ಜಾದೂ ಮಾಡೋರಿಗೆ ಚಪ್ಪಾಳೆಯೇ ಜೀವಾಳ. ಜಾಸ್ತಿ ಚಪ್ಪಾಳೆ ಯಾವ ಪ್ರಯೋಗಕ್ಕೆ ಬೀಳುತ್ತದೆ. ಯಾವುದಕ್ಕೆ ಬೀಳುವುದಿಲ್ಲ. ಈ ರೀತಿ ಜಾದೂ ಮಾಡಬೇಕಾದರೆ, ಟಾರ್ಗೆಟ್ ಯಾರನ್ನು ಮಾಡಬೇಕು? ಹೇಗೆ ಅವರನ್ನು ತಲುಪಬೇಕು ಇವೆಲ್ಲವೂ ಇವರಿಗೆ ತಿಳಿದಿರುತ್ತದೆ. ಇಂಥ ಚಪ್ಪಾಳೆ ತಂದುಕೊಡುವ ಜಾದೂ ಪ್ರಯೋಗಗಳಲ್ಲಿ ಪ್ರಮುಖವಾದದ್ದು ಈ ನಾಣ್ಯ ಜಾದೂ ಕೂಡ ಒಂದು. ಅದು ಹೇಗೆಂದರೆ, ಪ್ರೇಕ್ಷಕರಿಂದ ಒಂದು ನಾಣ್ಯವನ್ನು ತೆಗೆದುಕೊಳ್ಳಿ. ಅದನ್ನು ಅವರ ಕಣ್ಣೆದುರಲ್ಲೇ ಒಂದು ಗಾಜಿನ ಲೋಟದೊಳಗೆ ಹಾಕಿ. ಈಗ ನಿಮ್ಮ ಕೈಯನ್ನು ಆ ಲೋಟದ ಮೇಲೆ ಆಡಿಸುತ್ತಾ, “ಮೇಲೆ ಬಾ’ ಅಂದರೆ ನಾಣ್ಯ ಮೇಲೆ ಬರುತ್ತದೆ. “ಕೆಳಗೆ ಹೋಗು’ ಅಂದರೆ ಕೆಳಗೆ ಹೋಗುತ್ತದೆ. ನಾಣ್ಯ, ನೀವು ಹೇಳಿದಂತೆ ಕೇಳಿದಾಗ ಪ್ರೇಕ್ಷರಿಂದ ಚಪ್ಪಾಳೆಯೋ ಚಪ್ಪಾಳೆ.
ಈ ನಾಣ್ಯದ ಹಿಂದಿನ ಜಾದೂ ರಹಸ್ಯ ಇಷ್ಟೇ.
ಒಂದು ಉದ್ದವಾದ ತಲೆ ಕೂದಲಿಗೆ (ಹೆಂಗಸರ ಉದ್ದ ತಲೆಗೂದಲನ್ನು ಮೊದಲೇ ವ್ಯವಸ್ಥೆ ಮಾಡಿಟ್ಟುಕೊಳ್ಳಿ) ಎರಡೂ ತುದಿಯಲ್ಲಿ ಜೇನು ಮೇಣವನ್ನು ಸಣ್ಣ ಉಂಡೆಯಾಗಿ ಮಾಡಿ ಅಂಟಿಸಿ. ಅದರ ಒಂದು ತುದಿಯನ್ನು ನಿಮ್ಮ ಅಂಗಿಯ ಒಂದು ಗುಂಡಿಗೆ ಅಂಟಿಸಿಟ್ಟುಕೊಳ್ಳಿ. ಇದೆಲ್ಲವನ್ನು ನೀವು ಮೊದಲೇ ಮಾಡಿ ಸಿದ್ಧರಾಗಿರಬೇಕು. ಪ್ರೇಕ್ಷಕನಿಂದ ನಾಣ್ಯವನ್ನು ತೆಗೆದುಕೊಂಡ ತಕ್ಷಣ ಮೇಣದ ಇನ್ನೊಂದು ತುದಿಯನ್ನು ಅದಕ್ಕೆ ಉಪಾಯವಾಗಿ ಅಂಟಿಸಬೇಕು. ಆನಂತರ ನಾಣ್ಯವನ್ನು ಒಂದು ಗಾಜಿನ ಲೋಟಕ್ಕೆ ಹಾಕಿ. ನೀವು ಲೋಟವನ್ನು ಸ್ವಲ್ಪ ತಗ್ಗಿನಲ್ಲಿ ಹಿಡಿದುಕೊಂಡು, ಬಲಗೈಯ ಬೆರಳಿನಿಂದ ಮಂತ್ರ ಹಾಕುವವರಂತೆ ನಟಿಸುತ್ತಾ ಆ ಕೂದಲನ್ನು ಮೇಲೆ, ಕೆಳಗೆ ಚಲಿಸುವಂತೆ ಮಾಡಿದರೆ ನಾಣ್ಯ ಕೂಡಾ ಲೋಟದಲ್ಲಿ ಮೇಲೆ, ಕೆಳಗೆ ಹೋಗುತ್ತದೆ.
ಕೊನೆಗೆ, ನಾಣ್ಯವನ್ನು ಮತ್ತೆ ವಾಪಸ್ ಪ್ರೇಕ್ಷಕರಿಗೆ ಕೊಡಬೇಕು. ಆಗ ಏನು ಮಾಡಬೇಕೆಂದರೆ, ಗ್ಲಾಸ್‌ನಿಂದ ಎತ್ತಿ ಆನಂತರ, ಅದರ ಮೇಲೆ ಹರಡಿರುವ ಮೇಣವನ್ನು ಬೆರಳಿನಿಂದ ಉಪಾಯವಾಗಿ, ಯಾರಿಗೂ ಕಾಣದಂತೆ ಒರಸಿಕೊಡಿ. ಆಗ ನಿಮ್ಮ ಜಾದೂ ಪ್ರಯತ್ನ ಶೇ.ನೂರಕ್ಕೆ ನೂರರಷ್ಟು ಸಕ್ಸಸ್.
ಉದಯ್ ಜಾದೂಗಾರ್