Advertisement

ನಮ್ಮ ಉದಯವಾಣಿ, ನಮ್ಮ ಹೃದಯವಾಣಿ

02:27 AM Jan 28, 2020 | Sriram |

ನಮ್ಮ ಮನೆಯ ಸದಸ್ಯ
“ಉದಯವಾಣಿ’ ಆರಂಭವಾದ ಸಮಯದಲ್ಲೇ ನಾನೂ ಹುಟ್ಟಿದ್ದು. ಹಾಗಾಗಿ ನಾವು ಸಮಪ್ರಾಯದವರು. ನನಗೆ ಅಕ್ಷರಗಳು ಓದಲು ಬರುವ ಸಮಯದಿಂದಲೇ ಉದಯವಾಣಿಯ ಪರಿಚಯವಾಗಿತ್ತು. ಸಮಾಜ ವಿಜ್ಞಾನದ ತರಗತಿಯಲ್ಲಿ ಶಿಕ್ಷಕರು ಮೊದಲ ಐದು ನಿಮಿಷಗಳಲ್ಲಿ ಹಿಂದಿನ ದಿನದ ಪಾಠದ ಹಾಗೂ ಅಂದಿನ ಪತ್ರಿಕೆಯ ಪ್ರಮುಖ ಅಂಶಗಳ ಕುರಿತಾದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಆದ್ದರಿಂದ ಪತ್ರಿಕೆ ಓದಲೇ ಬೇಕಾದ ಅನಿವಾರ್ಯತೆ.

Advertisement

ಒಂದು ದಿನ ತರಗತಿಗೆ ಬಂದು “ನಾಳೆಯ ವಿಶೇಷವೇನು’? ಎಂದರು. ಮರುದಿನ ನಾಗರ ಪಂಚಮಿ ಇದ್ದುದರಿಂದ ಹೆಚ್ಚಿನ ವಿದ್ಯಾರ್ಥಿಗಳು ನಾಗರ ಪಂಚಮಿ ಎಂದೇ ಉತ್ತರಿಸಿದ್ದರು. ನಾನು ಉದಯವಾಣಿಯ ಮುಖಪುಟದಲ್ಲಿ ರಾಷ್ಟ್ರಾಧ್ಯಕ್ಷರ ಚುನಾವಣೆಯ ಕುರಿತ ವರದಿ ಓದಿದ್ದೆ. ನಾಳೆ ನಮ್ಮ ನೂತನ ರಾಷ್ಟ್ರಪತಿಯನ್ನು ಆಯ್ಕೆ ಮಾಡುತ್ತಾರೆ ಎಂದಿದ್ದೆ. ನಮ್ಮ ಮೇಷ್ಟ್ರು ಅಪೇಕ್ಷಿಸಿದ್ದ ಉತ್ತರವೂ ಇದೇ ಆಗಿತ್ತು. ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯ ಮಾನಗಳ ಕುರಿತ ಪ್ರಶ್ನೆಗಳೂ ಇರುತ್ತಿದ್ದವು. ಇದಕ್ಕೆ ನನಗೆ ಸಹಾಯ ಮಾಡಿದ್ದು ಉದಯವಾಣಿ ಮತ್ತು ಆಕಾಶವಾಣಿ. ಉದಯವಾಣಿಯಲ್ಲಿ ಬರುವ ವಿಶೇಷ ಲೇಖನಗಳನ್ನು ಸಂಗ್ರಹಿಸುತ್ತಿದ್ದೆ
. ಅವುಗಳಿಂದಾದ ಉಪಯೋಗ ಅಷ್ಟಿಷ್ಟಲ್ಲ. ಪಠ್ಯಗಳನ್ನು ಬಾಯಿಪಾಠ ಮಾಡುವ ಅಭ್ಯಾಸ ಕಡಿಮೆ. ಪಾಠವನ್ನು ಅರ್ಥ ಮಾಡಿಕೊಂಡು ಸ್ವಂತವಾಗಿ ಬರೆಯುತ್ತಿದ್ದೆವು.

ಮುಂದೆ ನಾವು ಈಗಿನ ತೆಲಂಗಾಣ ರಾಜ್ಯದಲ್ಲಿ ವಾಸಿಸಬೇಕಾಯಿತು. ಹೈದರಾಬಾದ್‌ ಸಿಟಿಗೆ ಹೋದಾಗಲೆಲ್ಲ ಉದಯವಾಣಿ ಪತ್ರಿಕೆ ಖರೀದಿಸುತ್ತಿದ್ದೆವು. ಅದು ಹಿಂದಿನದಿನದ್ದಾಗಿರುತ್ತಿತ್ತು. ಆದರೇನಂತೆ ನಮ್ಮೂರ ಪತ್ರಿಕೆ, ನಮ್ಮೂರ ಸುಗಂಧವನ್ನು ಹೊತ್ತು ತರುತ್ತಿತ್ತು ಎಂಬುದೊಂದೆ ಖುಷಿ. ಕಳೆದ ವರ್ಷ ತೀರಿಕೊಂಡ ನನ್ನ ಮಾವ, ಅತ್ಯುತ್ತಮ ಶಿಕ್ಷಕ ರಾಷ್ಟ್ರಪ್ರಶಸ್ತಿ ಪುರಸ್ಕೃತ ಬಾಲಕೃಷ್ಣ ಆಚಾರ್ಯರ ವಿಶಿಷ್ಟ ವಸ್ತು ಸಂಗ್ರಹಾಲಯದಲ್ಲಿ ಉದಯವಾಣಿಯ ಮೊದಲ ಸಂಚಿಕೆಯಿಂದ ಹಿಡಿದು, ಇತ್ತೀಚಿನ ವರೆಗಿನ ಎಲ್ಲ ಪತ್ರಿಕೆಗಳ ಸಂಗ್ರಹವಿದೆ. ಇಂದಿಗೂ ಉದಯವಾಣಿ ನಮ್ಮ ಮನೆಯ ಸದಸ್ಯ.
-ವೀಣಾ ಜೋಶಿ,ಬಾರ್ಕೂರು

ನನ್ನ ಜ್ಞಾನ ವೃದ್ಧಿಸಿದ ಪತ್ರಿಕೆ
ನಾನು ಉದಯವಾಣಿ ಪತ್ರಿಕೆಗೆ ಚಿರಋಣಿ. ನನಗೆ ಅಕ್ಷರಜ್ಞಾನ ತಿಳಿದಾಗಿನಿಂದಲೂ “ಉದಯವಾಣಿ’ ಎಂಬ ಪದಪುಂಜವನ್ನು ಓದುತ್ತಾ ಬೆಳೆದೆ. ದೊಡ್ಡವಳಾದಂತೆ ಹಿರಿಯರನ್ನು ನೋಡಿ ನಾನೂ ಓದಲೇಬೇಕೆಂದು ನಿರ್ಧರಿಸಿದೆ. ಚಿಕ್ಕವಳಿದ್ದಾಗ ಸಾಪ್ತಾಹಿಕ ಬರಲು ಕಾದು ಕುಳಿತುಕೊಳ್ಳುತ್ತಿದ್ದೆ. ಅದರಲ್ಲಿನ ಮಕ್ಕಳ ಕಥೆಗಳನ್ನು ಓದಿ ಖುಷಿ ಪಡುತ್ತಿದೆ. ಈಗ ಮುಖ ಪುಟವಂತೂ ಅದ್ಭುತ. ಆರನೇ ಪುಟದ ಲೇಖನಗಳನ್ನು ಓದದೇ ಇರಲು ಸಾಧ್ಯವೇ ಇಲ್ಲ. ಈಗೇನಾದರೂ ನನ್ನ ಬೌದ್ಧಿಕ ಮಟ್ಟ ಬೆಳವಣಿಗೆಯಾಗಿದೆ ಎಂದರೆ ಅದಕ್ಕೆ ಉದಯವಾಣಿಯೇ ಕಾರಣ. ಉದಯವಾಣಿಗೆ ಅನಂತ ವಂದನೆಗಳು. ಇದರ ಹರಿವು ನಿರಂತರವಾಗಿರಲಿ.
-ಉಮಾಶಂಕರಿ,ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next