ಹೊಸಪೇಟೆ: ಆತ್ಮ ವಿಶ್ವಾಸ ಹಾಗೂ ಕಠಿಣ ಪರಿಶ್ರಮದಿಂದ ವಿದ್ಯಾರ್ಥಿಗಳು ಯಶಸ್ಸು ಕಾಣಬೇಕು ಎಂದು ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ನಗರದ ಸ್ಟೇಶನ್ ರಸ್ತೆಯಲ್ಲಿರುವ ಚಾಣಕ್ಯ ಕರಿಯರ್ ಅಕಾಡೆಮಿ, ಧಾರವಾಡ ವತಿಯಿಂದ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಗಳು ಆರ್ಶೀವಚನ ನೀಡಿದರು. ಕನಸು ಮತ್ತು ಗುರಿಯಿಲ್ಲದೇ ಯಶಸ್ಸು ಕಾಣುವುದು ಅಸಾಧ್ಯ.
ಯಶಸ್ಸು ಎಂದಿಗೂ ಸೋಮಾರಿಗಳ ಬಳಿ ಸುಳಿಯುವುದಿಲ್ಲ. ಅದು ಶ್ರಮಿಕರ ಸೊತ್ತು. ಆದರ್ಶ ಮತ್ತು ಕನಸ್ಸುಗಳಿಂದ ಯಶಸ್ಸಿನ ಮೆಟ್ಟಿಲು ಏರಬಹುದು. ಇಂಥ ಕನಸುಗಳನ್ನು ಹೊತ್ತು ವಿದ್ಯಾರ್ಥಿಗಳು ಯಶಸ್ಸನ್ನು ತಮ್ಮದಾಗಿಸಿಕೊಳ್ಳಬೇಕು ಎಂದರು.
ಸಿನಿಮಾ ಹೀರೋ ಅಥವಾ ಮಾತ್ಯಾರೋ ನಿಮಗೆ ಆದರ್ಶ ನಾಯಕರು ಆಗುವುದು ಬೇಕಿಲ್ಲ. ನಿಮ್ಮ ತಂದೆ-ತಾಯಿಗಳಿಗೆ ನಿಮಗೆ ಆದರ್ಶವಾಗಬೇಕು. ಅವರೇ ನಿಮ್ಮ ಬದುಕಿಗೆ ನಿಜವಾದ ಹೀರೋಗಳು. ಶ್ರಮದ ಹಿಂದಿನ ಅವರ ಬೆವರಿನ ಹನಿ ಮಹತ್ವ ನೀವು ಅರಿತಿರಬೇಕು.ಆಗ ಮಾತ್ರ ನೀವು ಯಶಸ್ವಿ ಶಿಖರ ಏರಲು ಸಾಧ್ಯವಾಗುವುದು ಎಂದರು.
ಚಾಣಕ್ಯ ಕರಿಯರ್ ಅಕಾಡೆಮಿ ನಿರ್ದೇಶಕ ಪ್ರದೀಪ್ ಗುಡ್ಡದ್, ಅಕ್ಕಿ ಶಿವುಕುಮಾರ್, ಹೇಮರೆಡ್ಡಿ, ಗಿರಿದರ ಗುಡ್ಡದ್, ಅಳವಂಡಿ ಯಂಕಣ್ಣ, ಮೂಲಿ ರವಿಪ್ರಸಾದ್, ವೈ. ಎಚ್.ಗೌಡರು ಹಾಗೂ ವಿದ್ಯಾರ್ಥಿಗಳು ಇದ್ದರು.