Advertisement

ಉದಯವಾಣಿ ಚಿಣ್ಣರ ಬಣ್ಣ: ಬೈಂದೂರಿನಲ್ಲಿ 1500ಕ್ಕೂ ಮಿಕ್ಕಿ ಮಕ್ಕಳು ಭಾಗಿ

06:44 PM Oct 22, 2022 | Team Udayavani |

ಕುಂದಾಪುರ: ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಮಹತ್ವದ್ದಾಗಿದ್ದು, ರೈತ ಉತ್ತಮ ಬೆಳೆ ತೆಗೆಯುವಂತೆ, ತಾಯಿ ಮಕ್ಕಳಲ್ಲಿನ ಪ್ರತಿಭೆಯನ್ನು ಹೊರತೆಗೆಯಲು ಉದಯವಾಣಿ ಆಯೋಜಿಸಿದ ಚಿಣ್ಣರ ಬಣ್ಣ ಚಿತ್ರಕಲಾ ಸ್ಪರ್ಧೆ ಉತ್ತಮ ವೇದಿಕೆ ಕಲ್ಪಿಸಿದೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

Advertisement

ಅವರು ಶನಿವಾರ ಉಪ್ಪುಂದದ ಹೋಟೆಲ್ ಪರಿಚಯದ ದೇವಕಿ ಆರ್. ಸಭಾಂಗಣದಲ್ಲಿ ಆರ್ಟಿಸ್ಟ್ ಫೋರಂ ಉಡುಪಿ, ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್, ಹ್ಯಾಂಗ್ಯೂ, ಮಾಡರ್ನ್ ಕಿಚನ್ಸ್, ಕ್ಯಾಂಪ್ಕೊ, ಉಪ್ಪುಂದದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ, ಯು.ಬಿ. ಶೆಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳು ಬೈಂದೂರು – ಉಪ್ಪುಂದ, ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲ್ ಆಂಡ್ ಪಿ.ಯು. ಕಾಲೇಜು ಶಿರೂರು, ಎಮ್.ಎಮ್. ರೆಸಾರ್ಟ್ಸ್ ಗೋರ್ಟೆ ಸಹಯೋಗದಲ್ಲಿ ಆಯೋಜಿಸಿದ ‘ಉದಯವಾಣಿ’ ಮಕ್ಕಳ ಚಿತ್ರಕಲಾ ಸ್ಪರ್ಧೆ ‘ಚಿಣ್ಣರ ಬಣ್ಣ -2022 ’ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಉದಯವಾಣಿ ಉತ್ತಮ ಕಾರ್ಯಕ್ರಮ ಆಯೋಜಿಸಿದ್ದು, ಇಲ್ಲಿ ಪ್ರಶಸ್ತಿಗಿಂತಲೂ ಭಾಗವಹಿಸುವಿಕೆ ಬಹಳ ಮುಖ್ಯ ಎಂದವರು ಇದೇ ವೇಳೆ ಹೇಳಿದರು.

ಬೈಂದೂರಿನ ಯು.ಬಿ. ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಅಮಿತಾ ಶೆಟ್ಟಿ ಮಾತನಾಡಿ, ಮಕ್ಕಳ ಪ್ರತಿಭೆಗೆ ಉತ್ತಮ ವೇದಿಕೆ ಒದಗಿಸುವ ಪ್ರಯತ್ನ ಇದಾಗಿದ್ದು, ಭಾಗವಹಿಸಿದ ಎಲ್ಲರಿಗೂ ಶುಭಹಾರೈಕೆಗಳು ಎಂದ ಅವರು, ಭಾಗವಹಿಸುವಿಕೆ ಬಹಳ‌ ಮುಖ್ಯ. ಇದು ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಹೇಳಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಉದಯವಾಣಿ ಸಂಪಾದಕ ಅರವಿಂದ ನಾವಡ ಮಾತನಾಡಿ, ಮಕ್ಕಳಲ್ಲಿ ಯಾವುದಾದರೂ ಒಂದು ಕಲೆಯ ಬಗ್ಗೆ ಆಸಕ್ತಿ ಇರಬೇಕು.‌ ಅದರ ಬಗ್ಗೆ ಅರಿವು ಮೂಡಿಸುವ ಹಾಗೂ ವೇದಿಕೆ ಒದಗಿಸುವ ಪ್ರಯತ್ನವನ್ನು ಉದಯವಾಣಿ ಮಾಡುತ್ತಿದೆ ಎಂದರು.

ಶಾಸಕರ ಭೇಟಿ
ಕಾರ್ಯಕ್ರಮಕ್ಕೆ ಆಗಮಿಸಿದ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಹಾಗೂ ಮಾಜಿ ಶಾಸಕ‌ ಕೆ. ಗೋಪಾಲ ಪೂಜಾರಿ ಮಕ್ಕಳಿಗೆ ಶುಭಹಾರೈಸಿದರು.ಉಡುಪಿ ಆರ್ಟಿಸ್ಟ್ ಫೋರಂನ ಮಂಜುನಾಥ ಮಯ್ಯ ಮತ್ತಿತರರು ಉಪಸ್ಥಿತರಿದ್ದರು.

ಮೊದಲ ಬಾರಿಗೆ ಆಯೋಜನೆ
1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಹಲವಾರು ವರ್ಷಗಳಿಂದ ಚಿಣ್ಣರ ಬಣ್ಣ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸುತ್ತಿದ್ದು, ಇದೇ ಮೊದಲ ಬಾರಿಗೆ ಬೈಂದೂರು ತಾಲೂಕಿನಲ್ಲಿಯೂ ಈ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ವಿಶೇಷ. ಭಾಗವಹಿಸಿದ ಮಕ್ಕಳಿಗೆ ಪ್ರಮಾಣಪತ್ರದೊಂದಿಗೆ ಗಿಫ್ಟ್, ಹ್ಯಾಂಪರ್ ನೀಡಲಾಯಿತು.

ಪ್ರತೀ ವಿಭಾಗದಲ್ಲೂ ಪ್ರಥಮ, ದ್ವಿತೀಯ, ತೃತೀಯ ಹಾಗೂ ಐದು ಸಮಾಧಾನಕರ ಬಹುಮಾನಗಳಿದ್ದು, ತಾಲೂಕು ಮಟ್ಟದ ಸ್ಪರ್ಧೆಗಳ ಫಲಿತಾಂಶ ಮತ್ತು ಬಹುಮಾನ ವಿಜೇತರ ಚಿತ್ರಗಳನ್ನು ‘ಉದಯವಾಣಿ’ ದಿನಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತದೆ. ತಾಲೂಕಿನ ವಿಜೇತರಿಗೆ ಜಿಲ್ಲಾ ಮಟ್ಟದ ಸ್ಪರ್ಧೆಗೆ ಪ್ರತೀ ವಿಭಾಗದಲ್ಲೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಗಳಿಸಿದ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗುವುದು.

ಪ್ರಸರಣ ವಿಭಾಗದ ಸಹಾಯಕ ವ್ಯವಸ್ಥಾಪಕ ಪ್ರಕಾಶ್ ನಾಯಕ್ ಪ್ರಸ್ತಾವಿಸಿ, ವರದಿಗಾರ ಪ್ರಶಾಂತ್ ಪಾದೆ ಸ್ವಾಗತಿಸಿದರು. ಮಾರುಕಟ್ಟೆ ವಿಭಾಗದ ಉಡುಪಿ ವಿಭಾಗೀಯ ಮುಖ್ಯಸ್ಥ ರಾಧಾಕೃಷ್ಣ ಭಟ್ ವಂದಿಸಿ, ವರದಿಗಾರ ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿದರು. ಮಾರುಕಟ್ಟೆ ವಿಭಾಗದ ರಾಘವೇಂದ್ರ ಪ್ರಭು, ಹರೀಶ್ ಜಾಲಾಡಿ, ಸಂತೋಷ್ ಇಂದ್ರಾಳಿ, ಪ್ರಸರಣ ವಿಭಾಗದ ವಿಶ್ವನಾಥ್ ಬೆಳ್ವೆ, ಆನ್ ಲೈನ್ ವಿಭಾಗದ ನಾಗೇಂದ್ರ ತ್ರಾಸಿ, ವರದಿಗಾರ ಕೃಷ್ಣ, ಗಿರೀಶ್ ಶಿರೂರು ಸಹಕರಿಸಿದರು.

1500 ಕ್ಕೂ ಅಧಿಕ ಮಂದಿ ಭಾಗಿ

1ರಿಂದ 3, 4ರಿಂದ 7, 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 3 ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದ್ದು, ಬೈಂದೂರು ತಾಲೂಕಿನ ಬೇರೆ ಬೇರೆ ಭಾಗಗಳಿಂದ ನಿರೀಕ್ಷೆಗೂ ಮೀರಿ, 1,500 ಕ್ಕೂ ಅಧಿಕ ಮಂದಿ ಮಕ್ಕಳು ಪಾಲ್ಗೊಂಡಿದ್ದರು.

ಚಿಣ್ಣರಲ್ಲಿ ಅತ್ಯುತ್ಸಾಹ

ಬೈಂದೂರು ತಾಲೂಕಿನ ಶಿರೂರಿನಿಂದ‌ ಮರವಂತೆ, ಕೊಲ್ಲೂರು, ಕಾಲ್ತೋಡು, ಉಪ್ಪುಂದ, ಕಂಬದಕೋಣೆ ಮಾತ್ರವಲ್ಲದೆ ಸುತ್ತಮುತ್ತಲಿನ ಬೇರೆ ಬೇರೆ ಕಡೆಗಳಿಂದ ಚಿಣ್ಣರು ಚಿತ್ರಕಲೆಗೆ ಆಗಮಿಸಿದ್ದರು. ಚಿತ್ರ ಬಿಡಿಸುವಲ್ಲಿ ಮಕ್ಕಳಲ್ಲಿಯೂ ಅತ್ಯುತ್ಸಾಹ ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next