ಬೆಳಗಾವಿ: ಕೇಂದ್ರ ಸರಕಾರದ ಉದ್ದಿಮೆ ಭಾರತ್ ಅರ್ಥ್ ಮೂವರ್ ಲಿ., (ಬೆಮೆಲ್)ನಲ್ಲಿ ಕನ್ನಡಿಗರಿಗೆ ಆಗಿರುವ ಅನ್ಯಾಯ ವಿಧಾನಪರಿಷತ್‌ನಲ್ಲಿ ಬುಧವಾರ ಪ್ರತಿಧ್ವನಿಸಿತು.
ಕೇಂದ್ರದ ಉದ್ದಿಮೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಅನ್ಯಾಯ ಆಗಿರುವ ಬಗ್ಗೆ ಉದಯವಾಣಿ ಡಿ.10ರಂದು ಮುಖಪುಟದಲ್ಲಿ ಬೆಮೆಲ್ ಪರೀಕ್ಷೆಯಲ್ಲೂ ಕನ್ನಡಿಗರಿಗೆ ಅನ್ಯಾಯ ಎಂಬ ತಲೆಬರಹದಡಿ ವರದಿ ಪ್ರಕಟಿಸಿತ್ತು. ಶೂನ್ಯವೇಳೆಯಲ್ಲಿ ಇದನ್ನು ಉಲ್ಲೇಖೀಸಿದ ಕಾಂಗ್ರೆಸ್‌ನ ಯು.ಬಿ.ವೆಂಕಟೇಶ್, ಕೇಂದ್ರ ಸರಕಾರದ ಪ್ರತಿ ಉದ್ಯೋಗದಲ್ಲಿ ಕನ್ನಡಿಗರಿಗೆ ಕನ್ನಡ ಭಾಷೆಯಲ್ಲಿ ಪರೀಕ್ಷೆ ನಡೆಸುವುದನ್ನು ಕಡ್ಡಾಯಗೊಳಿಸುವಂತೆ ರಾಜ್ಯ ಸರಕಾರವು ಶಿಫಾರಸು ಮಾಡಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಕೆಜಿಎಫ್, ಬೆಂಗಳೂರು ಮತ್ತು ಮೈಸೂರಿನಲ್ಲಿ ಬೆಮೆಲ್ ಘಟಕಗಳಿದ್ದು, ಅದರಲ್ಲಿನ 119 ಖಾಲಿ ಹುದ್ದೆಗಳಿಗೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪರೀಕ್ಷೆ ನಡೆಸಿ, ಕನ್ನಡಿಗರನ್ನು ದೂರ ಇಡಲಾಗಿತ್ತು. ಈ ಸಂಬಂಧ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಮತ್ತು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಬೆಮೆಲ್ ಆಡಳಿತ ಮಂಡಳಿಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಸರೋಜಿನಿ ಮಹಿಷಿ ವರದಿಯನ್ನು 1990ರ ನ. 30ರಂದು ಅಂಗೀಕರಿಸಿ, ಅನುಮೋದಿಸಿ ಆದೇಶ ಹೊರಡಿಸಿ 33 ವರ್ಷಗಳು ಕಳೆದಿವೆ. ಆದರೂ ಅನುಷ್ಠಾನಕ್ಕೆ ಗಂಭೀರ ಪ್ರಯತ್ನಗಳು ನಡೆಯದಿರುವುದು ವಿಷಾದನೀಯ. ಕೇಂದ್ರದ ಅಡಿಯ ಬಹುತೇಕ ಉದ್ದಿಮೆಗಳು ಹೊರರಾಜ್ಯದವರಿಗೆ ಉದ್ಯೋಗ ನೀಡುತ್ತಿದ್ದು, ರಾಜ್ಯದ ನೆಲ, ಜಲ, ವಿದ್ಯುತ್, ರಸ್ತೆ ಮತ್ತಿತರ ಸವಲತ್ತುಗಳನ್ನು ಮಾತ್ರ ಬಳಸಿಕೊಂಡು ಕನ್ನಡಿಗರಿಗೆ ಅನ್ಯಾಯ ಎಸಗುತ್ತಿರುವುದು ದುರದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರಕಾರವು ಕೂಡಲೇ ಕೇಂದ್ರ ಸರಕಾರದ ಪ್ರತಿ ಉದ್ಯೋಗದಲ್ಲಿ ಕನ್ನಡಿಗರಿಗೆ ಕನ್ನಡ ಭಾಷೆಯಲ್ಲಿ ಪರೀಕ್ಷೆ ನಡೆಸುವುದನ್ನು ಕಡ್ಡಾಯಗೊಳಿಸುವಂತೆ ರಾಜ್ಯ ಸರಕಾರವು ಶಿಫಾರಸು ಮಾಡಬೇಕು. ಅಲ್ಲದೆ, ಸರೋಜಿನಿ ಮಹಿಷಿ ವರದಿ ಅನ್ವಯ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.