ಮಂಗಳೂರು: ಉದಯವಾಣಿಯು ಪಿಯುಸಿ ಪರೀಕ್ಷೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಡೊಂಗರಕೇರಿಯ ಕೆನರಾ ಹೈಸ್ಕೂಲ್‌ನ ಶ್ರೀ ಭುವನೇಂದ್ರ ಸಭಾ ಭವನದಲ್ಲಿ ಮೇ 4 ರಂದು ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಪರಿಣತರು ಕೆರಿಯರ್ ಮಾರ್ಗದರ್ಶನ ನೀಡುವರು.
ಬೆಳಗ್ಗೆ 9 ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಸಂಪೂರ್ಣ ಉಚಿತ. ವಿಜಾನ, ಕಲಾ, ವಾಣಿಜ್ಯ, ಸ್ಪರ್ಧಾತ್ಮಕ ಪರೀಕ್ಷೆ, ಡಿಪ್ಲೊಮಾ ಕೋರ್ಸ್‌ಗಳು ಹಾಗೂ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಲಾಗುವುದು.
ಪಿಯುಸಿ ಪಾಸಾದವರು ಮತ್ತು ವ್ಯಾಸಂಗ ಮಾಡುತ್ತಿರುವವರು ಇದರಲ್ಲಿ ಭಾಗವಹಿಸಬಹುದು. ಈಗಾಗಲೇ ಪತ್ರಿಕೆಯ ವಾಟ್ಸಪ್ ನಂಬರ್ ಮೂಲಕ ಹೆಸರು ನೋಂದಾಯಿಸಿಕೊಂಡವರು ತಮ್ಮ ಬರುವಿಕೆಯನ್ನು ಒಂದು ಸಂದೇಶ (ಮೆಸೇಜ್) ಕಳಿಸುವ ಮೂಲಕ ಖಚಿತಗೊಳಿಸಿ. ಇದುವರೆಗೆ ಹೆಸರು ನೋಂದಾಯಿಸದವರೂ ನೇರವಾಗಿ ಸ್ಥಳದಲ್ಲಿಯೇ ಹೆಸರು ನೋಂದಾಯಿಸಬಹುದು.
ವಿಜ್ಞಾನ ವಿಷಯದ ಯಾವ ಕೋರ್ಸ್‌ಗಳಿಗೆ ಬೇಡಿಕೆ ಇದೆ? ಯಾವ ಕೋರ್ಸ್‌ಗಳು ಹೆಚ್ಚಿನ ಉದ್ಯೋಗಾ ವಕಾಶಗಳನ್ನು ಕಲ್ಪಿಸಿ ಕೊಡಬಲ್ಲದು? ನಮ್ಮ ಕೋರ್ಸ್ ಮುಗಿಯವವರೆಗೂ ಆ ಕೋರ್ಸ್‌ಗೆ ಬೇಡಿಕೆ ಇರುತ್ತದೆಯೇ? ವಿಜ್ಞಾನ ಓದಿ ವೈದ್ಯರಾಗದೇ ಇನ್ನೇನು ಮಾಡಬಹುದು? ನನಗೆ ಜೀವಶಾಸ್ತ್ರ ಬಹಳ ಇಷ್ಟ. ಆದರೆ ಮೆಡಿಕಲ್ ಬೇಡ. ಏನು ಮಾಡಬಹುದು? ನನ್ನಿಷ್ಟಕ್ಕೆ ಸಂಬಂಧಿಸಿದ ಕೋರ್ಸ್ ಸ್ವೀಕರಿಸಿದರೆ ಉದ್ಯೋಗ ಸಿಗುವುದೇ? ಬಿಕಾಂ ಪದವಿ ಪಡೆದು ಸಂಶೋಧನೆಗೆ ಬರಬಹುದೇ? ಬಿಬಿಎಂ, ಬಿಬಿಎ ಬಿಟ್ಟರೆ ಇನ್ಯಾವ ಅವಕಾಶಗಳಿವೆ? ಕಲಾ ವಿಷಯ ಓದಿದರೆ ಅವಕಾಶಗಳಿವೆಯೇ?-ವಿದ್ಯಾರ್ಥಿಗಳ /ಪೋಷಕರ ಇಂಥ ಹಲವು ಪ್ರಶ್ನೆಗಳಿಗೆ ನಮ್ಮ ಸಂಪನ್ಮೂಲ ವ್ಯಕ್ತಿಗಳು ಉತ್ತರಿಸುವರು.
ಡಿಪ್ಲೊಮಾ ಕೋರ್ಸ್ ಮಾಹಿತಿ
ಕೇವಲ ಪದವಿಗೆ ಸಂಬಂಧಿಸಿದ ವಿಷಯಗಳಷ್ಟೇ ಅಲ್ಲದೇ, ಡಿಪ್ಲೊಮಾ ಕೋರ್ಸ್‌ಗಳ ಕುರಿತೂ ಮಾಹಿತಿ ಒದಗಿಸುತ್ತಿರುವುದು ಇದೇ ಮೊದಲು. ವಿಜ್ಞಾನ, ವಾಣಿಜ್ಯ ವಿಷಯಗಳ ಆಸಕ್ತಿ ಇಲ್ಲದಿದ್ದವರು ಈ ಕೋರ್ಸ್‌ಗಳತ್ತ ಮುಖ ಮಾಡಬಹುದಾಗಿದೆ.