ಪಿ. ಸತ್ಯನಾರಾಯಣ
ಹೊಸಪೇಟೆ : ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಹಂಪಿ ಪ್ರವಾಸಿಗರಿಲ್ಲದೇ ಭಣಗುಡುತ್ತಿದ್ದು ಪ್ರವಾಸಿಗರ ಬರುವಿಕೆಗಾಗಿ ಎದುರು ನೋಡುವಂತಾಗಿದೆ. ಕೊರೊನಾ ಮೂರಲೇ ಅಲೆ ಭೀತಿ ಹಿನ್ನಲೆಯಲ್ಲಿ ಶನಿವಾರ ಮತ್ತು ಭಾನುವಾರ ಹಂಪಿಗೆ ಪ್ರವಾಸಿಗರ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದ ಪರಿಣಾಮ ಹಂಪಿ ಬಿಕೋ ಎನ್ನುತ್ತಿದೆ.
ವಿರೂಪಾಕ್ಷನ ದರ್ಶನಕ್ಕೂ ನಿರ್ಬಂಧ: ಸೋಮವಾರ ಹಾಗೂ ಅಮಾವಾಸ್ಯೆ ದಿನಗಳಲ್ಲಿ ವಿರೂಪಾಕ್ಷೇಶ್ವರ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಇದರಿಂದಾಗಿ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಸ್ಥಳೀಯ ಸಣ್ಣಪುಟ್ಟ ಹೋಟೆಲ್, ಹೂ-ಹಣ್ಣು ವ್ಯಾಪಾರಸ್ಥರು, ಆಟೋ, ಟ್ಯಾಕ್ಸಿ ಚಾಲಕರು, ಗೈಡ್‌ಗಳು ಸೇರಿದಂತೆ ಇತರೆ ವ್ಯಾಪಾರಿಗಳು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಹೋಟೆಲ್ ಉದ್ಯಮಕ್ಕೆ ಸಂಕಷ್ಟ: ಹಂಪಿಗೆ ಆಗಮಿಸುವ ದೇಶ-ವಿದೇಶಿಗರ ಪ್ರವಾಸಿಗರಿಗಾಗಿ ಹೊಸಪೇಟೆ ಹಾಗೂ ಕಮಲಾಪುರ ಸುತ್ತಮುತ್ತಲಿನಭಾಗದಲ್ಲಿಪ್ರತಿಷ್ಠಿತ ಹೋಟೆಲ್-ಲಾಡ್ಜ್ಗಳ ತಲೆ ಎತ್ತಿವೆ.
ನೂರಾರು ಮಂದಿ ಕೆಲಸಗಾರರು, ದುಬಾರಿ ಖರ್ಚು ನೀಗಿಸಿಕೊಂಡು ಪ್ರವಾಸಿಗರ ಉತ್ತಮ ಸೇವೆ ನೀಡಲುಹೆಣಗಾಡುತ್ತಿರುವಹೋಟೆಲ್‌ಹಾಗೂ ಲಾಡ್ಜ್ ಉದ್ಯಮ ಕಳೆದ ಎರಡು ವರ್ಷದಿಂದ ನಷ್ಟ ಅನುಭವಿಸಂತಾಗಿವೆ. ಕೊರೊನಾ ಹೊಡೆತ ಒಂದಡೆಯಾದರೆ, ಪ್ರತಿವರ್ಷ ತುಂಗಭದ್ರಾ ನದಿ ಪ್ರವಾಹದ ಹಿನ್ನೆಲೆಯಲ್ಲಿ ಹಂಪಿಗೆ ಪ್ರವಾಸಿಗರು ಆಗಮಿಸಲು ಹಿಂದೇಟು ಹಾಕುತ್ತಾರೆ. ನದಿ ಪ್ರವಾಹದಿಂದ ಪ್ರವಾಸಿಗರಿಗೆ ತೊಂದರೆಯಾಗದ ಪರಿಸ್ಥಿತಿ ಇದ್ದರೂ, ನದಿ ಪ್ರವಾಹಕ್ಕೆ ಹೆದರಿ, ಪ್ರವಾಸಿಗರು ಈ ದಿನಗಳಲ್ಲಿ ಹಂಪಿಗೆ ಬರುವುದನ್ನೆ ನಿಲ್ಲಿಸಿಬಿಡುತ್ತಾರೆ. ಇದರಿಂದ ಕೂಡ ಪ್ರವಾಸೋದ್ಯಮದ ಹಿನ್ನಡೆಗೆ ಕಾರಣವಾಗಿದೆ.
ಬೋಟ್ ಸಂಚಾರ ಸ್ಥಗಿತ: ಕೋವಿಡ್ ಹಾಗೂ ಪ್ರವಾಹದ ಪರಿಣಾಮ ಹಂಪಿ ತುಂಗಭದ್ರಾ ನದಿ ದಡದಿಂದ ಪಕ್ಕದ ವಿರುಪಾಪುರ ಗಡ್ಡೆಗೆ ತೆರಳುವ ಬೋಟ್ ಸಂಚಾರ ಕೂಡ ಕಳೆದ ವರ್ಷದಿಂದ ಸ್ಥಗಿತಗೊಂಡಿದ್ದು ದುಬಾರಿ ಬೆಲೆ ತೆತ್ತು ಟೆಂಡರ್ ಪಡೆದ ಬೋಟ್ ಸಂಚಾರ ನಡೆಸುತ್ತಿದ್ದ ಮಾಲೀಕರು ಹಾಗೂ ಚಾಲಕರು ನಷ್ಟ ಅನುಭವಿಸಿ ತಲೆ ಮೇಲೆ ಕೈಹೊತ್ತು ಕುಳಿತ್ತಿದ್ದಾರೆ. ಹೊಸಪೇಟೆಯಿಂದ ಹಂಪಿಗೆ ತೆರಳುವ ಮಾರ್ಗ ಮಧ್ಯದ ಕಡ್ಡಿರಾಂಪುರ ಪ್ರವೇಶ ದ್ವಾರ, ಕಮಲಾಪುರ ಕೋಟೆ, ಆಂಜನೇಯ ಪ್ರವೇಶ ದ್ವಾರ ಹಾಗೂ ವಿಜಯವಿಠಲ ದೇವಾಲಯಕ್ಕೆ ತೆರಳುವ ತಳವಾರ ಘಟ್ಟ ಮಾರ್ಗದಿಂದಲೇ ಪ್ರವಾಸಿಗರನ್ನು ಪೊಲೀಸರು ವಾಪಸ್ಸು ಕಳುಹಿಸುತ್ತಿದ್ದಾರೆ.
ವೀಕೆಂಡ್‌ನಲ್ಲಿ ಕೆಲ ಪ್ರವಾಸಿಗರು ಹಂಪಿ ಪ್ರವೇಶ ನಿರ್ಬಂಧ ಹೇರಿರುವ ಮಾಹಿತಿ ತಿಳಿಯದೇ ಹಂಪಿಗೆ ಬಂದೂ ಒಲ್ಲದ ಮನಸ್ಸಿನಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳುತ್ತಿದ್ದಾರೆ. ಹಂಪಿಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಇರುವುದರಿಂದ ಕಮಲಾಪುರ ಸಮೀಪದ ಅಟಲ್ ಬಿಹಾರಿ ವಾಜಪೇಯಿ ಝಲಾಜಿಕಲ್ ಪಾರ್ಕ್‌ಗೆ ಪ್ರವಾಸಿಗರು ಭೇಟಿ ನೀಡುವುದು ಕಡಿಮೆಯಾಗಿದೆ.
ಟಿ.ಬಿ.ಡ್ಯಾಂಗಿಲ್ಲ ಪ್ರವೇಶ: ಕಳೆದ ತಿಂಗಳಿಂದ ಜಲಾಶಯ ಭರ್ತಿಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಡ್ಯಾಂಗೆ ಆಗಮಿಸುತ್ತಿದ್ದರು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಡ್ಯಾಂ ಪ್ರವೇಶಕ್ಕೂ ನಿರ್ಬಂಧ ಇರುವುದರಿಂದ ಪ್ರವಾಸಿಗರು ಡ್ಯಾಂಕಡೆ ಮುಖ ಮಾಡಿಲ್ಲ. ಒಟ್ಟಾರೆ ಮಹಾಮಾರಿ ಕೊರೊನಾ ಎಲ್ಲ ವಿಧದಲ್ಲಿಯೂ ಹಂಪಿ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ನೀಡಿದ್ದು, ಚೇತರಿಕೆ ಕಾಣಲು ಕಾಲಾವಕಾಶ ಬೇಕಾಗಬಹುದು.