ಶಿವಮೊಗ್ಗ: ಮಧ್ಯ ಕರ್ನಾಟಕದ ಜನರ ಜೀವನಾಡಿ ಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘದಿಂದ ಗುರುವಾರ ಬಾಗಿನ ಅರ್ಪಿಸಲಾಯಿತು. ಬಾಗಿನ ಅರ್ಪಿಸಿದ ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿ, ರೈತರ ಜೀವನಾಡಿಯಾದ ಭದ್ರಾ ಅಣೆಕಟ್ಟೆಯಲ್ಲಿ ಕಳೆದ ವರ್ಷ ಈ ಸಂದರ್ಭದಲ್ಲಿ 155ಅಡಿ ಮಾತ್ರ ನೀರಿತ್ತು. ನಂತರ ದಿನಗಳಲ್ಲಿ ಭರ್ತಿಯಾಗಿದೆ.
ಈ ವರ್ಷ ಬಹಳ ಬೇಗನೆ ಅಣೆಕಟ್ಟು ಭರ್ತಿಯಾಗಿರುವುದು ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಂತಸ ತಂದಿದೆ. ಜಲಾಶಯದ ನೀರು ಬಳಸಿಕೊಂಡು ಕಳೆದ ವರ್ಷ ಸಹ ಸುಮಾರು 2.60 ಲಕ್ಷ ಎಕರೆಯಲ್ಲಿ ಭತ್ತ, ಮೆಕ್ಕೆಜೋಳ ಇತ್ಯಾದಿ ಬೆಳೆಗಳನ್ನು 2 ಬಾರಿ ಬೆಳೆದಿದ್ದಾರೆ. ಈ ವರ್ಷವೂ 2 ಬೆಳೆ ಬೆಳೆಯಬಹುದಾಗಿದೆ. ಅಲ್ಲದೆ ಅಡಿಕೆ, ತೆಂಗು ತೋಟಗಳಿಗೂ ಈ ನೀರು ಬಳಸಬಹುದಾಗಿದೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆಗೆ ತುಂಗಾ ನದಿಯಿಂದ 17.4 ಟಿ.ಎಂ.ಸಿ. ಭದ್ರಾ ಅಣೆಕಟ್ಟೆಯಿಂದ 12.5 ಟಿ.ಎಂ.ಸಿ ಒಟ್ಟು 29.9 ಟಿ.ಎಂ.ಸಿ. ನೀರು ಹರಿಸಲು ಸರ್ಕಾರದಿಂದ ಡಿಪಿಆರ್ ಆಗಿದೆ. ಹೋದ ವರ್ಷ ಮತ್ತು ಈ ವರ್ಷ ಭದ್ರಾ ಮೇಲ್ದಂಡೆಗೆ ನೀರು ಹರಿಸಲಾಗುತ್ತಿದೆ. ಈ ಯೋಜನೆ ಪೂರ್ಣಗೊಂಡ ನಂತರ ಪ್ರತಿದಿನ 2,800 ಕ್ಯೂಸೆಕ್ ನೀರನ್ನು ಹರಿಸಬೇಕಾಗುತ್ತದೆ. ಅಣೆಕಟ್ಟೆ ತುಂಬಿದಾಗ ನೀರು ಹರಿಸಿದರೆ ತೊಂದರೆ ಇಲ್ಲ. ಹಿಂದಿನ ಕೆಲವು ವರ್ಷಗಳಲ್ಲಿ ಅಣೆಕಟ್ಟೆ ಅರ್ಧ ಸಹ ಭರ್ತಿಯಾಗಿರದ ಉದಾಹರಣೆಗಳಿವೆ. ಈ ಸಂದರ್ಭದಲ್ಲಿ ಭದ್ರಾ ನದಿಯಿಂದ 12.5 ಟಿಎಂಸಿ ನೀರನ್ನು ಹರಿಸಿದರೆ ಭದ್ರಾ ಅಣೆಕಟ್ಟೆ ಕೆಳಭಾಗದ ಕೆಲವು ಪಟ್ಟಣ ಮತ್ತು ಹಳ್ಳಿಗಳ ಜನರಿಗೆ ಕುಡಿಯುವ ನೀರು ಮತ್ತು ಬೆಳೆದು ನಿಂತಿರುವ ದೀರ್ಘಾವಧಿ ಬೆಳೆಗಳಾದ ಅಡಿಕೆ, ತೆಂಗು ಸಹ ನೀರಿಲ್ಲದೆ ಒಣಗಿ ಹೋಗಿ ಮರ ಕಡಿಯುವ ಸಂದರ್ಭ ಎದುರಾಗಬಹುದು ಎಂದರು.
ಬಯಲು ಸೀಮೆಗೆ ನೀರು ಹರಿಸುವುದಕ್ಕೆ ನಮ್ಮ ವಿರೋಧವಿಲ್ಲ. ತುಂಗಾ ನದಿಯಿಂದ ಯಥೇಚ್ಚವಾಗಿ ನೀರು ಸಮುದ್ರ ಸೇರುತ್ತದೆ. ಆದ್ದರಿಂದ ಈ ಯೋಜನೆಗೆ ಬೇಕಾಗಿರುವ ನೀರನ್ನು ಭದ್ರಾ ಅಣೆಕಟ್ಟೆಯ ಬದಲಾಗಿ ಸಂಪೂರ್ಣ 29.9 ಟಿಎಂಸಿ ನೀರನ್ನು ತುಂಗಾ ನದಿಯಿಂದಲೇ ಎತ್ತಿಕೊಡಬೇಕು. ಈ ಬಗ್ಗೆ ಸರ್ಕಾರ ತುಂಗಾ ನದಿಯಿಂದ ಹೆಚ್ಚುವರಿಯಾಗಿ 12.5ಟಿ.ಎಂ.ಸಿ. ನೀರೆತ್ತಲು ಹೊಸದಾಗಿ ಡಿಪಿಆರ್ ಮಾಡಬೇಕು ಎಂದರು.
ಈಗಿನ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಹಿಂದೆ ನೀರಾವರಿ ಸಚಿವರಾಗಿದ್ದಾಗ ಭೇಟಿ ಮಾಡಿ ಈ ವಿಚಾರವನ್ನು ಮನವರಿಕೆ ಮಾಡಿಕೊಡಲಾಗಿತ್ತು. ಈಗ ಅವರೇ ಮುಖ್ಯಮಂತ್ರಿಗಳಾಗಿರುವುದರಿಂದ ಅನುಕೂಲವಾಗುತ್ತದೆ. ಆದ್ದರಿಂದ ಎಲ್ಲಾ ಪಕ್ಷ ಭೇದ ಮರೆತು ಸಭೆ ಕರೆದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಲು ರೈತ ಸಂಘ ಒತ್ತಾಯಿಸಲಿದೆ ಎಂದರು.
ಈ ವಿಷಯದಲ್ಲಿ ಬಯಲು ಸೀಮೆಯ ಶಾಸಕರು, ಲೋಕಸಭಾ ಸದಸ್ಯರು ಆಸಕ್ತಿ ವಹಿಸುತ್ತಾರೆ. ಅದೇ ರೀತಿ ಅಚ್ಚುಕಟ್ಟು ವ್ಯಾಪ್ತಿಯ ಶಿವಮೊಗ್ಗ, ದಾವಣಗೆರೆ, ಬಳ್ಳಾರಿ ಜಿಲ್ಲೆಯ ಶಾಸಕರು, ಲೋಕಸಭಾ ಸದಸ್ಯರು, ಜನ ಪ್ರತಿನಿ ಧಿಗಳು ಆಸಕ್ತಿ ವಹಿಸಿ ಭದ್ರಾ ಅಣೆಕಟ್ಟೆಯ ಬದಲಾಗಿ ತುಂಗಾ ನದಿಯಿಂದಲೇ ನೀರೆತ್ತಲು ಹೊಸದಾಗಿ ಡಿಪಿಆರ್ ಮಾಡಲು ಒತ್ತಾಯಿಸಬೇಕು ಎಂದರು.