Advertisement

ಕುಷ್ಠರೋಗ ತಡೆಗೆ ಎಲ್ಲರೂ ಕೈಜೋಡಿಸಿ

06:38 PM Aug 24, 2021 | Team Udayavani |

ಬಳ್ಳಾರಿ: ಆರಂಭಿಕ ಹಂತದಲ್ಲಿಯೇ ಕುಷ್ಠರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದು ಮತ್ತು ಕುಷ್ಠರೋಗದಿಂದ ಸಂಭವಿಸಬಹುದಾದ ಅಂಗವಿಕಲತೆಯನ್ನು ತಡೆಗಟ್ಟುವುದು ಸಕ್ರಿಯ ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನ ಮತ್ತು ನಿಯಮಿತ ತಪಾಸಣೆಯ ಉದ್ದೇಶವಾಗಿದೆ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ| ರಾಜಶೇಖರರೆಡ್ಡಿ ಹೇಳಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನ ಕಾರ್ಯಕ್ರಮದಡಿ ಸಕ್ರಿಯ ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನ ಮತ್ತು ನಿಯಮಿತ ತಪಾಸಣೆ ಅಭಿಯಾನದ ಅಡಿಯಲ್ಲಿ ನಗರದ ದೇವಿನಗರ ಬಡಾವಣೆಯಲ್ಲಿ ಆರಂಭವಾಗಿರುವ ಮನೆ ಮನೆ ಸಮೀಕ್ಷೆ ಕಾರ್ಯ ಪರಿಶೀಲಿಸಿ ಅವರು ಮಾತನಾಡಿದರು.

ಪ್ರಸಕ್ತ 2021-22ರ ಕಾರ್ಯಕ್ರಮವು ಆಗಸ್ಟ್‌ 1 ರಿಂದ ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಕೂಡ್ಲಿಗಿ, ಸಂಡೂರು, ಸಿರುಗುಪ್ಪ, ಹೊಸಪೇಟೆ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ ತಾಲೂಕುಗಳಲ್ಲಿ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನ ಕಾರ್ಯಕ್ರಮದಡಿ ಸಕ್ರಿಯ ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನ ಮತ್ತು ನಿಯಮಿತ ತಪಾಸಣೆ ಕಾರ್ಯಕ್ರಮವು ಈಗಾಗಲೇ ಆರಂಭವಾಗಿದೆ. ಕುಷ್ಠರೋಗದಿಂದ ಸಂಭವಿಸಬಹುದಾದ ಅಂಗವಿಕಲತೆಯನ್ನು ತಡೆಗಟ್ಟುವುದು ಇದರ ಪ್ರಮುಖ ಉದ್ದೇಶವಾಗಿದೆ.

ಕಾರ್ಯಕ್ರಮದಲ್ಲಿ ಕಳೆದ 3 ವರ್ಷಗಳಿಂದ ಜಿಲ್ಲೆಯಲ್ಲಿ ಪತ್ತೆಯಾಗಿರುವ ಹೊಸ ಕಷ್ಠರೋಗಿಗಳ ಮನೆಯ ಸುತ್ತಮುತ್ತ ಒಂದು ಸಾವಿರ ಜನಸಂಖ್ಯೆ ಅಥವಾ 200 ಮನೆಗಳಲ್ಲಿರುವ ಎಲ್ಲ ಜನರಿಗೆ ತಪಾಸಣೆ ಮಾಡಲು ಉದ್ದೇಶಿಸಿದೆ. ಕಾರ್ಯಕ್ರಮದಲ್ಲಿ ಒಬ್ಬ ಆಶಾ ಮತ್ತು ಒಬ್ಬ ಸ್ವಯಂ ಸೇವಕ (ಗಂಡಸರು) ಒಳಗೊಂಡು ಒಂದು ತಂಡವಿರುತ್ತದೆ. ತಂಡವು ಮನೆಗಳಲ್ಲಿ ಇರುವಂತಹ ಹೆಣ್ಣು ಮಕ್ಕಳಿಗೆ ಆಶಾ ಕಾರ್ಯಕರ್ತೆಯರು ತಪಾಸಣೆ ಮಾಡಿದರೆ ಸ್ವಯಂ ಸೇವಕರು ಗಂಡಸರಿಗೆ ತಪಾಸಣೆ ಮಾಡುತ್ತಾರೆ ಎಂದು ವಿವರಿಸಿದರು.

ಇದೇ ರೀತಿ ಜಿಲ್ಲೆಯಲ್ಲಿ ಒಟ್ಟು 405 ತಂಡಗಳು ಮತ್ತು 70 ಮೇಲ್ವಿಚಾರಕರನ್ನು ನಿಯೋಜಿಸಿ ಒಟ್ಟು 4,50,163 ಜನರಿಗೆ ತಪಾಸಣೆ ಮಾಡಲು ಕ್ರಿಯಾಯೋಜನೆ ತಯಾರಿಸಲಾಗಿದೆ. ತಪಾಸಣೆ ಮಾಡುವ ಸಂದರ್ಭದಲ್ಲಿ ಈ ಕೆಳಗೆ ವಿವರಿಸಿರುವ ಯಾವುದಾದರೂ ಲಕ್ಷಣಗಳು ಕಂಡುಬಂದರೆ ತಡಮಾಡದೇ ಹತ್ತಿರದ ವೈದ್ಯರ ಹತ್ತಿರ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಕುಷ್ಠರೋಗದ ಲಕ್ಷಣಗಳು: ತಿಳಿಬಿಳಿ ತಾಮ್ರ ಬಣ್ಣದ ಮಚ್ಚೆಗಳು, ಸ್ಪರ್ಶಜ್ಞಾನವಿಲ್ಲದ, ನೋವಿಲ್ಲದ, ತುರುಕೆ ಮತ್ತು ತಿಂಡಿಯಿಲ್ಲದ ಮಚ್ಚೆಗಳು, ದೇಹದ ಯಾವುದೇ ಬಾಗದಲ್ಲಿ ಗಂಟುಗಳು, ಮಚ್ಚೆಗಳ ಮೇಲೆ ಕೂದಲು ಉದುರುವುದು. ಮಚ್ಚೆಗಳ ಮೇಲೆ ಬೆವರು ಇಲ್ಲದೆ ಇರುವುದು, ಎಣ್ಣೆ ಸವರಿದಂತಹ /ಹೊಳಪು ಇರುವಂತಹ ಮಚ್ಚೆಗಳು, ಮೂಗಿನ ಮದ್ಯದಲ್ಲಿ ಕುಳಿ ಬೀಳುವುದು, ಕಣ್ಣುಗಳು ಮುಚ್ಚಲಿಕ್ಕೆ ಬಾರದೆ ಇರುವುದು. ಕೈ ಕಾಲುಗಳಲ್ಲಿ ನಿರಂತರ ಜೋಮು ಇರುವುದು. ಬಹಳ ದಿನಗಳಿಂದ ಮಾಯದೇ ಇರುವಂತಹ ಗಾಯಗಳು. ಕೈ ಮತ್ತು ಕಾಲು ಬೆರಳುಗಳು ಮಡಚಿಕೊಂಡಿರುವುದು. ಹೀಗೆ ವಿಶ್ವ ಆರೋಗ್ಯ ಸಂಸ್ಥೆಯವರು ಗುರುತಿಸಿರುವ ಸುಮಾರು 23 ಲಕ್ಷಣಗಳಲ್ಲಿ ಯಾವುದಾದರು ಒಂದು ಲಕ್ಷಣ ಇದ್ದರೇ ತಡಮಾಡದೇ ವೈದ್ಯರ ಹತ್ತಿರ ಪರಿಕ್ಷಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಅವರು ತಿಳಿಸಿದರು.

Advertisement

ಹರಡುವಿಕೆ: ಈ ರೋಗವು ಒಂದು ಸಾಂಕ್ರಾಮಿಕ ರೋಗವಾಗಿದ್ದು, ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಮತ್ತು ಸೀನಿದಾಗ ಗಾಳಿಯ ಮೂಲಕ ಅಥವಾ ತುಂತುರು ಹನಿಗಳ ಮೂಲಕ ಮೂಗು ಮತ್ತು ಬಾಯಿಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ನಂತರ ರೋಗದ ಆರಂಭಿಕ ಲಕ್ಷಣಗಳು ಕಾಣಿಸಲು ಕನಿಷ್ಠ 2 ರಿಂದ 5 ವರ್ಷಗಳ ಸುದೀರ್ಘ‌ ಸಮಯ ಬೇಕಾಗಬಹುದು ಎಂದರು.

ಚಿಕಿತ್ಸೆ: ಈ ರೋಗಕ್ಕೆ ಪಿಬಿ, ಎಂಬಿ ಎಂದು 2 ವಿಧದಲ್ಲಿ ಚಿಕಿತ್ಸೆಯನ್ನು ನೀಡಲಾಗುವುದು. ಆರಂಭಿಕ ಹಂತದಲ್ಲಿ ರೋಗವೂ ಇದ್ದರೇ ಅದನ್ನು ಪಿಬಿ ಎಂದು ಪರಿಗಣಿಸಿ ಕನಿಷ್ಠ 6 ತಿಂಗಳು ಚಿಕಿತ್ಸೆ ನೀಡುವುದು, ಎಂಬಿ ಎಂದು ಕಂಡುಬಂದರೇ 12 ತಿಂಗಳು ಚಿಕಿತ್ಸೆಯನ್ನು ಎಲ್ಲ ಸರ್ಕಾರಿ ಆಸ್ಪತೆಗಳಲ್ಲಿ ಉಚಿತವಾಗಿ ನೀಡಲಾಗುವುದು ಎಂದು ವಿವರಿಸಿದರು.

ಕಾರ್ಯಕ್ರಮವನ್ನು ಪ್ರತಿ ವರ್ಷ 2 ಸುತ್ತುಗಳಲ್ಲಿ ಹಮ್ಮಿಕೊಳ್ಳಲಾಗಿದೆ, ಈ ವರ್ಷದಲ್ಲಿ 1ನೇ ಸುತ್ತು ಆಗಸ್ಟ್‌, ಸೆಪ್ಟೆಂಬರ್‌, ಅಕ್ಟೋಬರ್‌ ಹಾಗೂ 2ನೇ ಸುತ್ತು ಡಿಸೆಂಬರ್‌, ಜನವರಿ-22 ,ಫೆಬ್ರವರಿ-22 ಮಾಡಲು ಕ್ರಿಯಾಯೋಜನೆ ತಯಾರಿಸಲಾಗಿದೆ. ಕಾರ್ಯಕ್ರಮದಲ್ಲಿ ಕಳೆದ 3 ವರ್ಷಗಳಲ್ಲಿ ಒಟ್ಟು 531 ಕೇಸ್‌ಗಳು ಹೊಸದಾಗಿ ಪತ್ತೆಯಾಗಿದ್ದು ಸದರಿ ಕೇಸ್‌ಗಳ ಮನೆಯ ಸುತ್ತಮುತ್ತ ಒಂದು ಸಾವಿರ ಜನಸಂಖ್ಯೆ ಅಥವಾ 200 ಮನೆಗಳನ್ನು ತಪಾಸಣೆ ಮಾಡಲು ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಡಾ.ಸುಧಾರಾಣಿ, ಜಿಲ್ಲಾ ಆರೋಗ್ಯ ಶಿಕ್ಷಣಾ ಧಿಕಾರಿ ಈಶ್ವರ ಎಚ್‌.ದಾಸಪ್ಪನವರ, ಜಿಲ್ಲಾ ಆರೋಗ್ಯ ಉಪಶಿಕ್ಷಣಾ ಧಿಕಾರಿ ಶಾಂತವ್ವ ಉಪ್ಪಾರ, ಮಲ್ಲಿಕಾರ್ಜುನ, ಗೌರಮ್ಮ ಮತ್ತು ಆಶಾ ಕಾರ್ಯಕರ್ತೆ ಶಶಿಕಲಾ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next