ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ಅತಿ ವೃಷ್ಟಿಯಿಂದ ಹೆಚ್ಚಿನ ಹಾನಿ, ಅವಘಡಗಳು ಸಂಭವಿಸಿದೆ. ಈ ಬಗ್ಗೆ ಜಿಲ್ಲಾಡಳಿತದೊಂದಿಗೆ ಚರ್ಚಿಸಿದ್ದು, ಸೂಕ್ತ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸಲಹೆ ನೀಡಿದ್ದೇನೆ ಎಂದು ಶಾಸಕ ಎಂಪಿ ಕುಮಾರಸ್ವಾಮಿ ತಿಳಿಸಿದರು.
ಈ ಕುರಿತು ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಏಳು ದಿನಗಳಿಂದ ಮತ್ತೆ ಮಳೆ ಆರ್ಭಟದಿಂದ ಮನೆಗಳ ಕುಸಿತು, ಭೂಕುಸಿತ, ರಸ್ತೆ, ಚರಂಡಿ, ತಡೆಗೋಡೆಗಳಿಗೆ ಸಾಕಷ್ಟು ಹಾನಿಯಾಗಿವೆ. ರೈತರ ಬೆಳೆಗಳು ನಾಶವಾಗಿದ್ದು, ಕೃಷಿ ಚಟುವಟಿಕೆ ಸ್ತಬ್ದವಾಗಿದೆ. ಜಿಲ್ಲೆಯ ಕಳಸ ಮತ್ತು ಮೂಡಿಗೆರೆ ತಾಲೂಕಿನಲ್ಲಿ ಹೆಚ್ಚಿನ ಹಾನಿ ಉಂಟಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ಇಸ್ಲಾಂ ವಿರುದ್ಧವಾಗಿರುವ ನಿನ್ನಂಥ ಕಾಫೀರರನ್ನು ಕೊಲ್ಲುವ ಅಧಿಕಾರವಿದೆ:ಫರ್ಜಾದ್ ಗೆ ತಾಲಿಬಾನ್
ಕಳೆದ 2019ರಿಂದ ನಿರಂತರ ಅತೀವೃಷ್ಟಿ ಉಂಟಾಗಿದೆ. ಪರಿಹಾರ ಕಾರ್ಯಗಳು ಪ್ರಗತಿಯಲ್ಲಿದೆ. ಮತ್ತೆ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಪುನರ್ನಿರ್ಮಾಣ ಆಗಿರುವ ಕಾಮಗಾರಿಗಳಿಗೂ ಹಾನಿಯಾಗಿದೆ. ರೈತರಿಗೆ ಬೆಳೆಹಾನಿ ಪರಿಹಾರ ನೀಡಲಾಗುತ್ತಿದೆ. ಸರ್ವರ್ ಸಮಸ್ಯೆಯಿಂದ ಕೆಲ ರೈತರಿಗೆ ಬೆಳೆ ಪರಿಹಾರ ತಲುಪಿಲ್ಲ. ಸರ್ವರ್ ಸರಿಪಡಿಸಲಾಗಿದ್ದು, ಶೀಘ್ರವೇ ಪರಿಹಾರ ಸಿಗಲಿದೆ ಎಂದು ಭರವಸೆ ನೀಡಿದರು.
ಮೂಡಿಗೆರೆಯನ್ನು ಅತಿವೃಷ್ಟಿ ಪ್ರದೇಶವಾಗಿ ಸರ್ಕಾರ ಘೋಷಿಸಲು ನಾನು ವಿಧಾನಸೌಧದ ಎದುರು ಪ್ರತಿಭಟಿಸಬೇಕಾಯಿತು. ಕಳೆದ ವಾರ ಅತೀವೃಷ್ಟಿ ಹಾನಿ ಅಧ್ಯಯನಕ್ಕೆ ರಾಜ್ಯ ಅಧಿಕಾರಿಗಳ ತಂಡ ಭೇಟಿನೀಡಿ ಸಮೀಕ್ಷೆ ನಡೆಸಿದೆ. ಈಗ ಮತ್ತೆ ಮಳೆ ಆರ್ಭಟದೊಂದಿಗೆ ಚಳಿಯ ವಾತಾವರಣ ಏರ್ಪಟ್ಟಿದೆ. ಊರುಬಗೆ ಭೈರಾಪುರ, ಕುಂಬರಡಿ, ಗುತ್ತಿ, ತರುವೆ ಗ್ರಾಮಗಳಲ್ಲಿ ಮಳೆ ಹೆಚ್ಚಾಗಿರುವುದರಿಂದ ಈ ಭಾಗದಲ್ಲಿ ಮಳೆ ಮಾಪನ ಕೇಂದ್ರ ಸ್ಥಾಪಿಸಬೇಕಾಗಿದೆ ಎಂದರು.
ಕಾಡಾನೆ, ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿರುವ ಹಲವೆಡೆ ಜನರು ಜೀವಭಯದಿಂದ ಮನೆಬಿಟ್ಟು ಹೊರಗೆ ಬಾರದಂತಹ ದುಸ್ಥಿತಿ ಉಂಟಾಗಿದೆ. ಕಾಡಾನೆಗಳಿಂದ ಅಪಾರ ಬೆಳೆನಷ್ಟ ಉಂಟಾಗುತ್ತಿದೆ. ಕೃಷಿ ಜಮೀನು ಪಾಳುಬಿಟ್ಟಿದ್ದಾರೆ. ಕಾಡಾನೆಗಳು ಗ್ರಾಮಗಳಿಗೆ ಬಾರದಂತೆ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ : ಕಾಂಗ್ರೆಸ್ ಅಂದರೆ ಗಿಮಿಕ್, ಗಿಮಿಕ್ ಅಂದರೆ ಕಾಂಗ್ರೆಸ್: ಶ್ರೀರಾಮುಲು ಟೀಕೆ