Advertisement

ಉದಯವಾಣಿ ವಿಶೇಷ : ಬೀಚ್‌ಗಳಲ್ಲಿ ಪ್ರವಾಸಿಗರ ಸಂಖ್ಯೆ ಶೇ. 80 ಇಳಿಮುಖ

03:05 AM Aug 23, 2018 | Team Udayavani |

ಮಲ್ಪೆ/ಕಾಪು/ಸುರತ್ಕಲ್‌: ಕೇರಳ ಮತ್ತು ಮಡಿಕೇರಿಯ ಜಲಪ್ರಳಯದ ಪರಿಣಾಮ ಕರಾವಳಿಯಲ್ಲಿ ಪ್ರವಾಸಿಗರ ಸಂಖ್ಯೆ ಭಾರೀ ಇಳಿಮುಖವಾಗಿದೆ. ಸ್ಥಳೀಯರು ಸೇರಿದಂತೆ ರಾಜ್ಯ ಹೊರರಾಜ್ಯಗಳ ಪ್ರವಾಸಿಗರನ್ನು ಸೆಳೆಯುತ್ತಿದ್ದ, ಅದರಲ್ಲೂ ಮಳೆಗಾಲದಲ್ಲೂ ಸದಾ ಪ್ರವಾಸಿಗರಿಂದ ತುಂಬಿರುತ್ತಿದ್ದ ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಸಂಖ್ಯೆ ಶೇ. 80ರಷ್ಟು ಕುಸಿತವಾಗಿದೆ. ಮಳೆ-ಗಾಳಿಯ ಪರಿಣಾಮ ಸ್ಥಳೀಯರು ಕೂಡ ಬೀಚ್‌ನತ್ತ ಮುಖ ಮಾಡುತ್ತಿಲ್ಲ. ಮಳೆಗಾಲದ ದಿನಗಳಲ್ಲಿ ಸಾಮಾನ್ಯವಾಗಿ ನಿತ್ಯ 2 ಸಾವಿರಕ್ಕೂ ಅಧಿಕ ಮಂದಿ ಬರುತ್ತಿದ್ದರೆ; ಕಳೆದ ರವಿವಾರ ಸಂಜೆ ಕೇವಲ 150ರಿಂದ 200ರಷ್ಟು ಮಂದಿ ಮಾತ್ರ ಬೀಚ್‌ನಲ್ಲಿ ಸುತ್ತಾಡುತ್ತಿರುವುದು ಕಂಡು ಬಂದಿದೆ.

Advertisement

ಮಲ್ಪೆ ಬೀಚ್‌, ಸೈಂಟ್‌ಮೇರಿಸ್‌, ಮರವಂತೆ, ಮುರುಡೇಶ್ವರ ಸೇರಿದಂತೆ ಕರಾವಳಿಯ ಪ್ರವಾಸಿ ತಾಣಗಳಿಗೆ ಕೇರಳದ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಮಲ್ಪೆ ಬೀಚ್‌ ಮತ್ತು ಸೈಂಟ್‌ಮೇರಿ ದ್ವೀಪಕ್ಕೆ ಬರುವ ಪ್ರವಾಸಿಗರಲ್ಲಿ ಶೇ. 50ರಷ್ಟು ಕೇರಳ ವಿದ್ಯಾರ್ಥಿಗಳೇ ಇರುತ್ತಾರೆ. ಇನ್ನು ಕೆಲವು ತಿಂಗಳು ಇಲ್ಲಿ ಕೇರಳ ಪ್ರವಾಸಿಗರ ನಿರೀಕ್ಷೆ ಅಸಾಧ್ಯ ಎನ್ನಲಾಗಿದೆ.

ಅಂಗಡಿಗಳು ಮುಚ್ಚಿವೆ
ಹೊಟೇಲ್‌, ಲಾಡ್ಜ್ ಇತ್ಯಾದಿ ಉದ್ಯಮಗಳಿಗೂ ಇದರ ಬಿಸಿ ತಟ್ಟಿದೆ. ವ್ಯಾಪಾರ ಇಲ್ಲವೆಂಬ ಕಾರಣಕ್ಕೆ ಬೀಚ್‌ನ ಬಹುತೇಕ ಅಂಗಡಿ ಮುಂಗಟ್ಟುಗಳು ಬಾಗಿಲೆಳೆದಿವೆ. ಬೀಚ್‌ ಪರಿಸರದಲ್ಲಿ 70-80ರಷ್ಟು ಅಂಗಡಿ ಮುಂಗಟ್ಟುಗಳಿದ್ದು, ಕೆಲವೊಂದು ಸಣ್ಣ ಅಂಗಡಿಗಳವರು ಮಾತ್ರ ಸಂಜೆ ಬಳಿಕ ಬಾಗಿಲು ತೆರೆದು ಪ್ರವಾಸಿಗರನ್ನು ಎದುರು ನೋಡುತ್ತಿದ್ದಾರೆ. ಕಳೆದ 10-12 ದಿವಸಗಳಿಂದ ದಿನಕ್ಕೆ 200 – 300 ರೂ. ವ್ಯಾಪಾರವೂ ಕಷ್ಟವಾಗಿದೆ ಎನ್ನುತ್ತಾರೆ ಗೂಡಂಗಡಿಯವರು. ಪಣಂಬೂರು ಮತ್ತು ತಣ್ಣಿರುಬಾವಿ ಬೀಚ್‌ಗಳಲ್ಲೂ ಇದೇ ಪರಿಸ್ಥಿತಿ ಇದೆ. ಸ್ಥಳೀಯರು ಮಾತ್ರ ಇಲ್ಲಿ ಗಾಳಿಸೇವನೆಗೆ ಬರುತ್ತಿರುವುದು ಕಂಡುಬರುತ್ತಿದೆ.

ಸೀವಾಕ್‌ ನಿರ್ಜನ
ಪ್ರವಾಹ ಭೀತಿಯಿಂದಾಗಿ ಈಗ ಇತ್ತ ಸೀವಾಕ್‌ನಲ್ಲೂ ಓಡಾಡುವವರಿಲ್ಲ. ಸೀವಾಕ್‌ ಆರಂಭಗೊಂಡಾಗಿನಿಂದಲೂ ಪ್ರತಿದಿನ ಜನಸಾಗರವೇ ಇಲ್ಲಿಗೆ ಹರಿದು ಬರುತ್ತಿತ್ತು. ಮಳೆಗಾಲದಲ್ಲಿ ಸೈಂಟ್‌ಮೇರಿ ದ್ವೀಪ ಯಾನ ನಿಷೇಧದ ಬಳಿಕವಂತೂ ಸೀವಾಕ್‌ ವೀಕ್ಷಕರ ಸಂಖ್ಯೆ ದುಪ್ಪಟ್ಟಾಗಿತ್ತು. ಆದರೀಗ ಅಲ್ಲೂ ಖಾಲಿ ಖಾಲಿಯಾಗಿದೆ.

ಜಲಪ್ರವಾಹದ ಭೀತಿ
ಜಲಪ್ರವಾಹ, ಶಿರಾಡಿ, ಸಂಪಾಜೆ, ಕುದುರೆಮುಖ, ಚಾರ್ಮಾಡಿ ಘಾಟಿಗಳ ಕುಸಿತ ಪ್ರವಾಸಿಗರನ್ನು ಬೆಚ್ಚಿ ಬೀಳಿಸಿದ್ದು ಘಟ್ಟ ಪ್ರದೇಶದವರೂ ಕರಾವಳಿಯ ಪ್ರವಾಸಿ ತಾಣಗಳತ್ತ ವಿಮುಖರಾಗಿದ್ದಾರೆ.

Advertisement

ಕಾಪು ಬೀಚ್‌ ಖಾಲಿಖಾಲಿ
ಪ್ರತಿ ನಿತ್ಯ ನೂರಾರು ಮಂದಿ ಪ್ರವಾಸಿಗರು ಭೇಟಿ ನೀಡುವ ದೇಶ – ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ಕಾಪು ಬೀಚ್‌ ಕೂಡ ಪ್ರವಾಸಿಗರಿಲ್ಲದೆ ಖಾಲಿಖಾಲಿಯಾಗಿದೆ. ಬಕ್ರೀದ್‌ ದಿನವಾದರೂ ಹೆಚ್ಚಿನ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿತ್ತು. ಆದರೆ ಇಂದೂ ಜನ ಸಂಚಾರ ವಿರಳವಾಗಿದೆ. ಪ್ರವಾಸಿಗರನ್ನೇ ನಂಬಿರುವ ನಮಗೆ ಹೊಡೆತ ಬಿದ್ದಿದೆ ಎಂದು ಬೀಚ್‌ನಲ್ಲಿ ಫಾಸ್ಟ್‌ ಫುಡ್‌ ವ್ಯವಹಾರ ನಡೆಸುತ್ತಿರುವ ಚಂದ್ರಶೇಖರ್‌ ಪ್ರತಿಕ್ರಿಯಿಸಿದ್ದಾರೆ.

ಕಳೆದ ಎರಡು ವಾರಗಳಿಂದ
ಬೀಚ್‌ಗೆ ಬರುವ ಜನರ ಸಂಖ್ಯೆ ವಿರಳವಾಗಿದೆ. ಒಂದು ವಾರದಿಂದ ದೂರದ ಪ್ರವಾಸಿಗರು ಬರುವುದೇ ನಿಂತುಹೋಗಿದೆ. ನಿತ್ಯ ಸಾವಿರಾರು ಪ್ರವಾಸಿಗರಿಂದ ಗಿಜಿಗಿಡುತ್ತಿದ್ದ  ಬೀಚ್‌ ಬಿಕೋ ಎನ್ನುತ್ತಿದೆ.
– ಸುರೇಶ್‌ ಕುಂದರ್‌, ಸ್ಥಳೀಯ ವಿಹಾರಿ

Advertisement

Udayavani is now on Telegram. Click here to join our channel and stay updated with the latest news.

Next