ಕನ್ನಡ ಚಿತ್ರರಂಗದ ಸಸ್ಪೆನ್ಸ್ ಚಿತ್ರಗಳ ಮಾಂತ್ರಿಕ ಸುನೀಲ್ ಕುಮಾರ್ ದೇಸಾಯಿ “ಉದ್ಘರ್ಷ’ ಎನ್ನುವ ಮತ್ತೂಂದು ಸಸ್ಪೆನ್ಸ್ ಕಹಾನಿಯನ್ನು ಪ್ರೇಕ್ಷಕರ ಮುಂದಿಡುವ ಸನ್ನಾಹದಲ್ಲಿದ್ದಾರೆ. ಸುಮಾರು ಎರಡೂವರೆ ವರ್ಷಗಳಿಂದ “ಉದ್ಘರ್ಷ’ ಚಿತ್ರದ ತಯಾರಿಯಲ್ಲಿ ಬ್ಯುಸಿಯಾಗಿದ್ದ ದೇಸಾಯಿ ಅ್ಯಂಡ್ ಟೀಮ್ ಅಂತಿಮವಾಗಿ ಇದೇ ಮಾರ್ಚ್ 22ರಂದು ಚಿತ್ರವನ್ನು ಅದ್ಧೂರಿಯಾಗಿ ತೆರೆಗೆ ತರುತ್ತಿದೆ. ಇನ್ನೊಂದು ವಿಷಯವೆಂದರೆ, “ಉದ್ಘರ್ಷ’ ದೇಸಾಯಿ ಅವರ ಹಿಂದಿನ ಎಲ್ಲಾ ಚಿತ್ರಗಳ ದಾಖಲೆಗಳನ್ನು ಮುರಿಯಲಿದೆ.
ಹೌದು, ಸುನೀಲ್ ಕುಮಾರ್ ದೇಸಾಯಿ ಅವರ ಸಿನಿಕೆರಿಯರ್‌ನಲ್ಲಿ ವಿಭಿನ್ನ ಚಿತ್ರ ಎಂದೇ ಬಿಂಬಿತವಾಗುತ್ತಿರುವ “ಉದ್ಘರ್ಷ’ ಕನ್ನಡ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣಗೊಂಡಿದೆ. ಇನ್ನು ಈ ನಾಲ್ಕೂ ಭಾಷೆಗಳಲ್ಲೂ ಏಕಕಾಲಕ್ಕೆ ಚಿತ್ರದ ಬಿಡುಗಡೆಗೆ ಪ್ಲಾನ್ ಮಾಡಿಕೊಂಡಿರುವ ಚಿತ್ರತಂಡ, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಮತ್ತು ಉತ್ತರ ಭಾರತದ ಕೆಲವು ಪ್ರಮುಖ ಕೇಂದ್ರಗಳು ಸೇರಿದಂತೆ ಭಾರತದಾದ್ಯಂತ ಏಕಕಾಲಕ್ಕೆ ಸುಮಾರು 1000ಕ್ಕೂ ತೆರೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ.
ಚಿತ್ರಕ್ಕೆ ವಿತರಕರು ಮತ್ತು ಪ್ರದರ್ಶಕರಿಂದಲೂ ಭಾರೀ ಬೇಡಿಕೆ ಬರುತ್ತಿದ್ದು, ಇದೇ ಮೊದಲ ಬಾರಿಗೆ ದೇಸಾಯಿ ಅವರ ಚಿತ್ರವೊಂದು ಏಕಕಾಲಕ್ಕೆ ಇಷ್ಟೊಂದು ದೊಡ್ಡ ಸಂಖ್ಯೆಯ ತೆರೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಬಿಡುಗಡೆಯ ವಿಷಯದಲ್ಲಿ ಅವರ ಹಿಂದಿನ ಎಲ್ಲಾ ಚಿತ್ರಗಳ ದಾಖಲೆಯನ್ನು “ಉದ್ಘರ್ಷ’ ಮುರಿಯಲಿದೆಯಂತೆ. ಸದ್ಯ ಇನ್ನಷ್ಟು ಚಿತ್ರಮಂದಿರಗಳ ಹೊಂದಾಣಿಕೆ ನಡೆಯುತ್ತಿರುವುದರಿಂದ ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂಬ ಭರವಸೆ ಚಿತ್ರತಂಡದ್ದು.
ಇನ್ನು ಚಿತ್ರತಂಡದ ಮೂಲಗಳ ಪ್ರಕಾರ, “ಉದ್ಘರ್ಷ’ ಕರ್ನಾಟಕದಲ್ಲೇ ಮುನ್ನೂರಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಪೋಸ್ಟರ್, ಟೀಸರ್, ಟ್ರೇಲರ್ ಎಲ್ಲದಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ಚಿತ್ರರಂಗದ ಅನೇಕ ಗಣ್ಯರು ಕೂಡ “ಉದ್ಘರ್ಷ’ ಚಿತ್ರದ ಬಗ್ಗೆ ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ. ಒಟ್ಟಾರೆ ತೆರೆಗೆ ಬರೋದಕ್ಕೂ ಮುನ್ನವೇ ಒಂದಷ್ಟು ಕುತೂಹಲಕ್ಕೆ ಕಾರಣವಾಗಿರುವ “ಉದ್ಘರ್ಷ’ ತೆರೆಮೇಲೆ ಹೇಗೆ ಬರಲಿದೆ ಅನ್ನೋದಕ್ಕೆ ಇದೇ ವಾರಾಂತ್ಯದಲ್ಲಿ ಉತ್ತರ ಸಿಗಲಿದೆ.