‘ಇದು ಕಡಲ ತೀರದ ಕಷ್ಟಜೀವಿಗಳ ಕಥೆ…’
ಹೀಗೆ ಹೇಳಿಕೊಂಡಿದ್ದು ನವ ನಿರ್ದೇಶಕ ಶಿವರಾಜ್. ಹಾಗೆ ಹೇಳಿದ್ದು, ಅವರ ಮೊದಲ ನಿರ್ದೇಶನದ ‘ಉಡುಂಬಾ’ ಚಿತ್ರದ ಬಗ್ಗೆ. ಹೌದು, ಈ ವಾರ ‘ಉಡುಂಬಾ’ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ತಮ್ಮ ಚಿತ್ರದ ಬಗ್ಗೆ ಹೇಳಿಕೊಂಡ ನಿರ್ದೇಶಕ ಶಿವರಾಜ್, ‘ಇಲ್ಲಿ ಕಡಲ ತೀರದ ಜನರ ಬದಕಿನ ಚಿತ್ರಣವಿದೆ. ಬೆಸ್ತರ ಜೀವನ, ಅವರ ಬವಣೆ ಇತ್ಯಾದಿ ಚಿತ್ರದ ಹೈಲೈಟ್. ಬೆಸ್ತರ ಕುರಿತು ಕನ್ನಡದಲ್ಲಿ ಸಾಕಷ್ಟು ಚಿತ್ರಗಳು ಬಂದಿವೆಯಾದರೂ, ‘ಉಡುಂಬಾ’ ವಿಶೇಷ ಕಥಾಹಂದರ ಹೊಂದಿರುವ ಸಿನಿಮಾ. ಇಲ್ಲಿ ಉಡುಂಬಾ ಪ್ರಾಣಿ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಅದು ಹೇಗೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಇನ್ನು, ಆಂಧ್ರ ಮೂಲದ ನಿರ್ಮಾಪಕರು ಕನ್ನಡ ಸಿನಿಮಾ ನಿರ್ಮಿಸಿದ್ದಾರೆ. ಇದೊಂದು ಪಕ್ಕಾ ಲವ್, ಆ್ಯಕ್ಷನ್ ಸಿನಿಮಾ. ಜೊತೆಗೆ ಮನರಂಜನೆಯೂ ಇದೆ. ದೀಪಕ್ ಗಂಗಾಧರ್ ವಿತರಣೆ ಮಾಡುತ್ತಿದ್ದು, ರಾಜ್ಯಾದ್ಯಂತ ಸುಮಾರು 120 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ತಯಾರಿ ಮಾಡಿಕೊಂಡಿದ್ದಾರೆ’ ಎಂದು ವಿವರ ಕೊಟ್ಟರು ಶಿವರಾಜ್.
ನಾಯಕ ಪವನ್ ಶೌರ್ಯ ಅವರಿಗೆ ಇದು ಮೂರನೇ ಸಿನಿಮಾ. ‘ಗೂಳಿಹಟ್ಟಿ’, ‘ಹಾಲು ತುಪ್ಪ’ ನಂತರ ‘ಉಡುಂಬಾ’ ಮಾಡಿರುವ ಅವರಿಗೆ ಚಿತ್ರದ ಮೇಲೆ ವಿಶ್ವಾಸವಿದೆ. ಇಲ್ಲಿ ಭರ್ಜರಿ ಆ್ಯಕ್ಷನ್ ಇದ್ದು, ಯಾವುದಕ್ಕೂ ಡೂಪ್, ರೋಪ್ ಇಲ್ಲದೆ ರಿಸ್ಕೀ ಸ್ಟಂಟ್ ಮಾಡಿದ್ದೇನೆ. ಕೆಲ ಫೈಟ್‌ನಲ್ಲಿ ಸಣ್ಣಪುಟ್ಟ ಅವಘಡ ಆಗಿದ್ದುಂಟು. ಚಿತ್ರದಲ್ಲೊಂದು ಉದ್ದನೆಯ ಡೈಲಾಗ್ ಇದ್ದು, ಒಂದು ದಿನ ಅದನ್ನು ಅಭ್ಯಾಸ ಮಾಡಿಕೊಂಡು ಮರುದಿನ ಒಂದೇ ಟೇಕ್‌ನಲ್ಲಿ ಓಕೆ ಮಾಡಿದ್ದು ಖುಷಿ ಕೊಟ್ಟಿದೆ. ಇನ್ನು, ನಾನು ಬೆಸ್ತರ ಹುಡುಗನ ಪಾತ್ರ ಮಾಡಿದ್ದೇನೆ. ಮೀನು ಹಿಡಿಯುವ ಹುಡುಗನ ಪ್ರೀತಿ, ಗೀತಿ ಇತ್ಯಾದಿ ಚಿತ್ರದ ವಿಶೇಷತೆ. ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದುಂಟು. ಒಬ್ಬ ಮೀನುಗಾರ ಹೇಗಿರಬೇಕು, ಅವನು ಹೇಗೆಲ್ಲಾ ತನ್ನ ದೇಹವನ್ನು ಕಟ್ಟುಮಸ್ತಾಗಿ ಇಟ್ಟುಕೊಂಡಿರುತ್ತಾನೋ, ಹಾಗೆಯೇ, ನಾನೂ ಕೂಡ ಇಲ್ಲಿ ವರ್ಕೌಟ್ ಮಾಡಿದ್ದೇನೆ’ ಎಂದು ವಿವರ ಕೊಟ್ಟರು ಪವನ್.
ನಾಯಕಿ ಚಿರಶ್ರೀ ಅವರಿಗೆ ಇದು ಮೊದಲ ಚಿತ್ರ. ಅವರಿಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯಾಗಿ ನಟಿಸಿದ್ದಾರಂತೆ. ಫೇಲ್ ಆಗುವ ಆಕೆ ಪುನಃ ಹಳ್ಳಿಗೆ ಬಂದು, ನಾಯಕನ ಪ್ರೀತಿಗೆ ಸಿಲುಕಿದ ಬಳಿಕ ಏನೆಲ್ಲಾ ಆಗುತ್ತೆ ಎಂಬುದು ಕಥೆ’ ಎಂದರು ಅವರು.
ಶರತ್ ಲೋಹಿತಾಶ್ವ ಅವರು ‘ಉಡುಂಬಾ’ ಚಿತ್ರತಂಡವನ್ನು ಹೊಗಳಿದರು. ಎಲ್ಲರ ಶ್ರಮ, ಶ್ರದ್ಧೆ ಬಗ್ಗೆ ಹೇಳಿಕೊಂಡರು. ಕಷ್ಟಪಟ್ಟು, ಎಲ್ಲವನ್ನೂ ಪಕ್ವತೆಯಿಂದಲೇ ಕೆಲಸ ಮಾಡಿದ್ದಾರೆ. ಇನ್ನು, ನಾಯಕ ಪವನ್ ಅವರು ಎಲ್ಲಾ ವಿಭಾಗದಲ್ಲೂ ಜವಾಬ್ದಾರಿಯಿಂದ ಕೆಲಸ ಮಾಡಿದ್ದಾರೆ. ನಿರ್ಮಾಪಕರು ಕೂಡ ಯಾವುದಕ್ಕೂ ಕೊರತೆ ಇಲ್ಲದಂತೆ ತಮ್ಮ ಕೆಲಸ ನಿರ್ವಹಿಸಿದ್ದಾರೆ. ಇದೊಂದು ಒಳ್ಳೆಯ ಸಿನಿಮಾ ಆಗಲಿದೆ’ ಎಂಬ ನಂಬಿಕೆ ಇದೆ ಎಂದರು ಶರತ್.
ನಿರ್ಮಾಪಕರಾದ ಹನುಮಂತರಾವ್, ವೆಂಕಟ್ ಶಿವರೆಡ್ಡಿ ಸಿನಿಮಾ ಬಗ್ಗೆ ಮಾತನಾಡಿದರು. ಸಹ ನಿರ್ಮಾಪಕ ಮಾನಸ ಮಹೇಶ್, ಸೈಯದ್ ಇರ್ಫಾನ್, ಚಂದ್ರಕಲಾ, ಕಲ್ಕೆರೆ ಗಂಗಾಧರ್, ಛಾಯಾಗ್ರಾಹಕ ಹಾಲೇಶ್ ‘ಉಡುಂಬಾ’ ಕುರಿತು ಮಾತನಾಡಿದರು.