Advertisement

ಸಂಘ -ಸಂಸ್ಥೆಗಳಿಂದ ವಿವಿಧೆಡೆ ಮಳೆಕೊಯ್ಲು ಅಳವಡಿಕೆ

11:32 PM Aug 14, 2019 | mahesh |

ಬಂಟ್ವಾಳದ ಲಯನ್ಸ್‌ ಕ್ಲಬ್‌ ಆವರಣದಲ್ಲಿ ಮಳೆಕೊಯ್ಲು ಅಳವಡಿಕೆ ಮಾಡಲಾಗಿದೆ. ಜತೆಗೆ ಈಗಾಗಲೇ ನಾಲ್ಕು ಕಡೆಗಳಲ್ಲಿ ಇದರ ಬಗ್ಗೆ ಮಾಹಿತಿ ಕಾರ್ಯಕ್ರಮ ಆಯೋಜಿಸಿ ಇನ್ನಷ್ಟು ಜನರನ್ನು ಹುರಿದುಂಬಿಸುವ ಕೆಲಸವನ್ನೂ ಲಯನ್ಸ್‌ ಸದಸ್ಯರು ಮಾಡುತ್ತಿದ್ದಾರೆ.

Advertisement

‘ಉದಯವಾಣಿ’ ಮಳೆಕೊಯ್ಲು ಅಭಿಯಾನ ನೋಡಿದ ಅಧ್ಯಕ್ಷರು ಲಯನ್ಸ್‌ ಕ್ಲಬ್‌ ಕಚೇರಿ ಆವರಣದಲ್ಲಿಯೂ ಅದನ್ನು ಅಳವಡಿಸುವ ಬಗ್ಗೆ ಕ್ಲಬ್‌ನ ಸಭೆಯಲ್ಲಿ ಪ್ರಸ್ತಾವಿಸಿದರು. ಇದಕ್ಕೆ ಸದಸ್ಯರ ಸಮ್ಮತಿಯೂ ದೊರೆತ ಹಿನ್ನೆಲೆಯಲ್ಲಿ ಎಲ್ಲರೂ ಜತೆ ಸೇರಿ ಮಳೆಕೊಯ್ಲು ಅಳವಡಿಸಿದ್ದಾರೆ. ಲಯನ್ಸ್‌ ಜಿಲ್ಲೆ 317ಡಿಯ ಗವರ್ನರ್‌ ರೊನಾಲ್ಡ್ ಗೋಮ್ಸ್‌ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಅಳವಡಿಕೆ ಕಾರ್ಯ ನಡೆದಿದೆ. ಈಗಾಗಲೇ ನಾಲ್ಕು ಕಡೆಗಳಲ್ಲಿ ಮಳೆಕೊಯ್ಲು ಬಗ್ಗೆ ಮಾಹಿತಿ ಕಾರ್ಯಾಗಾರಗಳನ್ನು ಏರ್ಪಡಿಸಿ ಇನ್ನಷ್ಟು ಜನರನ್ನು ಅಳವಡಿಸಲು ಪ್ರೇರೇಪಿಸಿದೆ. ಅಲ್ಲದೆ, ಎರಡು ಕಡೆಗಳಲ್ಲಿ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಮುಂದೆಯೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎನ್ನುತ್ತಾರೆ ಬಂಟ್ವಾಳ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಶ್ರೀನಿವಾಸ್‌ ಮೆಲ್ಕಾರ್‌.

ಬೆಳ್ತಂಗಡಿ ಬಾಂದಾರಿನ ಅಪ್ಪಣ್ಣ ಮೊಗ್ರು ಮತ್ತು ಕಣಿಯೂರಿನ ಪಿಲಿಗೂಡು ಕಾಳಿಮುತ್ತು ಅವರ ಮನೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಳೆಕೊಯ್ಲು ಅಳವಡಿಸಲಾಯಿತು

ಯೋಜನೆಯ ಪದಾಧಿಕಾರಿಗಳು ಈ ಹಿಂದೆ ಕೆಲವೊಂದು ಕಡೆಗಳಲ್ಲಿ ಮಳೆಕೊಯ್ಲು ಅಳವಡಿಸಿಕೊಟ್ಟಿದ್ದರು. ಆದರೆ ಇದೀಗ ‘ಉದಯವಾಣಿ’ಯ ಮನೆ ಮನೆಗೆ ಮಳೆಕೊಯ್ಲು ಅಭಿಯಾನದಿಂದ ಪ್ರೇರಣೆಗೊಂಡು ಇನ್ನಷ್ಟು ಮನೆಗಳಲ್ಲಿ ಮಳೆಕೊಯ್ಲು ಅಳವಡಿಕೆಯನ್ನು ಮುಂದುವರಿಸಲು ಯೋಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದಷ್ಟೇ ಈ ಎರಡು ಮನೆಗಳಲ್ಲಿ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಡಲಾಗಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ಮಳೆಕೊಯ್ಲು ಅಳವಡಿಕೆ ಕಾರ್ಯ ಮುಂದುವರಿಯಲಿದೆ ಎಂದು ಯೋಜನೆ ಮೇಲ್ವಿಚಾರಕ ಮಾಧವ ತಿಳಿಸಿದ್ದಾರೆ.

ಡ್ರಮ್‌ನ ತಳಭಾಗಕ್ಕೆ ಜಲ್ಲಿ, ಮರಳು, ಇದ್ದಿಲು ಹಾಕಿ, ಮೇಲ್ಭಾಗಕ್ಕೆ ಮನೆಯ ಛಾವಣಿ ನೀರನ್ನು ಬಿಟ್ಟು ಶುದ್ಧೀಕೃತ ನೀರನ್ನು ಬಾವಿಗೆ ಬಿಡುವ ಸರಳ ವಿಧಾನದಲ್ಲಿಯೇ ಮಳೆಕೊಯ್ಲು ಅಳವಡಿಸಲಾಗಿದೆ.

ಜಾಗೃತಿಗೆ ಯುವಪೀಳಿಗೆ ಮುಂದಾಗಲಿ

ಉದಯವಾಣಿಯಲ್ಲಿ ಪ್ರಕಟವಾಗುವ ಮನೆ ಮನೆಗೆ ಮಳೆಕೊಯ್ಲು ಅಭಿಯಾನ ಸ್ವಾಗತಾರ್ಹ. ಮಳೆನೀರನ್ನು ಪೋಲು ಮಾಡಲು ಬಿಡದೆ ಹಿಡಿದಿಟ್ಟುಕೊಂಡರೆ ಬೇಸಗೆಯಲ್ಲಿ ನೀರಿನ ಸಮಸ್ಯೆ ತಪ್ಪಿಸಬಹುದು. ಈ ಜಾಗೃತಿ ಕಾರ್ಯಕ್ಕೆ ಯುವಪೀಳಿಗೆಯೂ ಮುಂದೆ ಬರವೇಕು.
– ಜ್ಯೋತಿ ಸತೀಶ್‌ ಶೆಟ್ಟಿ, ಪಾದೂರು

ಅಭಿಯಾನ ಯಶಸ್ವಿಯಾಗಲಿ

ಉದಯವಾಣಿ ಸುದಿನದಲ್ಲಿ ಪ್ರಕಟವಾಗುವ ಮನೆ ಮನೆಗೆ ಕೊಯ್ಲ ಅಭಿಯಾನದ ಮುಖೇನ ಭವಿಷ್ಯದಲ್ಲಿ ನೀರಿನ ಸಮಸ್ಯೆ ಬಗ್ಗೆ ಎಚ್ಚರಿಕೆ ನೀಡಿದೆ. ಈ ಅಭಿಯಾನ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.
– ಹರಿಯಪ್ಪ ಸಾಲ್ಯಾನ್‌, ಸೇವಂತಿಗುತ್ತು ಕಲ್ಲಾಪು
Advertisement
Advertisement

Udayavani is now on Telegram. Click here to join our channel and stay updated with the latest news.

Next