Advertisement

ಆತಂಕ ಬೇಡ; ಲಾಕ್‌ಡೌನ್‌ ಮುಗಿದ ಬಳಿಕವಷ್ಟೇ ಪರೀಕ್ಷೆ

12:03 AM May 09, 2020 | Sriram |

ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಪ್ರಾರಂಭಗೊಂಡು ಸುಮಾರು ಒಂದೂವರೆ ತಿಂಗಳು ಕಳೆದಿದ್ದು, ಪ್ರಸಕ್ತ ಶೈಕ್ಷಣಿಕ ಚಟುವಟಿಕೆಗಳಿಗೂ ಹಲವಾರು ರೀತಿಯ ಸವಾಲು-ಸಮಸ್ಯೆಗಳು ಎದುರಾಗಿವೆ. ಹೀಗಿರುವಾಗ, ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಬರುವ ಸುಮಾರು 210ಕ್ಕೂ ಹೆಚ್ಚು ಪದವಿ ಕಾಲೇಜುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿವಿ ಉಪ ಕುಲಪತಿ ಪ್ರೊ| ಪಿ.ಎಸ್‌. ಎಡಪಡಿತ್ತಾಯ ಅವರೊಂದಿಗೆ ಮಂಗಳೂರಿನ ಉದಯವಾಣಿ ಕಚೇರಿಯಲ್ಲಿ ಶುಕ್ರವಾರ “ಫೋನ್‌-ಇನ್‌’ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳ ಪರೀಕ್ಷೆಗಳು, ಮೌಲ್ಯಮಾಪನ, ಆನ್‌ಲೈನ್‌ ತರಗತಿಗಳು ಸಹಿತ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಸಂಸ್ಥೆಗಳ ಪ್ರಮುಖರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಹೆತ್ತವರ ಸಂದೇಹಗಳಿಗೆ ಉಪ ಕುಲಪತಿಗಳು ದೂರವಾಣಿ ಮೂಲಕ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಫೋನ್‌-ಇನ್‌ನಲ್ಲಿ ಬಂದ ಆಯ್ದ ಕೆಲವು ಪ್ರಶ್ನೆ-ಉತ್ತರಗಳು ಇಲ್ಲಿವೆ.

Advertisement

-ಕಬ್ಬಿನಾಲೆ ಬಾಲಕೃಷ್ಣ , ಪ್ರಾಂಶುಪಾಲರು, ಮಂಗಳೂರು
ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಪಠ್ಯಕ್ರಮ ನಿರ್ವಹಿಸು ವಂತೆ ತಿಳಿಸಲಾಗಿದೆ. ಇದರ ನಿರ್ವಹಣೆ ಯಾವ ರೀತಿ?
ಲಾಕ್‌ಡೌನ್‌ ಕಾರಣದಿಂದ ಆನ್‌ಲೈನ್‌ ಪಠ್ಯಕ್ರಮವನ್ನು ಸರಕಾರದ ನಿರ್ದೇಶನದಂತೆ ನಡೆಸಲಾಗುತ್ತಿದೆ. ಆದರೂ ಸ್ನಾತಕೋತ್ತರ ಪದವಿಯಲ್ಲಿ ಶೇ.20, ಪದವಿಯಲ್ಲಿ ಶೇ.30ರಷ್ಟು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪಠ್ಯಕ್ರಮಕ್ಕೆ ನೆಟ್‌ವರ್ಕ್‌ ಸಮಸ್ಯೆ, ಮೊಬೈಲ್‌ ನೋಡುವ ಮೂಲಕ ತಲೆನೋವು ಸಹಿತ ಹಲವಾರು ಸಮಸ್ಯೆಗಳಿಂದ ಆನ್‌ಲೈನ್‌ಗೆ ಒಗ್ಗಿಕೊಳ್ಳಲು ಆಗುತ್ತಿಲ್ಲ ಎಂಬ ಮಾಹಿತಿಯಿದೆ. ಆದರೂ ವಿವಿ ವತಿಯಿಂದ ಮಕ್ಕಳಿಗೆ ಧೈರ್ಯ ತುಂಬುವ ಕಾರ್ಯ, ಪ್ರಸಕ್ತ ಸ್ಥಿತಿ-ಗತಿಯನ್ನು ತಿಳಿಸುವ ಕಾರ್ಯ ನಡೆಸಲಾಗುತ್ತಿದೆ.

-ಹಮೀದ್‌ ವಿಟ್ಲ
 ಸ್ನಾತಕೋತ್ತರ ಪದವಿ ಗಳಿಸಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಅಂಕಪಟ್ಟಿ ಸಿಗದೆ ಸಂದರ್ಶನಕ್ಕೆ ಹಾಜರಾಗಲು ಸಮಸ್ಯೆ ಆಗುತ್ತಿದೆ.
ಸದ್ಯ ಯಾವುದೇ ಸಂದರ್ಶನ ಪ್ರಕ್ರಿಯೆ ನಡೆಯುವುದಿಲ್ಲ. ಮುಂದಿನ 10 ದಿನಗಳಲ್ಲಿ ಅಂಕಪಟ್ಟಿ ಒದಗಿಸುವ ನಿಟ್ಟಿನಲ್ಲಿ ವಿವಿ ಕ್ರಮ ಕೈಗೊಳ್ಳಲಾಗುವುದು.

-ಗಣೇಶ್‌ ಉಡುಪಿ
ಮಂಗಳೂರು ವಿವಿಯ ಎಂಎಸ್‌ಡಬ್ಲ್ಯು ವಿದ್ಯಾರ್ಥಿಗಳಿಗೆ 4 ವರ್ಷಗಳಿಂದ ಮೌಖೀಕ (ವೈವಾ) ಪರೀಕ್ಷೆ ವಿವಿಯಲ್ಲೇ ನಡೆಯುತ್ತಿತ್ತು. ಈ ಬಾರಿಯೂ ವಿವಿಯಲ್ಲಿ ನಡೆದರೆ ಉಡುಪಿಯಿಂದ ಬರಲು ಅನನುಕೂಲವಾಗಬಹುದು.
   ಈ ವರ್ಷದ ವೈವಾ ಪರೀಕ್ಷೆಯನ್ನು ಆಯಾ ಕಾಲೇಜು ಮಟ್ಟದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಥಿಯರಿ ಪರೀಕ್ಷೆಯ ಬಳಿಕ ವೈವಾ ಪರೀಕ್ಷೆ ನಡೆಯಲಿದೆ. ಜತೆಗೆ ಮೌಖೀಕ ಪರೀಕ್ಷೆಯನ್ನು ಆನ್‌ಲೈನ್‌ ಮೂಲಕ ನಡೆಸುವ ಬಗ್ಗೆಯೂ ಚಿಂತಿಸಲಾಗಿದೆ.

-ಅನನ್ಯಾ ಬಿ.ಸಿ.ರೋಡ್‌
ದ್ವಿತೀಯ ವರ್ಷ ಬಿಕಾಂ ನಾನು ಮುಗಿಸಿದ್ದು, ಮುಂದಿನ ವರ್ಷವನ್ನು ದೂರಶಿಕ್ಷಣ ಮೂಲಕ ಪೂರ್ಣಗೊಳಿಸಬಹುದೆ?
   ದೂರಶಿಕ್ಷಣದ ಮೂಲಕವೂ ಪೂರ್ಣಗೊಳಿಸಲು ಅವಕಾಶ ವಿದೆ. ಪ್ರಮಾಣಪತ್ರವು ದೂರಶಿಕ್ಷಣ ವಿಭಾಗದಿಂದ ಸಿಗಲಿದೆ.

Advertisement

-ವಿವಿಯನ್‌, ಉಡುಪಿ
ಮಂಗಳೂರು ವಿ.ವಿ.ಯಲ್ಲಿ ಎಫ್‌ಡಿಎ ಹುದ್ದೆಗೆ ನೇಮಕಾತಿ ಯಾವಾಗ?
ಈ ಬಗ್ಗೆ ರಾಜ್ಯ ಸರಕಾರದಿಂದ ಇನ್ನೂ ಅನುಮತಿ ಬಂದಿಲ್ಲ. ಕೋವಿಡ್-19 ಕಾರಣದಿಂದಾಗಿ ವಿಳಂಬವಾಗುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ನಿಯಮಾನುಸಾರ ನೇಮಕಾತಿ ನಡೆಯಲಿದೆ.

-ಸುಭಾಶ್ಚಂದ್ರ ಕಣ್ವತೀರ್ಥ
ಕೆಲವೊಂದು ಪಠ್ಯವಿಷಯ ಅಪೂರ್ಣಗೊಂಡಿದೆ. ಅವುಗಳನ್ನು ಪೂರ್ಣಗೊಳಿಸಿಯೇ ಪರೀಕ್ಷೆ ನಡೆಸಿ.
ಲಾಕ್‌ಡೌನ್‌ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ವಾಟ್ಸ್ಯಾಪ್ ಗ್ರೂಪ್ ಗಳಲ್ಲಿ ಪಠ್ಯದ ವಿಷಯ, ಸಿಲೆಬಸ್‌ಗಳನ್ನು ಕಳುಹಿಸ ಲಾಗುತ್ತಿದೆ. ಲಾಕ್‌ಡೌನ್‌ ಪೂರ್ಣಗೊಂಡ ಬಳಿಕ 2ರಿಂದ 3 ವಾರಗಳ ಕಾಲ ತರಗತಿ ನಡೆಸಿಯೇ ಪರೀಕ್ಷೆ ನಡೆಸುತ್ತೇವೆ.

-ರಾಜೀವ್‌ ಶೆಟ್ಟಿ, ಕುಂದಾಪುರ
ನನ್ನ ಪುತ್ರಿ ಪ್ರಥಮ ವರ್ಷದ ಎಂಎಸ್ಸಿ ವ್ಯಾಸಂಗ ಮಾಡುತ್ತಿ ದ್ದಾಳೆ. ಮೊದಲ ಇಂಟರ್ನಲ್‌ ಪರೀಕ್ಷೆ ಯಾವಾಗ?
ಇಂಟರ್ನಲ್‌ ಪರೀಕ್ಷೆಯ ಬಗ್ಗೆ ಆತಂಕ ಬೇಡ. ಪರೀಕ್ಷೆಯ ಮೊದಲು 2ರಿಂದ ಮೂರು ವಾರಗಳ ಕಾಲ ತರಗತಿ ನಡೆಸಿ ಬಳಿಕ ಪರೀಕ್ಷೆ ನಡೆಸಲಾಗುವುದು. ಮನೆಯಲ್ಲಿರುವಾಗ ವಿದ್ಯಾರ್ಥಿಗಳು ಓದುತ್ತಿರಲಿ.

-ಪ್ರಜ್ವಲ್‌, ಉಡುಪಿ
 ಆರನೇ ಸೆಮಿಸ್ಟರ್‌ ಪರೀಕ್ಷೆಯನ್ನು ವಿವಿ ಮಟ್ಟದಲ್ಲಿ ನಡೆಸಿ ಉಳಿದ ಸೆಮಿಸ್ಟರ್‌ ಪರೀಕ್ಷೆಗಳನ್ನು ಆಯಾ ಕಾಲೇಜುಗಳಲ್ಲಿಯೇ ನಡೆಸುವ ಬಗ್ಗೆ ಮಾಹಿತಿ ನಿಜವೇ?
  ಇದು ಗಾಳಿ ಸುದ್ದಿ. ಇಂಥ ಯಾವುದೇ ತೀರ್ಮಾನವಾಗಿಲ್ಲ. ಸರಕಾರ ಶೀಘ್ರವೇ ಶೈಕ್ಷಣಿಕ ಮಾರ್ಗಸೂಚಿ ಪ್ರಕಟಿಸಲಿದೆ.

-ಮಂಜುಳ ಪೈ ಉಡುಪಿ
ಉಡುಪಿ ಕಾಲೇಜಿನಲ್ಲಿ ಬಿಎಸ್ಸಿ ಕಲಿಯುತ್ತಿದ್ದೇನೆ. ಅರ್ಧ ಇಂಟರ್ನಲ್‌ ಅಷ್ಟೇ ಆಗಿದೆ. ಮುಂದೇನು?
ಲಾಕ್‌ಡೌನ್‌ ಮುಗಿದ ಬಳಿಕವಷ್ಟೇ ಪರೀಕ್ಷೆ ಆರಂಭವಾ ಗಲಿದೆ. ಆತಂಕ ಬೇಡ. ಥಿಯರಿ ಪರೀಕ್ಷೆಯ ಬಳಿಕ ಆಯಾ ಕಾಲೇಜಿನಲ್ಲಿ ಲ್ಯಾಬ್‌ ಪರೀಕ್ಷೆ ನಡೆಯಲಿದೆ. ಈ ಬಗ್ಗೆ ವಾರದೊಳಗೆ ಸರಕಾರ ಸೂಕ್ತ ಮಾರ್ಗಸೂಚಿ ಪ್ರಕಟಿಸಲಿದೆ.

-ಗೋಪಿನಾಥ್‌ ದೇರೆಬೈಲ್‌
 ಲಾಕ್‌ಡೌನ್‌ನಿಂದ ಎಂಕಾಂ ಕೊನೆಯ ವರ್ಷದ ದೂರಸಂಪರ್ಕ ಪರೀಕ್ಷೆಯ ಶುಲ್ಕ ಪಾವತಿಸಲು ಸಾಧ್ಯವಾಗಿಲ್ಲ. ಇದರಿಂದ ಸಮಸ್ಯೆ ಏನಾದರು ಇದೆಯೇ?
ಲಾಕ್‌ಡೌನ್‌ ಮುಗಿದ ಬಳಿಕವೂ ಶುಲ್ಕ ಪಾವತಿಗೆ ಅವಕಾಶವಿದೆ. ಇದಕ್ಕೆ ಯಾವುದೇ ದಂಡ ವಿಧಿಸುವುದಿಲ್ಲ.

-ಲಕ್ಷ್ಮೀನಾರಾಯಣ ಉಡುಪಿ
ದ್ವಿತೀಯ ವರ್ಷದ ಬಿಎ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗೆ ಒಂದು ವಿಷಯದಲ್ಲಿ ಶೇ. 42ರಷ್ಟು ಹಾಜರಾತಿ ಇದೆ. ಹೀಗಾಗಿ ಪರೀಕ್ಷೆಗೆ ಹಾಜರಾಗಲು ಸಾಧ್ಯವೇ?
ಪ್ರತೀ ವಿಷಯದಲ್ಲಿ ಶೇ.75ರಷ್ಟು ಹಾಜರಾತಿ ಕಡ್ಡಾಯ. ಹಾಜರಾತಿಯಲ್ಲಿ ಯಾವುದೇ ರೀತಿಯ ಮನ್ನಾ ಇರುವುದಿಲ್ಲ. ಮುಂದಿನ ವರ್ಷ ಮರು ಪರೀಕ್ಷೆ ಬರೆಯಬೇಕು.

-ವೇಣು ಶರ್ಮ ಮಂಗಳೂರು
ಯೂತ್‌ ರೆಡ್‌ಕ್ರಾಸ್‌ ಅನ್ನು ಕಾಲೇಜು ಮಟ್ಟದಲ್ಲಿ ಇನ್ನಷ್ಟು ಬಲಪಡಿಸಬೇಕಿದೆ.
ಈ ಬಗ್ಗೆ ವಿಶೇಷವಾಗಿ ಗಮನ ಹರಿಸಲಾಗುವುದು. ಇದನ್ನು ಮತ್ತಷ್ಟು ಕ್ರಿಯಾಶೀಲಗೊಳಿಸಲು ಜಿಲ್ಲಾಧಿಕಾರಿ, ಇತರ ಪ್ರಮುಖರ ಜತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

-ಪ್ರಸೀದಾ ಉಡುಪಿ
 ಎಂಎ ಫಲಿತಾಂಶ ಬಂದಿದ್ದರೂ ಅಂಕಪಟ್ಟಿ ಸಿಗಲಿಲ್ಲ, ನಾನೇನು ಮಾಡಲಿ?
ಅಂಕಪಟ್ಟಿಯನ್ನು ಶೀಘ್ರದಲ್ಲಿ ನೀಡುವಂತೆ ಪರೀಕ್ಷಾಂಗ ಕುಲಸಚಿವರಿಗೆ ನಿರ್ದೇಶಿಸಲಾಗಿದೆ. ಹೀಗಾಗಿ 2 ವಾರದೊಳಗೆ ಅಂಕಪಟ್ಟಿ ದೊರೆಯಲಿದೆ. ನೀವು ವ್ಯಾಸಾಂಗ ಮಾಡುತ್ತಿರುವ ಕಾಲೇಜಿಗೆ ತೆರಳಿ ಅಂಕಪಟ್ಟಿ ಪಡೆಯಬಹುದು.

-ಯು. ರಾಮ ರಾವ್‌, ರೇಡಿಯೋ ಕೇಳುಗರ ಸಂಘದ ಅಧ್ಯಕ್ಷ
ಹೆಚ್ಚಿನ ವಿ.ವಿ.ಗಳಲ್ಲಿ, ಕಾಲೇಜುಗಳಲ್ಲಿ ಸಿ.ಸಿ. ಕೆಮರಾ ಇದ್ದರೂ, ಪರೀಕ್ಷೆಯಲ್ಲಿ ನಕಲು ಮಾಡುವುದು, ಪ್ರಶ್ನೆ ಪತ್ರಿಕೆ ಸೋರಿಕೆ ತಪ್ಪಿಲ್ಲವೇಕೆ?    ಸುತ್ತಮುತ್ತ ಭಾಷಣ ಕಲೆ ಹೊಂದಿದ ಅನೇಕರಿದ್ದು, ಅವರನ್ನು ಕರೆದು ಒಂದೊಂದು ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಬಹುದಲ್ಲವೇ?
   ಮಂಗಳೂರು ವಿ.ವಿ. ಮಟ್ಟದಲ್ಲಿ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದೇವೆ. ಸದ್ಯದಲ್ಲಿಯೇ ಅತ್ಯಾಧುನಿಕ ಗುಣಮಟ್ಟದ ಸಿ.ಸಿ. ಕೆಮರಾಗಳನ್ನು ಕ್ಯಾಂಪಸ್‌ ಸುತ್ತಲೂ ಅಳವಡಿಸಲಾಗುತ್ತದೆ. ಅಲ್ಲದೆ, ವಿ.ವಿ.ಯ ಹಳೆ ವಿದ್ಯಾರ್ಥಿಗಳು ಸಹಿತ ವಿಷಯ ತಜ್ಞರನ್ನು ಒಳಗೊಂಡು ವಿದ್ಯಾರ್ಥಿಗಳಿಗೆ ಸೆಮಿನಾರ್‌ ನಡೆಸಲಾಗುವುದು. ಆಕಾಶವಾಣಿ ಜತೆ ಒಡಂಬಡಿಕೆ ಮಾಡಿಕೊಂಡು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

-ಗಾಯತ್ರಿ ನಂಜನಗೂಡು
 ನನ್ನ ಮಗ ಉಜಿರೆ ಕಾಲೇಜಿನಲ್ಲಿ ಬಿಸಿಎ ನಾಲ್ಕನೇ ಸೆಮಿಸ್ಟರ್‌ ಕಲಿಯುತ್ತಿದ್ದು, ಸದ್ಯ ನಾವು ನಂಜನಗೂಡಿನಲ್ಲಿದ್ದೇವೆ. ಈ ತಿಂಗಳಲ್ಲಿ ಪರೀಕ್ಷೆ ಇದ್ದರೆ ಬರಲು ಅನಾನುಕೂಲವಾಗಬಹುದು; ಏನು ಮಾಡಲಿ?
   ಈ ತಿಂಗಳಲ್ಲಿ ಪರೀಕ್ಷೆ ನಡೆಯುವುದಿಲ್ಲ. ಲಾಕ್‌ಡೌನ್‌ ಮುಗಿದ ಬಳಿಕವಷ್ಟೇ ಪರೀಕ್ಷೆ ಆರಂಭವಾಗಲಿದೆ. ಮೊದಲು ಬಿಸಿಎ 6ನೇ ಸೆಮಿಸ್ಟರ್‌ ಪರೀಕ್ಷೆ ನಡೆದು ಆ ಬಳಿಕ 4ನೇ ಸೆಮಿಸ್ಟರ್‌ ಪರೀಕ್ಷೆ ನಡೆಯಲಿದೆ. ಹೀಗಾಗಿ ಆತಂಕ ಬೇಡ.

-ಚೇತನಾ ಮಡಿಕೇರಿ
ಶೀಘ್ರದಲ್ಲಿ ಪರೀಕ್ಷೆ ನಡೆಸುವುದಾದರೆ ಮಂಗಳೂರು ವಿ.ವಿ. ವ್ಯಾಪ್ತಿಯ ಕಾಲೇಜುಗಳಲ್ಲಿ ಕೇರಳ ಸಹಿತ ಬೇರೆ ರಾಜ್ಯ, ಜಿಲ್ಲೆಗಳ ವಿದ್ಯಾರ್ಥಿಗಳಿಗೆ ತೊಂದರೆ ಆಗಬಹುದಲ್ಲವೇ?
ಲಾಕ್‌ಡೌನ್‌ ಮುಗಿದ ಬಳಿಕವಷ್ಟೇ ಪರೀಕ್ಷೆಯು ಆರಂಭವಾಗುತ್ತದೆ. ಬಸ್‌ ವ್ಯವಸ್ಥೆಯೆಲ್ಲ ಆರಂಭವಾದ ಬಳಿಕವಷ್ಟೇ ಪರೀಕ್ಷೆ ನಡೆಯಲಿದೆ. ಹೀಗಾಗಿ ಯಾರೂ ಆತಂಕ ಪಡಬೇಕಿಲ್ಲ. ಒಂದು ವೇಳೆ ಹೊರ ರಾಜ್ಯ, ಜಿಲ್ಲೆಯ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅಸಾಧ್ಯವಾದರೆ ಆನ್‌ಲೈನ್‌ ಮೂಲಕ ವಿಶೇಷ ಪರೀಕ್ಷೆ ನಡೆಸುವ ಬಗ್ಗೆಯೂ ಚಿಂತಿಸಲಾಗುತ್ತಿದೆ.

ವಾರ್ಷಿಕ ಪರೀಕ್ಷೆಗೆ ಮಹತ್ವ ನೀಡಲಾಗುವುದು
- ಕೋವಿಡ್-19 ಅನಂತರ ಕಾಲೇಜು ವ್ಯವಸ್ಥೆಗಳನ್ನು ಮತ್ತಷ್ಟು ಉತ್ತಮಗೊಳಿಸಬೇಕಿದೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ಮತ್ತೆ ಅಭಿವೃದ್ಧಿಪಡಿಸಬೇಕಿದೆ. ಹೀಗಾಗಿ ವಿ.ವಿ. ಯಾವ ತೀರ್ಮಾನವನ್ನು ಕೈಗೊಂಡಿದೆ? ಕೊನೆಯ ವರ್ಷ ಹೊರತು ಪಡಿಸಿ ಉಳಿದದ್ದನ್ನು ವಾರ್ಷಿಕ ಪರೀಕ್ಷೆ ಮಾದರಿಯಲ್ಲಿ ಕೈಗೊಳ್ಳಬಹುದಲ್ಲವೇ?

ಡಾ| ಎಂ. ಮೋಹನ್‌ ಆಳ್ವ ,
ಅಧ್ಯಕ್ಷರು, ಆಳ್ವಾಸ್‌ ಶಿಕ್ಷಣ ಸಂಸ್ಥೆ ಮೂಡುಬಿದಿರೆ
ಎಲ್ಲ ವಿಶ್ವವಿದ್ಯಾನಿಲಯಗಳಿಗೆ ಅನ್ವಯವಾಗುವಂತೆ ರಾಜ್ಯ ಸರಕಾರವು ಕೆಲವು ದಿನಗಳಲ್ಲಿ ಹೊಸ ಶೈಕ್ಷಣಿಕ ಮಾರ್ಗಸೂಚಿಯನ್ನು ಹೊರಡಿಸಲಿದೆ. ವಾರ್ಷಿಕ ಪರೀಕ್ಷೆಗೆ ಮಹತ್ವ ನೀಡಲಾಗುವುದು. ಉಳಿದ ವರ್ಷದ ಪರೀಕ್ಷೆಯನ್ನು ಕಾಲೇಜುಗಳಲ್ಲಿ ನಡೆಸುವ ಬಗ್ಗೆಯೂ ಚರ್ಚಿಸಲಾಗುತ್ತಿದೆ. ಈಗಾಗಲೇ ಆರನೇ ಸೆಮಿಸ್ಟರ್‌ನಲ್ಲಿ ಇರುವ ವಿದ್ಯಾರ್ಥಿಗಳಿಗೆ ಲಾಕ್‌ಡೌನ್‌ ಪೂರ್ಣಗೊಂಡ ಬಳಿಕ ಮೊದಲಿಗೆ ಥಿಯರಿ, ಬಳಿಕ ಪ್ರಾಯೋಗಿಕ ಪರೀಕ್ಷೆ ನಡೆಸುತ್ತೇವೆ. ಶಿಕ್ಷಣದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗೂ ಮಹತ್ವ ನೀಡುತ್ತೇವೆ.

ಬ್ಯಾಚ್‌ನಲ್ಲಿ ಸಾಮಾಜಿಕ
ಅಂತರ ಕಾಯ್ದುಕೊಂಡು
ತರಗತಿ ಸಾಧ್ಯತೆ
-ಬಿ.ಎ., ಬಿಕಾಂನ ಇಪ್ಪತ್ತು ದಿನಗಳ ತರಗತಿಗಳು ಬಾಕಿ ಇವೆ. ಅವುಗಳನ್ನು ನಡೆಸುವಾಗ ಯಾವೆಲ್ಲ ನಿಯಮಗಳನ್ನು ಕೈಗೊಳ್ಳಬೇಕು?

-ರಾಘವೇಂದ್ರ,
ಪೂರ್ಣಪ್ರಜ್ಞಾ ಕಾಲೇಜು ಪ್ರಾಂಶುಪಾಲರು
ಬೆಳಗ್ಗೆ 7ರಿಂದ ಅನ್ವಯವಾಗುವಂತೆ ಬ್ಯಾಚ್‌ ಆಧಾರದಲ್ಲಿ ತರಗತಿ ಮಾಡಬಹುದು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ತರಗತಿಯ ಒಂದು ಬೆಂಚ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳಿರಬೇಕು. ಈ ಬಗ್ಗೆ ಸರಕಾರದಿಂದ ವಾರದೊಳಗೆ ತೀರ್ಮಾನ ಬರಬಹುದು.

ಥಿಯರಿ ನಂತರ ಪ್ರಾಯೋಗಿಕ ಪರೀಕ್ಷೆ
ಪ್ರಾಯೋಗಿಕ ಪರೀಕ್ಷೆಗಳನ್ನು ಯಾವ ರೀತಿಯಲ್ಲಿ ಕೈಗೊಳ್ಳುವ ಬಗ್ಗೆ ತೀರ್ಮಾನವಾಗಿದೆ.
-ವಿ.ಜಿ. ಭಟ್‌, ಪ್ರಾಂಶುಪಾಲರು, ವಿವೇಕಾನಂದ ಕಾಲೇಜು ಪುತ್ತೂರು
ಥಿಯರಿ ಪರೀಕ್ಷೆ ಮುಗಿದ ಬಳಿಕ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು. ಪ್ರಾಯೋಗಿಕ ಪರೀಕ್ಷೆಗೆ ಬಾಹ್ಯ ತಜ್ಞರ ಅಗತ್ಯವಿಲ್ಲ. ಆಂತರಿಕ ತಜ್ಞರೇ ಸಾಕಾಗುತ್ತಾರೆ.

ಪರೀಕ್ಷೆಗಿಂತ ಮೊದಲು ಎರಡು
ವಾರ ತರಗತಿಗೆ ಅನುಮತಿ

- ಲಾಕ್‌ಡೌನ್‌ ವೇಳೆ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಪ್ರಾಜೆಕ್ಟ್ ಕಳುಹಿಸಬೇಕು ಎನ್ನಲಾಗಿದೆ. ಆದರೆ ಕೆಲವು ವಿದ್ಯಾರ್ಥಿಗಳು ಗ್ರಾಮೀಣ ಭಾಗದವರಾಗಿದ್ದು, ಇಂಟರ್‌ನೆಟ್‌
ಸಮಸ್ಯೆ ಎದುರಿಸುತ್ತಿದ್ದಾರೆ.
ಪ್ರೊ| ಎಂ.ಬಿ. ಪುರಾಣಿಕ್‌,
ಶಾರದಾ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷರು

ಅನೇಕ ಮಂದಿ ವಿದ್ಯಾರ್ಥಿಗಳು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಸರಕಾರದ ಗಮನಕ್ಕೆ ತರಲಾಗಿದೆ. ಹೀಗಾಗಿ ಮುಂದೆ ಪರೀಕ್ಷೆ ನಡೆಯುವ ಮೊದಲು ಸುಮಾರು 2 ವಾರದ ತರಗತಿಗಳನ್ನು ನಡೆಸಲು ಸರಕಾರ ಅನುಮತಿ ನೀಡಿದೆ.

ಪರೀಕ್ಷೆ ಅವಧಿ ಕಡಿಮೆಗೊಳಿಸುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ

ರೋಹಿತ್‌ ಸುಳ್ಯ
ಪ್ರಸ್ತುತ ಜಾರಿಯಲ್ಲಿರುವ ಮೂರು ಗಂಟೆಯ ಪರೀಕ್ಷೆಯನ್ನು 2 ಗಂಟೆಗೆ ಸೀಮಿತಗೊಳಿಸುತ್ತೀರಾ?
ಈ ಬಗ್ಗೆ ವಿವಿ ಮಟ್ಟದಲ್ಲಿ ಯಾವುದೇ ತೀರ್ಮಾನವಾಗಿಲ್ಲ. ರಾಜ್ಯದ ಎಲ್ಲ ಉಪ ಕುಲಪತಿಗಳ ಅಭಿಪ್ರಾಯದ ಮುಖೇನ ರಾಜ್ಯ ಸರಕಾರ ಏಕರೂಪದ ತೀರ್ಮಾನ ಕೈಗೊಳ್ಳಲಿದೆ. ವಾರದೊಳಗೆ ಇದರ ಮಾರ್ಗಸೂಚಿ ಬರಲಿದೆ.

ಜ್ಞಾನೇಶ್‌ ತೊಕ್ಕೊಟ್ಟು
 ಕೋವಿಡ್-19 ಆತಂಕ ಇರುವಾಗ ಯಾವ ರೀತಿಯಲ್ಲಿ ಮುಂದೆ ತರಗತಿ ನಡೆಯಲಿದೆ?
ಈ ಬಗ್ಗೆ ರಾಜ್ಯ ಸರಕಾರ ಸೂಕ್ತವಾದ ನಿರ್ದೇಶನಗಳನ್ನು ನೀಡಲಿದೆ. ಹೊಸ ಶೈಕ್ಷಣಿಕ ವೇಳಾಪಟ್ಟಿಯೂ ಬರಲಿದೆ. ಅದರಂತೆ ಹೆಜ್ಜೆ ಇಡಲಾಗುವುದು. 1 ಡೆಸ್ಕ್ ನಲ್ಲಿ ಇಲ್ಲಿಯವರೆಗೆ 4 ವಿದ್ಯಾರ್ಥಿಗಳಿದ್ದರೆ ಮುಂದೆ ಎರಡೇ ವಿದ್ಯಾರ್ಥಿಗಳು ಇರಲಿದ್ದಾರೆ. ಶಿಫ್ಟ್ ಆಧಾರದಲ್ಲಿ ಬೆಳಗ್ಗೆ 7ರಿಂದ ತರಗತಿ ಆರಂಭವಾಗಲೂಬಹುದು. ಮಾಸ್ಕ್, ಸ್ಯಾನಿಟೈಸರ್‌ ಬಳಕೆಗೆ ಆದ್ಯತೆ ನೀಡಲಾಗುತ್ತದೆ.

ಕಮಲೇಶ್‌ ಶೆಣೈ ಕಾರ್ಕಳ
ಲಾಕ್‌ಡೌನ್‌ ವಿಸ್ತರಣೆಯಾದರೆ ಪರೀಕ್ಷೆಗಳಿಗೆ ತೊಂದರೆಯಾಗಬಹುದಲ್ಲವೇ?
ಮೇ ಅಂತ್ಯದವರೆಗೆ ಯಾವುದೇ ಪರೀಕ್ಷೆ ನಡೆಸುವ ಬಗ್ಗೆ ನಿರ್ಧಾರ ಮಾಡಿಲ್ಲ. ಬಳಿಕವೂ ಸಾಮಾಜಿಕ ಅಂತರ ಕಾಯ್ದುಕೊಂಡು, ಒಂದು ತರಗತಿಯಲ್ಲಿ ಕನಿಷ್ಠ ವಿದ್ಯಾರ್ಥಿಗಳು ಇರುವಂತೆ ನೋಡಿಕೊಂಡು ತರಗತಿ ನಡೆಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next