Advertisement

ಉದ್ಧವ್‌ ಚುನಾವಣೆಯಲ್ಲಿ ಸ್ಪರ್ಧಿಸಲು ಹೆದರುವುದಿಲ್ಲ: ರಾವುತ್‌

09:09 AM May 12, 2020 | Suhan S |

ಮುಂಬಯಿ, ಮೇ 11: ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ಪರ್ಧಿಸಲು ಹೆದರುವುದಿಲ್ಲ. ಆದರೆ ಕೋವಿಡ್ ವೈರಸ್‌ ಬಿಕ್ಕಟ್ಟಿನ ಮಧ್ಯೆ ಅವಿರೋಧ ಆಯ್ಕೆ ಮುಖ್ಯವಾಗಿತ್ತು ಎಂದು ಹಿರಿಯ ಶಿವಸೇನೆ ಮುಖಂಡ ಸಂಜಯ್‌ ರಾವುತ್‌ ಹೇಳಿದ್ದಾರೆ.

Advertisement

ಪ್ರಾರಂಭದಲ್ಲಿ ಆಡಳಿತಾರೂಢ ಮೈತ್ರಿ ಪಾಲುದಾರ ಕಾಂಗ್ರೆಸ್‌ ಎರಡು ಸ್ಥಾನಗಳಿಗೆ ಸ್ಪರ್ಧಿಸಲು ನಿರ್ಧಾರವನ್ನು ದೃಢಪಡಿಸಿದ್ದು ಬಳಿಕ ಒಂದೇ ಸ್ಥಾನಕ್ಕೆ ಸ್ಪರ್ಧಿಸಿರುವುದರಿಂದ ಠಾಕ್ರೆ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಆರಂಭದಲ್ಲಿ ನಡೆದ ರಾಜಕೀಯ ನಾಟಕವು ಶಿವಸೇನೆ ಮುಖ್ಯಸ್ಥರನ್ನು ಅಸಮಾಧಾನಗೊಳಿಸಿದ್ದು ಅವರು ಪಕ್ಷದ ಎರಡನೇ ಅಭ್ಯರ್ಥಿಯನ್ನು ಹಿಂದೆಗೆದುಕೊಳ್ಳುವಂತೆ ರಾಜ್ಯ ಕಾಂಗ್ರೆಸ್‌ ಮುಖ್ಯಸ್ಥ ಬಾಳಾ ಸಾಹೇಬ್‌ ಥೋರಟ್‌ ಅವರಿಗೆ ಸಂದೇಶ ಕಳುಹಿಸಿದ್ದರು. ಬಳಿಕ ಉದ್ಧವ್‌ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಹೆದರುವುದಿಲ್ಲ. ಆದರೆ ಪ್ರಸ್ತುತ ಪರಿಸ್ಥಿತಿಯು ರಾಜಕೀಯ ಯುದ್ಧವನ್ನು ಸಮರ್ಥಿಸುವುದಿಲ್ಲ ಎಂದು ರಾವುತ್‌ ಸ್ಪಷ್ಟಪಡಿಸಿದ್ದರು.  ರಾಜ್ಯದಲ್ಲಿ ಸಾಂವಿಧಾನಿಕ ಮತ್ತು ರಾಜಕೀಯ ಬಿಕ್ಕಟ್ಟನ್ನು ತಪ್ಪಿಸಲು ಮೇ 21ರಂದು 9 ಸ್ಥಾನಗಳಿಗೆ ಪರಿಷತ್‌ ಚುನಾವಣೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಪ್ರಮಾಣವಚನ ಸ್ವೀಕರಿಸಿದ ಆರು ತಿಂಗಳಲ್ಲಿ ಮುಖ್ಯ ಮಂತ್ರಿ ಅಥವಾ ರಾಜ್ಯ ಸಚಿವರು ಎರಡು ಸದನಗಳಲ್ಲೊಂದಕ್ಕೆ ಚುನಾಯಿತರಾಗಬೇಕೆಂಬ ಸಾಂವಿಧಾನಿಕ ಅಗತ್ಯವನ್ನು ರಾವುತ್‌ ಉಲ್ಲೇಖೀಸಿದರು. ಉದ್ಧವ್‌ ಪ್ರಸ್ತುತ ಶಾಸಕರಲ್ಲ ಮತ್ತು ಮಹಾರಾಷ್ಟ್ರ ಸಿಎಂ ಆಗಿ ಆರು ತಿಂಗಳ ಕಾಲ ಆಡಳಿತ ನಡೆಸಿದ್ದು ಮೇ 28ರಂದು ಅವರ ಅವಧಿ ಮುಕ್ತಾಯಗೊಳ್ಳಲಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಈಗಾಗಲೇ ನಾಲ್ವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷ ಮತ್ತು ಶಿವಸೇನೆ ತಲಾ ಇಬ್ಬರು ಅಭ್ಯರ್ಥಿಗಳನ್ನು ಘೋಷಿಸಿವೆ.

ಕಾಂಗ್ರೆಸ್‌ ಒಬ್ಬರು ಅಭ್ಯರ್ಥಿಯನ್ನು ಕಣಕ್ಕಿಳಿಸುವುದರೊಂದಿಗೆ, ಆಡಳಿತಾರೂಢ ಒಕ್ಕೂಟದ ಅಭ್ಯರ್ಥಿಗಳ ನಡುವೆ ಸ್ಪರ್ಧೆಯ ಅಗತ್ಯವಿಲ್ಲದಂತಾಗಿದೆ. ಜನರು ತಮ್ಮ ಮನೆಗಳಲ್ಲಿ ಬಂಧಿಸಲ್ಪಟ್ಟಿರುವಾಗ ನಾವು ಅವರಿಗೆ ಚುನಾವಣೆಯ ಮೂಲಕ ಸಾಂತ್ವನ ಹೇಳುವುದು ಸರಿಯಲ್ಲ. ಅವರ ಜೀವನೋಪಾಯ ಮತ್ತು ಆರೋಗ್ಯದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಎದ್ದಿದ್ದು ಮಹಾರಾಷ್ಟ್ರದ ರಾಜಕೀಯ ಪಕ್ಷಗಳು ಚುನಾವಣೆಯನ್ನು ಸರ್ವಾನುಮತದಿಂದ ನಿರ್ಧರಿಸಲು ಸಾಧ್ಯವಿಲ್ಲವೇ?. ಚುನಾವಣೆ ನಡೆದರೆ ಇದು ಮಹಾರಾಷ್ಟ್ರದ ಸಂಪ್ರದಾಯದ ಮೇಲೆ ಕಳಂಕವಾದಂತೆ. ಉದ್ಧವ್‌ ಠಾಕ್ರೆ ಅಂತಹ ರಾಜಕೀಯದಲ್ಲಿ ಎಂದಿಗೂ ಕಳಂಕ ವನ್ನು ಕಟ್ಟಿಕೊಂಡವರಲ್ಲ. ಅವರು ಇಂತಹ ವಿಷಯದಲ್ಲಿ ಆಸಕ್ತಿ ವಹಿಸುವುದಿಲ್ಲ. ಅವರು ಅವಿರೋಧವಾದರೆ ಮಾತ್ರ ಸ್ಪರ್ಧಿಸಬಯಸಿದ್ದರು ಎಂದು ರಾವುತ್‌ ಹೇಳಿದ್ದಾರೆ.

ನಾವು ಸ್ಪರ್ಧಿಸಲು ಹೆದರುವುದಿಲ್ಲ, ಆದರೆ ಇದು ಚುನಾವಣೆಯಲ್ಲಿ ಸ್ಪರ್ಧಿಸುವ ಸಮಯವಲ್ಲ. ಪರಿಸ್ಥಿತಿಯನ್ನು ನಿಭಾಯಿಸುವ ಸಮಯ ಇದು. ರಾಜ್ಯವು ಅಸ್ಥಿರತೆಯತ್ತ ಸಾಗುತ್ತಿರುವುದರಿಂದ ನಾವು ಈ ಚುನಾವಣೆಯನ್ನು ಯಾವುದೇ ಆಯ್ಕೆಯಿಂದ ತೆಗೆದುಕೊಂಡಿಲ್ಲ ಎಂದು ರಾವುತ್‌ ರವಿವಾರ ಸುದ್ದಿಗಾರರಿಗೆ ತಿಳಿಸಿದರು.

Advertisement

ಈ ವಿಷಯದ ಬಗ್ಗೆ ಮಹಾರಾಷ್ಟ್ರ ವಿಕಾಸ್‌ ಅಘಾಡಿ (ಎಂವಿಎ) ಮಿತ್ರ ಪಕ್ಷಗಳ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲ ನಾಯಕರು ಪ್ರಸ್ತುತ ಪರಸ್ಪರ ಮಾತುಕತೆ ನಡೆಸುತ್ತಿದ್ದಾರೆ ಎಂದು ರಾವುತ್‌ ಹೇಳಿದರು. ಎಂಎಲ್‌ಸಿ ಚುನಾವಣೆಯಲ್ಲಿ ಅವಿರೋಧವಾಗಿ ಸ್ಪರ್ಧಿಸಲಾಗುವುದು ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.

ತಮ್ಮ ಎಲ್ಲ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಸಮರ್ಪಕ ಸಂಖ್ಯೆಯನ್ನು ಹೊಂದಿಲ್ಲ ಎಂದು ಸೇನಾ ನಾಯಕ ಹೇಳಿದರು. ಬಿಜೆಪಿಯಲ್ಲೂ ತಮ್ಮ ನಾಲ್ಕನೇ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಾಕಷ್ಟು ಸಂಖ್ಯೆಗಳಿಲ್ಲ. ಚುನಾವಣೆಯನ್ನು ಅವಿರೋಧವಾಗಿ ನಡೆಸುವುದು ಅವರ ಜವಾಬ್ದಾರಿಯಾಗಿದೆ. ಬಿಜೆಪಿಯವರು ತಮ್ಮ ಅಭ್ಯರ್ಥಿಗೆ ಸಾಕಷ್ಟು ಮತಗಳನ್ನು ಹೊಂದಿಲ್ಲ. ಅವರು ಕುದುರೆ ವ್ಯಾಪಾರದಲ್ಲಿ ತೊಡಗಬೇಕಾಗಿತ್ತು. ಅಂತಹ ಸಮಯದಲ್ಲಿ ಮಹಾರಾಷ್ಟ್ರದ ಮೇಲೆ ಚುನಾವಣೆಯನ್ನು ಒತ್ತಾಯಿಸಬೇಕೆ ಎಂದು ಅವರು ಯೋಚಿಸಬೇಕು ಎಂದು ತಿಳಿಸಿದ ರಾವುತ್‌ ಅವರು ,ಠಾಕ್ರೆ ಮತ್ತು ದೇವೇಂದ್ರ ಫ‌ಡ್ನವೀಸ್‌ ಈ ವಿಷಯದ ಬಗ್ಗೆ ಚರ್ಚಿಸಬೇಕು ಎಂದರು.

ಫ‌ಡ್ನವೀಸ್‌ ಮತ್ತು ಉದ್ಧವ್‌ ಈ ವಿಷಯದ ಬಗ್ಗೆ ಚರ್ಚಿಸ ಬೇಕು ಎಂದು ನಾನು ಭಾವಿಸುತ್ತೇನೆ. ಅವರು ತಮ್ಮ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು. ಚುನಾವಣೆ ಅವಿರೋಧವಾಗಿ ನಡೆಯಬೇಕು. ಒಂದು ರಾಜ್ಯದ ಮುಖ್ಯ ಮಂತ್ರಿ ಕಣದಲ್ಲಿದ್ದಾರೆ. ರಾಜ್ಯದ ಪರಿಸ್ಥಿತಿ ಗಂಭೀರವಾಗಿದೆ ಮತ್ತು ಜನರು ಸ್ಥಿರ ನಾಯಕತ್ವವನ್ನು ಬಯಸುತ್ತಾರೆ. ಅಂತಹ ಸಮಯದಲ್ಲಿ, ಯಾರೂ ತಮ್ಮ ರಾಜಕೀಯಕ್ಕೆ ತಕ್ಕಂತೆ ಪರಿಸ್ಥಿತಿಯ ಲಾಭವನ್ನು ಪಡೆಯಬಾರದು ಎಂದರು.

ಮೇ 21ರಂದು ಮತದಾನವಾಗಿದ್ದರೆ, ಎಲ್ಲ 288 ಶಾಸಕರು ಮುಂಬಯಿಗೆ ಬರಬೇ ಕಾಗುತ್ತದೆ. ಇದು ಕೋವಿಡ್‌ -19 ರೊಂದಿಗೆ ಹೋರಾಡುತ್ತಿರುವ ಸಮಯದಲ್ಲಿ ರಾಜ್ಯದ ಜನರಿಗೆ ಒಳ್ಳೆಯ ಸಂದೇಶವನ್ನು ಕಳುಹಿಸುವುದಿಲ್ಲ – ಸಂಜಯ್‌ ರಾವುತ್‌

Advertisement

Udayavani is now on Telegram. Click here to join our channel and stay updated with the latest news.

Next