Advertisement
“ಉದಯವಾಣಿ’ ಶನಿವಾರ ಆಯೋಜಿಸಿದ ಫೋನ್ ಇನ್ ಕಾರ್ಯ ಕ್ರಮದಲ್ಲಿ ಉಡುಪಿ ಡಾ|ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ|ಶಶಿಕಿರಣ್ ಉಮಾಕಾಂತ್, ಮಣಿಪಾಲ ಕೆಎಂಸಿ ಪ್ರಸೂತಿ ವಿಭಾಗದ ಯುನಿಟ್ ಮುಖ್ಯಸ್ಥೆ ಡಾ|ಅಖೀಲಾ ವಾಸುದೇವ್ ಮತ್ತು ಜಿಲ್ಲಾ ಲಸಿಕಾಧಿಕಾರಿ ಡಾ|ಎಂ.ಜಿ.ರಾಮ ಪಾಲ್ಗೊಂಡು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ನೀಡಿದರು.
Related Articles
Advertisement
ಗರ್ಭಿಣಿಯರು, ಬಾಣಂತಿಯರಿಗೆ ಲಸಿಕೆ ಅಗತ್ಯ:
ಗರ್ಭಿಣಿಯರು, ಬಾಣಂತಿಯರು ಲಸಿಕೆ ಪಡೆಯಬಹುದೆ ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ಪ್ರಸೂತಿತಜ್ಞೆ ಡಾ|ಅಖೀಲಾ ವಾಸುದೇವ್, ಗರ್ಭಿಣಿಯರು ಮತ್ತು ಮಕ್ಕಳಿಗೆ ಎದೆಹಾಲು ಕೊಡುವ ಬಾಣಂತಿಯರು ಕಡ್ಡಾಯವಾಗಿ ಲಸಿಕೆಯನ್ನು ಪಡೆದುಕೊಳ್ಳಬೇಕು. ಇದು ಅಡ್ಡ ಪರಿಣಾಮವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಲಸಿಕೆ ಪಡೆಯದವರಿಗೆ ಸೋಂಕು ಬಂದರೆ ಐಸಿಯು, ವೆಂಟಿಲೇಟರ್ ಬೇಕಾಗುತ್ತದೆ. ಲಸಿಕೆ ಪಡೆದವರಿಗೆ ಸೋಂಕು ಬಂದರೆ ಪರಿಣಾಮ ಗಂಭೀರವಿರುವುದಿಲ್ಲ. ಲಸಿಕೆ ಜತೆ ಮಾಸ್ಕ್, ಅಂತರ ಪಾಲನೆಯೂ ಅಗತ್ಯ ಎಂದರು.
ವರ್ಷಾಂತ್ಯದೊಳಗೆ ಶೇ.100 ಲಸಿಕೆ:
ಲಸಿಕೆ ಶೇ.100 ತಲುಪಿದಾಗ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಆಗ ಲಾಕ್‌ಡೌನ್ ಅಗತ್ಯವಿಲ್ಲ. ಆದರೆ ಕೋವಿಡ್ ಮಾರ್ಗಸೂಚಿ ಪಾಲಿಸಲೇಬೇಕು. ಡಿಸೆಂಬರ್‌ನಲ್ಲಿ ಶೇ.100 ಗುರಿ ಮುಟ್ಟುವ ವಿಶ್ವಾಸವಿದೆ ಎಂದು ಡಾ|ಎಂ.ಜಿ.ರಾಮ ಹೇಳಿದರು.
ವೈರಸ್ ಉಗ್ರಗಾಮಿತನ:
ಎರಡು ರಾಷ್ಟ್ರಗಳ ನಡುವೆ ಘರ್ಷಣೆ ಇದ್ದಾಗ ಕೊರೊನಾ ಸಹಿತ ಯಾವುದೇ ವೈರಸ್‌ನ್ನು ಉಗ್ರಗಾಮಿಗಳೂ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ಇದು ನಿರ್ದಿಷ್ಟ ರಾಷ್ಟ್ರಕ್ಕೆ ಮಾತ್ರ ಅಪಾಯಕಾರಿಯಲ್ಲ. ಹುಟ್ಟುಹಾಕಿದ ರಾಷ್ಟ್ರಕ್ಕೂ ಅಪಾಯಕಾರಿ ಎಂದು ಡಾ| ಶಶಿಕಿರಣ್ ಉಮಾಕಾಂತ್ ಹೇಳಿದರು.
ಲೈಂಗಿಕ ಶಕ್ತಿ ಮೇಲೆ ಅಡ್ಡ ಪರಿಣಾಮವಿಲ್ಲ:
ಲಸಿಕೆ ತೆಗೆದುಕೊಂಡರೆ ಲೈಂಗಿಕ ಶಕ್ತಿ ಕಡಿಮೆಯಾಗುತ್ತದೆಯೆ ಎಂಬ ಸಂಶಯ ಕೆಲವರು ಹೊಂದಿದ್ದರು. ಆದರೆ ಲಸಿಕೆಯಿಂದಾಗಿ ಲೈಂಗಿಕ ಶಕ್ತಿ ಕಡಿಮೆಯಾಗಿಲ್ಲ. ಇದಕ್ಕೆ ಬೇರೆ ಕಾರಣಗಳಿರಬಹುದು ಎಂದು ಡಾ| ಶಶಿಕಿರಣ್ ಹೇಳಿದರು.
ಕ್ಯಾನ್ಸರ್‌ಗೆ ಬೇರೆ ಕಾರಣಗಳಿವೆ:
ಕ್ಯಾನ್ಸರ್‌ಗೂ ಲಸಿಕೆಗೂ ಸಂಬಂಧವಿಲ್ಲ. ಕ್ಯಾನ್ಸರ್ ಪ್ರಕರಣ ಹೆಚ್ಚಲು ದೇಹದ ಲಕ್ಷಣಗಳೂ ಕಾರಣ. ವಂಶವಾಹಿ, ಮಾಲಿನ್ಯ, ಕೃತಕ ಆಹಾರ-ಬಣ್ಣ, ಕ್ರಿಮಿನಾಶಕಗಳು, ರೇಡಿಯೇಶನ್‌ಗಳು ಕೂಡ ಕಾರಣಗಳಾಗಿರುತ್ತವೆ ಎಂದರು ಡಾ| ಶಶಿಕಿರಣ್.
ಪ್ರ: ಈಗಾಗಲೆ 2 ಡೋಸ್‌ಗಳನ್ನು ತೆಗೆದುಕೊಂಡಿದ್ದೇವೆ. ಬೂಸ್ಟರ್ ಡೋಸ್ನ ಆವಶ್ಯಕತೆ ಇದೆಯೇ? (ಬಾಲಕೃಷ್ಣ ಉಡುಪಿ, ಹಮೀದ್ ವಿಟ್ಲ, ಮಲ್ಲಿಕಾರ್ಜುನ ಕಾಪು )
ಉ: 3ನೇ ಹಂತದಲ್ಲಿ ಬೂಸ್ಟರ್ ಡೋಸ್ ತೆಗೆದುಕೊಳ್ಳ ಬೇಕಾದ ಅಗತ್ಯದ ಬಗ್ಗೆ ಅಧ್ಯಯನ ನಡೆಯುತ್ತಿದೆಯಾದರೂ ಅಂತಿಮಗೊಂಡಿಲ್ಲ. ಕೇಂದ್ರದ ತಜ್ಞರ ಸಮಿತಿ ಇದನ್ನು ನಿರ್ಧರಿಸಲಿದೆ. ಶೀಘ್ರ ನಿರ್ಧಾರ ಪ್ರಕಟಿಸಬಹುದು.
ಪ್ರ: ಡೆಲಿವರಿ ಆಗಿ 4 ತಿಂಗಳು ಆಗಿದ್ದು, ಕೋವಿಡ್ ಲಸಿಕೆ ತೆಗೆದುಕೊಳ್ಳಬೇಕೇ, ಬೇಡವೇ?
(ಸೌಮ್ಯಾ, ಸಂತೆಕಟ್ಟೆ , ದೀಪಾ, ಕಾರ್ಕಳ)
ಉ: ಲಸಿಕೆ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಯಾರೇ ಆದರೂ ಲಸಿಕೆ ಪಡೆಯಬೇಕು. ಲಸಿಕೆ ಪಡೆದ ಅನಂತರ ಕೆಲವರಿಗೆ ಮಾತ್ರ ಸಣ್ಣದಾಗಿ ಜ್ವರ ಕಾಣಿಸಬಹುದು. ಈ ಬಗ್ಗೆ ಹೆದರಬೇಕಾಗಿಲ್ಲ. ಯಾವುದೇ ಗೊಂದಲಕ್ಕೆ ಆಸ್ಪದ ಕೊಡದೆ ಲಸಿಕೆ ಪಡೆಯಲು ಮುಂದಾಗಿ.
ಪ್ರ: ಕೊರೊನಾ ಸರ್ವನಾಶ ಆಗುವುದು ಯಾವಾಗ? ( ಕೃಷ್ಣಾನಂದ ಶೆಟ್ಟಿ , ಮಂಗಳೂರು)
ಉ: ವೈರಸ್, ಬ್ಯಾಕ್ಟೀರಿಯಾಗಳು ಸಾವಿರಾರು ವರ್ಷಗಳ ಹಿಂದೆಯೇ ಭೂಮಿಯಲ್ಲಿವೆ. ವೈರಸ್‌ಗಳ ಸರ್ವನಾಶ ಅಷ್ಟೊಂದು ಸುಲಭವಲ್ಲ. ಕೋವಿಡ್ ಮಾರ್ಗಸೂಚಿ ಪಾಲಿಸುವುದರಿಂದ ವೈರಸ್‌ಗಳನ್ನು ದೂರವಿಡಬಹುದು.
ಪ್ರ: ಕೋವಿಡ್ ಲಸಿಕೆ ಪಡೆದ ಅನಂತರ ದೇಹದ ರಕ್ತಕಣಗಳ ಮೇಲೆ ಪರಿಣಾಮ ಬೀರುವುದು, ಕ್ಯಾನ್ಸರ್, ಮಧುಮೇಹ ರೋಗಿಗಳಿಗೆ ಇನ್ನಷ್ಟು ಸಮಸ್ಯೆ ಹೆಚ್ಚಾಗಲು ಕಾರಣವಾಗುತ್ತದೆಯೇ? (ಜನಾರ್ದನ ಭಂಡಾರ್ಕರ್, ಉಡುಪಿ)
ಉ: ಕೋವಿಡ್ ಲಸಿಕೆಯಿಂದಾಗಿ ಈ ರೀತಿ ಸಮಸ್ಯೆ, ಅಡ್ಡ ಪರಿಣಾಮವಾಗಿರುವುದು ಎಲ್ಲಿಯೂ ವರದಿ ಆಗಿಲ್ಲ. ಬೇರೆಬೇರೆ ಕಾರಣಗಳಿಂದ ಪರಿಣಾಮವಾಗಿರಬಹುದು.
ಪ್ರ: ಆರಂಭದಲ್ಲಿ ಗರ್ಭಿಣಿಯರು ಲಸಿಕೆ ತೆಗೆದು ಕೊಳ್ಳುವಂತಿಲ್ಲ ಎಂಬ ಸೂಚನೆ ಇತ್ತು. ಕೆಲವು ತಿಂಗಳ ಬಳಿಕ ಲಸಿಕೆ ಪಡೆಯಬಹುದು ಎಂದರು. ಈ ಗೊಂದಲ ಏಕೆ? (ಯಶೋದಾ, ಕಾರ್ಕಳ, ಶರ್ಮಿಳಾ ಪುತ್ತೂರು)
ಉ: ಈ ವಿಚಾರದಲ್ಲಿ ಗೊಂದಲ ಇರಲಿಲ್ಲ. ಸುರಕ್ಷೆ ದೃಷ್ಟಿಯಿಂದ ಮೊದಲು ಲಸಿಕೆ ನೀಡಿಲ್ಲ. ಭಾರತ ಸೇರಿದಂತೆ ಎಲ್ಲ ಮುಂದುವರಿದ ದೇಶಗಳು ಇದೇ ರೀತಿ ಮಾಡಿದ್ದವು. ಕೆಲವು ತಿಂಗಳ ಬಳಿಕ ಈ ಬಗ್ಗೆ ಹೆಚ್ಚಿನ ಪರೀಕ್ಷೆಗಳು ನಡೆದು ಗರ್ಭಿಣಿಯರು ಲಸಿಕೆ ಪಡೆಯಲು ಸೂಕ್ತ ಎಂಬ ತಜ್ಞರ ನಿರ್ಧಾರದ ಬಳಿಕ ಲಸಿಕೆ ಕೊಡಲು ಆರಂಭಿಸಲಾಯಿತು.
ಪ್ರ: ಗರ್ಭಿಣಿಗೆ ಯಾವ ತಿಂಗಳಲ್ಲಿ ಲಸಿಕೆ ಕೊಡಿಸಬೇಕು? (ಇಸ್ಮಾಯಿಲ್, ವಿಟ್ಲ , ರಮೇಶ್ ಮಂಗಳೂರು)
ಉ: ಯಾವ ತಿಂಗಳಲ್ಲಿಯೂ ಲಸಿಕೆ ಪಡೆಯಬಹುದು.
ಪ್ರ: ಪಾರ್ಶ್ವವಾಯು, ರಕ್ತದೊತ್ತಡ, ಮಧುಮೇಹಗಳಿಗೆ ಚಿಕಿತ್ಸೆಯಲ್ಲಿರುವರು ಲಸಿಕೆ ಪಡೆಯುವುದು (ಸೂಕ್ತವೇ? ಸಂಜೀವ ಕೊಟ್ಯಾನ್, ಕರಂಬಳ್ಳಿ )
ಉ: ಕೋವಿಡ್ ಲಸಿಕೆ ಬಂದಾಗ ಆರಂಭದಲ್ಲಿಯೇ ಈ ರೀತಿ ಆರೋಗ್ಯ ಸಮಸ್ಯೆ ಇರುವವರಿಗೆ ಕೋವಿಡ್‌ನಿಂದ ಹೆಚ್ಚು ಬಾಧಿತರಾಗಬಾರದು ಎಂಬ ಮುಂಜಾಗ್ರತೆಯಿಂದ ಮೊದಲ ಆದ್ಯತೆ ಮೇರೆಗೆ ಲಸಿಕೆ ನೀಡಲಾಯಿತು. ಯಾವ ಅನಾರೋಗ್ಯ ಸಂಬಂಧಿಸಿ ಚಿಕಿತ್ಸೆಯಲ್ಲಿದ್ದರೂ ಲಸಿಕೆ ತೆಗೆದುಕೊಳ್ಳುವುದರಿಂದ ಏನೂ ಸಮಸ್ಯೆಯಾಗುವುದಿಲ್ಲ.
ಪ್ರ: ಅಡ್ಡ ಪರಿಣಾಮವಾಗಲಿದೆ ಎಂದು ಸಾಕಷ್ಟು ಮಂದಿ ತಪ್ಪು ಅಭಿಪ್ರಾಯದಿಂದ ಲಸಿಕೆ ಪಡೆದುಕೊಂಡಿಲ್ಲ. ಈ ಬಗ್ಗೆ ಹೇಗೆ ಜಾಗೃತಿ ಮೂಡಿಸುತ್ತಿದ್ದೀರಿ? (ಕಮಲಾಕ್ಷ ಹೆಬ್ಟಾರ್, ಪೇತ್ರಿ )
ಉ: ಜನರ ಜೀವ ಉಳಿಸುವ ದೃಷ್ಟಿಯಿಂದ ಕೇಂದ್ರ ಸರಕಾರದಿಂದ, ಗ್ರಾ.ಪಂ. ಆಡಳಿತ ವರ್ಗದವರೆಗೆ ನಿರಂತರ ಜಾಗೃತಿ, ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ. ಎಲ್ಲ ಮಾಧ್ಯಮ, ಪತ್ರಿಕೆ, ವಾರ್ತಾ ಇಲಾಖೆ ಮೂಲಕ ಲೇಖನ, ಸುದ್ದಿಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಲಸಿಕೆ ಶೇ.100 ರಷ್ಟು ಸುರಕ್ಷಿತವಾಗಿದ್ದು ಯಾವುದೇ ಅಡ್ಡ ಪರಿಣಾಮ ಇಲ್ಲ.
ಪ್ರ: ಕೋವಿಡ್ ಲಸಿಕೆ ಕಡ್ಡಾಯಗೊಳಿಸಲಾಗುತ್ತದೆಯೇ? ( ನಾಗರಾಜ್, ಮಂಗಳೂರು)
ಉ: ಸರಕಾರದಿಂದ ಲಸಿಕೆಯನ್ನು ಕಡ್ಡಾಯಗೊಳಿಸಿಲ್ಲ. ಆದರೆ ಸಾಂಕ್ರಮಿಕ ರೋಗ ತಡೆಯುವ ದೃಷ್ಟಿಯಿಂದ ಲಸಿಕೆ ಪಡೆಯುವುದು ಜನರ ಜವಾಬ್ದಾರಿಯಾಗಿದೆ.