Advertisement

ಸೇಬಾಗುವ ಕಿತ್ತಳೆ

10:04 AM Dec 20, 2019 | mahesh |

ಹಣ್ಣುಗಳ ಪರಿಚಯ ಎಲ್ಲರಿಗೂ ಇದ್ದೇ ಇರುತ್ತದೆ. ಸೇಬು ಹಣ್ಣಿಗೂ ಕಿತ್ತಳೆ ಹಣ್ಣಿಗೂ ಇರುವ ವ್ಯತ್ಯಾಸವನ್ನು ನಿಮಗ್ಯಾರಿಗೂ ಹೇಳಿಕೊಡಬೇಕಿಲ್ಲ. ಸೇಬು ಕೆಂಪು ಬಣ್ಣದ್ದು. ಕಿತ್ತಳೆ ಹಣ್ಣು ಕೇಸರಿ ಬಣ್ಣದಿಂದ ಕೂಡಿರುತ್ತದೆ. ಕಿತ್ತಳೆ ಹಣ್ಣನ್ನು ತೋರಿಸಿ ಅದನ್ನು ಸೇಬು ಹಣ್ಣು ಎಂದು ಕರೆದ ಮಾತ್ರಕ್ಕೆ ಅದು ಸೇಬು ಹಣ್ಣಾಗಿಬಿಡುವುದಿಲ್ಲ. ಆದರೆ, ಕಣ್ಣ ಮುಂದಿದ್ದ ಕಿತ್ತಳೆ ಹಣ್ಣನ್ನು ಸೇಬು ಹಣ್ಣಾಗಿ ಮಾರ್ಪಾಡಿಸಿದರೆ ಹೇಗೆ? ಈ ರೀತಿ ಮಾಡಿ ತೋರಿಸಿ,ಜಾದು ನೋಡುತ್ತಿರುವ ಇಡೀ ಪ್ರೇಕ್ಷಕ ಸಮುದಾಯವೇ ನಿಬ್ಬೆರಗಾಗುತ್ತದೆ. ಈ ರೀತಿಯ ಬೆರಗುಗಳಿಂದಲೇ ಜಾದೂ ಪ್ರದರ್ಶನ ಯಶಸ್ವಿಯಾಗುವುದು ಮತ್ತು ಆ ಬಗೆಗೆ ಕುತೂಹಲ ಉಳಿದುಕೊಳ್ಳುವುದು.

Advertisement

ಪ್ರದರ್ಶನ
ಕಿತ್ತಳೆಯನ್ನು ಸೇಬು, ಸೇಬನ್ನು ಕಿತ್ತಳೆ ಹಣ್ಣಾಗಿಸುವುದಕ್ಕೆ ಕೆಲ ತಂತ್ರಗಳನ್ನು ಬಳಸಬೇಕು. ಮೊದಲು ಜಾದುಗಾರ ಏನು ಮಾಡುತ್ತಾನೆ ಅಂದರೆ…

ಚನ್ನ ತಲೆಯ ಮೇಲಿನ ಟೋಪಿಯನ್ನು ತೆಗೆದು ಅದು ಖಾಲಿ ಆಗಿರುವುದನ್ನು ಖಾತ್ರಿ ಪಡಿಸಲು ಪ್ರೇಕ್ಷಕರ ಮುಂದೆ ತೋರಿಸುತ್ತಾನೆ. ನಂತರ, ಅದರೊಳಗೆ ಒಂದು ಕಿತ್ತಳೆ ಹಣ್ಣನ್ನು ಇಟ್ಟು “ಅಬ್ರಕಡಬ್ರ’ ಎನ್ನುತ್ತಾ ಕೈ ಹಾಕಿ, ತೆಗೆದಾಗ ಕಿತ್ತಳೆ ಹಣ್ಣು ಸೇಬು ಹಣ್ಣಾಗಿರುತ್ತದೆ. ಈ ರೀತಿ ನೀವೂ ಮಾಡಲು ಸಾಧ್ಯವಾದರೆ ಎಷ್ಟು ಚೆನ್ನಾಗಿರುತ್ತದಲ್ಲವೇ?

ತಂತ್ರ ಇದು
ಇಲ್ಲಿ ಎರಡು ಚಿತ್ರಗಳನ್ನು ಕೊಡಲಾಗಿದೆ. ಸರಿಯಾಗಿ ಗಮನಿಸಿ ನೋಡಿ,  ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ ಕಿತ್ತಳೆ ಹಣ್ಣನ್ನು ಮೊದಲೇ ಅರ್ಧ ಸುಲಿದು, ಒಳಗಿನ ತೊಳೆಗಳನ್ನೆಲ್ಲ ತೆಗೆದು, ಅದರೊಳಗೆ ಒಂದು ಸೇಬನ್ನು ಮೊದಲೇ ಇಟ್ಟಿರಬೇಕು. ಕಿತ್ತಳೆ ಸಿಪ್ಪೆಯನ್ನು ಸುಲಿಯುವಾಗ ಹುಷಾರ್‌! ಯಾವುದೇ ಕಾರಣಕ್ಕೂ ತುಂಡು ತುಂಡಾಗಿ ಚೂರು ಮಾಡಿರಬಾರದು. ಒಂದು ಅಥವಾ ಎರಡು ಚೂರುಗಳನ್ನಾಗಿ ಸುಲಿದರೆ ಸೇಬನ್ನು ಇಡುವುದು ಸುಲಭವಾಗುತ್ತದೆ. ಟೋಪಿಯಲ್ಲಿ ಕಿತ್ತಳೆಯನ್ನು ಇಟ್ಟು ಕೆಳಗಿನ ಚಿತ್ರದಲ್ಲಿರುವಂತೆ ಸೇಬನ್ನು ಹೊರಗೆ ತೆಗೆದು ತೋರಿಸಬೇಕು. ಈ ಪ್ರಕ್ರಿಯೆ ಮಾಡಬೇಕಾದರೆ, ಬಹಳ ಎಚ್ಚರಿಕೆ ಅಗತ್ಯ. ಸ್ವಲ್ಪ ಯಾಮಾರಿದರೂ ಎಡವಟ್ಟಾಗಿಬಿಡುತ್ತದೆ. ಹೀಗಾಗಿ, ಜಾದೂವನ್ನು ಜಾರಿ ಮಾಡುವ ಮೊದಲು ಸ್ವಲ್ಪ ಸರ್ಕಸ್‌ ಮಾಡಬೇಕಾಗುತ್ತದೆ. ಇದು ಸರಿಯಾಗಿದ್ದರೆ, ಚಪ್ಪಾಳೆ ಗ್ಯಾರಂಟಿ.

ಉದಯ್‌ ಜಾದೂಗಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next