ಮುಂಬಯಿ : ಅಂಧೇರಿ ಪೂರ್ವ ವಿಧಾನ ಸಭಾ ಸ್ಥಾನಕ್ಕೆ ನಡೆದ ಉಪಚುನಾವಣೆಯ ಮತ ಎಣಿಕೆ ಭಾನುವಾರ ನಡೆದಿದ್ದು ಉದ್ಧವ್ ಠಾಕ್ರೆ ಬೆಂಬಲಿತೆ ಶಿವಸೇನಾ ಅಭ್ಯರ್ಥಿ ರುತುಜಾ ಲಟ್ಕೆ 64,959 ಮತಗಳ ಅಂತರದ ನಿರೀಕ್ಷಿತ ಜಯ ಸಾಧಿಸಿದ್ದಾರೆ.
ಎನ್‌ಸಿಪಿ, ಕಾಂಗ್ರೆಸ್ ಮತ್ತು ವಿಬಿಎ ಬೆಂಬಲಕ್ಕಾಗಿ ಉದ್ಧವ್ ಠಾಕ್ರೆ ಧನ್ಯವಾದಗಳನ್ನು ಅರ್ಪಿಸಿದ್ದು, ನೋಟಾಕ್ಕೆ ಮತ ಹಾಕುವಂತೆ ಪ್ರಚಾರ ಮಾಡಿದ್ದಕ್ಕಾಗಿ ಬಿಜೆಪಿಯನ್ನು ಟೀಕಿಸಿದ್ದು, ಈ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸಿದ್ದರೆ ನೋಟಾ ಮತಗಳು ಅವರ ಪಾಲಾಗುತ್ತಿದ್ದವು ಎಂದರು.
ಉಪಚುನಾವಣೆಯಲ್ಲಿ ಗೆದ್ದ ನಂತರ ರುತುಜಾ ಲಟ್ಕೆ ಅವರು ಶಿವಸೇನಾ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಅವರನ್ನು ಬಾಂದ್ರಾದ ಅವರ ನಿವಾಸ ಮಾತೋಶ್ರೀಯಲ್ಲಿ ಭೇಟಿಯಾದರು.
ಚುನಾವಣೆಗೂ ಮುನ್ನ ಬಿಜೆಪಿಯ ಮುರ್ಜಿ ಪಟೇಲ್ ಹಿಂದೆ ಸರಿದಿದ್ದರಿಂದ ರುತುಜಾ ಲಟ್ಕೆ ಗೆಲುವು ಖಚಿತ ಎಂದು ಪರಿಗಣಿಸಲಾಗಿತ್ತು. ನೋಟಾ ವೇ ಎರಡನೇ ಸ್ಥಾನದಲ್ಲಿದ್ದು 12,806 ಮಂದಿ ಮತ ಚಲಾಯಿಸಿದ್ದಾರೆ.
ರಿತುಜಾ ಲಟ್ಕೆಗಿಂತ ನೋಟಾ ಆಯ್ಕೆಗೆ ಹೆಚ್ಚು ಮತಗಳು ಬರಲಿದ್ದು, ಇದಕ್ಕಾಗಿ ವ್ಯವಸ್ಥಿತ ಯೋಜನೆ ರೂಪಿಸಲಾಗುತ್ತಿದೆ ಎಂದು ಠಾಕ್ರೆ ಗುಂಪು ಆರೋಪಿಸಿತ್ತು.
ಮೇ ತಿಂಗಳಲ್ಲಿ ಶಿವಸೇನೆಯ ಶಾಸಕ ರಮೇಶ್ ಲಟ್ಕೆ ನಿಧನ ಹೊಂದಿದ ಕಾರಣ ಉಪಚುನಾವಣೆ ಎದುರಾಗಿತ್ತು. ನವೆಂಬರ್ 3ರಂದು ಉಪಚುನಾವಣೆ ನಡೆದಿದ್ದು, ಶೇ.31.74ರಷ್ಟು ಕಡಿಮೆ ಮತದಾನವಾಗಿತ್ತು.ಅನುಕಂಪದ ಆಧಾರದಲ್ಲಿ ರಮೇಶ್ ಲಟ್ಕೆ ಪತ್ನಿ ರುತುಜಾ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.