Advertisement

“ಉದಯವಾಣಿ’ಯ 51 ವರ್ಷಗಳ ಪಯಣ, 52ನೇ ವರ್ಷಕ್ಕೆ ಪಾದಾರ್ಪಣ

02:42 PM Jan 01, 2022 | Team Udayavani |

ಓಶೋ ಎಂಬ ಎರಡಕ್ಷರದಿಂದ ಪ್ರಸಿದ್ಧರಾಗಿದ್ದ ರಜನೀಶರು ನಡೆಯುವ ಘಟನೆಗಳಿಗೂ, ಅದರ ಕುರಿತು ಜನರು ಆಡುವ ಅನಿಸಿಕೆಗಳಿಗೂ ಇರುವ ವ್ಯತ್ಯಾಸವನ್ನು ಈ ತೆರನಾಗಿ ವಿಶ್ಲೇಷಿಸುತ್ತಾರೆ:

Advertisement

ಅರಬ್‌ ರಾಷ್ಟ್ರದಲ್ಲಿ ಕುದುರೆಗಳು ಉತ್ತಮ ಆದಾಯ ಮೂಲದವು ಆಗಿ ದ್ದವು. ಒಬ್ಬನಲ್ಲಿ ಉತ್ತಮ ಜಾತಿಯ ಕುದುರೆ ಇತ್ತು. ಒಂದು ದಿನ ಅದು ನಾಪತ್ತೆಯಾಯಿತು. ಜನರು “ಅಯ್ಯೋ, ಕುದುರೆ ನಷ್ಟವಾಯಿತಲ್ಲ’ ಎಂದು ದುಃಖ ತೋಡಿಕೊಂಡರು. “ಒಂದು ಕುದುರೆ ಇತ್ತು. ಮೇಯಲು ಹೋದ ಅದು ಹಿಂದಿರುಗಲಿಲ್ಲ. ಅಷ್ಟೆ’ ಎಂದು ಯಜಮಾನ ಹೇಳಿದ. ವಾರದ ಬಳಿಕ ಆ ಕುದುರೆ ಮತ್ತೆ ಕುದುರೆಗಳೊಂದಿಗೆ ಬಂತು. ಜನರು “ಆರೇಳು ಉತ್ತಮ ಕುದುರೆಗಳು ಬಂದವಲ್ಲ? ಒಳ್ಳೆಯದಾ ಯಿತು’ ಎಂದರು. “ನನ್ನ ಕುದುರೆ ಹೋಗಿತ್ತು. ಇನ್ನಷ್ಟು ಕುದುರೆಗಳೊಂದಿಗೆ ಬಂದಿವೆ. ಇಷ್ಟೆ’ ಎಂದ ಯಜಮಾನ. ಯಜಮಾನನ ಮಗ ಕುದುರೆ ಏರಿ ಆಡು ವಾಗ ಬಿದ್ದು ಗಾಯಗೊಂಡ. “ಅಯ್ಯೋ ಹೀಗಾಯಿತಲ್ಲ’ ಎಂದು ಜನರು ಮತ್ತೆ ಬಂದು ಹೇಳಿದರು.

“ಮಗ ಕುದುರೆ ಏರಿ ಹೋಗುತ್ತಿದ್ದ. ಕುದುರೆ ಮುಂದೆ ಚಲಿಸಿತು, ಮಗ ಕೆಳಗೆ ಬಿದ್ದ’ ಎಂದು ಯಜಮಾನ ಹೇಳಿದ. ಪಕ್ಕದ ಊರಿನ ರಾಜ ಈ ರಾಜ್ಯದ ಮೇಲೆ ದಂಡೆತ್ತಿ ಬಂದ. ಸೈನಿಕರ ಅಗತ್ಯವಾಯಿತು. ರಾಜ ಎಲ್ಲ ಯುವಕರೂ ಸೈನ್ಯಕ್ಕೆ ಸೇರಬೇಕೆಂದು ಸೇನಾ ರ್‍ಯಾಲಿ ನಡೆಸಿದ. ಯುವಕರನ್ನು ಹುಡುಕಿಕೊಂಡು ಈ ಮನೆಗೂ ಬಂದರು. ಈತ ಪೆಟ್ಟಾಗಿ ಮಲಗಿದ್ದ ಕಾರಣ ಈತನನ್ನು ಬಿಟ್ಟು ಹೋದರು. “ನಿನ್ನ ಮಗ ಉಳಿದುಕೊಂಡ’ ಎಂದು ಜನರು ಬಂದು ಮತ್ತೆ “ರಾಗ’ ಎಳೆದರು. “ಪರವೂರಿನ ರಾಜ ದಂಡೆತ್ತಿ ಬಂದ. ಈ ರಾಜನಿಗೆ ಸೈನಿಕರ ಅಗತ್ಯವಿತ್ತು. ನನ್ನ ಮನೆಗೂ ಬಂದರು. ಮಗ ಗಾಯ ಗೊಂಡಿದ್ದ ಕಾರಣ ಬಿಟ್ಟು ಹೋದರು ಅಷ್ಟೆ’ ಎಂದ ಯಜಮಾನ.

“ಒಂದು ಘಟನೆ ಕೇವಲ ಒಂದು ಘಟನೆ. ಅದನ್ನು ಯಥಾವತ್ತಾಗಿ ನೋಡ ಬೇಕು. ಅನಿಸಿಕೆ (ಇಂಟರ್‌ಪ್ರಿಟೇಶನ್‌= ವ್ಯಾಖ್ಯಾನ) ಸರಿಯಲ್ಲ’ ಎಂದು ಓಶೋ ಹೇಳುತ್ತಾರೆ.
****
ಸಿಂಡಿಕೇಟ್‌ ಬ್ಯಾಂಕ್‌ನ್ನು “ಮಣಿಪಾಲದ ಬ್ರಹ್ಮ’ ಡಾ|ಟಿಎಂಎ ಪೈ, ಅವರಿಗೆ ಬೆನ್ನೆಲುಬಾಗಿದ್ದ ಉಪೇಂದ್ರ ಅನಂತ ಪೈ, ಮಂಗಳೂರಿನ ಉದ್ಯಮಿ ವಾಮನ ಶ್ರೀನಿವಾಸ ಕುಡ್ವರು 1925ರಲ್ಲಿ ಸ್ಥಾಪಿಸಿದರು. ಅದೇ ಹೊತ್ತಿನಲ್ಲಿದ್ದ ಪ್ರಸ್‌ನ್ನು ಎಸ್‌.ವಿ. ಪಣಿಯಾಡಿಯವರು ಪೈಯವರಿಗೆ ಮಾರಿದರು.

1969ರಲ್ಲಿ ಕೇಂದ್ರ ಸರಕಾರ ದೇಶದ ಪ್ರಮುಖ 13 ಬ್ಯಾಂಕ್‌ಗಳನ್ನು ಸರಕಾರೀ ಕರಣಗೊಳಿಸಿದಾಗ ಸಿಂಡಿಕೇಟ್‌ ಬ್ಯಾಂಕ್‌ನ ನೇತೃತ್ವ ವಹಿಸಿದ್ದ ಡಾ|ಟಿಎಂಎ ಪೈಯವರು “ಮಗಳು ಹುಟ್ಟಿದ ಬಳಿಕ ಮದುವೆ ಮಾಡಿಕೊಡಲೇಬೇಕು. ಸಿಂಡಿ ಕೇಟ್‌ ಬ್ಯಾಂಕ್‌ ನಮ್ಮ ಮಗಳು. ನಮ್ಮ ಮಗಳಿಗೆ ಭಾರತ ಸರಕಾರಕ್ಕಿಂತ ಶ್ರೇಷ್ಠ ವರ ಇನ್ನೆಲ್ಲಿ ಸಿಗಲು ಸಾಧ್ಯ?’ ಎಂಬ ಫಿಲಾಸಫಿಕಲ್‌ ಚಿಂತನೆಯನ್ನು ಹೊರಹಾ ಕಿದ್ದರು. ಓಶೋ ಮತ್ತು ಡಾ|ಪೈಯವರ ಉದ್ಗಾರಗಳಲ್ಲಿ ಸಾಮ್ಯವಿದೆ.

Advertisement

ಸಿಂಡಿಕೇಟ್‌ ಬ್ಯಾಂಕ್‌ ಮತ್ತು ಮಣಿಪಾಲದ ಪ್ರಸ್‌ ಹೆಚ್ಚಾ ಕಡಿಮೆ ಜತೆಜತೆಯಾಗಿ ಮುನ್ನಡೆಯುತ್ತಿತ್ತು. ರಾಷ್ಟ್ರೀಕರಣವಾದ ಬಳಿಕ ಅದುವರೆಗೂ ಇದ್ದ ಪ್ರಧಾನ ಕಚೇರಿ ಮಣಿಪಾಲದಲ್ಲಿ ಇರುವುದು ಖಾತ್ರಿ ಇರಲಿಲ್ಲ (2000ರ ವೇಳೆ ಮಣಿಪಾಲದಲ್ಲಿದ್ದ ಪ್ರಧಾನ ಕಚೇರಿ ಬೆಂಗಳೂರಿಗೆ ಕಾರ್ಪೋರೆಟ್‌ ಕಚೇರಿ ಹೆಸರಿನಲ್ಲಿ ಸ್ಥಳಾಂತರಗೊಂಡಿತು). ಪ್ರಸ್‌ನ ಶೇ.90ರಷ್ಟು ಕೆಲಸ ಸಿಂಡಿಕೇಟ್‌ ಬ್ಯಾಂಕ್‌ನಿಂದ ಸಿಗುತ್ತಿತ್ತು. ಬಹಳ ಉನ್ನತ ಸ್ತರದ ಯಂತ್ರೋಪಕರಣಗಳು, ಸಿಬಂದಿ ಇರುವುದರಿಂದ “ಉದಯವಾಣಿ’ ಪತ್ರಿಕೆಯನ್ನು ಹೊರತರುವ ನಿರ್ಧಾರಕ್ಕೆ ಬರಲಾಯಿತು.

ಉದಯವಾಣಿಗೆ ಮುನ್ನವೇ “ಪ್ರಕಾಶ’ ಎಂಬ ವಾರಪತ್ರಿಕೆಯನ್ನು ಮಣಿಪಾಲ ಪ್ರಸ್‌ನಲ್ಲಿ ಮುದ್ರಿಸಲಾಗುತ್ತಿತ್ತು. 1940ರ ವೇಳೆ ಬೆಂಗಳೂರಿನ “ಜನಪ್ರಗತಿ’ ವಾರಪತ್ರಿಕೆಯನ್ನೂ ಹಲವು ವರ್ಷ ನಡೆಸಿದ ಅನುಭವ ಪೈಯವರಿಗೆ ಇತ್ತು. ಮುದ್ರಣ ಯಂತ್ರದ ಗುಣಮಟ್ಟದ ಬಗೆಗೆ ಹೇಳಬೇಕಾದರೆ ವೆಬ್‌ಆಫ್ಸೆಟ್‌ ಯಂತ್ರವನ್ನು ಅಳವಡಿಸಿದ ದೇಶದ ಮೊದಲ ದಿನ ಪತ್ರಿಕೆ “ಉದಯವಾಣಿ’.

“ಹಿರಿಯ ಪತ್ರಕರ್ತ ಬನ್ನಂಜೆ ರಾಮಾಚಾರ್ಯರು ದಿನ ಪತ್ರಿಕೆಯ ಅಗತ್ಯವಿದೆ ಎಂದರು. ಬರವಣಿಗೆಯ ಕೆಲಸ ನೀವು ವಹಿಸಿಕೊಳ್ಳುವುದಾದರೆ ಉಳಿದ ಕೆಲಸವನ್ನು ನಾವು ನೋಡಿ ಕೊಳ್ಳುತ್ತೇವೆ ಎಂದು ಹೇಳಿದೆವು. ರಾಮಾಚಾರ್ಯರು ಸಂಪಾದಕೀಯ ವಿಭಾಗವನ್ನು ನೋಡಿಕೊಂಡರು. ಉಳಿದ ಅಂಶಗಳತ್ತ ನಾವು ಗಮನ ಹರಿಸಿದೆವು’ ಎಂದು ಆ ಕಾಲದ ಸನ್ನಿವೇಶವನ್ನು “ಉದಯವಾಣಿ’ಯ ಸಂಸ್ಥಾಪಕರಾದ ಟಿ.ಮೋಹನದಾಸ್‌ ಪೈ ಮತ್ತು ಟಿ.ಸತೀಶ್‌ ಯು. ಪೈಯವರು ಹೊರಗೆಡಹುತ್ತಾರೆ.

1969ರ ಡಿಸೆಂಬರ್‌ ವೇಳೆ ಮಣಿಪಾಲದಲ್ಲಿ ಒಂದು ಕಂಬಳವನ್ನು ಆಯೋಜಿಸಲಾಗಿತ್ತು. ಆ ಸಮಯ ಕಂಬಳದ ಚಿತ್ರಗಳನ್ನು ಮುದ್ರಿಸಿ ಪ್ರಾಯೋಗಿಕ ಪತ್ರಿಕೆಯ ಪ್ರತಿಗಳನ್ನು ವಿತರಿಸಲಾಯಿತು. ಅದೇ ವೇಳೆ ಶ್ರೀಕೃಷ್ಣಮಠದಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್‌ನ ಪ್ರಾಂತ ಸಮ್ಮೇಳನದಲ್ಲಿ ನಾಲ್ಕಾರು ಸಾವಿರ ಪ್ರತಿಗಳನ್ನು ವಿತರಿಸ ಲಾಯಿತು. ಪ್ರಾಯೋಗಿಕ ಪ್ರತಿಗಳನ್ನು ಜನರು ಒಪ್ಪಿ ಸ್ವೀಕರಿಸಿದರು. 1970ರ ಜನವರಿ 1ರಂದು ಅಧಿಕೃತವಾಗಿ “ಉದಯವಾಣಿ’ ಹೊರಬಂತು. ಜನ ಮಾನಸದತ್ತ ದಿನೇದಿನೆ ದಾಪುಗಾಲಿಡುತ್ತ ಲಕ್ಷಾಂತರ ಓದುಗರನ್ನು ತಲುಪುತ್ತಿದೆ.

ಅದುವರೆಗೆ ದೂರದೂರುಗಳಿಂದ ಬರುತ್ತಿದ್ದ ದಿನ ಪತ್ರಿಕೆಗಳು ಸಕಾಲದಲ್ಲಿ ಬೆಳಗ್ಗೆ ಓದುಗರ ಕೈಗೆ ಸಿಗುತ್ತಿರಲಿಲ್ಲ. “ಉದಯವಾಣಿ’ಯನ್ನು ಬೆಳಗ್ಗೆ ಕಾಫಿ, ಚಹಾ ಕುಡಿಯುವುದರೊಳಗೆ ಓದು ಗರ ಕೈಸೇರುವಂತೆ ಮಾಡಲಾಯಿತು. ಆರಂಭದ ಒಂದು ತಿಂಗಳು ಸಂಜೆ ಮೋಹನದಾಸ್‌ ಪೈ ಮತ್ತು ಸತೀಶ್‌ ಪೈಯವರು ಕಚೇರಿಗೆ ಬಂದರೆ ಬೆಳಗ್ಗೆ 9 ಗಂಟೆಗೆ ಮನೆಗೆ ಹೋಗುತ್ತಿದ್ದರು. “ಕಲ್ಸಂಕದವರೆಗೆ ಪೇಪರ್‌ ಹೊತ್ತ ವ್ಯಾನ್‌ ಜತೆ ಹೋಗಿ ವಿತರಣೆ ಸರಿಯಾಗಿದೆಯೆ ಎಂಬುದನ್ನು ಪರಿ ಶೀಲಿಸಿ ಕಲ್ಸಂಕದಲ್ಲಿ ಜಗನ್ಮೋಹನ ಹೊಟೇಲ್‌ನಲ್ಲಿ ಕಾಫಿ ಕುಡಿದು ವಾಪಸು ಬರುತ್ತಿದ್ದೆವು’ ಎಂಬುದನ್ನು ಸತೀಶ್‌ ಪೈ ಸ್ಮರಿಸಿಕೊಳ್ಳುತ್ತಾರೆ.

ಒಂದು ತಿಂಗಳ ಬಳಿಕ ರಾತ್ರಿ 2 ಗಂಟೆಯವರೆಗೆ ಇದ್ದು ಪತ್ರಿಕೆಯ ಪ್ರಥಮ ಪ್ರತಿಯನ್ನು ಕಂಡ ಬಳಿಕವೇ ಮೋಹನದಾಸ್‌ ಪೈ ಮತ್ತು ಸತೀಶ್‌ ಪೈ ಹಿಂದಿರುಗುತ್ತಿದ್ದರು. ಆರಂಭದಲ್ಲಿ ಮಣಿಪಾಲ ಆವೃತ್ತಿ ಹೊಂದಿದ್ದರೆ ಬಳಿಕ ಬೆಂಗಳೂರು, ಮುಂಬಯಿ, ಹುಬ್ಬಳ್ಳಿ, ಕಲಬುರಗಿ, ದಾವಣಗೆರೆ ಆವೃತ್ತಿ ಮೂಲಕ ರಾಜ್ಯವನ್ನು ಪಸರಿಸಿದೆ.
ಗುಣಮಟ್ಟದ ಮುದ್ರಣಕ್ಕಾಗಿ ನಿರಂತರ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡ ಹಿರಿಮೆ ಸಂಸ್ಥೆಗೆ ಇದೆ. ಗ್ರಾ.ಪಂ. ಸ್ತರದ (1995ರ ಬಳಿಕ ನಗರಸಭಾ ವ್ಯಾಪ್ತಿ) ಮಣಿಪಾಲದಲ್ಲಿ ಜನಿಸಿ ರಾಜ್ಯ ಮಟ್ಟದಲ್ಲಿ ಬೆಳೆದ “ಉದಯವಾಣಿ’ ಗಲ್ಫ್ ರಾಷ್ಟ್ರಗಳಿಗೂ ಮುಂಬಯಿಯಂತಹ ಹೊರನಾಡಿನ ನಗರಗಳ ಓದುಗರಿಗೂ ತಲುಪು ವಂತಾಯಿತು. ಆರೋಗ್ಯ ಪತ್ರಿಕೋ ದ್ಯಮಕ್ಕೆ “ಉದಯವಾಣಿ’ ಕೊಡುಗೆ ಅಪಾರ. “ಉದಯವಾಣಿ’ ದೈನಿಕದ ಜತೆಜತೆಗೆ ಹೊರಬಂದ “ತರಂಗ’ ವಾರಪತ್ರಿಕೆ, “ರೂಪತಾರಾ’ ಚಲನ ಚಿತ್ರ ಪತ್ರಿಕೆ, “ತುಷಾರ’ ಮಾಸ ಪತ್ರಿಕೆ, “ತುಂತುರು’ ಮಕ್ಕಳ ಪತ್ರಿಕೆ ಮೂಲಕ ವಿವಿಧ ವರ್ಗಗಳನ್ನು ತಲುಪುತ್ತಿದೆ. “ಉದಯವಾಣಿ’ಯಲ್ಲಿ ಸುದೀರ್ಘ‌ ಕಾಲ ಮುಖ್ಯ ಉಪ ಸಂಪಾದಕರು, ಸಾಪ್ತಾಹಿಕ ಸಂಪಾದಕ ರಾಗಿ ಸೇವೆ ಸಲ್ಲಿಸಿದ್ದ ಬನ್ನಂಜೆ ಗೋವಿಂದಾಚಾರ್ಯರಿಗೆ ಬಳಿಕ ಪದ್ಮಶ್ರೀ ಪ್ರಶಸ್ತಿ ದೊರಕಿತು.

51 ವರ್ಷಗಳ ಕಾಲ ಉಚ್ಛಾಯವನ್ನು ಕಂಡು ಇದೇ ಜನವರಿ 1ರಂದು 52ನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಟಿ.ಮೋಹನದಾಸ್‌ ಪೈ ಮತ್ತು ಟಿ.ಸತೀಶ್‌ ಪೈಯವರ ಮಾರ್ಗ ದರ್ಶನದಲ್ಲಿ ಯುವ ಪೀಳಿಗೆಯ ಟಿ.ಗೌತಮ್‌ ಪೈ ಸಂಸ್ಥೆಯನ್ನು ಮುನ್ನಡೆ ಸುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಸಿಇಒ ಆಗಿರುವ ವಿನೋದ್‌ ಕುಮಾರ್‌ ಎರಡು ವರ್ಷಗಳಿಂದ ಸಿಇಒ ಮತ್ತು ಆಡಳಿತ ನಿರ್ದೇಶಕರಾಗಿದ್ದಾರೆ.

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next