ಆ ದಿನದ ಸಣ್ಣ ಮುನಿಸಿಗೆ, ‘ಹೋಗು ಮಾತಾಡ್ಬೇಡ’ ಎಂದು ಸಿಟ್ಟಿನಲ್ಲಾಡಿದ ಒಂದು ಮಾತಿಗೆ ನಿನ್ನಿಂದ ಈ ತೆರನಾದ ಪ್ರತಿಕ್ರಿಯೆ ಸಿಗುವುದೆಂಬ ಕಲ್ಪನೆ ನನಗಿರಲಿಲ್ಲ. ಹಾಗಂತ ಈ ಪ್ರತಿಕ್ರಿಯೆ ನನಗೋ ಅಥವಾ ಮತ್ಯಾರಿಗೋ ಎಂದು ಅರ್ಥ ಮಾಡಿಕೊಳ್ಳಲು ನೀನು ನಿನ್ನ ಸುದೀರ್ಘ ಮೌನವನ್ನು ಮುರಿಯಬೇಕಾಯ್ತು. ನಿನ್ನ ಈ ಸಂದೇಶ ನನ್ನನ್ನು ತಲುಪಿದ ಬಳಿಕ ಮನಸ್ಸು ಗೊಂದಲದ ಗೂಡಾದರೂ, ಆ ಗೊಂದಲ ಅನುಕ್ಷಣವೂ ಸಂತೋಷದ ಸುದ್ದಿಗಾಗಿ ಹಪಹಪಿಸಿದ್ದು ಸುಳ್ಳಲ್ಲ. ಹಾಗೆ ನೋಡಿದರೆ, ಈ ಪ್ರೇಮ ನಿವೇದನೆಯಲ್ಲೂ ಸಣ್ಣದೊಂದು ಸಹ್ಯ ವೇದನೆಯಿದೆ. ಅದು ಸಮಯ ತೆಗೆದುಕೊಂಡಷ್ಟೂ ಸಿಹಿ ಜಾಸ್ತಿ.
ಅದೇನೆನ್ನಿಸಿತೋ ನಿನಗೆ ನಾ ತಿಳಿಯೆ. ಅಚಾನಕ್ಕಾಗಿ ನಿನ್ನ ಹುಟ್ಟಿದ ದಿನದಂದು ನನ್ನನ್ನು ದೇವಸ್ಥಾನದ ಆವರಣಕ್ಕೆ ಕರೆಸಿಕೊಂಡು ಬಿಟ್ಟೆ. ಮೋಡ ಕವಿದಾಗ ನವಿಲು ಶೃಂಗಾರಗೊಳ್ಳುವಂತೆ ಆ ದಿನ ನಿನ್ನ ಸಂಭ್ರಮವಿತ್ತು. ಸಂಪ್ರದಾಯದಂತೆ ಒಂದು ಗಂಟೆ ಕಾಯಿಸಿದರೂ, ಆ ದಿನದ ಮಟ್ಟಿಗೆ ನಾನು ನನ್ನ ಕೋಪದ ಮೇಲೂ ಹಿಡಿತ ಸಾಧಿಸಿದ್ದೆ. ದೇವಸ್ಥಾನದ ಒಳಗೆ ಬಂದವಳೇ, ಒಂದರ್ಧ ಗಂಟೆ ದೇವರ ಬಳಿ ಕ್ಷಮೆ, ಸಹಕಾರ, ಆಜ್ಞೆ, ಅಪ್ಪಣೆ, ಕೋರಿಕೆಗಳನ್ನೆಲ್ಲ ಸಲ್ಲಿಸಿ ಬಳಿಕ ನನ್ನ ಬಳಿ ಕೂತು ಕಿರುನಗೆ ನಕ್ಕೆ. ಜಗತ್ತಿನ ಯಾವ ಅಮಲು ಪದಾರ್ಥಕ್ಕೂ ಕಡಿಮೆಯಿರಲಿಲ್ಲ ಆ ನಿನ್ನ ನಗು! ಆ ಒಂದು ಸುಂದರ ಕ್ಷಣ ನನ್ನ ಸುಮಾರು ರಾತ್ರಿಗಳನ್ನು ಧ್ವಂಸ ಮಾಡಿದ್ದಿದೆ. ನೇರವಾಗಿ ನಿನ್ನ ಕಣ್ಣೊಳಗಿಳಿದು ಪ್ರಶ್ನೆಗಳನ್ನೆಸೆಯುವ ಛಾತಿ ನನಗೂ ಇರಲಿಲ್ಲ, ಆ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ನಿನ್ನ ನಾಚಿಕೆ ನಿನ್ನನ್ನು ಬಿಡುತ್ತಲೂ ಇರಲಿಲ್ಲ.
ಇನ್ನೇನು ಇಬ್ಬರೂ ದೇವಸ್ಥಾನದಿಂದ ಹೊರಗೆ ಕಾಲಿಡಬೇಕೆನ್ನುವಷ್ಟರಲ್ಲಿ ನೀನೊಂದಿಷ್ಟು ಕುಂಕುಮವನ್ನಿಡಿದು ನನ್ನ ಬಳಿ ಬಂದೆ. ನಾನೋ, ಶತಹೆಡ್ಡನಂತೆ ಅದನ್ನು ಹಣೆಗುಜ್ಜಿಕೊಂಡೆ. ಮನೆಗೆ ಹೊರಟೆವು.
ಸುಸ್ತೋ ಇಲ್ಲಾ ಕನಸು ಕಾಣುವ ತವಕವೋ; ಒರಗಿಕೊಂಡರೆ ಅದೇ ಐದ್ಹತ್ತು ನಿಮಿಷಗಳ ನಿಧಾನಗತಿಯ ಈ ಎಲ್ಲ ದೃಶ್ಯಾವಳಿಗಳು ಕಣ್ಣಲ್ಲಿ ಪ್ರತಿಕ್ಷಣದ ದೇಖಾವೆಯಂತೆ ಮನದೊಂದಿಗೆ ಸರಸವಾಡುತ್ತಲೇ ಇದ್ದವು. ಆಗ ಎಬ್ಬಿಸಿದ್ದು ನಿನ್ನ ಇನ್ನೊಂದು ಸಂದೇಶ. ‘ಕೋತಿ, ಕುಂಕುಮ ನನಗೆ ಹಚ್ಚು ಅಂದ್ರೆ ನಿನ್ನ ಹಣೆಗೆ ನೀನೇ ಇಟ್ಕೊಂಡ್ಯಾ? ಸಿಗು ಮತ್ತೂಂದ್ಸಲ, ಇದೆ ನಿಂಗೆ…’ ಮನದಲ್ಲಿ ಕಾದಾಡುತ್ತಿದ್ದ ಹತ್ತೆಂಟು ಪ್ರಶ್ನೆಗಳಿಗೆ ಒಂದೇ ವಾಕ್ಯದಲ್ಲಿ, ಪ್ರಶ್ನೆಗಳೇ ಉಳಿಯದ ಹಾಗೆ ಉತ್ತರ.
ಹಲವು ಕನಸುಗಳ ಕಟ್ಟಿದ ಆ ಮಾತಿಗೆ ನನ್ನ ತಿಳುವಳಿಕೆಯ ಕೋಶದಲ್ಲಿ ಉತ್ತರವಿರಲಿಲ್ಲ. ಆದರೆ ಆ ಬಳಿಕ ನೀನು ನನ್ನೊಂದಿಗೆ ನಡೆದುಕೊಂಡ ರೀತಿ-ನೀತಿಗಳೆಲ್ಲವೂ, ನಿನ್ನ ಬದುಕಿನ ಪುಟಕ್ಕೆ ನನ್ನ ಹೆಸರೇ ಶೀರ್ಷಿಕೆಯೇನೋ ಎಂಬಷ್ಟು ಸ್ಫುಟವಾಗಿದ್ದವು. ನನ್ನ ಎದೆಯಿಂದ ಚಿಮ್ಮಲಿರುವ ವಾಕ್ಯಗಳು ಅದಾಗಲೇ ನಿನ್ನ ಭಾವದಲ್ಲಿ ವ್ಯಕ್ತಗೊಳ್ಳುತ್ತಿದ್ದವು. ನಿನ್ನ ನೋಟದ ಮೌನ ಕೋರಿಕೆಗಳನ್ನು ನಾನೂ ಸದ್ದಿಲ್ಲದೆ ಈಡೇರಿಸುತ್ತಿದ್ದೆ. ನಿನ್ನ ಮುಗುಳುನಗೆಗೆ ಮುಖ್ಯ ಕಾರಣ ನಾನಾಗಿರುತ್ತಿದ್ದೆ. ನಿನ್ನ ಕಣ್ಣೀರಿಗೆ ಪೂರ್ಣವಿರಾಮ ನೀಡಲು ನನ್ನ ಸಾಂತ್ವನದ ಮಾತುಗಳೇ ಬೇಕಾಗುತ್ತಿದ್ದವು. ನನ್ನ ಬದುಕಿನ ಗೊಂದಲ-ಗೋಜಲುಗಳಿಗೆ ನೀನು ಪರಿಹಾರ ನೀಡುತ್ತಿದ್ದೆ. ಇದೆಲ್ಲವೂ ನಿನ್ನ ಹುಟ್ಟುಹಬ್ಬದ ದಿನ ನೀ ಬಿಟ್ಟುಕೊಟ್ಟ ಒಲವಿನ ಸುಳಿವುಗಳ ನಿಮಿತ್ತ ಎಂಬುದು ನನ್ನ ಅಚಲ ನಂಬಿಕೆ.
ಇನ್ನೇನು ನಿನ್ನ ಜನ್ಮದಿನ ಬಂದೇಬಿಟ್ಟಿತು. ನನ್ನ ಪಾಲಿನ ಹುಣ್ಣಿಮೆಗೆ, ಬಾಳಕಣ್ಣಿಗೆ ಜನ್ಮದಿನದ ಶುಭಾಶಯಗಳು.
ಪ್ರೀತಿಯಿಂದ ನಿನ್ನವ…
•ಅರ್ಜುನ್ ಶೆಣೈ