Advertisement
ಉಡುಪಿಯ “ಆರ್ಟಿಸ್ಟ್ ಫೋರಂ’ನ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ 16 ತಾಲೂಕುಗಳಲ್ಲಿ ನಡೆದಿದ್ದ ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ಅತಿ ಕಿರಿಯ, ಕಿರಿಯ ಹಾಗೂ ಹಿರಿಯ ವಿಭಾಗದಲ್ಲಿ ವಿಜೇತರಾದ 144 ಮಕ್ಕಳು ಉಭಯ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಚಿಣ್ಣರ ಬಣ್ಣಕ್ಕೆ ಮೆರುಗು ತುಂಬಿದರು. ಸುಮಾರು2 ತಾಸುಗಳ ಕಾಲ ನಡೆದ ಸ್ಪರ್ಧೆಯಲ್ಲಿ ಅತಿಕಿರಿಯ ಹಾಗೂ ಕಿರಿಯ ವಿಭಾಗಗಳ ಮಕ್ಕಳು ಅವರ ಕಲ್ಪನೆಯ ವಸ್ತುಗಳಲ್ಲಿ ಚಿತ್ರ ಬಿಡಿಸುವ ಅವಕಾಶ ಪಡೆದರೆ ಹಿರಿಯ ವಿಭಾಗದ ಮಕ್ಕಳಿಗೆ “ಸಂಗೀತ ಕಚೇರಿ’, “ಖೋಖೋ ಪಂದ್ಯ’ ಮತ್ತು “ವೈಜ್ಞಾನಿಕ ಕೃಷಿ ಪದ್ದತಿ’, “ಸಿಡಿಮದ್ದು ಪ್ರದರ್ಶನ’ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಆರಿಸಿಕೊಂಡು ಚಿತ್ರಬಿಡಿಸುವ ಅವಕಾಶವನ್ನು ನೀಡಲಾಗಿತ್ತು.ಚಿಣ್ಣರ ಬಣ್ಣ ಸ್ಪರ್ಧೆಯನ್ನು ಬ್ರಿಟಿಷ್ ಬಯೋಲಾಜಿಕಲ್ ಸಂಸ್ಥೆಯ ಪ್ರಾದೇಶಿಕ ಪ್ರಬಂಧಕ ಸಿ.ಎಸ್. ಭಂಡಾರಿಯವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಬೆಳಗ್ಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಕ್ಕಳಲ್ಲಿ ಕಲಾಸಕ್ತಿಯನ್ನು ಎಳೆಯ ಪ್ರಾಯದಿಂದಲೇ ಮೂಡಿಸುವುದು ಅವರ ಮುಂದಿನ ಭವಿಷ್ಯದಲ್ಲಿ ಬಹಳಷ್ಟು ನೆರವಾಗುತ್ತದೆ. ಅದರಲ್ಲೂ ಚಿತ್ರಕಲೆ ಅಭ್ಯಾಸ ಮುಂದಕ್ಕೆ ವೃತ್ತಿಶಿಕ್ಷಣಕ್ಕೆ ಪೂರಕವಾಗುತ್ತದೆ ಎಂದರು. ಮಕ್ಕಳಲ್ಲಿ ಚಿತ್ರಕಲೆ ಆಸಕ್ತಿಯನ್ನು ಬೆಳೆಸುವಲ್ಲಿ ಮತ್ತು ಅವರ ಪ್ರತಿಭೆಗಳು ಪ್ರಕಾಶಿಸುವಲ್ಲಿ ಉದಯವಾಣಿ ಚಿಣ್ಣರ ಬಣ್ಣ ಉದಾತ್ತ ವೇದಿಕೆಯಾಗಿದೆ.ಈ ಸ್ಪರ್ಧೆಯನ್ನು ಉದಯವಾಣಿ ಕಳೆದ ಹಲವಾರು ವರ್ಷಗಳಿಂದ ಯಶಸ್ವಿಯಾಗಿ ಆಯೋಜಿಸಿಕೊಂಡು ಬರುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಅವರು ಅಭಿನಂದಿಸಿದರು.
Related Articles
Advertisement
ಉಡುಪಿ ಆರ್ಟಿಸ್ಟ್ ಫೋರಂ ಅಧ್ಯಕ್ಷ ರಮೇಶ್ ರಾವ್, ಹಿರಿಯ ಸದಸ್ಯ ಶಕು ಪಾಂಗಾಳ, ಉದಯವಾಣಿ ಮಂಗಳೂರು ವಲಯ ಪ್ರಬಂಧಕ ಸತೀಶ್ ಮಂಜೇಶ್ವರ ಉಪಸ್ಥಿತರಿದ್ದರು.ಉಭಯ ಜಿಲ್ಲಾಮಟ್ಟದ ಸ್ಪರ್ಧೆಗೆ ಮುಂಚಿತವಾಗಿ ತಾಲೂಕುಮಟ್ಟದಲ್ಲಿ ಸಬ್‌ಜೂನಿಯರ್, ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳಲ್ಲಿ ನಡೆದಿದ್ದ ಸ್ಪರ್ಧೆಗಳಲ್ಲಿ ಪ್ರಥಮ,ದ್ವಿತೀಯ ಹಾಗೂ ತೃತೀಯ ವಿಭಾಗಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಒಟ್ಟು 144 ವಿಜೇತ ವಿದ್ಯಾರ್ಥಿಗಳಿಗೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉದಯವಾಣಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ವಿನೋದ್ ಕುಮಾರ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ, ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಗೌರವ ಕಾರ್ಯದರ್ಶಿ ರಂಗನಾಥ ಭಟ್, ಮೊಡರ್ನ್ಕಿಚನ್ ಸಂಸ್ಥೆಯ ಮಹಾಪ್ರಬಂಧಕ ಸುಧೀಂದ್ರ ಕಾಮತ್, ಹ್ಯಾಂಗೋ ಸಂಸ್ಥೆಯ ಮೆನೇಜರ್ (ಅಪರೇಶನ್) ರಾಕೇಶ್ ಕಾಮತ್ ಹಾಗೂ ಆರ್ಟಿಸ್ಟ್ ಫೋರಂ ಉಡುಪಿ ಅಧ್ಯಕ್ಷ ರಮೇಶ್ ರಾವ್ ಅವರು ಬಹುಮಾನ ನೀಡಿ ಅಭಿನಂದಿಸಿದರು.