Advertisement

ದಲಿತ ಉದ್ದಿಮೆದಾರರ ಆಪತ್ಬಾಂಧವ ಸಿ.ಜಿ.ಶ್ರೀನಿವಾಸ್‌

04:39 PM Oct 31, 2022 | Team Udayavani |

ಕೋಲಾರ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಕೋಲಾರ ಜಿಲ್ಲೆಯಿಂದ ಈ ಬಾರಿ ದಲಿತ ಕೈಗಾರಿ ಕೋದ್ಯಮಿ ಸಿ.ಜಿ.ಶ್ರೀನಿವಾಸ್‌ ಆಯ್ಕೆಯಾಗಿದ್ದಾರೆ.

Advertisement

ಮೂಲತಃ ಶ್ರೀನಿವಾಸಪುರ ತಾಲೂಕಿನ ಮುದಿ ಮಡಗು ಗ್ರಾಮದಲ್ಲಿ ಜನಿಸಿದ ಸಿ.ಜಿ.ಶ್ರೀನಿವಾಸ್‌ ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಗ್ರಾಮೀಣ ಭಾಗದಲ್ಲಿ ಪೂರ್ಣಗೊಳಿಸಿ, ಕೋಲಾರದ ಕಾಲೇಜಿನಲ್ಲಿ ಪದವಿ ಹಂತದವರೆಗಿನ ಶಿಕ್ಷಣ ಪಡೆದಕೊಂಡರು. ಅಂತಿಮವಾಗಿ ಎಂ.ಎ. ಎಲ್‌ಎಲ್‌ಬಿ ಪದವೀಧರರಾದರು.

ನಿವೃತ್ತಿ ಘೋಷಿಸಿ ವಾಣಿಜ್ಯೋದ್ಯಮಿ: ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವದ ಗುಣಗಳನ್ನು ಮೈಗೂಡಿಸಿ ಕೊಂಡವರಾಗಿದ್ದರು. ಸರ್ಕಾರದ ಕೆಎಸ್‌ಎಸ್‌ ಐಡಿಸಿಯಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ಕಾರ್ಯನಿರ್ವ ಹಿಸುತ್ತಿದ್ದ ಇವರು, 2009ರಲ್ಲಿ ಸ್ವಯಂ ನಿವೃತ್ತಿ ಘೋಷಿಸಿ ವಾಣಿಜ್ಯೋದ್ಯಮಿಯಾಗಿ ಮಾರ್ಪಟ್ಟರು. ಸಮಾಜ ಸೇವೆಗೂ ತಮ್ಮನ್ನು ತೊಡಗಿಸಿಕೊಂಡರು. ಕೃಷಿ ಕ್ಷೇತ್ರದಲ್ಲಿಯೂ ಭಾಗಿದಾರರಾದರು.

ದಲಿತ ಉದ್ದಿಮೆದಾರರ ಸಂಘ ಸ್ಥಾಪನೆ: ಕೆಎಸ್‌ಎಸ್‌ ಐಡಿಸಿಯಲ್ಲಿ ಕೆಲಸ ಮಾಡುತ್ತಿದ್ದಾಗ ದಲಿತ ಉದ್ದಿಮೆದಾರರ ಪಾಲುದಾರಿಕೆ ಶೇ.1 ಮಾತ್ರ ಇದ್ದಿದ್ದನ್ನು ಗಮನಿಸಿದ ಇವರು, ವಿದ್ಯಾವಂತ, ಕೌಶಲ್ಯಭರಿತ ದಲಿತ ಯುವಕರನ್ನು ಉದ್ದಿಮೆದಾರರ ನ್ನಾಗಿಸಲು ಪಣ ತೊಟ್ಟರು. ಕರ್ನಾಟಕ ದಲಿತ ಉದ್ದಿಮೆದಾರರ ಸಂಘವನ್ನು ಸ್ಥಾಪಿಸಿ ಕಾರ್ಯೋನ್ಮುಖರಾದರು.

ಸಂಘಟನೆಗೆ ಸತತ ಪ್ರಯತ್ನ: ಖುದ್ದು ಅಧಿಕಾರಿ ಯಾಗಿದ್ದ ಸಿ.ಜಿ.ಶ್ರೀನಿವಾಸ್‌ ಅಧಿಕಾರಿ ವರ್ಗ ಹಾಗೂ ಸರ್ಕಾರದೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು ವಿವಿಧ ಹಂತಗಳಲ್ಲಿ ದಲಿತ ಕೈಗಾರಿಕೋದ್ಯಮಿಗಳನ್ನು ಸಬಲೀಕರಿಸುವಲ್ಲಿ ಮತ್ತು ಆರ್ಥಿಕವಾಗಿ ಬಲಪಡಿಸುವಲ್ಲಿ ಸರ್ಕಾರವನ್ನು ಒತ್ತಾಯಿಸಿ ಸಫ‌ಲರಾಗಿದ್ದರು. ಈ ಮೂಲಕ ದಲಿತ ಉದ್ದಿಮೆ ದಾರರ ಸಂಘಟನೆಗೆ ಸತತ ಪ್ರಯತ್ನಿಸುತ್ತಲೇ ಇದ್ದಾರೆ.

Advertisement

ಭೂಮಿ ನೀಡಲು ಒತ್ತಾಯ: ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಸೇರಿ ಕೆಐಎಡಿಬಿ ಕೈಗಾರಿಕೆಗಳಿಗೆ ಏಕಗವಾಕ್ಷಿ ಯೋಜನೆಯಡಿ ಜಮೀನು ಮಂಜೂರು ಮಾಡಿದ ಸಂದರ್ಭದಲ್ಲಿ ದಲಿತ ಉದ್ದಿಮೆದಾರರಿಗೂ ಇಂತಿಷ್ಟು ಭೂಮಿ ನೀಡಲೇಬೇಕೆಂದು ಒತ್ತಾಯಿಸಿ ಯಶಸ್ವಿಯಾಗಿದ್ದಾರೆ.  ಭೂಮಿ ಮಂಜೂರಾತಿ ಮತ್ತು ಕೈಗಾರಿಕೆಗಳ ಸ್ಥಾಪನೆಯಲ್ಲಿ ಎದುರಾಗುವ ಅಡೆ ತಡೆಗಳನ್ನು ಸಮರ್ಥವಾಗಿ ನಿಭಾಯಿಸುವಂತೆ ಮಾಡುತ್ತಾರೆ. ಹೊಸದಾಗಿ ಕೈಗಾರಿಕೆ ಸ್ಥಾಪನೆ ಮಾಡುವವರಿಗೆ ಅಗತ್ಯ ಸಲಹೆ ಸೂಚನೆ ಮತ್ತು ಮಾರ್ಗಸೂಚನೆಯನ್ನು ಅವರು ನೀಡಿದ್ದಾರೆ. ವಿಶೇಷ ಕೈಗಾರಿಕಾ ನೀತಿ: ಇವರ ಪ್ರಯತ್ನದ ಫ‌ಲದಿಂದಲೇ ದಲಿತ ಕೈಗಾರಿಕೋದ್ಯಮಿಗಳಿಗೆ ಸರ್ಕಾರಗಳು ವಿವಿಧ ಯೋಜನೆಗಳನ್ನು ಮತ್ತು ವಿಶೇಷ ಕೈಗಾರಿಕಾ ನೀತಿಯನ್ನು ವಿವಿಧ ಬಜೆಟ್‌ಗಳಲ್ಲಿ ಘೋಷಣೆ ಮಾಡಲು ಕಾರಣಕರ್ತರಾಗಿದ್ದಾರೆ.

ಪ್ರಸ್ತುತ ಬೆಂಗಳೂರಿನಲ್ಲಿ ಪತ್ನಿ ಶಾರದಾ, ಎಂಜಿನಿಯರ್‌ ಪುತ್ರ ಹಾಗೂ ವೈದ್ಯೆ ಪುತ್ರಿಯ ಪುಟ್ಟ ಸಂಸಾರದೊಂದಿಗೆ ದಲಿತ ಉದ್ದಿಮೆದಾರರ ಏಳಿಗೆಗೆ ಶ್ರಮಿಸುತ್ತಿರುವ ಸಿ.ಜಿ.ಶ್ರೀನಿವಾಸ್‌ ಅವರನ್ನು ಕರ್ನಾಟಕ ಸರಕಾರ 2022ನೇ ಸಾಲಿನ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿ ಗೌರವ ಸಲ್ಲಿಸಿದೆ.

ಕಳೆದ 14 ವರ್ಷಗಳಿಂದಲೂ ಕರ್ನಾಟಕದ ದಲಿತ ಉದ್ದಿಮೆದಾರರಿಗೆ ಮಾಡಿರುವ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.  ದಲಿತ ಉದ್ದಿಮೆದಾರರ ಸಂಘ ಸ್ಥಾಪನೆ ಆದ ನಂತರ ಯಾವುದೇ ಪ್ರತಿಫ‌ಲಾಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಸೇವೆ ಮಾಡಿದ್ದೇನೆ. ಕೋಲಾರ ಜಿಲ್ಲೆ ಮತ್ತು ರಾಜ್ಯದ ಎಲ್ಲಾ ದಲಿತ ಉದ್ದಿಮೆದಾರರಿಗೆ ಸಂದ ಗೌರವ ಇದಾಗಿದೆ. – ಸಿ.ಜಿ.ಶ್ರೀನಿವಾಸ್‌, ಕೈಗಾರಿಕೋದ್ಯಮಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತರು.

 

– ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next