ಚಿತ್ರದುರ್ಗ: ಸೆಲ್ಕೋ ಫೌಂಡೇಶನ್ ವತಿಯಿಂದ ಕೊಡ ಮಾಡುವ ಪ್ರತಿಷ್ಠಿತ 6ನೇ “ಸೂರ್ಯ ಮಿತ್ರ’ ರಾಷ್ಟ್ರೀಯ ಪ್ರಶಸ್ತಿಯನ್ನು ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಂ. ಉಡುಪ ಹಾಗೂ ನವದೆಹಲಿಯ ಸ್ವಿಡlರ್ಲೆಂಡ್ ರಾಯಭಾರ ಕಚೇರಿಯ ಇಂಧನ ವಿಭಾಗದ ಮಾಜಿ ಹಿರಿಯ ಸಲಹೆಗಾರ್ತಿ ಡಾ. ವೀಣಾ ಜೋಶಿ ಅವರಿಗೆ ಶನಿವಾರ ನಗರದಲ್ಲಿ ಪ್ರದಾನ ಮಾಡಲಾಯಿತು.
“ಸೂರ್ಯಮಿತ್ರ’ ಪ್ರಶಸ್ತಿ ಬೆಳ್ಳಿ ಪದಕ, ಸ್ಮರಣಿಕೆಯನ್ನೊಳಗೊಂಡಿದೆ. ತರಾಸು ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸೆಲ್ಕೋ ಚೇರ್ಮನ್ ಹರೀಶ್ ಹಂದೆ ಹಾಗೂ ಜಿಪಂ ಸಿಇಒ ಪಿ.ಎನ್. ರವೀಂದ್ರ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೆ.ಎಂ. ಉಡುಪ, ಪ್ರತಿಯೊಬ್ಬ ಮಾನವನಿಗೆ ಬದುಕಲು ಗಾಳಿ, ನೀರು, ಅನ್ನ, ವಸತಿ ಎಷ್ಟು ಮುಖ್ಯವೋ ಬೆಳಕು ಕೂಡ ಅಷ್ಟೇ ಮುಖ್ಯ. ಆದ್ದರಿಂದ ಬೆಳಕಿಲ್ಲದವರಿಗೆ ಬೆಳಕು ನೀಡುವ ಕೆಲಸ ಆಗಬೇಕಿದೆ ಎಂದರು.
ದೇಶದ 18 ಸಾವಿರ ಹಳ್ಳಿಗಳಲ್ಲಿ ಇಂದಿಗೂ ವಿದ್ಯುತ್ ಮಾರ್ಗ ಎಳೆಯಲಾಗಿಲ್ಲ. ಆ ಹಳ್ಳಿಗಳು ಇಂದಿಗೂ ಬೆಳಕು ಕಂಡಿಲ್ಲ. ಅಂತಹ ಹಳ್ಳಿಗಳಿಗೆ ಸೌರಶಕ್ತಿ ಬಳಕೆ ಮಾಡಿ ಬೆಳಕು ನೀಡಬೇಕು. ಸೋಲಾರ್ ಎನರ್ಜಿ ಬಳಕೆಗೆ ಬ್ಯಾಂಕ್‌ಗಳು ಸಾಲ ಸೌಲಭ್ಯ ನೀಡುತ್ತಿವೆ ಇದರ ಸದುಪಯೋಗವಾಗಬೇಕು ಎಂದರು.
ಮತ್ತೋರ್ವ ಪ್ರಶಸ್ತಿ ಪುರಸ್ಕೃತೆ ಡಾ. ವೀಣಾ ಜೋಶಿ ಮಾತನಾಡಿ, ಮನುಷ್ಯ ಮತ್ತು ಸಂಸ್ಥೆಗೆ ಸವಾಲುಗಳು ಎದುರಾದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಹುದು. “ಸೆಲ್ಕೋ ಕೇವಲ ಸೋಲಾರ್ ಅಷ್ಟೇ ಅಲ್ಲ, ಜೀವನಕ್ಕೆ ಆಧಾರ್’ ಎನ್ನುವ ಘೋಷಣೆಯನ್ನು ಇಟ್ಟುಕೊಂಡು ಮುನ್ನಡೆಯುತ್ತಿದೆ ಎಂದು ಹೇಳಿದರು. ನವದೆಹಲಿಯ ಇಂಧನ ಮತ್ತು ಸಂಪನ್ಮೂಲ ಸಂಸ್ಥೆಯ ಮಹಾನಿರ್ದೇಶಕ ಡಾ. ಅಜಯ್ ಮಾಥುರ್ ಇತರರು ಇದ್ದರು.