Advertisement
ಭಾರತ ನಕಾಶೆಯ ಕರ್ನಾಟಕ ಭೂಭಾಗದಲ್ಲಿ ಹೆಸರೇಕೇ? ಯಾರಿಗೂ ಅಷ್ಟೊಂದು ಪರಿಚಯವಿಲ್ಲದ ಪುಟ್ಟದೊಂದು ಹಳ್ಳಿ ಇಂಥದೊಂದು ದೊಡ್ಡ ಪ್ರಯೋಗ ನಡೆಸುತ್ತದೆಂದು ಯಾರೂ ಊಹಿಸಿರಲಿಲ್ಲ. ಆಗ ಪ್ರಯೋಗವೆನ್ನುವುದು ಹೆಚ್ಚು ನಡೆಯುತ್ತಿದ್ದುದೇ ದೊಡ್ಡ ನಗರಗಳಲ್ಲಿ. ಮೂಲಸೌಲಭ್ಯಗಳ ಕೊರತೆಯಿಂದ ಬಸವಳಿಯುತ್ತಿದ್ದ ಗ್ರಾಮ ಭಾರತದ ನಕಾಶೆಯೊಳಗೆ ಈ ಊರಿಗೆ ಮಹತ್ವ ಬಂದಿದ್ದೇ ಅಚ್ಚರಿಯ ಸಂಗತಿ,ಹುಲಿಗಳು ಓಡಾಡುತ್ತಿದ್ದ ಕಾಡಿನಂಚಿನ ಬೋರ್ಗುಡ್ಡೆಯಲ್ಲಿ ಮತ್ತೂಂದು ಮಹಾ ಪ್ರಯೋಗದ ವೇದಿಕೆಯದು. ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಆಗಲೇ ಕೆಲವು ಯಶಸ್ವಿ ಪ್ರಯೋಗಗಳು ನಡೆದಿದ್ದ ಬಂಜರು ಭೂಮಿಯಲ್ಲಿ ಕೆಲವೇ ಕೆಲವು “ಕಮಾಂಡರ್’ ಗಳ ಕನಸಿನ ಪ್ರಯೋಗಕ್ಕೆ ಸದ್ದಿಲ್ಲದೆ ಸಿದ್ಧತೆ ನಡೆದಿತ್ತು. ಅಕ್ಷರ ರಂಗದ “ವಾರ್‌ಫೀಲ್ಡ್’ಗೆ ಇಳಿಯಲು ಯಾವೆಲ್ಲ ಶಸ್ತ್ರಗಳು ಬೇಕಿತ್ತೋ
ಅವನ್ನೆಲ್ಲ ವಿರೋಧಿಗಳ ರಾಡಾರ್‌ಕಣ್ಣಿಗೂ ಬೀಳದ ರೀತಿಯಲ್ಲಿ ಸಜ್ಜು ಮಾಡಲಾಗಿತ್ತು. ಎಷ್ಟೋ ಜನರಿಗೆ ಏನಾಗುತ್ತಿದೆ ಎಂಬುದು ಗೊತ್ತಾಗಿದ್ದೇ ಪ್ರಯೋಗ ಬಹಿರಂಗವಾದಾಗಲೇ…
Related Articles
Advertisement
ಮೊದಲ ಸಂಚಿಕೆಯ ತವಕಯಾವುದೇ ವಿಷಯಗಳಾಗಲಿ ಅದರಲ್ಲಿ ಮೊದಲು ಎಂಬುದಕ್ಕೆ ವಿಶೇಷವಾದ ಸ್ಥಾನಮಾನ ಇದ್ದೇ ಇದೆ. ಹಾಗೆಯೇ ಉದಯವಾಣಿಯ ಮೊದಲ ಸಂಚಿಕೆ ಕೂಡ ಇಂದು ಹೆಗ್ಗುರುತು ಆಗಿದೆ. ಕೆಲವು ದಿನಗಳ ಪ್ರಯೋಗ ನಡೆಸಿದ್ದರೂ ಮೊದಲ ಸಂಚಿಕೆ ಹೊರ ತರುವ ಪುಳಕ ಅಂದು ಕೂಡ ವಿಶೇಷವೇ ಆಗಿತ್ತು. ಮಾಲಕರಿಂದ ಹಿಡಿದು ಅನುಭವಿ ಸಿಬಂದಿಯವರೆಗೆ ಎಲ್ಲರೂ ಅಕ್ಷರಗಳಲ್ಲಿ ಕಟ್ಟಿಕೊಡಲಾಗದ ಆತುರದಲ್ಲಿಯೇ ಇದ್ದರು. ಮೊದಲ ಸಂಚಿಕೆಯಲ್ಲಿ ಏನಾದರೊಂದು ವಿಶೇಷ ಇರಬೇಕು ಎಂದು ಭಾವಿಸಿದ ಮಾಲಕರು ಅದಕ್ಕಾಗಿ ಹುಡುಕಾಟ ನಡೆಸಿದ್ದರು. ವಿಶೇಷವಾದ ಚಿತ್ರಗಳು ಸಿಕ್ಕಿದರೂ ಸಾಕು ಎಂಬ ಆಲೋಚನೆ ಇತ್ತು. ಕೊನೆಗೆ ವ್ಯಂಗ್ಯಚಿತ್ರವೊಂ ದನ್ನು ಬಿಡಿಸುವ ಆಲೋಚನೆ ಮೂಡಿ ಅದರಂತೆ ಮುನ್ನಡೆದರು. ಈ ರೇಖಾ ಚಿತ್ರದಲ್ಲಿದ್ದ ರಾಜಕಾರಣಿಗಳೂ ಅಸಾಮಾನ್ಯ ರಲ್ಲ. ಆಗ ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯೂ ಹಾರ ಹಿಡಿದು ನಿಂತಿದ್ದರು. ಜತೆಗೆ ನಿಜಲಿಂಗಪ್ಪ, ನೀಲಂ ಸಂಜೀವ ರೆಡ್ಡಿ ನಿಂತಂತೆ ತೋರುತ್ತಿದೆ. ಯಾಕೆಂದರೆ, ಆಗಷ್ಟೇ ಕಾಂಗ್ರೆಸ್ ನಾಯಕರ ನಡುವೆ ಶೀತಲ ಸಮರ ಆರಂಭವಾಗ್ತಿತ್ತು. ಇಂದಿರಾ ಅವರು ವಿ.ವಿ. ಗಿರಿ ಅವರನ್ನು ರಾಷ್ಟಪತಿ ಹುದ್ದೆಗೆ ಬೆಂಬಲಿಸುವುದಾಗಿ ಪ್ರಕಟಿಸಿದ್ದರು. ಜತೆಗೆ ಆಗಿನ ಆರ್ಥಿಕ ಸಚಿವರ ಗಮನಕ್ಕೆ ತಾರದೇ ಬ್ಯಾಂಕುಗಳ ರಾಷ್ಟ್ರೀಕರಣವನ್ನು ಪ್ರಕಟಿಸಿದ್ದರು. ಇವರೆಲ್ಲರೂ ಬರ್ತ್‌ಡೇ ಬಾಯ್‌ಯನ್ನು ಬೆಂಬಲಿಸಲು ಬಂದಿರುವಂತೆ ಚಿತ್ರವಿದೆ. 10 ಪೈಸೆ-10 ಮಂದಿ
ಮೊದಲ ಸಂಚಿಕೆಯನ್ನು ಸಿದ್ಧಪಡಿಸಿದ್ದು ಸುಮಾರು 10
ಮಂದಿಯ ತಂಡ. ಆಗ ಸತೀಶ್ ಪೈ ಅವರು ಸಂಪಾದಕರಾಗಿದ್ದರು. ಬನ್ನಂಜೆ ರಾಮಾಚಾರ್ಯ ಮತ್ತು ಗೋವಿಂದಾಚಾರ್ಯ ಸೋದರರ ನೇತೃತ್ವದಲ್ಲಿ ಎನ್. ಗುರುರಾಜ್ ಸಹಿತ 10 ಮಂದಿಯ ತಂಡ ಪುಟ ಕಟ್ಟುವಲ್ಲಿ ತೊಡಗಿಸಿಕೊಂಡಿದ್ದರು. ಪ್ರಾರಂಭದ ವರ್ಷಗಳಲ್ಲಿ ಸುದ್ದಿ ಮನೆಯಲ್ಲಿ ಬಾಲಕೃಷ್ಣ ರಾವ್, ಜಿ.ಕೆ. ಮಧ್ಯಸ್ಥ, ಜಯರಾಮ ಅಡಿಗ, ಶ್ರೀಕರ ಭಟ್, ಗಣಪತಿ ಭಟ್, ಶ್ರೀಪತಿ ಹೆಬ್ಟಾರ್, ಕೃಷ್ಣಮೂರ್ತಿ ನಿಟಿಲಾಪುರ, ರಾಘವ ನಂಬಿಯಾರ್, ವಸಂತ ಪಲಿಮಾರ್ಕರ್, ದಾಮೋದರ ಕಕ್ರಣ್ಣಾಯ, ಸಂತೋಷ್ ಹೆಗ್ಡೆ ಆತ್ರಾಡಿ, ಎಂ.ವಿ. ಮಲ್ಯ, ಎಸ್.ಎಲ್. ಭಟ್, ಈಶ್ವರ ದೈತೋಟ ಮೊದಲಾದವರು ಕಾರ್ಯನಿರ್ವಹಿಸಿದ್ದರು. ಇನ್ನು ಕೆಲವರು ಕೆಲವೇ ತಿಂಗಳುಗಳ ಕಾಲ ಕೆಲಸ ನಿರ್ವಹಿಸಿದ್ದೂ ಇದೆ. ಜಾಹೀರಾತು, ಪ್ರಸರಣ ವಿಭಾಗಗಳಲ್ಲಿ ರಾಮಕೃಷ್ಣ ನಾಯಕ್, ಶಿವಗುರು, ತಿಮ್ಮಪ್ಪ, ತಾರಾನಾಥ ಮೊದಲಾದವರು ಆರಂಭಿಕ ವರ್ಷಗಳಲ್ಲಿ ಸೇವೆ ಸಲ್ಲಿಸಿದ್ದರು. ಕೊನೆಯ ಕ್ಷಣದ ಧಾವಂತ
ಸುದ್ದಿ ಮನೆ ಮತ್ತು ಯುದ್ಧ ರಂಗ ಒಂದೇ ಎನ್ನಲಾಗುತ್ತದೆ. ಅದು ಅಂದಿನಿಂದ ಇಂದಿನವರೆಗೂ ಬದಲಾಗಲೇ ಇಲ್ಲ. ಎಷ್ಟೇ ಶಸ್ತ್ರಗಳಿದ್ದರೂ ಏನೇ ಯೋಜನೆಗಳಿದ್ದರೂ ಯುದ್ಧ ಭೂಮಿಯ ಸ್ಥಿತಿ ಹೇಗೆ ಕ್ಷಣ ಕ್ಷಣಕ್ಕೆ ಬದಲಾಗುತ್ತದೆಯೋ ಅದೇ ರೀತಿ ಸುದ್ದಿ ಮನೆಯ ವಾತಾವರಣವೂ ಕ್ಷಣ ಕ್ಷಣಕ್ಕೂ ಬದಲಾಗುತ್ತಿದೆ. ಇದು ಐವತ್ತು ವರ್ಷಗಳ ಹಿಂದೆಯೂ ಹಾಗೆಯೇ ಇತ್ತು. ಏಕೆಂದರೆ ಅದು ಸುದ್ದಿಗಳ ನಡುವಿನ ಹೊಡೆದಾಟದ ಮನೆ. ಮೊದಲ ಸಂಚಿಕೆಗೆ ಕೂಡ ಎಷ್ಟೇ ಯೋಜನೆ ಮಾಡಿದ್ದರೂ ಕೊನೆಯ ಕ್ಷಣದ ಧಾವಂತ ತಪ್ಪುತ್ತಿರಲಿಲ್ಲ. ಟೆಲಿಪ್ರಿಂಟರ್‌ನಲ್ಲಿ ನಾಲ್ಕು ಪದಗಳ ಫ್ಲ್ಯಾಶ್ ಸುದ್ದಿ ಬಂದರೆ ಅದಕ್ಕೆ ವಿವರಣೆಯೇ ಇರುತ್ತಿರಲಿಲ್ಲ. ಸ್ತಬ್ಧವಾದ ಟಕ್, ಟಕ್ ಶಬ್ದ ಮತ್ತೆ ಕೇಳಿಸಿದಾಗ ಏನೋ ಕಾತರ, ಮತ್ತೆ ನೋಡಿದರೆ ಮತ್ತದೇ ನಾಲ್ಕು ಪದಗಳ ಫ್ಲ್ಯಾಶ್, ಫೋನ್ ಸಂಪರ್ಕಕ್ಕಾಗಿ ಗಂಟೆಗಟ್ಟಲೆ ಕಾದರೂ ಅಸಾಧ್ಯವಾಗುತ್ತಿದ್ದ ಸಂಪರ್ಕ. ಇದರ ನಡುವೆ ಇದ್ಯಾವುದರ ಪರಿವೆಯೇ ಇಲ್ಲದೆ ಸಾಗುತ್ತಿದ್ದ ಗಡಿಯಾರದ ಮುಳ್ಳು. ಒಂದೊಂದೇ ಅಕ್ಷರದ ಮೊಳೆಗಳನ್ನು ಜೋಡಿಸಬೇಕಾದ ಅನಿವಾರ್ಯತೆ ಹೊಂದಿದ್ದ ಪುಟ ಜೋಡಣೆಗಾರನ ಆತಂಕ. ಬ್ಲಾಕ್ ಚಿತ್ರಗಳನ್ನು ಹೊಂದಾಣಿಸುವ ಚಾಕಚಕ್ಯತೆ. . . ಹೀಗೆ ಎಲ್ಲೆಲ್ಲೂ ಧಾವಂತ. ಅದರ ನಡುವೆ ಸಂಭ್ರಮವೂ… ಮೊದಲ ಲೈವ್ ಸಂಚಿಕೆ ಹೊರ ಬರುತ್ತದೆ ಎಂಬ ಖುಷಿ. ಸುದ್ದಿಗಳನ್ನೆಲ್ಲ ಬರೆದ ಬಳಿಕ ಅದನ್ನು ಒಪ್ಪ ಓರಣವಾಗಿ ಮೊಳೆಗಳಲ್ಲಿ ಜೋಡಿಸುವುದು ಎಲ್ಲವೂ ಓಡಾಡಿಕೊಂಡೇ, ಒತ್ತಡದಲ್ಲಿ ಮುಗಿಯುವಷ್ಟರಲ್ಲಿ ಚಳಿಯ ತೀವ್ರತೆ ಏರಿತ್ತು… ಮಧ್ಯರಾತ್ರಿ ದಾಟಿತ್ತು. ಅನಂತರ ಮುದ್ರಣಗೊಂಡು ಊರು ಊರಿಗೆ ಉದಯವಾಣಿ ಸೇರುವಷ್ಟರಲ್ಲಿ ಉದಯಿಸಿದ ನೇಸರ ಮೇಲೇರಿಯಾಗಿತ್ತು. ನಿರೂಪಣೆ: ಕೆ. ರಾಜೇಶ್ ಮೂಲ್ಕಿ ಮಾಹಿತಿ: ಎನ್. ಗುರುರಾಜ್, ದಾಮೋದರ ಕಕ್ರಣ್ಣಾಯ