ಕುಂದಾಪುರ: ಸಾರ್ವಜನಿಕ ಆಸ್ಪತ್ರೆಯಿಲ್ಲದೆ ತುರ್ತು ಚಿಕಿತ್ಸೆಗಾಗಿ ಹತ್ತಾರು ಕಿ.ಮೀ. ದೂರ ಸಂಚರಿಸ ಬೇಕಾದ ಅನಿವಾರ್ಯತೆಯಿರುವ ಅಮಾಸೆಬೈಲಿನ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಇಲ್ಲಿನ ಆಯುಷ್ ಆರೋಗ್ಯ ಕ್ಷೇಮ ಕೇಂದ್ರ ಹಾಗೂ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಕ್ಕೆ ಕೆಎಂ ಸಿ ಮಂಗಳೂರಿನ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ|ಪದ್ಮನಾಭ್ ಕಾಮತ್ ಅವರು ಗುರುವಾರ(ಏಪ್ರಿಲ್ 22) ತಮ್ಮ ಟ್ರಸ್ಟ್ ಮೂಲಕ ಇಸಿಜಿ ಯಂತ್ರವನ್ನು ಕೊಡುಗೆಯಾಗಿ ನೀಡಿದ್ದಾರೆ.
ಇಂದು ಸಿಎಡಿ ಫೌಂಡೇಶನ್ ಟ್ರಸ್ಟ್ ಮೂಲಕ ನೀಡಲಾದ ಇಸಿಜಿ ಯಂತ್ರವನ್ನು ಅಮಾಸೆಬೈಲಿನ ಕೀರ್ತಿ ಕ್ಲಿನಿಕ್ ನ ಡಾ|ಗುರುದತ್ ಕೊಡ್ಗಿ ಹಾಗೂ ಆಯುಷ್ ಆರೋಗ್ಯ ಕ್ಷೇಮ ಕೇಂದ್ರದ ಡಾ|ಹೇಮಲತಾ ಅವರು ಪಡೆದುಕೊಂಡಿದ್ದು, ಶೀಘ್ರವಾಗಿ ಸ್ಪಂದಿಸಿರುವ ಡಾ|ಪದ್ಮನಾಭ್ ಕಾಮತ್ ಮತ್ತು ಅವರ ಟ್ರಸ್ಟ್ ಗೆ ಅಭಿನಂದನೆ ತಿಳಿಸಿದ್ದಾರೆ.
ಅಮಾಸೆಬೈಲಿನಲ್ಲಿ ಆಸ್ಪತ್ರೆಯಿಲ್ಲದೆ ಜನ ಅನುಭವಿಸುತ್ತಿರುವ ಸಂಕಷ್ಟದ ಕುರಿತಂತೆ ಉದಯವಾಣಿಯಲ್ಲಿ ಎ. 20 ರಂದು ಪ್ರಕಟಗೊಂಡ ವಿಶೇಷ ವರದಿಗೆ ಸ್ಪಂದಿಸಿದ್ದ ಕೆಎಂಸಿ ಮಂಗಳೂರಿನ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ| ಪದ್ಮನಾಭ ಕಾಮತ್ “ಕಾರ್ಡಿಯೋಲಜಿ ಆಟ್ ಡೋರ್ ಸ್ಟೆಪ್ ಫೌಂಡೇಶನ್’ ಮೂಲಕವಾಗಿ ಅಲ್ಲಿಗೆ ಇಸಿಜಿ ಯಂತ್ರ ನೀಡುವುದಾಗಿ ತಿಳಿಸಿದ್ದರು.
Related Articles
ಈ ಕುರಿತಂತೆ “ಉದಯವಾಣಿ’ ಜತೆ ಮಾತನಾಡಿದ್ದ ಕುಂದಾಪುರ ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ ಅವರು, “ಉದಯವಾಣಿ’ ಯಲ್ಲಿ ಪ್ರಕಟಗೊಂಡ ವರದಿಯನ್ನು ನೋಡಿ, ಡಾ| ಪದ್ಮನಾಭ ಕಾಮತ್ ಅವರು ಮಂಗಳವಾರ ಬೆಳಗ್ಗೆ ಕರೆ ಮಾಡಿ, ಅಲ್ಲಿಗೆ ಇಸಿಜಿ ಯಂತ್ರವನ್ನು ಕೊಡುವುದಾಗಿ ತಿಳಿಸಿದ್ದರು. ಇದರಿಂದ ಹೃದಯಾಘಾತಕ್ಕೆ ಒಳಗಾದವರಿಗೆ ಬಹಳಷ್ಟು ಸಹಾಯಕವಾಗಲಿದೆ. ಅದನ್ನು ಸದ್ಯ ಅಮಾಸೆಬೈಲಿನಲ್ಲಿರುವ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿಟ್ಟು, ಒಬ್ಬರಿಗೆ ತರಬೇತಿ ನೀಡಿ, ಅದರ ಬಗ್ಗೆ ತಿಳಿಸಿಕೊಟ್ಟು, ಜನರಿಗೆ ನೆರವಾಗುವಂತೆ ಮಾಡಲಾಗುವುದು ಎಂದವರು ತಿಳಿಸಿದ್ದಾರೆ.
ಉದಯವಾಣಿ ವರದಿ: ಅಮಾಸೆಬೈಲಿನ ಕೆಳಸುಂಕ, ಕೆಲಾ, ಶ್ಯಾಮೆಹಕ್ಲು, ತೊಂಬಟ್ಟು, ನಡಂಬೂರು ಮತ್ತಿತರ ಭಾಗದ ಜನರು ತುರ್ತು ಚಿಕಿತ್ಸೆಗಾಗಿ 20-25 ಕಿ.ಮೀ. ದೂರ ಸಂಚರಿಸಬೇಕಾಗಿದ್ದು, ಈ ಬಗ್ಗೆ “ಉದಯವಾಣಿ’ ಎ. 20 ರಂದು “ಆಸ್ಪತ್ರೆಗೆ ಹೋಗಬೇಕಾದರೆ 25 ಕಿ.ಮೀ. ಸಂಚರಿಸಬೇಕು’ ಎನ್ನುವುದಾಗಿ ಮುಖ್ಯ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿ ಗಮನಸೆಳೆದಿತ್ತು.