Advertisement
ವಿಧಾನಸಭೆಯಲ್ಲಿ ಬುಧವಾರ ಕಾಂಗ್ರೆಸ್‌ನ ಬಸವರಾಜ ರಾಯರಡ್ಡಿ ಅವರು ಕೊಪ್ಪಳ ಜಿಲ್ಲೆಯಲ್ಲಿನ ಅಕ್ರಮ ರೇಸಾರ್ಟ್‌ಗಳ ಕುರಿತು ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿದ ಅವರು, ರಾಜ್ಯದಲ್ಲಿ ಡ್ರಗ್ಸ್ ಜಾಲ ವಿಪರೀತವಾಗಿ ಹರಡಿಕೊಂಡಿದೆ. ಈ ಹಿಂದೇ ನಾನು ಗೃಹ ಸಚಿವನಾಗಿದ್ದಾಗ ಬೆಂಗಳೂರನ್ನು ಉಡ್ತಾ ಬೆಂಗಳೂರು ಆಗಲು ಬಿಡಬೇಡಿ ಎಂದು ಅನೇಕ ಸಂಘ-ಸಂಸ್ಥೆಗಳು ಮನವಿ ಮಾಡಿಕೊಂಡಿದ್ದವು. ಆಗಲೂ ನಾನು ಕ್ರಮ ವಹಿಸಿದ್ದೆ. ಆದರೆ ಈ ಬಾರಿ ಆರಂಭದಿಂದಲೇ ಕಟ್ಟುನಿಟ್ಟಿನ ಕ್ರಮ ವಹಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಈ ಕುರಿತು ಗಂಭೀರವಾಗಿ ಚಿಂತನೆ ನಡೆಸಿ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದರ ಭಾಗವಾಗವಾಗಿಯೇ ಸರ್ಕಾರ ಬಂದ ಒಂದೂವರೆ ತಿಂಗಳಿನಲ್ಲಿ 112 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ ಪಡಿಸಿದ್ದೇವೆ ಎಂದರು.
Related Articles
Advertisement
ಅಕ್ರಮ ನಡೆಯಲು ಬಿಡಲ್ಲ: ಈ ಮಧ್ಯೆ ಸದನ ಪ್ರವೇಶಿಸಿದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಅಲ್ಲಿನ ಕೆಲವು ರೆಸಾರ್ಟ್‌ಗಳು ಅಕ್ರಮವಾಗಿದ್ದು, ಅವುಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶವಿತ್ತು. ಅದರಂತೆ ತೆರವುಗೊಳಿಸಿದ್ದೇವೆ. ಅಂಜನಾದ್ರಿ ಬೆಟ್ಟದ ಪಾವಿತ್ರ್ಯತೆಗೆ ಧಕ್ಕೆ ಬರದಂತೆ ನೋಡಿಕೊಳ್ಳಲಾಗುವುದು. ಯಾವುದೇ ಅಕ್ರಮಗಳು ನಡೆಯದಂತೆ ಕ್ರಮ ವಹಿಸುವುದಾಗಿ ಸದನಕ್ಕೆ ಭರವಸೆ ನೀಡಿದರು.
ಡ್ರಗ್ಸ್-ರೆಸಾರ್ಟ್ : ರಾಯರಡ್ಡಿಅಭಿನಂದಿಸಿದ ಸ್ಪೀಕರ್
ರೇಸಾರ್ಟ್‌ಗಳಲ್ಲಿ ಡ್ರಗ್ಸ್ ಹಾವಳಿ ಮತ್ತು ವೇಶ್ಯಾವಾಟಿಕೆ ನಡೆಯುತ್ತಿರುವ ಕುರಿತು ಸದನದಲ್ಲಿ ಪ್ರಸ್ತಾಪಿಸಿದ್ದ ಕಾಂಗ್ರೆಸ್‌ನ ಬಸವರಾಜ ರಾಯರಡ್ಡಿ ಅವರನ್ನು ಸಭಾಧ್ಯಕ್ಷ ಯು.ಟಿ.ಖಾದರ್ ಅಭಿನಂದಿಸಿದರು. ದುಶ್ಚಟ ಮತ್ತು ದ್ವೇಷ ಎರಡನ್ನೂ ತಡೆಗಟ್ಟಿದರೆ ಮಾತ್ರ ಭಾರತಕ್ಕೆ ಭವಿಷ್ಯವಿದೆ. ಎಲ್ಲರೂ ಸಕಾರಾತ್ಮಕ ವಿಚಾರಗಳಿಗೆ ಬೆಂಬಲಿಸಬೇಕು. ಈ ನಿಟ್ಟಿನಲ್ಲಿ ರಾಯರಡ್ಡಿ ಅವರು ಧ್ವನಿಎತ್ತಿದ್ದಕ್ಕೆ ಅವರನ್ನು ನಾನು ಅಭಿನಂದಿಸುತ್ತೇನೆ. ಇಂತಹ ಕಾರ್ಯವನ್ನು ಎಲ್ಲಾ ಸದಸ್ಯರು ಮಾಡಬೇಕೆಂದು ಇದೇ ವೇಳೆ ಸ್ಪೀಕರ್ ಖಾದರ್ ಸಲಹೆ ನೀಡಿದರು.
ಚಪ್ಪಲಿ ಹಾರದ ಅವಮಾನಕ್ಕೆ ಹೆದರಬೇಕಿಲ್ಲ : ಸ್ಪೀಕರ್ ರಾಜಕಾರಣಿಗಳ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕುವುದು, ನಿಂದಿಸುವುದು ಅವಮಾನಿಸುವುದಕ್ಕೆ ಯಾರೂ ತಲೆ ಕೆಡಿಸಿಕೊಳ್ಳಬಾರದು. ಅವೆಲ್ಲ ಅವಮಾನಗಳನ್ನು ಈ ಹಿಂದೆ ಸಹಿಸಿಕೊಂಡವರೇ ದೊಡ್ಡ ಹುದ್ದೆಗೆ ಏರಿದ್ದಾರೆ. ಅದೇ ರೀತಿ ಬಸವರಾಜ ರಾಯರಡ್ಡಿ ಅವರೇ ನೀವು ಕೂಡ ಮುಂದೊಂದು ದಿನ ದೊಡ್ಡ ಹುದ್ದೆಗೆ ಏರುತ್ತೀರಿ. ಹೀಗಾಗಿ ನಿಮಗೆ ಗಂಗಾವತಿಯಲ್ಲಿ ಆಗಿರುವ ಅವಮಾನಕ್ಕೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಸ್ಪೀಕರ್ ಖಾದರ್ ಇದೇ ವೇಳೆ ಶಾಸಕ ಬಸವರಾಜ ರಾಯರಡ್ಡಿ ಅವರನ್ನು ಸಂತೈಸಿದರು.