Advertisement
ಪ್ರತಿಯೊಬ್ಬ ಮನುಷ್ಯನಿಗೂ ಏನಾದರೊಂದು ಸಾಧಿಸಬೇಕೆಂಬ ಹಂಬಲವಿರುತ್ತದೆ. ಕೆಲವರು ಒಂದು ಡಿಗ್ರಿ ತೆಗೆದುಕೊಂಡು ಒಂದು ಸಣ್ಣ ಕೆಲಸಕ್ಕೆ ಕೈತುಂಬ ಸಂಬಳ ತೆಗೆದುಕೊಳ್ಳುವುದೇ ಸಾಧನೆ ಅಂದುಕೊಳ್ಳುತ್ತಾರೆ. ಇನ್ನು ಕೆಲವರು “ಬೆಳಿಗ್ಗೆ ಒಂಬತ್ತು ಗಂಟೆಗೆ ಕೆಲಸಕ್ಕೆ ಹೋಗಿ ಸಂಜೆ ಐದು ಗಂಟೆಗೆ ವಾಪಸ್ಸು ಬರುವುದನ್ನು ಎಲ್ಲರೂ ಮಾಡ್ತಾರೆ, ನಾನು ಸ್ವಲ್ಪ ಡಿಫರೆಂಟಾಗಿರಬೇಕು’ ಅಂತ ಬೇರೆ ಬೇರೆ ಕೆಲಸಗಳಿಗೆ ಕೈಹಾಕುತ್ತಾರೆ. ಮತ್ತೆ ಕೆಲವರು “ನಾನು ಸಾಧನೆ ಮಾಡಿದರೆ ಸಣ್ಣ ಸಾಧನೆಯನ್ನಂತೂ ಮಾಡುವುದಿಲ್ಲ. ಚಿಕ್ಕವನಾಗಿದ್ದಾಗ ಕಂಡ ಕನಸಿನಂತೆ ಅತಿ ದೊಡ್ಡ ಸಾಧನೆಯನ್ನೇ ಮಾಡಬೇಕು’ ಅಂತ ಕನಸು ಕಾಣುತ್ತಾರೆ. ಬರೇ ಕನಸು ಕಾಣುತ್ತಾರೆ, ಕನಸು ಮಾತ್ರ ಕಾಣುತ್ತಾ ಕುಳಿತಿರುತ್ತಾರೆ.
Related Articles
Advertisement
ನಿಮಗೇನು ಬೇಕು ಅನ್ನುವುದನ್ನು ಮೊದಲು ನಿಮ್ಮ ಮನಸ್ಸಿನೊಳಗೆ ಖಚಿತಪಡಿಸಿಕೊಳ್ಳಿ. ಆಮೇಲೆ ಅದನ್ನು ಪಡೆಯುವ ದಾರಿಯನ್ನು ಎಲ್ಲ ದೃಷ್ಟಿಕೋನಗಳಿಂದ ನೋಡಿ. ಯಾವುದನ್ನೂ ನೀವಂದುಕೊಂಡದ್ದನ್ನು ಸಾಧಿಸಲು ಎಷ್ಟು ದಿನ, ಎಷ್ಟು ವರ್ಷ ಬೇಕಾಗುತ್ತದೆ, ಅಷ್ಟು ದಿನ ನಿಮ್ಮ ಖರ್ಚು ಯಾರು ನೋಡಿಕೊಳ್ಳುತ್ತಾರೆ, ಹೊಟ್ಟೆಗೇನು ಮಾಡಬೇಕು, ಕುಟುಂಬಕ್ಕೇನು ಮಾಡಬೇಕು ಎಂಬುದನ್ನೆಲ್ಲ ನಿಶ್ಚಯಿಸಿಕೊಳ್ಳಿ. ಅಂದುಕೊಂಡದ್ದನ್ನು ಸಾಧಿಸುವಷ್ಟು ಬುದ್ಧಿವಂತಿಕೆ ನಿಮ್ಮಲ್ಲಿದೆಯೇ ಎಂಬುದನ್ನು ಪ್ರಾಮಾಣಿಕವಾಗಿ ಯೋಚಿಸಿ ನಿರ್ಧರಿಸಿಕೊಳ್ಳಿ.
ಯೋಜಿತ ದಾರಿ: ಸಾಧನೆಗೆ ವ್ಯವಸ್ಥಿತ ಯೋಜನೆ ಬೇಕು. ಸಾಧಿಸುವವರು ಏಕಕಾಲಕ್ಕೆ ಈ ಕೆಳಗಿನ ಮೂರು ದಾರಿಗಳಲ್ಲಿ ಚಲಿಸಬೇಕು.1) ಸಾಧನೆಯ ದಾರಿ (ನಿಮ್ಮ ಕನಸಿನ ದಾರಿ) 2) ಜ್ಞಾನ ಸಂಪಾದಿಸುವ ದಾರಿ 3) ಹಣ ಸಂಪಾದಿಸುವ ದಾರಿ
ದಿನದ 24 ಗಂಟೆಗಳನ್ನು ಈ ಮೂರು ದಾರಿಗಳಿಗೆ ಸರಿಯಾಗಿ ವಿಂಗಡಿಸಿಕೊಳ್ಳಬೇಕು. ಬರೀ ಸಾಧನೆ ಮಾಡುತ್ತೇನೆ ಅಂತ ಕೂತಿದ್ದರೆ ಸಂಪಾದನೆ ಮಾಡುವವರು ಯಾರು? ಅಥವಾ ಬರೀ ಸಂಪಾದನೆ ಮಾಡುತ್ತಿದ್ದರೆ, “ಅಯ್ಯೋ ನನ್ನ ಕನಸೇ ಬೇರೆ ಆಗಿತ್ತು, ನಾನು ಇಲ್ಲಿ ಈ ಕೆಲಸದಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ’ ಎಂದು ಹಳಹಳಿಸುತ್ತೀರಿ. ಕೆಲ ಹುಡುಗರಂತೂ ಕೆಲಸಕ್ಕಾಗಿ ಅಲೆದಾಡುತ್ತಾ ತುಂಬ ಕಷ್ಟ ಪಡುತ್ತಿರುತ್ತಾರೆ. ಜೇಬಿನಲ್ಲಿ ಬಸ್ ಚಾರ್ಜಿಗೂ ಕಾಸಿರುವುದಿಲ್ಲ. ಸ್ನೇಹಿತನ ರೂಮಿನಲ್ಲೇ ಕೆಲವು ದಿನ ಕಳೆಯಬಹುದೆಂಬ ನಂಬಿಕೆಯಿರುತ್ತದೆ. ಆದರೂ ಸ್ವಾಭಿಮಾನ ಮನಸ್ಸನ್ನು ಚುಚ್ಚುತ್ತಲೇ ಇರುತ್ತದೆ. ಇಂಥ ಅಸಹಾಯಕ ಸ್ಥಿತಿಯಲ್ಲಿ ಕೆಲಸ ಸಿಕ್ಕಾಗ ಮನುಷ್ಯ ಆ ಕೆಲಸವನ್ನು ಕಣ್ಣಿಗೊತ್ತಿಕೊಂಡು, ದೇವರೇ ಹುಡುಕಿಕೊಂಡು ಬಂದು ಈ ಕೆಲಸ ಕೊಟ್ಟಿದಾನೆ ಅಂತ ಅದಕ್ಕೆ ಅಂಟಿಕೊಂಡು ಬಿಡುತ್ತಾರೆ. ಆಗ ನಿಮ್ಮ ಕನಸಿನ ಕರೆಯೇನಾಯಿತು ಸ್ವಾಮಿ? ಬುದ್ಧಿಯನ್ನೂ ಸ್ವಲ್ಪ ಬೆಳೆಸಿ: ನಾವು ಒಂದೊಂದೇ ಹೆಜ್ಜೆ ಮುಂದೆ ಹೋಗುತ್ತಿದ್ದಂತೆ ಅದಕ್ಕೆ ಸರಿಯಾಗಿ ನಮ್ಮ ಜ್ಞಾನವನ್ನೂ ಬೆಳೆಸಿಕೊಳ್ಳಬೇಕು. ಇಲ್ಲವಾದರೆ ನಾವು ಕನಸಿನಲ್ಲಿ ಮಾತ್ರ ಮುಂದಿರುತ್ತೇವೆ, ವಾಸ್ತವದಲ್ಲಿ ಹಿಂದುಳಿದಿರುತ್ತೇವೆ. ನಮ್ಮ ಯಾವುದೇ ಕನಸು ನೂರಕ್ಕೆ ನೂರು ಸತ್ಯವಾಗಿದ್ದಲ್ಲಿ ಅದು ನನಸಾಗಿಯೇ ಆಗುತ್ತದೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನಿಮಗೆ ಯಾವುದೇ ಒಂದು ನೂರಕ್ಕೆ ನೂರು ಬೇಕೇ ಬೇಕು ಅನಿಸಿ ಅದು ನಿಮಗೆ ಸಿಗದಿದ್ದಲ್ಲಿ ನೀವು ಅದನ್ನು ನೂರಕ್ಕೆ ನೂರರಷ್ಟು ಬಯಸಿಲ್ಲ ಎಂದೇ ಅರ್ಥ. ಕನಸು, ಹಣ ಸಂಪಾದನೆ ಮತ್ತು ಜ್ಞಾನ – ಈ ಮೂರು ಹಾದಿಯಲ್ಲಿ ಏಕಕಾಲಕ್ಕೆ ಚಲಿಸಿದರೆ ಮಾತ್ರ ಚಿಕ್ಕ ವಯಸ್ಸಿನಲ್ಲೇ ಸಾಧಿಸಲು ಸಾಧ್ಯ. ಇವಿದ್ದರೆ ಹತ್ತು ವರ್ಷಗಳಲ್ಲಿ ಸಾಧಿಸುವುದನ್ನು ಐದೇ ವರ್ಷದಲ್ಲಿ ಸಾಧಿಸಿ ತೋರಿಸಬಹುದು. ಒಂದಾದ ಅನಂತರ ಮತ್ತೂಂದು ಎಂದುಕೊಂಡರೆ ನಾವು ಸಾಧಿಸುವಷ್ಟರಲ್ಲಿ ನಮಗೆ ವಯಸ್ಸಾಗಿರುತ್ತದೆ ಇಲ್ಲವೇ ನಾವು ಸಾಧಿಸಲು ಹೊರಟಿರುವುದೇ ಔಟ್ ಡೇಟೆಡ್ ಆಗಿರುತ್ತದೆ. ಇವೆಲ್ಲದರ ನಡುವೆ ಹಣಕಾಸಿನ ಒತ್ತಡ ಬರುತ್ತಲೇ ಇರುತ್ತದೆ. ನಮಗೆ ಬೇಕಾದ ಹಣವನ್ನು ಹತ್ತು ಜನರ ಬಳಿ ಸಾಲ ತೆಗೆದುಕೊಳ್ಳಬಹುದು. ಹಾಗಂತೆ ಸಾಲದಲ್ಲೇ ಬದುಕುತ್ತಿದ್ದರೆ ನೆಮ್ಮದಿಯ ಜೀವನ ನಡೆಸುವುದು ಎಂದು? ಸಣ್ಣ ಪುಟ್ಟ ಕೆಲಸವಾದರೂ ಅವಮಾನ ಎಂದುಕೊಳ್ಳದೆ ನಮ್ಮ ದುಡ್ಡಿನಲ್ಲಿ ನಾವು ಬದುಕುವುದೇ ಚೆಂದ! ಇಷ್ಟೆಲ್ಲ ಕಷ್ಟಗಳಿಂದ ಮುಕ್ತಿ ಹೊಂದಿ ಸಾಧನೆ ಮಾಡಬೇಕು ಅಂದರೆ ದೃಢ ಮನಸ್ಸಿನ ಜತೆಗೆ ತಾಳ್ಮೆಯೂ ಇರಬೇಕು. ರೂಪಾ ಅಯ್ಯರ್