ಬೆಂಗಳೂರು : ಕೋರ್ಟ್ ಗೆ ಹೋಗೋದು ಅಪರಾಧಾನಾ? ಅಂದು ನಾವು ಆರು ಜನ ಕೋರ್ಟ್ ಗೆ ಅರ್ಜಿ ಹಾಕಿದ್ವಿ, ಉಳಿದವ್ರು ಬೇರೆ ದಿನ ಅರ್ಜಿ ಹಾಕ್ತಾರೆ ಅಂತ ಇತ್ತು, ಆದ್ರೆ ಮಾಧ್ಯಮಗಳಲ್ಲಿ ಬಂತಲ್ಲ ಅದಕ್ಕೆ ಸುಮ್ನಾಗಿರಬಹುದು. ನಮ್ಮನ್ನು ಡ್ಯಾಮೇಜ್ ಮಾಡ್ಬೇಕು, ಸಚಿವ ಸ್ಥಾನದಿಂದ ರಾಜೀನಾಮೆ ಕೊಡಿಸ್ಬೇಕು ಅಂತ ಸಂಚು ನಡೆದಿದೆ ಎಂದು ಎಸ್ ಟಿ ಸೋಮಶೇಖರ್ ಹೇಳಿಕೆ ನೀಡಿದ್ದಾರೆ.
ನಾವು ಕೋರ್ಟ್ ಗೆ ಹೋಗಿದ್ದು ನಮ್ಮ ವಿರುದ್ಧ ತೇಜೋವಧೆ ಮಾಡ್ತಾರೆ ಅಂತ. ಕಾಂಗ್ರೆಸ್ ಪಕ್ಷದವರಿಗೆ ನೈತಿಕತೆ ಇಲ್ಲ, ನಮಗೆ ಏನ್ ಕೇಳೋದು ಅವ್ರು? ಕಾಂಗ್ರೆಸ್ ಪಕ್ಷದವರ ತಟ್ಟೆಯಲ್ಲಿ ಹೆಗ್ಗಣ ಇದೆ, ನಮ್ಮ ತಟ್ಟೆಯಲ್ಲೇನು ನೋಡೋದು ಅವ್ರು? ನಾವು ಕೋರ್ಟ್ ಗೆ ಹೋದ್ರೆ ಅಪರಾಧಿಗಳಾಗಿಬಿಟ್ವಾ? ಎಂದು ಪ್ರಶ್ನಿಸಿದ್ದಾರೆ.
ಸಿಡಿ ಮಾಡಿಸಿದ್ದು ಕಾಂಗ್ರೆಸ್ ಪಕ್ಷದವರೇ, 100% ಸಿಡಿ ಮಾಡಿದ್ದೇ ಕಾಂಗ್ರೆಸ್ ಪಕ್ಷದವರು, ಇನ್ಯಾರು ಮಾಡಿರ್ತಾರೆ? ಇಂಥ ಮನೆಹಾಳ ತೇಜೋವಧೆ ಕೆಲಸ ಅವ್ರೇ ಮಾಡೋದು ಅವರೇ. ನಾನು 20 ವರ್ಷ ಕಾಂಗ್ರೆಸ್ ಪಕ್ಷದಲ್ಲೇ ಇದ್ದೆ, ಅವ್ರು ಏನೇನು ಮಾಡ್ತಾರೆ ಅಂತ ನನಗೆ ಗೊತ್ತಿದೆ ಎಂದರು.
ಸಿಡಿ ಪ್ರಕರಣವನ್ನು ಸಿಬಿಐಗೆ ಕೊಡಲಿ ಅನ್ನೋದು ನಮ್ಮ ಒತ್ತಾಯ, ಸಿಬಿಐ ತನಿಖೆಯಿಂದ ಎಲ್ಲ ಆಚೆ ಬರುತ್ತೆ, ರಾಜಕೀಯವಾಗಿ ಸವಾಲು ಹಾಕಲಿ ಎದುರಿಸ್ತೇವೆ, ತಾಕತ್ತಿದ್ರೆ ನನ್ ವಿರುದ್ಧ, ರಮೇಶ್ ಜಾರಕಿಹೊಳಿ ವಿರುದ್ಧ ಸ್ಪರ್ಧಿಸಲಿ, ಅದನ್ನು ಬಿಟ್ಟು ಸಿಡಿ ರಾಜಕಾರಣ ಮಾಡೋದು ಸರಿಯಲ್ಲ ಎಂದು ಕಿಡಿ ಕಾರಿದರು.
ದಿನೇಶ್ ಕಲ್ಲಳ್ಳಿ ದೂರು ವಾಪಸ್ ತೆಗೆದುಕೊಂಡ ವಿಚಾರವಾಗಿ ಮಾತನಾಡಿದ, ಸೋಮಶೇಖರ್, ರಮೇಶ್ ಜಾರಕಿಹೊಳಿಗೆ, ಅವ್ರ ಕುಟುಂಬಕ್ಕೆ ಆದ ನೋವು ವಾಪಸಾಗುತ್ತಾ? ರಾಜಕೀಯ ಮಾನ ಮರ್ಯಾದೆ ಹೋಯ್ತು, ಅದು ವಾಪಸ್ ಬರಲ್ಲ, ನಾವು ಮೈತ್ರಿ ಸರ್ಕಾರ ತೆಗೆದಿದೀವಿ ಅಂತ ನಮ್ಮನ್ನು ಟಾರ್ಗೆಟ್ ಮಾಡಿದ್ದಾರೆ ಎಂದಿದ್ದಾರೆ.