ಚಿತ್ರದುರ್ಗ: ಜಿಲ್ಲೆಯ ಸಂಸದರಾಗಿದ್ದ ಎ.ನಾರಾಯಣಸ್ವಾಮಿ ಅವರು ಕೇಂದ್ರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವ ನಂತರ ಇದೇ ಮೊದಲ ಬಾರಿಗೆ ಬುಧವಾರ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಜಿಲ್ಲೆಯ ಸಂಸದರೊಬ್ಬರು ಕೇಂದ್ರದಲ್ಲಿ ಸಚಿವರಾದಾಗ ಜಿಲ್ಲೆಯ ಜನತೆ ಸಾಕಷ್ಟು ಸಂಭ್ರಮಿಸಿದ್ದರು.
ಸಚಿವರಾದ ನಂತರ ದೆಹಲಿಯಲ್ಲೇ ಬೀಡು ಬಿಟ್ಟು ಇಲಾಖೆ ಬಗ್ಗೆ ಸಮಗ್ರ ಅಧ್ಯಯನ ಹಾಗೂ ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸಲು ಓಡಾಡಿ ರಾಜ್ಯಕ್ಕೆ ಆಗಮಿಸಿದ್ದಾರೆ. ಇದೇ ವೇಳೆ ಬಿಜೆಪಿಯ ನಾಲ್ವರೂ ನೂತನ ಸಚಿವರ ನೇತೃತ್ವದಲ್ಲಿ ಜನಾಶೀರ್ವಾದ ಯಾತ್ರೆ ರೂಪಿಸಿದ್ದು, ಇದರ ಭಾಗವಾಗಿ ನಾರಾಯಣಸ್ವಾಮಿ ಅವರು ಜಿಲ್ಲೆಯುದ್ದಕ್ಕೂ ಓಡಾಡಲಿದ್ದಾರೆ.
ಕೇಂದ್ರ ಸಚಿವರ ಮೊದಲ ಭೇಟಿಯನ್ನು ಅರ್ಥಪೂರ್ಣಗೊಳಿಸಲು ಬಿಜೆಪಿ ಜಿಲ್ಲಾ ಘಟಕ ಹಾಗೂ ವಿವಿಧ ಸಂಘಟನೆಗಳು, ನಾರಾಯಣಸ್ವಾಮಿ ಅಭಿಮಾನಿಗಳು ಸಾಕಷ್ಟು ಯೋಜನೆ ರೂಪಿಸಿದ್ದಾರೆ.
ಮಾಜಿ ಸೈನಿಕರ ಮನೆ ಭೇಟಿಯಿಂದ ಜಿಲ್ಲೆಗೆ ಆಗಮನ: ಹಿರಿಯೂರು ತಾಲೂಕಿನ ಮಾಜಿ ಸೈನಿಕ ಟಿ. ಪ್ರಭಾಕರ್ ಅವರ ಮನೆಗೆ ಭೇಟಿ ನೀಡಿ ನಂತರ ಹಿರಿಯೂರು ನಗರದಲ್ಲಿ ವಾಸ್ತವ್ಯ ಮಾಡಿ ಬೆಳಗ್ಗೆ ತೇರುಮಲ್ಲೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ದಿನದ ಕಾರ್ಯಕ್ರಮ ಆರಂಭಿಸಲಿದ್ದಾರೆ.
ಹಿರಿಯೂರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಐಮಂಗಲದಲ್ಲಿ ಪಡಿತರ ವಿತರಣಾ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಆನಂತರ ಚಿತ್ರದುರ್ಗಕ್ಕೆ ಆಗಮಿಸಿ ಜಿಲ್ಲಾಸ್ಪತ್ರೆಯ ಕೋವಿಡ್ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಇಲ್ಲಿಂದ ರಾಜವೀರ ಮದಕರಿನಾಯಕ ಪ್ರತಿಮೆ, ಓನಕೆ ಓಬವ್ವ, ಡಾ| ಬಿ.ಆರ್. ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ನೀಲಕಂಠೇಶ್ವರ ದೇವಸ್ಥಾನದಲ್ಲಿ ಪೂಜೆ, ವಿವಿಧ ಸಮುದಾಯದ ಮುಖಂಡರಿಗೆ ಅಭಿನಂದನೆ, ಸಂಗೊಳ್ಳಿ ರಾಯಣ್ಣ ಹಾಗೂ ಕನಕದಾಸರ ಪ್ರತಿಮೆಗೆ ಮಾಪಾರ್ಪಣೆ ಮಾಡಲಿದ್ದಾರೆ. ಶ್ರೀ ಕೃಷ್ಣ ಯಾದವ ಮಠ, ಮುರುಘಾ ಮಠ, ಭೋವಿ ಗುರುಪೀಠ, ಮಾದಾರ ಚನ್ನಯ್ಯ ಗುರುಪೀಠ, ಸಿರಿಗೆರೆ ಬೃಹನ್ಮಠಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದು ಭರಮಸಾಗರದ ಮೂಲಕ ದಾವಣಗೆರೆಗೆ ತೆರಳಲಿದ್ದಾರೆ.
ಈ ಎಲ್ಲ ಕಾರ್ಯಕ್ರಮಗಳಿಗೆ ಭರದ ಸಿದ್ಧತೆ ನಡೆದಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಬಿಜೆಪಿ ಭಾವುಟಗಳನ್ನು ಕಟ್ಟಿ ಅಲಂಕರಿಸಲಾಗಿದೆ. ಕೋವಿಡ್ ನಿಯಮ ಪಾಲಿಸಿಕೊಂಡು, ಎಲ್ಲಿಯೂ ಹೆಚ್ಚು ಜನ ಸೇರದಂತೆ ಬಿಜೆಪಿ ಜಿಲ್ಲಾಘಟಕ ವ್ಯವಸ್ಥೆ ಮಾಡಿಕೊಂಡಿದೆ.