Advertisement

ಉದ್ಯಾವರ ಪ.ಪೂ. ಕಾಲೇಜು ಆವರಣದಲ್ಲಿ ತೆರೆದ ಪ್ರಾಥಮಿಕ ಶಾಲೆ

11:13 PM Jun 21, 2019 | Sriram |

ಕಟಪಾಡಿ: ಉದ್ಯಾವರ ಗ್ರಾಮಸ್ಥರ, ಪ್ರೌಢಶಾಲಾ -ಕಾಲೇಜು ಆಡಳಿತದ ಬಹುಮುಖ್ಯ ಬೇಡಿಕೆಯಾಗಿದ್ದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಇದೀಗ ಸಾಕಾರಗೊಂಡಿದ್ದು, ಉದ್ಯಾವರ ಸರಕಾರಿ ಪದವಿ ಪೂರ್ವ ಕಾಲೇಜು – ಪ್ರೌಢಶಾಲಾ ವಿಭಾಗದ ಕಟ್ಟಡದಲ್ಲಿಯೇ 2019-20ರ ಶೈಕ್ಷಣಿಕ ಸಾಲಿನಿಂದಲೇ ಆರಂಭಗೊಂಡಿದೆ.

Advertisement

ಉದ್ಯಾವರ ಗ್ರಾ. ಪಂ.ನ ಗ್ರಾಮಸಭೆಯಲ್ಲೂ ಮಕ್ಕಳ ವಿದ್ಯಾರ್ಜನೆಗಾಗಿ ಕಿ.ಪ್ರಾ.ಶಾಲೆ ಸ್ಥಳಾಂತರಿಸಿ ಕೊಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದರು. ಈ ಬಗ್ಗೆ ಸಾಕಷ್ಟು ಫಾಲೋಅಪ್‌ ನಡೆಸಿದ ಫಲವಾಗಿ ಇದೀಗ ಇಲ್ಲಿ ಶಾಲೆಯು ತೆರೆದುಕೊಂಡಿರುತ್ತದೆ.

ಮುಚ್ಚಿದ್ದ ಪಡುಕರೆಯ ದರ್ಬಾರ್‌ ಶಾಲೆ ಸ್ಥಳಾಂತರ
ಕಳೆದ ಸುಮಾರು 7 ವರ್ಷಗಳ ಹಿಂದೆ ಉದ್ಯಾವರ ಗ್ರಾ.ಪಂ. ವ್ಯಾಪ್ತಿಯ ಪಡುಕರೆಯಲ್ಲಿ ದರ್ಬಾರ್‌ ಶಾಲೆ ಎಂದೇ ಕರೆಯಿಸಿಕೊಂಡಿದ್ದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಶೂನ್ಯ ವಿದ್ಯಾರ್ಥಿಗಳ ಕಾರಣದಿಂದಾಗಿ ತನ್ನ ದರ್ಬಾರನ್ನು ಮುಗಿಸಿತ್ತು. ಅಂದಿನಿಂದ ಉದ್ಯಾವರದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇಲ್ಲದೇ ಇತರೇ ಶಾಲೆಗಳನ್ನು ವಿದ್ಯಾರ್ಥಿಗಳು ಆಶ್ರಯಿಸುವಂತಾಗಿತ್ತು.

ಸುಸಜ್ಜಿತ -ಸುರಕ್ಷಿತ ಶಾಲಾವರಣದಲ್ಲಿ ಶಾಲೆ
ಉದ್ಯಾವರದಲ್ಲಿ ಈಗಾಗಲೇ ಸುಸಜ್ಜಿತವಾದ ಕ್ರೀಡಾಂಗಣ, ಕಟ್ಟಡ, ಆವರಣಗೋಡೆ, ಸಿಸಿಕೆಮರಾ ಕಣ್ಗಾವಲನ್ನು ಹೊಂದಿರುವ ಉದ್ಯಾವರ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗವು ಕಾರ್ಯಾಚರಿಸುತ್ತಿದ್ದು, ಅದೇ ಶಾಲೆಯ ಕಟ್ಟಡದಲ್ಲಿ ಈ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ತೆರೆದುಕೊಂಡಿದೆ.

ಗ್ರಾಮಸ್ಥರ ಮುತುವರ್ಜಿಯಿಂದ ಮಕ್ಕಳ ಸೇರ್ಪಡೆ
ಶಾಲಾ ಶೈಕ್ಷಣಿಕ ವರ್ಷದ ಪ್ರಾರಂಭದ ದಿನಗಳು ಕಳೆದ ಅನಂತರದಲ್ಲಿ ಆದೇಶ ಬಿಡುಗಡೆಗೊಂಡಿದ್ದರೂ ಗ್ರಾಮಸ್ಥರ ಮುತುವರ್ಜಿಯಿಂದ ವಿದ್ಯಾರ್ಥಿಗಳ ಸೇರ್ಪಡೆಯ ಕಾರ್ಯ ಭರದಿಂದ ಸಾಗುತ್ತಿದೆ. ಈಗಾಗಲೇ ಇದ್ದ ಮಕ್ಕಳನ್ನು ಹೊಂದಿಸಿಕೊಂಡು ಪಾಠ-ಪ್ರವಚನ ಸಹಿತ ಚಟುವಟಿಕೆಗಳು ಕಾರ್ಯಾರಂಭಗೊಂಡಿವೆ.

Advertisement

ವಿಶೇಷತೆಗಳು
ಒಂದನೇ ತರಗತಿಯಿಂದಲೇ ಪರಿಣಾಮಕಾರಿ ಇಂಗ್ಲಿಷ್‌ ಬೋಧನೆ. ವಿಶಿಷ್ಟ ನಲಿ-ಕಲಿ ವಿಧಾನದಿಂದ ನುರಿತ ಶಿಕ್ಷಕರಿಂದ ಬೋಧನೆ. ಸ್ವಕಲಿಕೆ, ಸ್ವವೇಗದ ಕಲಿಕೆ, ಸಂತಸದಾಯಕ ಕಲಿಕೆಗೆ ಮುಕ್ತ ಅವಕಾಶ. ಸಂಪೂರ್ಣ ಉಚಿತ ಶಿಕ್ಷಣ ಜೊತೆಗೆ ಬಿಸಿಯೂಟ, ಹಾಲು ಸಮವಸ್ತ್ರ, ಪಠ್ಯಪುಸ್ತಕ, ಶೂ ಇಲ್ಲಿನ ವಿಶೇಷತೆಗಳಾಗಿವೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆದೇಶ
ಈ ಬಗ್ಗೆ ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯು 2019ರ ಜೂ.10ರಂದು ಆದೇಶವನ್ನು ಹೊರಡಿಸಿದ್ದು, ಈಗಾಗಲೇ ಶೂನ್ಯ ದಾಖಲಾತಿಯಿಂದ ಮುಚ್ಚಿದ ಉದ್ಯಾವರ ಪಡುಕರೆಯಲ್ಲಿದ್ದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಡೈಸ್‌ ಕೋಡ್‌ ಬಳಸಿಕೊಳ್ಳುವಂತೆ ಉಲ್ಲೇಖೀಸಿದ್ದು, ರಜಾಬದಲಿ ಶಿಕ್ಷಕಿಯನ್ನೂ ನಿಯೋಜಿಸಲಾಗಿದೆ. ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲಾತಿ ಪ್ರಕ್ರಿಯೆಗಳ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಿ ಆದೇಶಿಸಿದೆ.ಸಿಆರ್‌ಪಿ ಗುರುಪ್ರಸಾದ್‌ ಸಹಕಾರ ಪಡೆದು ನಿಯೋಜಿತ ಶಿಕ್ಷಕಿ ಗೀತಾ ಕಾರಂತ ಅವರು ಶಾಲೆಗೆ ಶೈಕ್ಷಣಿಕ ದಾಖಲಾತಿ ಕುರಿತು ಕ್ರಮ ವಹಿಸುವ ಮತ್ತು ದಾಖಲಾತಿ ಪ್ರಗತಿ ಪುಸ್ತಕಗಳ, ಇನ್ನಿತರ ಸರಕಾರೀ ಸೌಲಭ್ಯಗಳ ಬೇಡಿಕೆ ಕುರಿತು ಕಚೇರಿಗಳಿಗೆ ವರದಿಯನ್ನು ನೀಡುವಂತೆಯೂ ಆದೇಶಿಸಿದೆ.

ಒಂದೇ ಆವರಣದಲ್ಲಿ ಶಿಕ್ಷಣ
ಒಂದೇ ಆವರಣದೊಳಗೆ ಶಿಕ್ಷಣವನ್ನು ನೀಡುವ ಸದುದ್ದೇಶದಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆರಂಭಗೊಂಡಿದೆ. ಮುಂದಿನ ಶೈಕ್ಷಣಿಕ ಶಾಲಾರಂಭಕ್ಕೆ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಆರಂಭಕ್ಕೆ ಶಿಫಾರಸ್ಸು ಮಾಡಲಾಗುತ್ತದೆ. ಆ ಮೂಲಕ ಸರಕಾರಿ ಇಂಗ್ಲಿಷ್‌ ಮೀಡಿಯಂ ಶಾಲೆಯ ಬೇಡಿಕೆಗೆ ಸ್ಪಂದಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸ‌ಲಾಗುತ್ತದೆ.
-ಲಾಲಾಜಿ ಆರ್‌.ಮೆಂಡನ್‌,
ಶಾಸಕರು, ಕಾಪು ವಿಧಾನ ಸಭಾ ಕ್ಷೇತ್ರ

Advertisement

Udayavani is now on Telegram. Click here to join our channel and stay updated with the latest news.

Next