Advertisement

ಯಾರು ಏನೇ ಹೇಳಲಿ, ಜನರಿಗೆ ಸುಲಭವಾಗಿ ಸಿಗೋ ಸಿಎಂ ನಾನು

06:00 AM Dec 10, 2018 | Team Udayavani |

ಬೆಳಗಾವಿ: “ಸಮ್ಮಿಶ್ರ ಸರ್ಕಾರದ ಆರು ತಿಂಗಳ ಸಾಧನೆ ಬಗ್ಗೆ ಬಿಜೆಪಿಯವರು ರಸ್ತೆಯಲ್ಲಿ ನಿಂತು ದೂರುವುದು ಬೇಡ. ಅಧಿವೇಶನದಲ್ಲಿ ಬಂದು ಮಾತನಾಡಲಿ, ಚರ್ಚೆಗೆ ನಾನು ಸಿದ್ಧನಿದ್ದೇನೆ”ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಮಾತುಗಳಿವು.

Advertisement

ಈ ಹಿಂದೆ ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಬೆಳಗಾವಿಯಲ್ಲಿ ಅಧಿವೇಶನ ಎದುರಿಸಿದ್ದ ಎಚ್‌.ಡಿ.ಕುಮಾರಸ್ವಾಮಿಯವರು ಹನ್ನೆರಡು ವರ್ಷಗಳ ನಂತರ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಚೊಚ್ಚಲ ಅಧಿವೇಶನಕ್ಕೆ ಸಜ್ಜಾಗಿದ್ದಾರೆ. ಈ ಸಂದರ್ಭದಲ್ಲಿ “ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, “ನಾಡಿನ ಜನರ ಅಭಿವೃದ್ಧಿಗಾಗಿ ಆರು ತಿಂಗಳಿನಿಂದ ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತಿದ್ದೇನೆ. ನಮ್ಮ ಸರ್ಕಾರದ ಸಾಧನೆ ತೆರೆದ ಪುಸ್ತಕ. ಬಿಜೆಪಿಯವರ ಬಳಿ ಮೆಟೀರಿಯಲ್ಲೇ ಇಲ್ಲ. ಸುಖಾ ಸುಮ್ಮನೆ ಆರೋಪ ಮಾಡುತ್ತಾರೆ. ನಾನು ಸಾಕಷ್ಟು ತಾಳ್ಮೆಯಿಂದ ಇದ್ದೇನೆ. ಎಲ್ಲೆ ಮೀರಿದರೆ ಹೇಗೆ ತಿರುಗೇಟು ಕೊಡಬೇಕೋ ಹಾಗೆಯೇ ಕೊಡುತ್ತೇನೆ. ಯಾರ್ಯಾರ ಕಾಲದಲ್ಲಿ ಏನೇನಾಗಿದೆ ಎಂಬುದರ ಬಗ್ಗೆ ಬಿಜೆಪಿಯವರು ಚರ್ಚೆಗೆ ಬರಲಿ ಎಂದು ಪಂಥಾಹ್ವಾನ ನೀಡಿದ್ದಾರೆ.

ಸಂದರ್ಶನದ ಸಾರಾಂಶ
ಸುವರ್ಣಸೌಧದಲ್ಲಿ ಸಮ್ಮಿಶ್ರ ಸರ್ಕಾರದ ಮೊದಲ ಅಧಿವೇಶನಕ್ಕೆ ತಯಾರಾಗಿದ್ದೀರಾ?

ಬೆಳಗಾವಿ ಅಧಿವೇಶನ ಹೊಸದೇನಲ್ಲ. ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬ ಕಾಳಜಿಯಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಸುವ ತೀರ್ಮಾನ ಕೈಗೊಂಡಿದ್ದೇ ನಾನು. ಸುವರ್ಣಸೌಧ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು ನಾನೇ. ಹೀಗಾಗಿ, ಈ ಭಾಗದಲ್ಲಿ ಅಧಿವೇಶನ ನಡೆಸುವ ನನ್ನ ಕನಸು ನನಸಾಗಿದೆ. ಅಧಿವೇಶನದಲ್ಲಿ ರಾಜಕೀಯ ಬೆರೆಸದೆ ನೈಜ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳುವಂತಾದರೆ ಅಧಿವೇಶನಕ್ಕೂ ಅರ್ಥ ಬರುತ್ತದೆ.

ಉತ್ತರ ಕರ್ನಾಟಕ ನಿರ್ಲಕ್ಷ್ಯ ಮಾಡಿದ್ದೀರಿ ಎಂಬ ಆರೋಪ ನಿಮ್ಮ ಮೇಲಿದೆಯಲ್ಲಾ?
ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಯಲ್ಲಿ ತಾರತಮ್ಯ ನಿವಾರಿಸಲು ಡಾ.ಡಿ.ಎಂ.ನಂಜುಂಡಪ್ಪ ವರದಿ ಅನುಷ್ಠಾನಗೊಳಿಸಿದ್ದು ನಾನು. ಉತ್ತರ ಕರ್ನಾಟಕ ಭಾಗದ ಜನರು ಹಾಗೂ ಅಭಿವೃದ್ಧಿ ಬಗೆಗಿನ ನನ್ನ ಕಾಳಜಿ ಪ್ರಶ್ನಾತೀತ. ಅದಕ್ಕೆ ಬಿಜೆಪಿಯವರ ಸರ್ಟಿಫಿಕೇಟ್‌ ಬೇಕಿಲ್ಲ.

ಅಧಿವೇಶನದಲ್ಲಿ ಪ್ರತಿಪಕ್ಷ ಬಿಜೆಪಿಯವರು ಸರ್ಕಾರದ ವಿರುದ್ಧ ಮುಗಿಬೀಳಲು ಸಜ್ಜಾಗಿದ್ದಾರಲ್ಲಾ?
ಆಗಲಿ, ನಾನಂತೂ ಚರ್ಚೆಗೆ ಸಿದ್ಧ. ಅವರು ಯಾವುದೇ ವಿಷಯದ ಬಗ್ಗೆ ಮಾತನಾಡಲಿ. ಸರ್ಕಾರದ ಸಾಧನೆ ಬಗ್ಗೆ ವಾಸ್ತವಾಂಶದ ಮಾಹಿತಿ ಜತೆ ಬರಲಿ ಎಂದಷ್ಟೇ ಹೇಳುತ್ತೇನೆ.

Advertisement

ಆರು ತಿಂಗಳಾದರೂ ಸರ್ಕಾರವೇ ಟೇಕಾಫ್ ಆಗಿಲ್ಲ ಅಂತಾರಲ್ಲಾ?
ರೈತರ ಸಾಲಮನ್ನಾ ವಿಚಾರದಲ್ಲಿ ಕೊಟ್ಟ ಮಾತಿನಂತೆ “ಋಣಮುಕ್ತ ಪತ್ರ’ ವಿತರಿಸಲಾಗಿದೆ. ಬೀದಿ ವ್ಯಾಪಾರಿಗಳನ್ನು ಮೀಟರ್‌ ಬಡ್ಡಿದಂಧೆಕೋರರಿಂದ ರಕ್ಷಿಸಲು ಬಡವರ ಬಂಧು ಯೋಜನೆ ಜಾರಿಗೊಳಿಸಲಾಗಿದೆ. ಮಹಿಳಾ ಸ್ವಸಹಾಯ ಸಂಘಗಳಿಗೆ ನೆರವು ನೀಡಲು ಕಾಯಕ ಯೋಜನೆ ರೂಪಿಸಲಾಗಿದೆ. ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ ಅನುಷ್ಠಾನಗೊಂಡಿದೆ. ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಫೆರಿಫ‌ರಲ್‌ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಎಲಿವೇಟೆಡ್‌ ರಸ್ತೆ ನಿರ್ಮಾಣ, ಮೆಟ್ರೋ ಎರಡನೇ ಹಂತ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಹಕ್ಕು ಮೇಕೆದಾಟು ಯೋಜನೆಗೆ ಕೇಂದ್ರದಿಂದ ಅನುಮತಿ ಪಡೆದುಕೊಳ್ಳಲಾಗಿದೆ. ಕೊಡಗು ಸಂತ್ರಸ್ತರಿಗೆ ಆರು ತಿಂಗಳಲ್ಲಿ ಸುಸಜ್ಜಿತ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇವೆಲ್ಲವೂ ಅಭಿವೃದ್ಧಿಯಲ್ಲವೇ?

ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿಲ್ಲ ಎಂಬ ಆರೋಪ ಇದೆಯಲ್ಲಾ?
ಕಬ್ಬು ಬೆಳೆಗಾರರಿಗೆ ಎಫ್ಆರ್‌ಪಿ ದರ ಕೊಡಿಸಲು ಸರ್ಕಾರ ಬದ್ಧವಿದೆ, ಅದಕ್ಕಾಗಿ ಕ್ರಮ ಸಹ ಕೈಗೊಳ್ಳಲಾಗಿದೆ. ರೈತರು ಹಾಗೂ ಕಾರ್ಖಾನೆ ಮಾಲೀಕರು ಮಾಡಿಕೊಂಡಿರುವ ಮೌಖೀಕ ಒಪ್ಪಂದಕ್ಕೆ ಸರ್ಕಾರ ಹೊಣೆಯಾಗಲು ಸಾಧ್ಯವೇ? ಒಂದೊಮ್ಮೆ ರೈತರು ಕಾರ್ಖಾನೆ ಮಾಲೀಕರ ಜತೆ ಮಾಡಿಕೊಂಡಿರುವ ಒಪ್ಪಂದಕ್ಕೆ ಸಂಬಂಧಿಸಿ ದಾಖಲೆ ಇದ್ದರೆ ತರಲಿ. ಅದರ ಮೇಲೆ ಕ್ರಮ ಕೈಗೊಳ್ಳಬಹುದು.

ಬರಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಆಗಿದೆಯಾ?
ಬರಪೀಡಿತ ತಾಲೂಕುಗಳಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳಲಾಗಿದೆ. ಕೇಂದ್ರದ ನೆರವಿಗಾಗಿ ಕಾಯದೇ ರಾಜ್ಯ ಸರ್ಕಾರದಿಂದಲೇ ಹಣ ವೆಚ್ಚ ಮಾಡಲಾಗಿದೆ. ವಾಸ್ತವಾಂಶ ಮುಚ್ಚಿಟ್ಟು ಆರೋಪ ಮಾಡಲಾಗುತ್ತಿದೆ.

ಕಬ್ಬು ಬೆಳೆಗಾರರ ಸಮಸ್ಯೆ ಯಾಕೆ ಬಿಗಡಾಯಿಸಿತು?
ಬಿಗಡಾಯಿಸಿಲ್ಲ, ಅದರ ಹಿಂದೆ ಬೇರೆಯದೇ ಷಡ್ಯಂತ್ರವಿದೆ. ಆದರೆ, ಕಬ್ಬು ಬೆಳೆಗಾರರು ಸೇರಿದಂತೆ ರೈತರ ವಿಚಾರದಲ್ಲಿ ಅಸಡ್ಡೆ ತೋರಿಲ್ಲ. ಕಬ್ಬು ಬೆಳೆಗಾರರು ಬಾಕಿ ಪಾವತಿಗಾಗಿ ರಸ್ತೆಗೆ ಇಳಿಯವುದು ಬೇಡ. ದುಡ್ಡು ಕೊಡಬೇಕಾದ ಸಕ್ಕರೆ ಕಾರ್ಖಾನೆಯ ಮುಂದೆ ಹೋಗಿ ಧರಣಿ ಕುಳಿತುಕೊಳ್ಳಲಿ. ಸರ್ಕಾರದಿಂದ ನ್ಯಾಯ ಪಡೆದುಕೊಳ್ಳಲು ವಿಧಾನಸೌಧಕ್ಕೆ ಬಂದು ಮಾತನಾಡಲಿ. ಬಿಜೆಪಿಯವರು ರೈತರನ್ನು ಎತ್ತಿಕಟ್ಟುವುದು ಬಿಟ್ಟು ತಮ್ಮ ಪಕ್ಷದ ಶಾಸಕರು, ಮಾಜಿ ಸಚಿವರ ಮಾಲೀಕತ್ವದ ಕಾರ್ಖಾನೆಗಳಿಂದ ಬರಬೇಕಾದ ಬಾಕಿ ಕೊಡಿಸಿ ಮಾತನಾಡಲಿ.

ಸಿಎಂ “ಟೆಂಪಲ್‌ ರನ್‌’ನಲ್ಲೇ ಇದ್ದಾರೆ ಎಂಬ ಆರೋಪವೂ ಇದೆಯಲ್ಲಾ?
ಆ ರೀತಿ ಆರೋಪ ಮಾಡುವವರು ಕ್ಷುಲ್ಲಕ ಮನಸ್ಸಿನವರು. ನಮ್ಮ ಕುಟುಂಬಕ್ಕೆ ಮೊದಲಿನಿಂದಲೂ ದೈವ ನಂಬಿಕೆ. ಇಡೀ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದೇ ನಾನು ದೇವರ ಬಳಿ ಹೋಗಿ ಪ್ರಾರ್ಥಿಸುತ್ತೇನೆ. ಒಂದು ಮಾತನ್ನು ಬಿಜೆಪಿಯವರಿಗೆ ಹೇಳಲು ಬಯಸುತ್ತೇನೆ. ಇದನ್ನು ಹೆಚ್ಚುಗಾರಿಕೆಗೆ ಹೇಳುತ್ತಿಲ್ಲ. ಜನರಿಗೆ ಸುಲಭವಾಗಿ ಸಿಗುವ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮುಖ್ಯಮಂತ್ರಿ ನಾನು. ಇದಕ್ಕೆ ಪುರಾವೆ ಬೇಕೆಂದರೆ, ಜನತಾದರ್ಶನ ಹಾಗೂ ಅಲ್ಲಿ  ಜನರ ಸಮಸ್ಯೆಗಳಿಗೆ ಸ್ಪಂದಿಸಿರುವುದರ ಮಾಹಿತಿ ತರಿಸಿಕೊಂಡು ನೋಡಲಿ.

ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸು ಕೊರತೆ ಇದೆಯಾ?
ಇಲ್ಲ. ಸಮ್ಮಿಶ್ರ ಸರ್ಕಾರವಾದ್ದರಿಂದ ಹಿಂದಿನ ಕಾಂಗ್ರೆಸ್‌ ಸರ್ಕಾರದ ಯೋಜನೆಗಳನ್ನೂ ಕೈ ಬಿಡದೆ ನಮ್ಮ ಪ್ರಣಾಳಿಕೆಯ ಅಂಶಗಳನ್ನೂ ಬಜೆಟ್‌ನಲ್ಲಿ ಸೇರಿಸಿ ಅನುಷ್ಠಾನಗೊಳಿಸುತ್ತಿದ್ದೇನೆ. ಕೇಂದ್ರ ಸರ್ಕಾರದ ನೆರವು ಇಲ್ಲದೆ ರೈತರ ಸಾಲಮನ್ನಾ ಮಾಡಿ ತೋರಿಸಿದ್ದೇನೆ. ಸಮ್ಮಿಶ್ರ ಸರ್ಕಾರ ಆರ್ಥಿಕ ಶಿಸ್ತು ಕಾಪಾಡಿಕೊಂಡಿರುವುದಲ್ಲದೆ, ಸಂಪನ್ಮೂಲ ಕ್ರೋಢೀಕರಣದಲ್ಲೂ ಸರ್ಕಾರ ಉತ್ತಮ ಸಾಧನೆ ಮಾಡಿದೆ. ತೆರಿಗೆ ಸಂಗ್ರಹ ಪ್ರಮಾಣ ಶೇ.11.4 ರಷ್ಟು ಹೆಚ್ಚಳವಾಗಿರುವುದು ಇದಕ್ಕೆ ಸಾಕ್ಷಿ. ಸೆಪ್ಟೆಂಬರ್‌ ಅಂತ್ಯದವರೆಗೆ 75,634 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಮಾರ್ಚ್‌ ವೇಳೆಗೆ ನಿರೀಕ್ಷಿತ ಗುರಿ ತಲುಪುವ ಆಶಾಭಾವನೆ ಇದೆ. ಅಬಕಾರಿ ಸೋರಿಕೆ ತಡೆಗಟ್ಟಿ ನಿರೀಕ್ಷೆಗಿಂತ ಹೆಚ್ಚು ಸಂಪನ್ಮೂಲ ಸಂಗ್ರಹಿಸಲಾಗಿದೆ.

ಬಜೆಟ್‌ನಲ್ಲಿ ಘೋಷಣೆಯಾದ ಎಷ್ಟು ಕಾರ್ಯಕ್ರಮಗಳು ಅನುಷ್ಠಾನಗೊಂಡಿವೆ?
2018-19ನೇ ಸಾಲಿನಲ್ಲಿ ಸಿದ್ದರಾಮಯ್ಯ ಹಾಗೂ ನಾನು ಮಂಡಿಸಿದ ಆಯವ್ಯಯ ಭಾಷಣಗಳಲ್ಲಿ ಒಟ್ಟು 460 ಘೋಷಣೆಗಳನ್ನು ಮಾಡಲಾಗಿದ್ದು, ಅವುಗಳ ಅನುಷ್ಠಾನಕ್ಕೆ ಈಗಾಗಲೇ ಆದೇಶ ಹೊರಡಿಸಲಾಗಿದೆ. ಇದು ಸಾಧನೆ ಅಲ್ಲವಾ…?

ನಿಮಗೆ ಕಳೆದ ಆರು ತಿಂಗಳ ಆಡಳಿತ ತೃಪ್ತಿ  ತಂದಿದೆಯಾ?
ಖಂಡಿತ ಇದೆ. ಆದರೆ, ಮಾಡಬೇಕಿರುವುದು ಇನ್ನೂ ಇವೆ. ಸಮ್ಮಿಶ್ರ ಸರ್ಕಾರದ ಇತಿಮಿತಿಗಳ ನಡುವೆ ಪದೇ ಪದೆ ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿಯವರ ಷಡ್ಯಂತ್ರ, ಸರ್ಕಾರದ ಸಾಧನೆ ಮರೆಮಾಚುವ ವ್ಯವಸ್ಥಿತ ಪಿತೂರಿ ನಡುವೆ ನಾನು ಉತ್ತಮ ಕೆಲಸ ಮಾಡಿದ್ದೇನೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್‌ನವರು ಹಾಗೂ ನಾವು ಕೊಟ್ಟಿದ್ದ ಭರವಸೆಗಳ ಈಡೇರಿಕೆಗೆ ನನ್ನದೇ ಆದ ನೀಲನಕ್ಷೆ ಹಾಕಿಕೊಂಡಿದ್ದೇನೆ. ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಚಿತ್ರಣ ಬದಲಿಸುತ್ತೇನೆ.

ಸಮ್ಮಿಶ್ರ ಸರ್ಕಾರಕ್ಕೆ ಇನ್ನೂ ಆಪರೇಷನ್‌ ಕಮಲ ಆತಂಕ ಇದೆಯಾ?
ಅಯ್ಯೋ… ನನಗಂತೂ ಯಾವ ಆತಂಕವೂ ಇಲ್ಲ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಯವರು ಹಾಗೂ ಸಿದ್ದರಾಮಯ್ಯ, ಪರಮೇಶ್ವರ್‌ ಸೇರಿ ರಾಜ್ಯದ ಕಾಂಗ್ರೆಸ್‌ ನಾಯಕರು ಶಾಸಕರ ಬೆಂಬಲ-ಸಹಕಾರದಿಂದ ಮುಖ್ಯಮಂತ್ರಿ ಆಗಿದ್ದೇನೆ. ಅದು ದೈವ ಇಚ್ಛೆ. ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇನೆ ಎಂಬುದಕ್ಕಿಂತ, ನಾಡಿನ ಜನರಿಗೆ ಎಷ್ಟು ಕೆಲಸ ಮಾಡುತ್ತೇನೆ ಎಂಬುದಷ್ಟೇ ನನಗೆ ಮುಖ್ಯ. ಹೀಗಾಗಿ, ಯಾವ ಆಪರೇಷನ್‌ಗೂ ನಾನು ಹೆದರಲ್ಲ. ನನಗೂ ರಾಜಕಾರಣದ ಪಲ್ಸ್‌ ಗೊತ್ತಿದೆ. ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾದ ವಿಚಾರದಲ್ಲಿ ನಾನು ಸಾಂಧರ್ಬಿಕ ಶಿಶು ಆಗಿರಬಹುದು ಆದರೆ ರಾಜಕೀಯದಲ್ಲಿ ಶಿಶು ಅಲ್ಲ.

ಒಂದು ಮಾತನ್ನು ಬಿಜೆಪಿಯವರಿಗೆ ಹೇಳಲು ಬಯಸುತ್ತೇನೆ. ಇದನ್ನು ಹೆಚ್ಚುಗಾರಿಕೆಗೆ ಹೇಳುತ್ತಿಲ್ಲ. ಜನರಿಗೆ ಸುಲಭವಾಗಿ ಸಿಗುವ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮುಖ್ಯಮಂತ್ರಿ ನಾನು.”

ಸಂದರ್ಶನ: ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next