ಮುಂಬೈ: ಕಡಿಮೆ ಸಾಧನೆಯಿಂದ ಹೆಚ್ಚು ಸಾಧನೆಯತ್ತ ಹೇಗೆ ಹೆಜ್ಜೆಯಿಡಬೇಕು ಹಾಗೂ ಕಡಿಮೆ ಶಾಸಕರನ್ನು ಹೊಂದಿದ್ದರೂ ಸರ್ಕಾರ ಹೇಗೆ ರಚಿಸಬೇಕು ಎಂಬುದನ್ನು ನಾನು, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್‌ರಿಂದ ಕಲಿತೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಪೂನಾದಲ್ಲಿರುವ ಶರದ್ ಪವಾರ್ ನೇತೃತ್ವದ “ವಸಂತ್‌ದಾದಾ ಶುಗರ್ ಇನ್ಸ್ಟಿಟ್ಯೂಟ್’ನ ವಾರ್ಷಿಕ ಸಮಾರಂಭದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.
ನಂತರ ಪ್ರಧಾನಿ ಮೋದಿ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದ ಅವರು, “”ಇದೇ ಜಾಗದಲ್ಲಿ ಹಿಂದೊಮ್ಮೆ ರಾಜಕೀಯ ನೇತಾರರೊಬ್ಬರು, ತಾವು ಶರದ್ ಪವಾರ್‌ರವರ ಬೆರಳು ಹಿಡಿದೇ ರಾಜಕೀಯಕ್ಕೆ ಬಂದಿದ್ದಾಗಿ ಹೇಳಿಕೊಂಡಿದ್ದರು. ಈಗ, ನನ್ನನ್ನೂ ಪವಾರ್ ಹಾಗೆಯೇ ರಾಜಕೀಯಕ್ಕೆ ತಂದಿದ್ದಾರೆ. ಆದರೆ, ಅಂದು ಮಾಡಿದ ತಪ್ಪನ್ನು ಪವಾರ್ ಇಂದು ಮಾಡಿಲ್ಲ ಎಂದು ಭಾವಿಸುತ್ತೇನೆ” ಎಂದು ಚಟಾಕಿ ಹಾರಿಸಿದರು.
ಇದೇ ವೇಳೆ, 2015ರ ಏ. 1ರಿಂದ 2019ರ ಸೆ. 30ರವರೆಗಿನ ಅವಧಿಯಲ್ಲಿ ಮಹಾರಾಷ್ಟ್ರ ರೈತರು ತಮ್ಮ ಅಲ್ಪಾವಧಿ ಬೆಳೆಗಳ ಮೇಲೆ ಪಡೆದ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗುವುದು ಎಂದೂ ಆಶ್ವಾಸನೆ ನೀಡಿದರು.