ಆಳಂದ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸುಭಾಷ ಗುತ್ತೇದಾರ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ನಡೆದ ಟಾಸ್ಕ್ಪೋರ್ಸ್ ಕಮಿಟಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕುಡಿಯುವ ನೀರು ಪೂರೈಕೆಗೆ ವಿದ್ಯುತ್ ಸಮಸ್ಯೆ ಆಗದಂತೆ ನಿರಂತರ ಜ್ಯೋತಿ ಸಂಪರ್ಕ ಒದಗಿಸಬೇಕು. ಏಕೆ ಒದಗಿಸುತ್ತಿಲ್ಲ ಎಂದು ಜೆಸ್ಕಾಂ ಎಇಇ ಮಾಣಿಕರಾವ್ ಕುಲಕರ್ಣಿ ಅವರಿಗೆ ಶಾಸಕರು ಹೇಳಿದರು. ನಂತರ ಈ ಕುರಿತು ಬೇಡಿಕೆ ಪಟ್ಟಿ ಸಿದ್ಧಪಡಿಸಿ ಕಾರ್ಯ ತ್ವರಿಗತಿಯಲ್ಲಿ ಕೈಗೊಳ್ಳಿ ಎಂದರು.
ಮಾದನ ಹಿಪ್ಪರಗಾ 2 ಮತ್ತು 3ನೇ ವಾರ್ಡ್ ನಲ್ಲಿ ತುರ್ತಾಗಿ ಪೈಪ್‌ಲೈನ್ ಕೈಗೊಂಡು ನೀರು ಒದಗಿಸಬೇಕು ಎಂದು ಗ್ರಾಮೀಣ ನೀರು ಸರಬರಾಜ ಎಇಇ ಚಂದ್ರಮೌಳಿ ಅವರಿಗೆ ಸಲಹೆ ನೀಡಿದರು. ಖಾಸಗಿ ಜಮೀನಿನಲ್ಲಿ ಬಾವಿ ಅಥವಾ ಕೊಳವೆ ಬಾವಿ ತೋಡುವ ಮೊದಲು ಸ್ಥಳವನ್ನು ಸ್ವಾ ಧೀನಪಡಿಸಿಕೊಂಡು ಮುಂದಿನ ಕಾರ್ಯ ಕೈಗೊಳ್ಳಬೇಕು. ಇಲ್ಲವಾದಲ್ಲಿ ಖಾಸಗಿ ವ್ಯಕ್ತಿಗಳು ನಂತರ ಅಡ್ಡಿಪಡಿಸುತ್ತಾರೆ. ಇಂಥ ಪ್ರಕರಣ ಸಂಭವಿಸಿದ್ದು, ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು ಎಂದರು.
ಪಟ್ಟಣಕ್ಕೆ ಮತ್ತು ಕೇಂದ್ರೀಯ ವಿವಿಗೆ ನೀರು ಪೂರೈಕೆಯ ಮೂಲ ಅಮರ್ಜಾ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಮಾಹಿತಿ ಪಡೆದ ಶಾಸಕರು, ಪಟ್ಟಣದಲ್ಲಿ ಎಷ್ಟು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ ಎಂದು ಮುಖ್ಯಾಧಿಕಾರಿಗೆ ಪ್ರಶ್ನಿಸಿದಾಗ ಮೂರು ದಿನಕ್ಕೊಮ್ಮೆ ಎಂದು ಹೇಳಿದರು. ಆದರೆ ಐದು ದಿನಕ್ಕೆ ಬಿಡಲಾಗುತ್ತಿದೆ ಎಂದು ಮುಖಂಡ ಮಲ್ಲಣ್ಣಾ ನಾಗೂರೆ ಪ್ರಸ್ತಾಪಿಸಿದಾಗ ತಾಂತ್ರಿಕ ಸಮಸ್ಯೆಯಿಂದ ಎರಡು ಸಲ ಐದು ದಿನಕ್ಕೆ ಬಿಟ್ಟಿದ್ದು, ಇನ್ನೂ ಮುಂದೆ ಮೂರು ದಿನಕ್ಕೆ ಪೂರೈಕೆ ಮಾಡಲಾಗುವುದು. ಅಲ್ಲದೇ ನೀರಿನ ಕಾಮಗಾರಿ ಕೈಗೊಳ್ಳಲು 10 ಲಕ್ಷ ರೂಪಾಯಿ ಬಿಡುಗಡೆಯಾಗಿದೆ ಎಂದು ಅಧಿಕಾರಿ ಬಾಬುರಾವ್ ವಿಭೂತೆ ಹೇಳಿದರು.
ತಹಶೀಲ್ದಾರ್ ದಯಾನಂದ ಪಾಟೀಲ ಮಾತನಾಡಿ, ಈ ಬಾರಿ ಮೇವಿನ ಕೊರತೆ ಇಲ್ಲ. ನೀರಿನ ಸಮಸ್ಯೆ ಪಟ್ಟಿಯನ್ನು ತಯಾರಿಸುವಂತೆ ಸೂಚಿಸಲಾಗಿದೆ ಎಂದರು. ಸದ್ಯ ಸಣ್ಣ-ಪುಟ್ಟ ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ನೀರು ಒದಗಿಸಬೇಕು ಎಂದರು.
ಗ್ರೇಡ್-2 ತಹಶೀಲ್ದಾರ್ ಬಿ.ಜಿ. ಕುದರಿ, ತಾಪಂ ಇಒ ಡಾ| ಸಂಜಯ ರೆಡ್ಡಿ, ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ, ಇಂಜಿನಿಯರ್ ಸಂಗಮೇಶ ಬಿರಾದಾರ, ತೋಟಗಾರಿಕೆ ಅಧಿಕಾರಿ ಸುರೇಂದ್ರ, ನಿರಂಬರಗಾ ಆರ್‌ಐ ಅನಿಲ, ಶರಣಬಸಪ್ಪ ಹಕ್ಕಿ, ಶಿರಸ್ತೇದಾರ್ ಶ್ರೀನಿವಾಸ ಕುಲಕರ್ಣಿ ಇದ್ದರು.