Advertisement

ಗೋಬಲಕ್ಕೆ ಧನಬಲ ಸೇರಲಿ

01:10 AM Jan 10, 2021 | Team Udayavani |

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ಕಾಯ್ದೆ (ಗೋಹತ್ಯೆ ನಿಷೇಧ)ಯನ್ನು ಅಧ್ಯಾದೇಶದ ಮೂಲಕ ರಾಜ್ಯ ಸರಕಾರ‌ ಜಾರಿಗೊಳಿಸಿದೆ.

Advertisement

ಇದರ ಬೆನ್ನಲ್ಲೇ ವಯಸ್ಸಾದ ಗೋವು, ಎತ್ತು, ಗಂಡು ಕರುಗಳಿಗಾಗಿ ಪ್ರತೀ ತಾಲೂಕಿನಲ್ಲಿ ಎರಡು ಗೋಶಾಲೆಗಳನ್ನು ತೆರೆಯುವುದಾಗಿ ಪಶುಸಂಗೋಪನ ಸಚಿವ ಪ್ರಭು ಚವ್ಹಾಣ್‌ ಹೇಳಿದ್ದಾರೆ. ಆದರೆ ಈಗ  ರಾಜ್ಯದಲ್ಲಿ ಎಷ್ಟು ಗೋಶಾಲೆಗಳಿವೆ? ಅವುಗಳ ಸ್ಥಿತಿಗತಿ ಹೇಗಿದೆ ಎನ್ನುವ ಸಂಕ್ಷಿಪ್ತ ಚಿತ್ರಣ ಇಲ್ಲಿದೆ. ರಾಜ್ಯದ ಬಹುತೇಕ ಖಾಸಗಿ ಗೋಶಾಲೆಗಳು ಸರಕಾರಿ ಸಹಾಯಧನ ಇಲ್ಲದೆ ನಲುಗುತ್ತಿದೆ.  ಹೊಸ ಗೋಶಾಲೆಗಳ ಜತೆ ಸರಕಾರ‌ ಈಗಿರುವ ಗೋಶಾಲೆಗಳ ಬಗ್ಗೆಯೂ ಗಮನಹರಿಸಲಿ.

11ಕ್ಕೂ ಹೆಚ್ಚು ಗೋ ಶಾಲೆ :

ಬೀದರ್‌ ಜಿಲ್ಲೆಯಲ್ಲಿ 11ಕ್ಕೂ ಹೆಚ್ಚು ಗೋ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ಜಾನುವಾರುಗಳಿಗೆ ಆಶ್ರಯ ತಾಣಗಳಾಗಿವೆ. ಬಹುತೇಕ ಗೋ ಶಾಲೆಗಳು ಮಠ-ಮಂದಿರದ ಅ ಧೀನದಲ್ಲಿದ್ದರೆ ಉಳಿದವುಗಳು ಖಾಸಗಿ ಸಂಸ್ಥೆಗಳ ಅಡಿಯಲ್ಲಿವೆ. ಜಿಲ್ಲೆಯಲ್ಲಿ ಬೀದರ್‌ನ ರಾಂಪುರೆ ಕಾಲನಿಯ ಲಕ್ಷ್ಮೀ ಸತ್ಯನಾರಾಯಣ ಚಾರಿಟೆಬಲ್‌ ಟ್ರಸ್ಟ್‌ನ ಗೋ ಶಾಲೆ , ಔರಾದನ ಅಮರೇಶ್ವರ ಗೋ ಶಾಲೆ, ಸೋನಾಳವಾಡಿಯ ಮಹಾದೇವ ಗೋಶಾಲೆ, ಭಾಲ್ಕಿ ತೆಗಣಿ ತಾಂಡಾದ ಸುರಗಾಯಿ ರಾಮಣ್ಣ ಗೋ ಶಾಲೆ, ಮಾಣಿಕನಗರ ಗೋ ಶಾಲೆ, ಚಾಂಗಲೇರಾದ ವೀರಭದ್ರೇಶ್ವರ ಚಾರಿಟೆಬಲ್‌ ಟ್ರಸ್ಟ್‌ನ ಗೋ ಶಾಲೆ, ಹೊನ್ನಿಕೇರಿಯ ಗೋ ಶಾಲೆ, ಪಾತರಪಳ್ಳಿಯ ಪ್ರಗತಿ ಅಭಿವೃದ್ಧಿ ಸಂಸ್ಥೆ ಹಾಗೂ ಹುಮನಾಬಾದ್‌ನ ಜಗದ್ಗುರು ಸಿದ್ಧಬಸವೇಶ್ವರ ವಿದ್ಯಾಪೀಠ ಟ್ರಸ್ಟ್‌ ಗೋ ಶಾಲೆಗಳು ಜಾನುವಾರು ಪಾಲನೆಯಲ್ಲಿ ತೊಡಗಿಸಿಕೊಂಡಿವೆ. ಕೆಲವು ಗೋ ಶಾಲೆಗಳಿಗೆ ದಾನಿಗಳಿಂದ ಧನ ಸಹಾಯ, ಮೇವು ಪೂರೈಕೆ ಆಗುತ್ತಿವೆ. ಆದರೆ ನಿರ್ವಹಣೆ ವೆಚ್ಚ ಹೆಚ್ಚುತ್ತಿರುವುದರಿಂದ ಸರಕಾರ‌ದ ನೆರವಿನ ಹಸ್ತಕ್ಕಾಗಿ ಎದುರು ನೋಡುವಂತಾಗಿದೆ.

ಮಠಗಳೇ ಸಂಜೀವಿನಿ :

Advertisement

ಬೆಳಗಾವಿ ಜಿಲ್ಲೆಯಲ್ಲಿ ಸದ್ಯ ಅಧಿಕೃತವಾಗಿ ಎಂಟು ಗೋಶಾಲೆಗಳಿದ್ದು, ಇಲ್ಲಿ ಸಾವಿರಕ್ಕೂ ಹೆಚ್ಚು ಗೋವುಗಳ ರಕ್ಷಣೆ ನಿರಂತರವಾಗಿ ನಡೆದಿದೆ. ಹುಕ್ಕೇರಿ ತಾಲೂಕಿನ ನಿಡಸೋಶಿ ಮಠದ ಗೋಶಾಲೆ, ಬೆಳಗಾವಿ ತಾಲೂಕಿನ ಶಿವಾಪುರದ ಮುಕ್ತಿನ ಕಾಡಸಿದ್ಧೇಶ್ವರ ಸೇವಾ ಸಮಿತಿ ಗೋಶಾಲೆ, ನಿಪ್ಪಾಣಿಯ ಶಹಾಬಾದಿಮಠ ಗೋಶಾಲೆ, ಮುಕ್ತಿಮಠದ ಗೋಶಾಲೆ, ಇಂಚಲದ ಶ್ರೀ ಭಾರತಿ ಶಿವಾನಂದ ಸ್ವಾಮಿಗಳ ಗೋಶಾಲೆ, ಕಮಕಾರಟ್ಟಿಯ ಜೈನ ಸಮುದಾಯದ ಭಗವಾನ ಮಹಾವೀರ ಗೋಶಾಲೆ, ನಿಲಜಿಯ ಅಲೌಕಿಕ ಧ್ಯಾನ ಮಂದಿರದ ಗೋಶಾಲೆ, ಕಾಕತಿ ಸಮೀಪದ ಹುಣಸೆವಾರಿ ಮಠದ ಗೋಶಾಲೆ, ಮುರಗೋಡ ಶ್ರೀ ದುರದುಂಡೇಶ್ವರ ಮಠದ ಗೋಶಾಲೆ, ಬೈಲಹೊಂಗಲ ತಾಲೂಕಿನ ನಾಗನೂರು ಮಠದ ಗೋಶಾಲೆ, ಅಥಣಿ ಗೋಶಾಲೆ, ಗೋಕಾಕನ ರಾಠೊಡ ಟ್ರಸ್ಟ್‌ನ ಗೋಶಾಲೆ ಸದ್ಯ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಒಟ್ಟು ಒಂದು ಸಾವಿರಕ್ಕೂ ಹೆಚ್ಚು ಗೋವುಗಳನ್ನು ಇಲ್ಲಿ ಸಾಕಲಾಗುತ್ತಿದೆ.

ಅನುದಾನಿತ, ಖಾಸಗಿ ಗೋಶಾಲೆಗಳು :

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ವರದಪುರದಲ್ಲಿರುವ ಶ್ರೀಧರ ಸೇವಾ ಮಹಾಮಂಡಲ ಅತ್ಯಂತ ಹಳೆಯ ಗೋಶಾಲೆ ಎನಿಸಿದೆ.  ಅಬ್ಬಲಗೆರೆಯಲ್ಲಿರುವ ದೈವಜ್ಞ ಬ್ರಾಹ್ಮಣ ಗುರುಪೀಠ ಸೇವಾ ಸಮಿತಿ ನಡೆಸುತ್ತಿರುವ ಜ್ಞಾನೇಶ್ವರಿ ಗೋಶಾಲೆ 2014ರಲ್ಲಿ ಆರಂಭವಾಗಿದ್ದು 117 ಹಸುಗಳಿವೆ. ಕೋಟೆ ರಸ್ತೆಯ ಮಹಾವೀರ ಶಾಲೆ 1994ರಲ್ಲಿ ಆರಂಭವಾಗಿದೆ. ಹಾರ್ನಳ್ಳಿಯ ರಾಮಲಿಂಗೇಶ್ವರ ಗೋಶಾಲೆ 1988 ರಲ್ಲಿ ಆರಂಭವಾಗಿದ್ದು 52 ಹಸುಗಳಿವೆ. ಶಿಕಾರಿಪುರದ ಕಾಳೇನಹಳ್ಳಿಯ ರೇವಣಸಿದ್ಧ ಸ್ವಾಮಿಗಳ, ಶಿವಯೋಗಾಶ್ರಮದ ಗೋಶಾಲೆಯಲ್ಲಿ  56 ಹಸುಗಳಿವೆ. ಸಾಗರದ ಕುಂಟಗೋಡು ಹೊಸೂರಿನ ಪುಣ್ಯಕೋಟಿ ಗೋರಕ್ಷಣ ವೇದಿಕೆ ಗೋಶಾಲೆಯಲ್ಲಿ  62 ಹಸುಗಳಿವೆ. ತೀರ್ಥಹಳ್ಳಿಯ ಆರಗ ಅಂಚೆಯ ಮಜ್ಜಿಗೆಹೊಳೆ ಬಳಿ ಇರುವ ಮಲೆನಾಡು ಗಿಡ್ಡ ಗೋ ಸಂವರ್ಧನ ಪ್ರತಿಷ್ಠಾನದಲ್ಲಿ 70 ಹಸುಗಳಿವೆ.

ನಿರ್ವಹಣೆಯೇ ಸವಾಲು! :

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 20 ಖಾಸಗಿ ಗೋಶಾಲೆಗಳಿವೆ. ಪಜೀರು, ಸೌತಡ್ಕ, ಸುಬ್ರಹ್ಮಣ್ಯ ಗೋ ಶಾಲೆ ಸೇರಿ ಜಿಲ್ಲೆಯ ಮೂರು ಗೋ ಶಾಲೆಗಳಲ್ಲಿ 250ಕ್ಕಿಂತ ಅಧಿಕ ಗೋವುಗಳಿದ್ದು, ಉಳಿದ 17 ಗೋಶಾಲೆಗಳಲ್ಲಿ ಕನಿಷ್ಠ 50ಕ್ಕೂ ಅಧಿಕ ಗೋವುಗಳಿವೆ. ಸ್ಥಳೀಯ ಮಠ ಮಂದಿರ, ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಈ ಗೋಶಾಲೆಗಳ ನಿರ್ವಹಣೆ ನಡೆಯುತ್ತಿದೆ. ಸದ್ಯ ಕಾರ್ಯ ನಿರ್ವಹಿಸುತ್ತಿರುವ ಗೋಶಾಲೆಗಳ ಪೈಕಿ ಕೆಲವು ಆರ್ಥಿಕವಾಗಿ ಸಂಕಷ್ಟದಲ್ಲಿವೆ. ಕೆಲವು ಗೋಶಾಲೆಗಳಿಗೆ ಸರಕಾರ ಸಹಾಯಧನ ನೀಡುತ್ತಿದೆ.

ದೇಣಿಗೆಯಿಂದ ಪಿಂಜರಪೋಲ್: ಮೈಸೂರಿನಲ್ಲಿ  82 ವರ್ಷಗಳ ಹಿಂದೆಯೇ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪಿಂಜರಪೋಲ್‌ (ಗೋಶಾಲೆ) ತೆರೆಯಲಾಗಿದ್ದು, ಇಂದಿಗೂ ಕಾರ್ಯನಿರ್ವಹಿಸುತ್ತಾ ಬಂದಿದೆ. 1938 ರಲ್ಲಿ ಅಂದಿನ ಮಹಾರಾಜರಾದ ಜಯ ಚಾಮರಾಜೇಂದ್ರ ಒಡೆಯರ್‌ ಅವರ ದೂರದೃಷ್ಟಿಯ ಫ‌ಲವಾಗಿ ಗೋ ಶಾಲೆ ಆರಂಭಿಸಿದರು. ಕೇವಲ 5 ಹಸುಗಳಿಂದ ಆರಂಭವಾದ ಈ ಗೋ ಶಾಲೆ ಇಂದು ಪಿಂಜರಾಪೋಲ್‌ ಹೆಸರಿನಲ್ಲಿ ಬೃಹತ್‌ ಮಟ್ಟದಲ್ಲಿ ಬೆಳೆದಿದ್ದು, ಪ್ರಸ್ತುತ 4 ಸಾವಿರಕ್ಕೂ ಅಧಿಕ ಜಾನುವಾರುಗಳಿವೆ.   ಸದ್ಯಕ್ಕೆ ಇದರ ನಿರ್ವಹಣೆಯನ್ನು ಪಿಂಜರಪೋಲ್‌ ಸೊಸೈಟಿ ಮಾಡುತ್ತಿದ್ದು, ಪ್ರತಿನಿತ್ಯ ಇಲ್ಲಿನ ಜಾನುವಾರುಗಳ ನಿರ್ವಹಣೆಗೆ ಎರಡೂವರೆ ಲಕ್ಷ ವ್ಯಯವಾಗುತ್ತಿದ್ದು, ದಾನಿಗಳು, ಸಂಘ ಸಂಸ್ಥೆಗಳು ನೀಡುವ ದೇಣಿಗೆಯಿಂದ ನಡೆಸಲಾಗುತ್ತಿದೆ.

ಶತಮಾನದಂಚಿನ ಮೂರು ಗೋಶಾಲೆ: ಬಳ್ಳಾರಿ ಜಿಲ್ಲೆಯಲ್ಲಿ ಶತಮಾನದಂಚಿನಲ್ಲಿರುವ ಮೂರು ಗೋಶಾಲೆಗಳಿವೆ. ಎನ್‌ಜಿಒ ನೇತೃತ್ವದಲ್ಲಿ ನಡೆಯುತ್ತಿರುವ ಈ ಗೋಶಾಲೆಗಳಲ್ಲಿ ಗೋವುಗಳಿಗೆ ಶೆಡ್‌ ಸೇರಿ ಅಗತ್ಯ ಮೂಲಕರ್ಯಗಳನ್ನು ಕಲ್ಪಿಸಲಾಗಿದ್ದು, ಬಹುತೇಕ ಸಾರ್ವಜನಿಕರು ನೀಡುವ ದೇಣಿಗೆಯಿಂದಲೇ ನಿರ್ವಹಣೆ ಮಾಡಲಾಗುತ್ತಿದೆ. ಬಳ್ಳಾರಿ ನಗರದ ಆಂದ್ರಾಳ್‌ ರಸ್ತೆಯಲ್ಲಿರುವ ಗೋ ರಕ್ಷಣ ಕೇಂದ್ರ ಶತಮಾನದ ಅಂಚಿನಲ್ಲಿದೆ. 1932ರಲ್ಲಿ ಸ್ಥಾಪನೆಯಾದ ಈ ಗೋ ರಕ್ಷಣ ಕೇಂದ್ರವನ್ನು ಸದ್ಯ ರಾಜಸ್ಥಾನ ಸಮಾಜದವರು ನಿರ್ವಹಿಸುತ್ತಿದ್ದಾರೆ.

9 ಖಾಸಗಿ ಗೋಶಾಲೆ: ಚಿತ್ರದುರ್ಗ ಜಿಲ್ಲೆಯಲ್ಲಿರುವ 9 ಖಾಸಗಿ ಗೋಶಾಲೆ ಗಳಲ್ಲಿ ಒಟ್ಟಾರೆ 1,450 ರಾಸುಗಳನ್ನು ಸಾಕುವಷ್ಟು ಸಾಮ ರ್ಥಯವಿದೆ. ಚಿತ್ರದುರ್ಗ-ದಾವಣಗೆರೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಆದಿಚುಂಚನಗಿರಿ ಮಠದಿಂದ ನಿರ್ವಹಣೆ ಮಾಡುತ್ತಿರುವ ಚಿತ್ರದುರ್ಗದ ಕಬೀರಾನಂದ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಗೋಶಾಲೆಯಲ್ಲಿ 200 ರಾಸುಗಳನ್ನು ಸಾಕಲಾಗುತ್ತಿದೆ.

ಸ್ಥಳಾವಕಾಶದ ಅಭಾವ :

ಉಡುಪಿ ಜಿಲ್ಲೆಯಲ್ಲಿ ಪೇಜಾವರ ಮಠದ ಗೋವರ್ಧನ ಟ್ರಸ್ಟ್‌ ನಡೆಸುವ ನೀಲಾವರ ಗೋಶಾಲೆ, ಕಾರ್ಕಳ ತೆಳ್ಳಾರು ರಸ್ತೆಯ ಶ್ರೀ ವೆಂಕಟರಮಣ ಗೋಶಾಲೆ ಟ್ರಸ್ಟ್‌, ಶಿರೂರಿನ ಅಮೃತಧಾರಾ ಗೋಶಾಲೆಗಳಿವೆ. ಸರಕಾರದಿಂದ ಅನುದಾನ ಲಭಿಸುತ್ತಿದೆ. ಸೂಕ್ತ ಸ್ಥಳಾವಕಾಶದ ಅಭಾವ ಇರುವ ಕಾರಣದಿಂದಾಗಿ ರೈತರು ತಮಗೆ ಬೇಡವಾದ ಗೋವುಗಳನ್ನು ಅಲ್ಲಿಗೆ ನೀಡಿದರೆ ನಿರ್ವಹಣೆ ಸಮಸ್ಯೆಯೂ ಎದುರಾಗುವ ಸಾಧ್ಯತೆಗಳಿವೆ.

ಅನುದಾನ ಅಗತ್ಯ

ದಾವಣಗೆರೆ ತಾಲೂಕಿನ ಆವರಗೆರೆ, ಹೆಬ್ಟಾಳು ಗ್ರಾಮ ದಲ್ಲಿರುವ ಗೋಶಾಲೆ, ಹರಿಹರದ ಯಂತ್ರಪುರದ ಗೋಶಾಲೆ ಹಾಗೂ ಹೊನ್ನಾಳಿ ತಾಲೂಕಿನ ಸೂರಗೊಂ ಡನಕೊಪ್ಪದಲ್ಲಿರುವ ಗೋಶಾಲೆಗಳಲ್ಲಿ 50ಕ್ಕಿಂತ ಹೆಚ್ಚು ಹಸುಗಳು ಆಶ್ರಯ ಪಡೆದಿವೆ. ಈ ನಾಲ್ಕು ಗೋಶಾಲೆ ಗಳು ಸರಕಾರ‌ದ ಅನುದಾನ ಪಡೆಯುತ್ತಿದ್ದು ಜಗಳೂರು ತಾಲೂಕಿನ ಬಿಳಿಚೋಡು, ದೊಣ್ಣೆಹಳ್ಳಿ ಹಾಗೂ ಜಗ ಳೂರಿನಲ್ಲಿರುವ 50ಕ್ಕಿಂತ ಕಡಿಮೆ ಹಸುಗಳಿರುವ ಗೋ ಶಾಲೆಗಳು ಸಂಪೂರ್ಣವಾಗಿ ದಾನಿಗಳಿಂದ, ಪ್ರಾಣಿ ಪ್ರಿಯರಿಂದಲೇ ನಿರ್ವಹಿಸಲ್ಪಡುತ್ತಿವೆ. ಜಿಲ್ಲೆಯಲ್ಲಿರುವ ಒಟ್ಟು 7 ಗೋಶಾಲೆಗಳಲ್ಲಿ ಸರಾಸರಿ  ಸಾವಿರದಷ್ಟು ಗೋವುಗಳು ಆಶ್ರಯ ಪಡೆದಿವೆ.  ಗೋಶಾಲೆಗಳಿಗೆ ಹೆಚ್ಚಿನ ಅನುದಾನ ಕಲ್ಪಿಸಿ ಶಾಶ್ವತ ಸೌಲಭ್ಯ ಕಲ್ಪಿಸಬೇಕಾಗಿದೆ ಎಂಬುದು ಗೋಶಾಲೆ ನಿರ್ವಹಿಸುವ ಸಂಸ್ಥೆಗಳ ಅಪೇಕ್ಷೆಯಾಗಿದೆ.

ಸರಕಾರ ಗೋಶಾಲೆಯೇ ಇಲ್ಲ :

ಕಲಬುರಗಿ ಜಿಲ್ಲೆಯಲ್ಲಿ ಒಟ್ಟಾರೆ 3,87,375 ಆಕಳು ಮತ್ತು ಎತ್ತುಗಳು ಹಾಗೂ 73,644 ಎಮ್ಮೆಗಳು ಇವೆ. ಆದರೆ, ಸರಕಾರ‌ದಿಂದ ನೇರವಾಗಿ ನಿರ್ವಹಣೆಗೆ ಒಳಪಡುವ ಯಾವುದೇ ಗೋಶಾಲೆಗಳೂ ಇಲ್ಲ. ಮಠ-ಮಾನ್ಯಗಳು, ಸಂಘ-ಸಂಸ್ಥೆಗಳು ನಡೆಸುತ್ತಿರುವ 35ಕ್ಕೂ ಅಧಿಕ ಗೋಶಾಲೆಗಳು ಇವೆ. ಇವುಗಳಿಗೆ ಸರಕಾರ‌ದಿಂದ ಯಾವುದೇ ಸವಲತ್ತು ಸಮರ್ಪಕವಾಗಿ ದೊರೆಯುತ್ತಿಲ್ಲ. ಗೋಶಾಲೆಗಳ ನಿರ್ವಹಣೆಗಾಗಿ ಪಶುಸಂಗೋಪನೆ ಇಲಾಖೆಯಿಂದ ಸಹಾಯಧನ ನೀಡಲಾಗುತ್ತದೆ. ಆದರೆ, ಇದಕ್ಕಾಗಿ ಪ್ರತಿ ವರ್ಷವೂ ಸರಕಾರಿ ಕಚೇರಿಗೆ ಅಲೆಯಬೇಕು. ಇಂತಹ ತಾಪತ್ರಯದಿಂದ ಸರಕಾರ‌ಕ್ಕೆ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆಯಲ್ಲಿ ಏರಿಳಿತವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next