅವರು ಮತ್ತೆ ಹೊಸ ಸಾಲ ಪಡೆಯಬೇಕೆಂದರೆ ಅದರ ಪಾವತಿ ಅವಧಿ ಮುಗಿಯಬೇಕು ಅಂದರೆ ಮುಂದಿನ ಮಾರ್ಚ್‌ವರೆಗೆ ಕಾಯಲೇಬೇಕು.
ಈ ಮೊದಲೇ ಸಾಲಮನ್ನಾ ನಿರ್ಧಾರ ಕೈಗೊಳ್ಳಬೇಕಿತ್ತು. ತಡವಾಗಿಯಾದರೂ ಘೋಷಿಸಿರುವುದು ಸ್ವಾಗತಾರ್ಹ ನಿರ್ಧಾರ. ಎಲ್ಲ ಕಡೆ ಬರದಿಂದ ರೈತರು ಕಂಗಾಲಾಗಿದ್ದು, ಉಡುಪಿ ಜಿಲ್ಲೆಯಲ್ಲಿಯೇ ಶೆ. 75 ರಷ್ಟು ರೈತರು ಬರದಿಂದ ನಷ್ಟ ಅನುಭವಿಸಿದ್ದಾರೆ. ಆದ್ದರಿಂದ ಪಾವತಿಸಿದ ರೈತರಿಗೂ ಈ ಲಾಭ ಸಿಗುವಂತಾಗಲಿ. ರಾಜ್ಯ ಸರಕಾರದಂತೆ ಕೇಂದ್ರ ಸರಕಾರವು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ಬೆಳೆಸಾಲವನ್ನು ಮನ್ನಾ ಮಾಡಲು ನಿರ್ಧಾರ ಕೈಗೊಳ್ಳಲಿ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರು ಕೃಷಿ ಸಾಲ ಮನ್ನಾ ಮಾಡಿರುವುದರಿಂದ ರೈತರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದು ಈವರೆಗೆ ಪಾವತಿ ಮಾಡಿದವರಿಗೂ ಅನ್ವಯಿಸಲಿ ಎನ್ನುವುದು ರೈತರ ಬೇಡಿಕೆಯಾಗಿದೆ. ಪಾವತಿಸಿದವರಿಗೂ ಲಾಭ ಸಿಗಲಿ
ಸಾಲ ಮನ್ನಾ ಮಾಡಿರುವ ನಿರ್ಧಾರ ಅಭಿನಂದನಾರ್ಹ. ಆದರೆ ಸರಕಾರ ಸಾಲಪಾವತಿಗೆ ಬಾಕಿ ಇರುವ ರೈತರಿಗೆ ಮಾತ್ರ ಮನ್ನಾ ಭಾಗ್ಯ ಅವಕಾಶ ಕಲ್ಪಿಸಿರುವುದು ಸರಿಯಲ್ಲ. ನ್ಯಾಯವಾಗಿ ಸಮಯಕ್ಕೆ ಸರಿಯಾಗಿ ಪಾವತಿಸಿದವರಿಗೂ ಈ ಲಾಭ ಸಿಗುವಂತಾಗಲಿ. ಈ ಬಗ್ಗೆ ವರದಿ ಸಿದ್ದಪಡಿಸಿದ್ದು, ಶೀಘ್ರ ಮುಖ್ಯಮಂತ್ರಿಗಳು, ಸಚಿವರನ್ನು ಭೇಟಿ ಮಾಡಿ ವಸ್ತುಸ್ಥಿತಿಯ ಬಗ್ಗೆ ವರದಿ ನೀಡಲಾಗುವುದು.
– ಕಿಶನ್ ಹೆಗ್ಡೆ ಕೊಳ್ಕೆಬೈಲು, ಸಹಕಾರಿ ಯೂನಿಯನ್ ಅಧ್ಯಕ್ಷ
Related Articles
ಸರಕಾರದ ಆದೇಶ ಪತ್ರದಲ್ಲಿರುವ ಮಾರ್ಗಸೂಚಿಗಳ ಅನ್ವಯ ಎಲ್ಲ ಸಹಕಾರಿ ಸಂಸ್ಥೆಗಳಿಗೂ ಸೂಚನೆ ನೀಡಿದ್ದೇವೆ. ಅದರನ್ವಯ ಜೂ. 20 ರವರೆಗೆ ಯಾರದೆಲ್ಲ ಹೆಸರಿನಲ್ಲಿ ಹೊರಬಾಕಿ ಇದೆಯೋ ಅವರಿಗೆ ಮಾತ್ರ ಈ ಸಾಲ ಮನ್ನಾ ಲಾಭ ಸಿಗಲಿದೆ. ಅದರ ಪ್ರಕಾರವೇ ಸಾಲ ಪಾವತಿಗೆ ಬಾಕಿ ಇರುವ ರೈತರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ.
– ಪ್ರವೀಣ್ ನಾಯಕ್, ಉಪ ನಿಬಂಧಕರು, ಜಿಲ್ಲಾ ಸಹಕಾರಿ ಸಂಘ ಉಡುಪಿ
Advertisement
-ಪ್ರಶಾಂತ್ ಪಾದೆ