Advertisement

ಉಡುಪರು ಗ್ರಾಮೀಣ ಅಭಿವೃದ್ಧಿಯ ಹರಿಕಾರ: ಕೊಡ್ಗಿ

02:03 AM Aug 10, 2019 | mahesh |

ಉಡುಪಿ: ಅಮಾಸೆಬೈಲು ಗ್ರಾಮ ಪಂಚಾಯತನ್ನು ಸೌರಶಕ್ತಿ ಗ್ರಾಮ ಪಂಚಾಯತ್‌ ಆಗಿ ಪರಿವರ್ತಿಸಿದ ಕೀರ್ತಿ ಕೆ.ಎಂ. ಉಡುಪ ಅವರದ್ದು. ಅವರ ನಿಧನ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ. ಭಾರತೀಯ ವಿಕಾಸ ಟ್ರಸ್ಟ್‌ ಮೂಲಕ ಸೌರಶಕ್ತಿ ಸೇರಿದಂತೆ ವಿವಿಧ ಸ್ವೋದ್ಯೋಗ ತರಬೇತಿ ನೀಡುವ ಮೂಲಕ ಗ್ರಾಮೀಣ ಭಾಗದ ಅಭಿವೃದ್ಧಿ ಹರಿಕಾರರಾಗಿ ಕೆಲಸ ಮಾಡಿದ್ದಾರೆ ಎಂದು ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ್‌ ಅಧ್ಯಕ್ಷ ಎ.ಜಿ. ಕೊಡ್ಗಿ ಅವರು ಹೇಳಿದರು.

Advertisement

ಶುಕ್ರವಾರ ಮಂದಾರ್ತಿಯಲ್ಲಿ ಆಯೋಜಿಸಿದ್ದ ಕೆ.ಎಂ. ಉಡುಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿ ನಮನ ಸಲ್ಲಿಸಿದರು.

ಮಾಹೆ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಡಾ| ಎಚ್.ಎಸ್‌.ಬಲ್ಲಾಳ್‌ ಅವರು ಮಾತನಾಡಿ, ಉಡುಪ ಅವರು ಗ್ರಾಮೀಣ ಭಾಗದ ಲಕ್ಷಾಂತರ ಜನರಿಗೆ ತರಬೇತಿ ನೀಡಿ ಸ್ವ ಉದ್ಯೋಗಿಗಳನ್ನಾಗಿ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿಗೆ ಹೆಚ್ಚಿನ ಒತ್ತು ನೀಡಿದರು ಎಂದು ಹೇಳಿದರು.

ಡಾ| ಟಿ.ಎ. ಪೈ ಗರಡಿಯಲ್ಲಿ ಪಳಗಿದವರು
ಉಡುಪರು ಡಾ| ಟಿ.ಎ. ಪೈ ಗರಡಿಯಲ್ಲಿ ಪಳಗಿದವರು. ನಿವೃತ್ತಿಯೊಂದಿಗೆ ತಮ್ಮ ಬದುಕು ಮುಗಿದು ಹೋಯಿತುಎನ್ನುವವರಿಗೆ ಅವರು ಆದರ್ಶ ಪ್ರಾಯರು. ನಿವೃತ್ತಿ ಬಳಿಕ ಸಮಾಜ ತನಗೆ ಕೊಟ್ಟ ಜೀವನಾನುಭವವನ್ನು ಕಿಂಚಿತ್ತಾದರೂ ಸಮಾಜದ ಅತಿ ಸಾಮಾನ್ಯರಿಗೆ ಹಿಂದಿರುಗಿಸಬೇಕೆಂಬ ಹಂಬಲ ಅವರಲ್ಲಿತ್ತು ಎಂದು ಸಿಂಡಿಕೇಟ್ ಬ್ಯಾಂಕ್‌ ನಿವೃತ್ತ ಅಧಿಕಾರಿ ಬೆಳಗೋಡು ರಮೇಶ್‌ ಭಟ್ಟ ತಿಳಿಸಿದರು.

ಮಾದರಿ ಕಾರ್ಯ
ಲಾಲ್ ಬಹದ್ದೂರ್‌ ಶಾಸ್ತ್ರಿ ಪ್ರಧಾನ ಮಂತ್ರಿಯಾಗಿದ್ದ ಸಮಯದಲ್ಲಿ ದೇಶ ದಲ್ಲಿ ಆಹಾರ ಸಮಸ್ಯೆ ಎದುರಾಗಿತ್ತು. ಆ ಸಂದರ್ಭ ಭಾರತೀಯ ಆಹಾರ ನಿಗಮದ ಸ್ಥಾಪಕ ಅಧ್ಯಕ್ಷರಾಗಿ ಡಾ| ಟಿ.ಎ. ಪೈ ನೇಮಕವಾಗಿದ್ದರು. ಇದುಉಡುಪರ‌ ಬದುಕಿನ ಪಥವನ್ನು ಬದಲಾಯಿಸಿದೆ. ಟಿ.ಎ. ಪೈಗಳು ‘ಮಡಿ’ ಎಂಬ ಹಳ್ಳಿಯಲ್ಲಿ ಗುರುತಿಸಿದ 30ಎಕ್ರೆ ಕೃಷಿ ಭೂಮಿಯಲ್ಲಿ ಉಡುಪರಬ್ಯಾಂಕಿಂಗ್‌ ಉದ್ಯೋಗ ಪ್ರಾರಂಭವಾಗಿತ್ತು. 15 ಭತ್ತದ ತಳಿಯ ಬೀಜಗಳು, ಮುಂದಿನ ಒಂದು ವರ್ಷದಲ್ಲಿ 5,000 ಎಕ್ರೆ ಕೃಷಿ ಭೂಮಿಯಲ್ಲಿ ಬೆಳೆಯಲು ಬೇಕಾದ ಭತ್ತದ ತಳಿಯ ಗುರುತಿಸುವಿಕೆ ಮತ್ತು ಬೀಜೋತ್ಪಾದನೆ ಅವರಿಗೆ ಸವಾಲಾಗಿತ್ತು ಎಂದು ಹೇಳಿದರು.

Advertisement

ಸಂಶೋಧನೆ
ದಿವಾಳಿಯಾದ ಮಲಪ್ರಭಾ ಗ್ರಾಮೀಣ ಬ್ಯಾಂಕನ್ನು ಉಡುಪರುಹೇಗೆ ಪುನರುಜ್ಜೀವನ ಮಾಡಿದ್ದಾರೆ ಎನ್ನುವ ವಿಷಯ ಐಐಎಂ ಸಂಶೋಧನೆಗೆ ಆಯ್ಕೆ ಮಾಡಿಕೊಂಡಿದೆ. ಟಿ.ಎ. ಪೈಗಳ ಕನಸಿನ ‘ಭಾರತೀಯ ವಿಕಾಸ್‌ ಟ್ರಸ್ಟ್‌’ ಮೂಲಕ ಕೃಷಿ, ಸೇವೆ, ಸೌರಶಕ್ತಿ, ಸ್ವ ಉದ್ಯೋಗ ತರಬೇತಿಗಳಿಗೆ ಪ್ರಾಮುಖ್ಯ ನೀಡಿದ್ದರು ಎಂದರು.

ಡಾ| ಎ.ವಿ. ಬಾಳಿಗಾ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ| ಪಿ.ವಿ. ಭಂಡಾರಿ, ಸಿಂಡಿಕೇಟ್ ಬ್ಯಾಂಕ್‌ ಮಣಿಪಾಲ ವಲಯ ಕಚೇರಿಯ ಮಹಾಪ್ರಬಂಧಕ ಭಾಸ್ಕರ ಹಂದೆ, ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಜಿ.ಪಂ. ಮಾಜಿ ಸದಸ್ಯ ಜಯಶೀಲ ಶೆಟ್ಟಿ ಸೇರಿದಂತೆ ಗಣ್ಯರು ಅವರಿಗೆ ನುಡಿನಮನ ಸಲ್ಲಿಸಿದರು.

ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಅವರು ಬೆಂಗಳೂರು ಸಿಂಡಿಕೇಟ್ ಬ್ಯಾಂಕ್‌ ಅಗ್ರಿ ಕೋ-ಅಸೋಸಿಯೇಶನ್‌ ಹೊರತಂದಿರುವ ಕೆ.ಎಂ. ಉಡುಪ ಸಂಸ್ಮರಣೆ ಪುಸ್ತಕವನ್ನು ಬಿಡುಗಡೆ ಮಾಡಿದರು. ಮಣಿಪಾಲ ಮೀಡಿಯಾ ನೆಟ್ವರ್ಕ್‌ ಲಿ.ನ ಆಡಳಿತ ನಿರ್ದೇಶಕ ಟಿ. ಸತೀಶ್‌ ಯು.ಪೈ, ಡಾ| ಟಿಎಂಎ ಪೈ ಫೌಂಡೇಶನ್‌ ಕಾರ್ಯದರ್ಶಿ ಟಿ. ಅಶೋಕ್‌ ಪೈ ಉಪಸ್ಥಿತರಿದ್ದರು.

ಕುಟುಂಬದ ಸದಸ್ಯರಾಗಿದ್ದರು

ಕೆ.ಎಂ. ಉಡುಪರು ತಾನು ನಂಬಿದ ತಣ್ತೀದಡಿ ಯಾವುದೇ ಆಮಿಷಕ್ಕೆ ಒಳಗಾಗದೆ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿದ್ದಾರೆ. ಅವರು ನಮ್ಮ ಕುಟುಂಬದ ಸದಸ್ಯರಂತೆ ಇದ್ದರು. ಪ್ರತಿಯೊಂದು ಜೀವಿಗೂ ಹುಟ್ಟು ಆಕಸ್ಮಿಕ ಹಾಗೂ ಸಾವು ನಿಶ್ಚಿತ. ಪುರಾಣದಲ್ಲಿ ಬರುವ ಅವತಾರ ಪುರುಷರಿಗೂ ಮೃತ್ಯು ತಪ್ಪಿದ್ದಿಲ್ಲ. ಇಂದು ನಾವು ಒಬ್ಬ ಸಹೃದಯಿ ಹಾಗೂ ಸಾತ್ವಿಕ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಅವರ ಕುಟುಂಬದ ಸದಸ್ಯರಿಗೆ ನೋವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮ ನೀಡಲಿ.
– ಡಾ| ಸಂಧ್ಯಾ ಎಸ್‌. ಪೈ,ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ
Advertisement

Udayavani is now on Telegram. Click here to join our channel and stay updated with the latest news.

Next