Advertisement

Udupa Music Festival: ಬೆಂಗಳೂರಿನಲ್ಲಿ ಫೆ.16ರಿಂದ ಉಡುಪ ಸಂಗೀತೋತ್ಸವ, ದಿಗ್ಗಜರು ಭಾಗಿ

01:12 PM Feb 14, 2024 | Nagendra Trasi |

ಬೆಂಗಳೂರು: ಉಡುಪ ಪ್ರತಿಷ್ಠಾನವು ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಫೆ.16, 17 ಮತ್ತು 18ರಂದು ಉಡುಪ ಸಂಗೀತೋತ್ಸವ ಹಮ್ಮಿಕೊಂಡಿದ್ದು, ಈ ಸಂದರ್ಭದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಕಲಾ ದಿಗ್ಗಜರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Advertisement

ಉಡುಪ ಸಂಗೀತೋತ್ಸವದಲ್ಲಿ ಇತ್ತೀಚೆಗಷ್ಟೇ ಲಾಸ್‌ ಏಂಜಲೀಸ್‌ ನಲ್ಲಿ ವಿಶ್ವದ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗೆ ಭಾಜನರಾಗಿದ್ದ ಜಾಗತಿಕ ತಬಲಾ ಮಾಂತ್ರಿಕ ಪಂಡಿತ್‌ ಉಸ್ತಾದ್‌ ಝಾಕೀರ್‌ ಹುಸೇನ್‌ ಅವರು ಫೆ.16ರ ಸಂಜೆ 7ಗಂಟೆಗೆ ಪಂಡಿತ್‌ ನೀಲಾದ್ರಿ ಕುಮಾರ್‌ ಸಿತಾರ್‌ ವಾದನಕ್ಕೆ ಜುಗಲ್‌ ಬಂದಿಯಾಗಲಿದ್ದಾರೆ.

ಫೆ.17ರ ಸಂಜೆ 6ಕ್ಕೆ ಸ್ತ್ರೀ ತಾಳ ತರಂಗದ ಲಯ ರಾಗ ಸಮರ್ಪಣಂ ಸಂಪನ್ನಗೊಳ್ಳಲಿದೆ. ಮಹಿಳಾ ಕಲಾವಿದರೇ ಇದಕ್ಕೆ ಸಾಕ್ಷಿಯಾಗಲಿದ್ದು, ವಿದುಷಿ ಸುಕನ್ಯಾ ರಾಮಗೋಪಾಲ್‌ ಘಟ ತರಂಗ್‌, ವಿದುಷಿಯರಾದ ವೈ.ಜಿ.ಶ್ರೀಲತಾ ವೀಣೆ, ಜಿ.ಲಕ್ಷ್ಮೀ ಮೃದಂಗ, ಭಾಗ್ಯಲಕ್ಷ್ಮೀ ಎಂ.ಕೃಷ್ಣ ಅವರು ಮೋರ್ಚಿಂಗ್‌ ವಾದನ ಮೇಳೈಸಲಿದೆ. ಸಂಜೆ 7ಕ್ಕೆ ಮತ್ತೊಬ್ಬ ಮೇರು ವಿದ್ವಾಂಸ ಟಿ.ಎಂ.ಕೃಷ್ಣ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ.

ಪಕ್ಕವಾದ್ಯದಲ್ಲಿ ವಿದ್ವಾನ್‌ ಎಚ್.ಕೆ.ವೆಂಕಟರಾಮ್‌ ಪಿಟೀಲು, ಉಮಯಾಳ್ಪರಂ ಕೆ.ಶಿವರಾಮನ್‌ ಅವರು ಮೃದಂಗ, ಕಾರ್ತಿಕ್‌ ಅವರು ಘಟ ಪಕ್ಕವಾದ್ಯ ಸಾಥ್‌ ನೀಡಲಿದ್ದಾರೆ.

ಅರುಣಾ ಸಾಯಿರಾಂ ಗಾಯನ

Advertisement

ಫೆ. 18ರ ಸಂಜೆ 7ಕ್ಕೆ ವಿದುಷಿ ಅರುಣಾ ಸಾಯಿರಾಂ ಗಾಯನ ಮಾಧುರ್ಯವಿದೆ. ಈ ಸಂದರ್ಭ ಪೂರ್ವ ಮತ್ತು ಪಾಶ್ಚಿಮಾತ್ಯ ನಾಡಿನ ಪ್ರಮುಖ ವಾದ್ಯಗಳು ಅನುರಣಿಸಲಿವೆ. ತ್ರಿಲೋಕ್ ಗುರ್ತು ಅವರು ಡ್ರಮ್ಸ್, ಪಂಡಿತ್ ಪ್ರವೀಣ್ ಗೋಡ್ಖಿಂಡಿ ಕೊಳಲು, ಮಹೇಶ ಕಾಳೆ ಗಾಯನ, ಕೀತ್ ಪೀಟರ್ಸ್ ಬಾಸ್ ಗಿಟಾರ್, ಮಿಗಿಲ್ ಚೌಹಾಸ್ಕಿ ಅವರ ಫ್ಲಮೆಂಕೋ ಗಿಟಾರ್, ಅರುಣ್ ಕುಮಾರ್ ಅವರ ಡ್ರಮ್ಸ್, ಪ್ರಮಥ ಕಿರಣ್ ಅವರ ಪರ್ಕ್ಯೂಶನ್ಸ್ ಮತ್ತು ಸಂಗೀತ್ ಹಳದೀಪುರ ಅವರು ಕೀಬೋರ್ಡ್ ನುಡಿಸಿ ರಂಜಿಸಲಿದ್ದಾರೆ.

ದಾಖಲೆ ನಿರ್ಮಿಸಲಿದೆ ಸಂಗೀತ ಉತ್ಸವ:

ತಬಲಾ ಮೇರು ಮಾಂತ್ರಿಕ ಉಸ್ತಾದ್ ಝಾಕೀರ್ ಹುಸೇನ್ ಅವರು ವಿಶ್ವ ಮಟ್ಟದ ಗ್ರಾೃಮಿ ಅವಾರ್ಡ್ ಪುರಸ್ಕೃತರಾದ ನಂತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಕಛೇರಿ ನೀಡಲು ಸಮ್ಮತಿಸಿದ್ದು, ಶ್ರೋತೃಗಳ ಸುಕೃತವೇ ಆಗಿದೆ. ಇವರೊಂದಿಗೆ ಕಲಾ ಕೋವಿದರೂ ಸಂಗಮಗೊಂಡಿರುವುದು ಮಹತ್ವದ ಸಂಗತಿ. ಹಾಗಾಗಿ ಉದ್ಯಾನ ನಗರಿಯಲ್ಲಿ ಉಡುಪ ಸಂಗೀತ ಉತ್ಸವದ 5ನೇ ಆವೃತ್ತಿ ಒಂದು ಹೊಸ ಮೈಲಿಗಲ್ಲನ್ನೇ ಸ್ಥಾಪಿಸಲಿದೆ ಎಂದು ಆಯೋಜಕ ಮತ್ತು ಪ್ರಖ್ಯಾತ ಘಟ ವಿದ್ವಾಂಸ ಗಿರಿಧರ ಉಡುಪ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next