Advertisement
ಮೂರು ತುಂಡುಗಳಾಗಿ ದೇಹ ಸಿಕ್ಕಿ ಮೂರು ವರ್ಷಗಳಾದರೂ ಈ ಪ್ರಕರಣವಿನ್ನೂ ನಿಗೂಢವಾಗಿಯೇ ಉಳಿದಿರುವುದು ವಿಶೇಷ. ಆ ದೇಹ ಯಾರದು? ಗಂಡಸೋ ಅಥವಾ ಹೆಂಗಸೋ ಎಂಬ ಕುರುಹು ಕೂಡ ಸಿಕ್ಕಿಲ್ಲ. ಕೊಳೆತ ದೇಹದ ಜತೆಗೆ ಒಂದು ಬೆಲ್ಟ್ ಸಿಕ್ಕಿದ್ದು, ಈ ಆಧಾರದಲ್ಲಿ ಅದು ಗಂಡಸಿನ ಮೃತದೇಹವಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅಂದಾಜಿಸಿದ್ದರು. ರುಂಡ ಹಾಗೂ ಕೈಕಾಲುಗಳು ಪತ್ತೆಯಾದ ಸ್ಥಳದಿಂದ ಸುಮಾರು 2.5 ಕಿ.ಮೀ. ದೂರದ ಸೊರಕೆ ಪರನೀರಿನಲ್ಲಿ ಶವ ಕೊಳೆತ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಗುಡ್ಡದಲ್ಲಿ ರುಂಡ, ಕೈ ಹಾಗೂ ತುದಿಭಾಗವಿಲ್ಲದ ಕಾಲುಗಳು ಪತ್ತೆಯಾಗಿದ್ದವು. ಇವೂ ಪೂರ್ಣವಾಗಿ ಕೊಳೆತಿದ್ದ ಕಾರಣ ಶವದ ಗುರುತು ಹಿಡಿಯುವುದೇ ಅಸಾಧ್ಯವಾಯಿತು. ಆದರೆ, ಯಾವುದೋ ಕಾರಣಕ್ಕೆ ಈ ವ್ಯಕ್ತಿಯನ್ನು ಅತ್ಯಂತ ಕ್ರೂರವಾಗಿ ಕೊಲ್ಲಲಾಗಿದೆ ಅಥವಾ ಕೊಂದ ಬಳಿಕ ಗುರುತು ಸಿಗಬಾರದೆಂದೇ ಶವದ ಭಾಗಗಳನ್ನು ಬೇರೆ ಬೇರೆ ಕಡೆ ಎಸೆದು, ಆರೋಪಿಗಳು ವ್ಯವಸ್ಥಿತವಾಗಿ ಪರಾರಿಯಾಗಿದ್ದಾರೆ ಎಂಬುದು ಸ್ಪಷ್ಟವಾಗಿತ್ತು.ರುಂಡ ಹಾಗೂ ಕೈ ಕಾಲುಗಳ ಎಲುಬುಗಳು ಪತ್ತೆಯಾದ ಬಳಿಕ ಸಮೀಪದ ಪೊದೆಯಲ್ಲಿ ಪುಡಿಯಾದ ಬಳೆ, ಬೆಳ್ಳಿಯ ಕರಿಮಣಿ ಸರ ಹಾಗೂ ಸೀರೆ ಸಿಕ್ಕಿದ್ದವು. ಆದ ಕಾರಣ ಶವ ಮಹಿಳೆಯದ್ದಾಗಿರಬಹುದು ಎಂಬ ಸಂಶಯವೂ ವ್ಯಕ್ತವಾಯಿತು. ಆದರೆ, ಮುಂಡ ಪತ್ತೆಯಾದಲ್ಲಿ ಬೆಲ್ಟ್ ಸಿಕ್ಕಿದ್ದು, ಕೊಳೆತ ಶವ ಗಂಡಸಿನದ್ದಾಗಿರಬಹುದು ಎಂಬ ಅಂಶ ದ್ವಂದ್ವಕ್ಕೆ ಒಳಗಾಗುವಂತೆ ಮಾಡಿತ್ತು. ಮಹಿಳೆಯ ಬಟ್ಟೆ ಹಾಗೂ ಬೆಲ್ಟ್ ಅನ್ನು ತನಿಖೆಯ ದಾರಿ ತಪ್ಪಿಸಲೆಂದೇ ಇಡಲಾಗಿದೆಯೇ ಎಂಬ ಸಂಶಯವೂ ಪೊಲೀಸರನ್ನು ಕಾಡಿತ್ತು.
ಮೃತದೇಹದ ತಲೆಬುರುಡೆ ಮತ್ತು ಕೈ ಕಾಲುಗಳ ಎಲುಬುಗಳು ಪತ್ತೆಯಾದ ಸ್ಥಳಕ್ಕೆ ಅಪರಾಧ ವಿಧಿ ವಿಜ್ಞಾನ ಪ್ರಯೋಗಾಲದ ವೈದ್ಯರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ, ತಲೆಬುರುಡೆ ಹಾಗೂ ಕೈಕಾಲುಗಳನ್ನು ಪ್ರಯೋಗಾಲಯಕ್ಕೆ ಕೊಂಡೊಯ್ದಿದ್ದರು. ಸ್ಥಳಕ್ಕೆ ಅಂದಿನ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಎಸ್. ಡಿ. ಶರಣಪ್ಪ, ಹೆಚ್ಚುವರಿ ಎಸ್‌ಪಿ ವಿನ್ಸೆಂಟ್ ಶಾಂತಕುಮಾರ್ ಭೇಟಿ ನೀಡಿದ್ದರು. ಎಎಸ್ಪಿ ಸಿ.ಬಿ. ಋಷ್ಯಂತ್, ಪುತ್ತೂರು ಗ್ರಾಮಾಂತರ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಬಿ.ಎಸ್. ರವಿ ಅವರೂ ಹಾಜರಿದ್ದರು. ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಎಲುಬುಗಳನ್ನು ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸಿದ ಬಳಿಕ ಶವ ಗಂಡಸಿನದ್ದು ಅಥವಾ ಹೆಂಗಸಿನದ್ದೇ ಎಂಬ ಕುರಿತು ಹಾಗೂ ಇತರ ಮಾಹಿತಿಗಳು ಸ್ಪಷ್ಟವಾಗುವ ವಿಶ್ವಾಸ ವ್ಯಕ್ತವಾಗಿತ್ತು. ಆದರೆ, ಬಳಿಕ ವಿಧಿ ವಿಜ್ಞಾನ ವರದಿ ಬಂದ ಯಾವುದೇ ಮಾಹಿತಿ ಇಲ್ಲ ವಿಕೃತ ಕೊಲೆ
ಮೇಲ್ನೋಟಕ್ಕೆ ಇದೊಂದು ಇದೊಂದು ಕೊಲೆ ಪ್ರಕರಣದಂತೆ ಕಂಡು ಬರುತ್ತಿದ್ದು, ಕೊಲೆಯಾದ ವ್ಯಕ್ತಿ ಯಾರು? ಶವವನ್ನು ಛಿದ್ರಗೊಳಿಸಿ ಇಲ್ಲಿಗೆ ತಂದು ಬಿಸುಟು ಹೋದವರು ಯಾರು? ಇದು ತಂಡದ ಕೃತ್ಯವೇ ಎಂಬ ಪ್ರಶ್ನೆಗಳು ಮೂಡಿದ್ದವು. ದೇಹದಿಂದ ರುಂಡ ಹಾಗೂ ಕೈ, ಕಾಲುಗಳ ಭಾಗವನ್ನು ಕಡಿದು ಪ್ರತ್ಯೇಕಿಸಿರುವುದು ಕೊಲೆ ಮಾಡಿರುವವರ ವಿಕೃತ ಮನೋಭಾವವನ್ನು ವ್ಯಕ್ತಪಡಿಸಿತ್ತು ಹಾಗೂ ದ್ವೇಷದಿಂದ ಆಗಿರಬಹುದಾದ ಕೊಲೆ ಸಾಧ್ಯತೆಯನ್ನು ತೆರೆದಿಟ್ಟಿತ್ತು.ಆದರೆ ಪ್ರಕರಣ ನಡೆದು ಮೂರು ವರ್ಷಗಳೇ ಆದರೂ ಕೊಲೆಯ ರಹಸ್ಯ ಇನ್ನೂ ಹೊರಬಂದಿಲ್ಲ. ಪೊಲೀಸ್ ಇಲಾಖೆ ಈ ಕುರಿತು ತೀವ್ರವಾದ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
Related Articles
ಸರ್ವೆಯಲ್ಲಿ ಪ್ರತ್ಯೇಕವಾಗಿ ಮೃತದೇಹದ ಭಾಗಗಳು ಪತ್ತೆಯಾದ ಪ್ರಕರಣಗಳ ಆರೋಪಿಗಳ ಸುಳಿವು ಇನ್ನೂ ಸಿಕ್ಕಿಲ್ಲ. ಮೃತದೇಹದ ಗುರುತು ಸಿಗದೇ ಇರುವುದರಿಂದ, ಕೊಲೆಗೈದ ಆರೋಪಿಯ ಪತ್ತೆಯೂ ಆಗಿಲ್ಲ. ಮೃತದೇಹದ ಗುರುತು ಪತ್ತೆಗಾಗಿ ದೇಹದ ಭಾಗಗಳನ್ನು ಫೋರೆನ್ಸಿಕ್
ಟೆಸ್ಟ್ ಗೆ ಕಳುಹಿಸಲಾಗಿದೆ.
– ಶಕ್ತಿವೇಲು, ಇ. ಉಪನಿರೀಕ್ಷಕ, ಪುತ್ತೂರು ಗ್ರಾಮಾಂತರ ಠಾಣೆ
Advertisement
— ಪ್ರವೀಣ್ ಚೆನ್ನಾವರ