ಚಿತ್ರದುರ್ಗ: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ಸಮುದಾಯದ ಬಡವರ ಸಬಲೀಕರಣಕ್ಕಾಗಿ 23 ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ನಿಗಮದ ನಿರ್ದೇಶಕ ಹಾಗೂ ಖನಿಜ ನಿಗಮದ ಅಧ್ಯಕ್ಷ ಎಸ್. ಲಿಂಗಮೂರ್ತಿ ಹೇಳಿದರು.
ಅಖೀಲ ಭಾರತ ವೀರಶೈವ ಮಹಾಸಭಾ ಚಿತ್ರದುರ್ಗ ತಾಲೂಕು ಘಟಕ, ವೀರಶೈವ ಸಮಾಜ, ಶ್ರೀ ಗುರು ಜಿಲ್ಲಾ ಯೋಗ, ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ನಿಗಮದಿಂದ ಬಸವ ಬೆಳಗು, ಜ್ಞಾನದ ಬಲ, ಬದುಕುಬೆಳಗು,ವಿದೇಶವಿದ್ಯಾವಿಕಾಸ,ಅರಿವಿನ ದಾಸೋಹ ನಿಲಯ, ಪರಿಪೂರ್ಣದೆಡೆಗೆ, ಶರಣ ಸೇನೆ, ಭೋಜನಾಲಯ ಕೇಂದ್ರ, ವಿಭೂತಿ ನಿರ್ಮಾಣ ಘಟಕ, ಕಾಯಕ ಕಿರಣ, ವಾಹನ ಸೌಲಭ್ಯ, ಸಾಧನಾ ಸ್ಪೂರ್ತಿ ಸೇರಿದಂತೆ ಹೊಸ ಯೋಜನೆಗಳ ಅನುಷ್ಠಾನಕ್ಕೆ ಚಿಂತನೆ ನಡೆದಿದೆ ಎಂದರು.
ನಿಗಮದಿಂದ ಸಮುದಾಯದ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಪ್ರತಿ ಜಿಲ್ಲೆಗೆ 20 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ. ವೀರಶೈವ-ಲಿಂಗಾಯತ ಸಮಾಜದಲ್ಲೂ ಬಡವರಿದ್ದಾರೆ. ಹಸಿವಿದ್ದರೂ ಸ್ವಾಭಿಮಾನದಿಂದ ಬದುಕು ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ರೈತರು, ವಿದ್ಯಾರ್ಥಿಗಳ ಸಹಿತ ಸಮುದಾಯದ ಎಲ್ಲ ಶ್ರಮಿಕರ ಸರ್ವಾಂಗೀಣ ಅಭಿವೃದ್ಧಿಗಾಗಿ ಹೊಸ ಯೋಜನೆಗಳ ಅನುಷ್ಠಾನಕ್ಕೆ ನಿರ್ಧರಿಸಲಾಗಿದ್ದು. ಸರ್ಕಾರ ಶೀಘ್ರದಲ್ಲೇ ಆದೇಶ ಹೊರಡಿಸಲಿದೆ. ಖನಿಜ ನಿಗಮದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆಹೆಚ್ಚುಆದಾಯಬರುತ್ತಿದೆ. ಸರ್ಕಾರದ ಜವಾಬ್ದಾರಿಯೊಂದಿಗೆ ಸಮಾಜ ಹಾಗೂ ಸಮುದಾಯದ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.
ಇದೇ ವೇಳೆ ನಗರದಲ್ಲಿ ಸಮುದಾಯ ಕಲ್ಯಾಣಮಂದಿರ ನಿರ್ಮಿಸಲು 5 ಕೋಟಿ ರೂ., ಹಾಗೂ ನಗರ, ಜಿಲ್ಲೆಯ ಹಲವೆಡೆ ಸಮುದಾಯದ ರುದ್ರಭೂಮಿಗಳ ಅಭಿವೃದ್ಧಿಗೆ ಅನುದಾನ ನೀಡುವಂತೆ ಲಿಂಗಮೂರ್ತಿ ಅವರಿಗೆ ಚಿತ್ರದುರ್ಗ ವೀರಶೈವ ಸಮಾಜದ ಅಧ್ಯಕ್ಷ ಎಲ್.ಬಿ. ರಾಜಶೇಖರ್ ಹಾಗೂ ಅಖೀಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ ಮನವಿ ಮಾಡಿದರು.
ದಾವಣಗೆರೆ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಎಸ್. ಮಂಜುಳಾ, ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ರುದ್ರೇಶ್ ಐಗಳ್, ಶಿಬಿರಾರ್ಥಿಗಳಾದ ಪಿ.ಎಂ. ಸಿದ್ದಪ್ಪ, ತಾನ್ ಹಾಗೂ ಭೂಮಿಕಾ ಮಾತನಾಡಿದರು. ಎಸ್. ಲಿಂಗಮೂರ್ತಿ, ಎಸ್. ಮಂಜುಳಾ, ಎಲ್.ಬಿ. ರಾಜಶೇಖರ್, ಮಹಡಿ ಶಿವಮೂರ್ತಿ ಹಾಗೂ ಯೋಗ ಗುರು ಚಿನ್ಮಯಾನಂದ ಅವರನ್ನು ಸನ್ಮಾನಿಸಲಾಯಿತು.