ಮಂಗಳೂರು:ಜನಪ್ರಿಯ ದೈನಿಕ ಉದಯವಾಣಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಸುದಿನ” ಮನೆ ಮನೆಗೆ ಮಳೆಕೊಯ್ಲು ಮಾಹಿತಿ ಶಿಬಿರವನ್ನು ಬುಧವಾರ ನಗರಾಭಿವೃದ್ಧಿ, ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಅವರು ಉದ್ಘಾಟಿಸಿದರು.
ಮಂಗಳೂರು ಸೇರಿದಂತೆ ಮಹಾನಗರ ಪಾಲಿಕೆ ಪರಿಸರದಲ್ಲಿ ಮಳೆ ನೀರು ಕೊಯ್ಲಿಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ “ಹಸಿರು ಕಟ್ಟಡ” ನೀತಿಯನ್ನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಖಾದರ್ ಈ ಸಂದರ್ಭದಲ್ಲಿ ಹೇಳಿದರು.
ಉರ್ವ ಸ್ಟೋರ್ ಸಮೀಪದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಸಭಾಂಗಣದಲ್ಲಿ ಉದ್ಘಾಟನೆಗೊಂಡ ಮಳೆ ಕೊಯ್ಲು ಮಾಹಿತಿ ಶಿಬಿರ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಜಲತಜ್ಞ ಶ್ರೀಪಡ್ರೆ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ವೇದವ್ಯಾಸ್ ಕಾಮತ್, ದ,ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ದ.ಕ.ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್, ದ.ಕ.ಜಿ.ಪಂ. ಸಿಇಒ ಡಾ.ಸೆಲ್ವಮಣಿ, ಕ್ರೆಡೈ ಅಧ್ಯಕ್ಷ ನವೀನ್ ಕಾರ್ಡೊಜಾ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಉದಯವಾಣಿಯು “ಸುದಿನ” ಮನೆ ಮನೆಗೆ ಮಳೆಕೊಯ್ಲು ಅಭಿಯಾನದ ಮೂಲಕ ನಗರವಾಸಿಗಳನ್ನು ಜಲಸಾಕ್ಷರತೆಯತ್ತ ಜಾಗೃತಗೊಳಿಸುವ ಪ್ರಯತ್ನಕ್ಕೆ ಚಾಲನೆ ನೀಡಿತ್ತು. ಅದರಂತೆ ಕಳೆದ 12 ದಿನಗಳಿಂದ ಮಳೆ ಕೊಯ್ಲು ಅಳವಡಿಕೆಗೆ ಪ್ರೇರಣೆಯಾಗುವ ಯಶೋಗಾಥೆಗಳು ಹಾಗೂ ಆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿತ್ತು.
ಪತ್ರಿಕೆಯ ಆಶಯಕ್ಕೆ ಓದುಗರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಅನೇಕರು ತಮ್ಮ ಮನೆಗಳಲ್ಲಿ ಮಳೆಕೊಯ್ಲು ಅಳವಡಿಸುವುದಕ್ಕೆ ಮುಂದಾಗಿರುವುದು ಶ್ಲಾಘನೀಯ. ಈ ಹಿನ್ನೆಲೆಯಲ್ಲಿ ಮಳೆಕೊಯ್ಲು ಅಳವಡಿಸುವುದಕ್ಕೆ ಮುಂದಾಗಿರುವ ಜನರಿಗೆ ಮತ್ತಷ್ಟು ಅನುಕೂಲ ಕಲ್ಪಿಸುವ ಸದುದ್ದೇಶದಿಂದ ಇಂದು (ಜೂ.19) ಮಳೆಕೊಯ್ಲು ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಉದಯವಾಣಿಯ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದ್ದರು. ಸುರೇಶ್ ಪುದುವೆಟ್ಟು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆನಂದ್. ಕೆ. ವಂದಿಸಿದರು.