Advertisement
ಕೋರ್ ವಿಷಯ :
Related Articles
Advertisement
ವಿಜ್ಞಾನ, ಸಮಾಜ ವಿಜ್ಞಾನ, ಗಣಿತದಲ್ಲಿ ಅಪ್ಲಿಕೇಶನ್ ಲೆವೆಲ್ ಪ್ರಶ್ನೆಗಳು ಇರಲಿವೆಯೇ?
(ಕೃಷ್ಣ ಉಡುಪಿ, ಸುಬ್ರಹ್ಮಣ್ಯ, ಬ್ರಹ್ಮಾವರ )
ಈ ವರ್ಷ ನೇರ ಮತ್ತು ಸರಳ ಪ್ರಶ್ನೆಗಳನ್ನೇ ಕೇಳುತ್ತಾರೆ. ಅಪ್ಲಿಕೇಶನ್ ಅಥವಾ ಇನ್‌ಡೈರೆಕ್ಟ್ ಪ್ರಶ್ನೆಗಳು ತೀರಾ ಕಡಿಮೆ ಇರಲಿವೆ. ಈ ವರ್ಷ ಅದನ್ನು ಶೇ.10ಕ್ಕೆ (ಕೋವಿಡ್‌ಗಿಂತ ಮೊದಲು ಶೇ.20ರಷ್ಟು ಇರುತಿತ್ತು) ಇಳಿಸಿದ್ದಾರೆ. ಈ ಬಾರಿ ಪರೀಕ್ಷೆ ಬರೆಯುವವರು 8, 9ನೇ ತರಗತಿ ಪರೀಕ್ಷೆ ಬರೆಯದ ಕಾರಣ ನೇರ ಪ್ರಶ್ನೆಗಳನ್ನೇ ಕೇಳಲಿದ್ದಾರೆ.
ವಿಜ್ಞಾನ ವಿಷಯದಲ್ಲಿ ಪಠ್ಯಕಡಿತ ಆಗಿರುವುದು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆಯೇ?
(ಹಮೀದ್, ವಿಟ್ಲ)
ಸಮಸ್ಯೆ ಆಗಲಾರದು. ಹಿಂದಿನ ವರ್ಷಗಳಲ್ಲಿ ಓದಿರುವ ಕೆಲವೇ ಕೆಲವು ಅಂಶಗಳನ್ನು ಒಳಗೊಂಡ ಅಧ್ಯಾಯಗಳನ್ನು ಮತ್ತು ಕ್ಲಿಷ್ಟಕರ ಅಂಶಗಳನ್ನು ಕೈಬಿಡಲಾಗಿದೆ. ಆದರೆ ಇದರಿಂದ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುವುದಿಲ್ಲ.
ಗಣಿತದ ಸೂತ್ರಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳುವುದು ಹೇಗೆ?
(ನಿತೀಶ್ ಉಡುಪಿ )
ಎಲ್ಲ ಸೂತ್ರಗಳನ್ನು ಕಲಿಯುವಾಗ ಅವುಗಳ ವ್ಯತ್ಯಾಸ ಗಮನಿಸಿಕೊಳ್ಳಬೇಕು. ಸಣ್ಣಪುಟ್ಟ ವ್ಯತ್ಯಾಸವನ್ನು ಸ್ಪಷ್ಟವಾಗಿ ಗಮನಿಸಿದರೆ ಗಣಿತದಲ್ಲಿ ಸೂತ್ರ ನೆನಪಿಟ್ಟುಕೊಳ್ಳುವುದು ಸುಲಭ. ಎಲ್ಲವೂ ಒಂದೇ ರೀತಿಯಲ್ಲಿ ಕಂಡರೂ ಸಣ್ಣ ಸಣ್ಣ ವ್ಯತ್ಯಾಸ ಇರುತ್ತದೆ. ಅದನ್ನು ಗಮನಿಸಿ, ಬರೆದು ನೆನಪಿಟ್ಟುಕೊಳ್ಳಬೇಕು.
ವಿಜ್ಞಾನದ ಪ್ರಮುಖಾಂಶ :
ವಿಜ್ಞಾನ ವಿಷಯದಲ್ಲಿ ಲೋಹ-ಅಲೋಹ, ಆಮ್ಲ-ಪ್ರತ್ಯಾಮ್ಲ, ವಾಯುವಿಕ ಉಸಿರಾಟ- ಅವಾಯುವಿಕ ಉಸಿರಾಟ ಮೊದಲಾದ ವಿಷಯದಲ್ಲಿ ಯಾವುದಾದರೂ ಒಂದು ಸ್ಪಷ್ಟ ಗೊತ್ತಾದರೆ ಇನ್ನೊಂದನ್ನು ಸುಲಭವಾಗಿ ಬರೆಯಬಹುದು.
ವಿಜ್ಞಾನದಲ್ಲಿ 12 ಅಂಕದ ಚಿತ್ರಗಳೇ ಇರುತ್ತದೆ. ಭೌತ ಶಾಸ್ತ್ರ, ರಸಾಯಶಾಸ್ತ್ರ ಹಾಗೂ ಜೀವಶಾಸ್ತ್ರದಲ್ಲಿ ತಲಾ 2 ಚಿತ್ರ ಬರುತ್ತದೆ. ಬೆಳಕು, ವಿದ್ಯುತ್‌ಶಕ್ತಿ, ವಿದ್ಯುತ್ ಕಾಂತಿಯ ಪರಿಣಾಮ ಈ ಅಧ್ಯಯಗಳಲ್ಲಿ 20 ಅಂಕದ ಪ್ರಶ್ನೆಗಳು ಬರುತ್ತದೆ. ಕಾರ್ಬನ್, ಲೋಹ, ಅಲೋಹ, ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣ, ಆಮ್ಲ, ಪ್ರತ್ಯಾಮ್ಲದ ಗುಣಗಳು, ತಟಸ್ಥ ದ್ರಾವಣಗಳು, ಲವಣಗಳ ಉಪಯೋಗ, ಜೀವಶಾಸ್ತ್ರದಲ್ಲಿ ಜೀರ್ಣಕ್ರಿಯೆ, ಸಸ್ಯಗಳಲ್ಲಿ ಆಹಾರ ಮತ್ತು ನೀರಿನ ಸಾಗಾಣಿಕೆ, ರಕ್ತನಾಳಗಳ ವಿಧಗಳು, ಘಟಕಗಳು, ಅವುಗಳ ಕಾರ್ಯ, ವಿಸರ್ಜನ ಕ್ರಿಯೆ ಇತ್ಯಾದಿ ಪಾಠಗಳ ಪ್ರಶ್ನೆ ಪ್ರಮುಖವಾಗಿ ಬರುತ್ತದೆ.
ಗಣಿತದಲ್ಲಿ ಗಮನ ಹರಿಸಬೇಕಾದದ್ದು :
ಗಣಿತದಲ್ಲಿ ಥೆರಂ ಬಂದೇ ಬರುತ್ತದೆ. ದೊಡ್ಡ ಥೆರಂ ಚಿಕ್ಕ ಥೆರಂ ಪ್ರತ್ಯೇಕವಾಗಿ ಬರಲಿದೆ. ಗ್ರಾಫ್ ಕೂಡ ಅತೀ ಮುಖ್ಯವಾಗಿರುತ್ತದೆ. ಪ್ರಮೇಯಗಳು, ಓಜೀವ್ ರಚನೆ, ಪ್ರಾಯೋಗಿಕ ರಚನೆಗಳು, ಸರಾಸರಿ, ಮಧ್ಯಾಂಕ ಅಥವಾ ಬಹುಲೆಕ್ಕವನ್ನು ಕಂಡು ಹಿಡಿಯುವುದು. ಸೂತ್ರದ ಸಹಾಯದಿಂದ ವರ್ಗಸಮೀಕರಣವನ್ನು ಬಿಡಿಸುವುದು, ಮೂಲಗಳ ಸ್ವಭಾವವನ್ನು ಪರೀಕ್ಷಿಸುವುದು ಇತ್ಯಾದಿ ಬಹು ಮುಖ್ಯವಾಗಿರುತ್ತದೆ.
ಸಮಾಜ ವಿಜ್ಞಾನದ ಪ್ರಮುಖಾಂಶ :
ಇತಿಹಾಸ, ಭೌಗೋಳ, ರಾಜ್ಯಶಾಸ್ತ್ರ ಹಾಗೂ ಸಮಾಜಶಾಸ್ತ್ರ, ವ್ಯವಹಾರ ಅಧ್ಯಯನ ವಿಭಾಗಗಳಲ್ಲಿ ಮುಖ್ಯವಾಗಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ-1857ರಲ್ಲಿನ ವಿಫಲತೆಗೆ ಕಾರಣ, ರಾಜಕೀಯ ಮತ್ತು ಆರ್ಥಿಕ ಕಾರಣಗಳು, ಪರಿಣಾಮಗಳು, ಸ್ವಾತಂತ್ರ್ಯ ಹೋರಾಟದಲ್ಲಿ ಮಂದಗಾಮಿ, ತೀವ್ರಗಾಮಿಗಳು ಹಾಗೂ ತೀವ್ರಗಾಮಿಗಳ ಪಾತ್ರದ ಬಗ್ಗೆ ಕೇಳುವ ಸಾಧ್ಯತೆಯಿದೆ. ಗಾಂಧಿಯುಗದಲ್ಲಿ ಸುಭಾಷ್‌ಚಂದ್ರ ಭೋಸ್, ಮೊದಲ ಪ್ರಧಾನಿ ನೆಹರೂ ಸಾಧನೆ, ಸ್ವಾತಂತ್ರ್ಯ ಭಾರತಕ್ಕೆ ಡಾ| ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಇತ್ಯಾದಿ. ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು, ಬೆಳೆಯ ಋತುಗಳು, ಮಣ್ಣಿನ ಗುಣಲಕ್ಷಣ, ಕೈಗಾರಿಕೆಗಳ ಮೇಲೆ ಪ್ರಭಾವ ಬೀರುವ ಅಂಶಗಳು, ಭಾರತದ ಭೂ ಸಂಪನ್ಮೂಲ -ಕೃಷಿಯ ವಿಧಗಳು, ಕೃಷಿ ಪದ್ಧತಿ. ಕೈಗಾರಿಕೆಗಳು- ಪ್ರಾಮುಖ್ಯ, ಬ್ಯಾಂಕ್‌ನ ವ್ಯವಹಾರಗಳು ಇತ್ಯಾದಿ ಅಧ್ಯಾಯಗಳ ಮೇಲೆ ಹೆಚ್ಚಿನ ಗಮನಹರಿಸಬೇಕು.
ಪ್ರಮುಖ ಟಿಪ್ಸ್ :
- ವಿಜ್ಞಾನದಲ್ಲಿ ಮಾನವನ ಜೀರ್ಣಾಂಗ ವ್ಯೂಹ, ಹೃದಯ, ಮೆದುಳಿನ ಚಿತ್ರಗಳು
- ಅನುವಂಶೀಯತೆಯಲ್ಲಿ ಮೆಂಡಲ್‌ನ ಪ್ರಯೋಗಗಳು, ಏಕತಳೀಕರಣ, ದ್ವಿತಳೀಕರಣ ಪ್ರಯೋಗಗಳು
- ವಿಜ್ಞಾನ ವಿಷಯದಲ್ಲಿ ಸರಳ ಮತ್ತು ನೇರ ಪ್ರಶ್ನೆಗಳು ಇರಲಿದೆ. ಎಪ್ಲಿಕೇಶನ್ ಲೆವೆಲ್ ಪ್ರಶ್ನೆ ಕಡಿಮೆ ಇರಲಿದೆ.
- ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವ ಶಾಸ್ತ್ರವನ್ನು ಪ್ರತ್ಯೇಕವಾಗಿ ಓದಬೇಕು.
- ಗಣಿತದಲ್ಲಿ ಸೂತ್ರಗಳನ್ನು, ಸಮೀಕರಣಗಳನ್ನು ಪ್ರತ್ಯೇಕವಾಗಿ ಬರೆದಿಟ್ಟುಕೊಳ್ಳಬೇಕು.
- ಗ್ರಾಫ್ಸ್, ಪ್ರಮೇಯ, ಬಹುಲೆಕ್ಕ, ಶ್ರೇಢಿಗಳ ಬಗ್ಗೆ ಗಮನ ಹೆಚ್ಚಿರಲಿ.
- ವಿಷಯವನ್ನು ಕಂಠಪಾಠಕ್ಕಿಂತ ಅರ್ಥಮಾಡಿಕೊಂಡು ಬರೆಯಿರಿ.
- ಆರೋಗ್ಯದ ಬಗ್ಗೆ ಕಾಳಜಿ, ಆತ್ಮವಿಶ್ವಾಸ ಅತೀ ಮುಖ್ಯ.
- ಪರೀಕ್ಷೆಯನ್ನು ನವೋಲ್ಲಾಸ ದಿಂದ ಎದುರಿಸಬೇಕು.
- ಪಠ್ಯಪುಸ್ತಕದ ಲೆಕ್ಕವನ್ನೇ ಹೆಚ್ಚಾಗಿ ನೋಡಿಕೊಂಡರೆ ಸಾಕಾಗುತ್ತದೆ.
- ಶಾರ್ಟ್ ನೋಟ್ ಮಾಡಿಕೊಂಡ ಅಂಶಗಳನ್ನು ಆಗಾಗ ಪುನರ್ ಮನನ ಮಾಡಿ.
- ಪೂರ್ವ ಸಿದ್ಧತಾ ಪರೀಕ್ಷೆ ಪ್ರಶ್ನೆ ಪತ್ರಿಕೆ, ಮಾದರಿ ಪ್ರಶ್ನೆಪತ್ರಿಕೆಯ ಶಾರ್ಟ್‌ನೋಟ್ ಮಾಡಿಕೊಳ್ಳಬೇಕು.
- ಪೂರ್ವ ಸಿದ್ಧತಾ ಪರೀಕ್ಷಾ ಪ್ರಶ್ನೆ ಪತ್ರಿಕೆಗಳನ್ನು ಸರಿಯಾಗಿ ಅಭ್ಯಾಸ ಮಾಡಿಕೊಳ್ಳುವುದು.
- ಈ ವರ್ಷದ ಪ್ರಶ್ನೆ ಪತ್ರಿಕೆಯಲ್ಲಿ ಕ್ಲಿಷ್ಟತೆಯ ಪ್ರಶ್ನೆಗಳು ಇಲ್ಲ. ಆತಂಕವಿಲ್ಲದೆ ಉತ್ತರಿಸಿ.
- ಭಾಷಾ ಪಾಠಗಳಲ್ಲಿ ಅಕ್ಷರಗಳನ್ನು ದುಂಡಾಗಿ, ದೊಡ್ಡದಾಗಿ ಬರೆಯುವುದು.
- ಕಂಠ ಪಾಠದ ಪದ್ಯಗಳಲ್ಲಿ 7 ಪದ್ಯಗಳಲ್ಲಿನ ಒಂದೊಂದು ಕಂಠ ಪಾಠಕ್ಕಿರುವ ಪದ್ಯಭಾಗವನ್ನು ಕಲಿತುಕೊಳ್ಳುವುದು.
- ಪತ್ರಲೇಖನಕ್ಕೆ ಸಂಬಂಧಿಸಿದಂತೆ 2 ಆಯ್ಕೆಗಳಲ್ಲಿ ವ್ಯಾವಹಾರಿಕ ಪತ್ರವನ್ನೇ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಸುಲಭವಾಗಿ ಅಂಕ ಗಳಿಸಬಹುದು.
- ಪ್ರಬಂಧ ಬರೆಯುವಾಗ ಪ್ಯಾರಗ್ರಾಫ್ ಮಾಡಿ ಉತ್ತರಿಸುವುದು. ಪೀಠಿಕೆ, ವಿಷಯ ಪ್ರಸ್ತಾವನೆ, ಉಪಸಂಹಾರ ಹೀಗೆ.
- ಅಲಂಕಾರ ಗುರುತಿಸುವಾಗ ಉಪಮಾ ಮತ್ತು ರೂಪಾಲಂಕಾರಗಳ ಉದಾಹರಣೆಯನ್ನು ಹೆಚ್ಚು ಗಮನ ಕೊಡುವುದು.
- ಭಾಷಾ ವಿಷಯದ ಪಾಠಗಳಲ್ಲಿ ಹೆಚ್ಚಿನವು ಕಥೆಯ ರೂಪದಲ್ಲಿರುವುದರಿಂದ ಪ್ರತೀ ಭಾಗವನ್ನು ಕಥೆಯ ರೂಪದಲ್ಲಿ ನೆನಪಿಟ್ಟುಕೊಂಡರೆ ಉತ್ತಮ.
- ಕವಿ ಪರಿಚಯ ಮಾಡುವಾಗ ಒಂದು ಗದ್ಯಭಾಗದ ಕವಿ. ಒಂದು ಪದ್ಯ ಭಾಗದ ಕವಿ ಪರಿಚಯಕ್ಕೆ ಕೇಳುವ ಸಾಧ್ಯತೆ ಹೆಚ್ಚಿರುತ್ತದೆ.
- ಪ್ರಶ್ನೆ ಪತ್ರಿಕೆಯಲ್ಲಿ ಕೇಳಿರುವ ಪ್ರಶ್ನೆಗಳು ಕೆಲವು ಸಂದರ್ಭಗಳಲ್ಲಿ ತಪ್ಪಾಗಿದ್ದರೆ ಅದನ್ನು ಬರೆಯಲು ಪ್ರಯತ್ನಿಸಿದವರಿಗೆ ಅಂಕ ನೀಡಲಾಗುತ್ತದೆ. ಹಾಗಾಗಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದು ಉತ್ತಮ.