ಸಾಗರ: ನಗರದ ಜೆಸಿ ರಸ್ತೆಯಲ್ಲಿನ ಉದಯಕಲಾವಿದರು ನಾಟಕ ಸಂಸ್ಥೆಯ ರಿಹರ್ಸಲ್ ಜಾಗವಾಗಿ, ಚಿಂತನ ಮಂಥನಗಳ ತಾಣವಾಗಿ “ಅಟ್ಟ’ಎಂದೇ ಜನಪ್ರಿಯವಾಗಿದ್ದ ಸಂಸ್ಥೆಯ ಕಟ್ಟಡ ನೆಲಸಮವಾಗುತ್ತಿದೆ. ಖಾಸಗಿ ಕಟ್ಟಡವಾದುದರಿಂದ ಕಟ್ಟಡ ಮಾಲೀಕರು ಹಳೆಯ ಕಟ್ಟಡ ಕೆಡವಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಮುಂದಾಗಿದ್ದಾರೆ. ಇದರಿಂದ ಸಾಗರದ ಸಾಂಸ್ಕೃತಿಕ ಮೆರಗಿಗೆ ಕಾರಣವಾಗಿದ್ದ ಹವ್ಯಾಸಿ ತಂಡದ ಕಟ್ಟಡ ಮರೆಯಾಗಲಿದ್ದು, ಸಾಂಸ್ಕೃತಿಕ ಜಗತ್ತಿನ ಇನ್ನೊಂದು ಕೊಂಡಿ ಇತಿಹಾಸದ ಪುಟ ಸೇರುವಂತಾಗಿದೆ.
ರಾಜ್ಯದ ನಾಟಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಉದಯ ಕಲಾವಿದರು ಸಂಸ್ಥೆ ಕೂಡಹೊಸ ಉತ್ಸಾಹಿಗಳ ಸೇರ್ಪಡೆಯ ಕೊರತೆ ಅನುಭವಿಸುತ್ತಿದೆ. ಸಂಸ್ಥೆಯ ಹಿರಿಯ ಜೀವಗಳು ವಯೋಸಹಜ ಜೀವನ ಸಂಜೆಯ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕೆಲವರು ಬದುಕಿನ ಇನ್ನಿಂಗ್ಸ್ ಮುಗಿಸಿದ್ದಾರೆ. ಪುನರುಜ್ಜೀವನದ ಕನಸು ಕೆಲವರಲ್ಲಾದರೂ ಇದ್ದರೂ, “ಅಟ್ಟ’ ಮಾಯವಾಗುವುದು ಉತ್ಸಾಹವನ್ನು ಮತ್ತಷ್ಟು ಕೆಳಗೆ ತಳ್ಳುವ ಸಾಧ್ಯತೆಗಳಿವೆ.
ಎನ್.ಆರ್. ಮಾಸೂರ್ ಮತ್ತವರ ಗೆಳೆಯರು 1948ರಲ್ಲಿ ಉದಯ ಕಲಾವಿದರುಸಂಸ್ಥೆ ಸ್ಥಾಪಿಸಿದರು. ಶ್ರೀರಂಗರ ನಾಟಕಗಳ ಪ್ರದರ್ಶನದಿಂದ ಈ ಸಂಸ್ಥೆ ರಾಜ್ಯದಲ್ಲಿ ಹೆಸರುವಾಸಿಯಾಯಿತು. ಶ್ರೀರಂಗ, ದ.ರಾ. ಬೇಂದ್ರೆ, ಎಂ. ಗೋಪಾಲಕೃಷ್ಣ ಅಡಿಗ, ಚಂದ್ರಶೇಖರ ಕಂಬಾರ, ಬಿ.ವಿ. ಕಾರಂತಮುಂತಾದವರು ಅಟ್ಟಕ್ಕೆ ಬಂದು ಹೋಗಿದ್ದಾರೆ.ಕನ್ನಡದ ಪ್ರಮುಖ ನಾಟಕಗಳಲ್ಲದೇ ಆಂಗ್ಲ, ಫ್ರೆಂಚ್, ಹಿಂದಿ ಸೇರಿದಂತೆ ಸಾವಿರಕ್ಕೂ ಮಿಕ್ಕಿ ನಾಟಕಗಳ ಪ್ರದರ್ಶನಕ್ಕೆ ಈ ಅಟ್ಟದಲ್ಲಿಯೇ ಸಿದ್ಧತೆಯಾಗಿದೆ. ಎನ್.ಆರ್. ಮಾಸೂರ್, ಗುರುರಾವ್ ಬಾಪಟ್ ಇನ್ನಿತರ ನಿರ್ದೇಶಕರ ನಾಟಕ ಪ್ರಸಿದ್ಧಿ ಗಳಿಸಿದೆ. ವಿಜಯವಾಮನ, ರವಿಶಂಕರ ಕೋಳಿವಾಡ, ಮಂಜುನಾಥಜೇಡಿಕುಣಿ, ಸಿ.ಟಿ. ಬ್ರಹ್ಮಾಚಾರ್ ಇನ್ನೂ ಮುಂತಾದವರು ನಾಟಕ ನಿರ್ದೇಶಿಸಿದ್ದಾರೆ. ಅನೇಕರು ಅಟ್ಟದ ಕಾರಣದಿಂದ ಕಲಾವಿದರಾಗಿದ್ದಾರೆ. ಸಾಗರಕ್ಕೆ ಖ್ಯಾತಿ ತಂದುಕೊಟ್ಟ, ಹವ್ಯಾಸಿ ರಂಗಭೂಮಿಯಲ್ಲಿ ಮಹತ್ವದ ಸ್ಥಾನ ಗಳಿಸಿದ್ದ ಸಾಗರದ ಉದಯ ಕಲಾವಿದರು ಸಂಸ್ಥೆಯ “ಅಟ್ಟ’ವೆಂಬ ಕಟ್ಟಡ ಇನ್ನು ಕೇವಲ ನೆನಪು ಮಾತ್ರ. ಅದು ಸಂಸ್ಥೆಯ ಅಸ್ತಿತ್ವಕ್ಕೂ ಅನ್ವಯವಾಗದಿರಲಿ ಎಂಬ ಆಶಯವನ್ನು ರಂಗಾಸಕ್ತರಲ್ಲಿ ದಟ್ಟವಾಗಿದೆ.
ರಿಹರ್ಸಲ್‌ನ ಅಟ್ಟ ವಾಣಿಜ್ಯಿಕ ಕಾರಣಗಳಿಂದ ಮಾಯವಾಗುವುದು ಅನಿವಾರ್ಯವಾಗಿದೆ. ಆದರೆ ಉದಯ ಕಲಾವಿದರು ಸಂಸ್ಥೆಯ ಅಭಿರುಚಿಯನ್ನು ಬೇರೊಂದು ರಿಹರ್ಸಲ್‌ತಾಣದಲ್ಲಿ ಮುಂದುವರಿಸಲಾಗುತ್ತದೆ. ಸವಾಲುಗಳ ನಡುವೆಯೂ ಸಂಸ್ಥೆ ತನ್ನ ಸೇವೆಯನ್ನು ಒದಗಿಸಲು ಕಟಿಬದ್ಧವಾಗಿದೆ. ತಾತ್ಕಾಲಿಕವಾಗಿ ಸಂಸ್ಥೆಯ ಎಲ್ಲಾ ವಸ್ತುಗಳನ್ನು ಮಾಲೀಕರೇ ಸ್ವತಃ ಸಾಗಣೆ ಮಾಡಿ ತಮ್ಮ ಸ್ವಂತ ಕಟ್ಟಡದಲ್ಲಿ ಇಟ್ಟುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ಸ್ಥಳದ ಬಗ್ಗೆ ಚಿಂತನೆ ನಡೆಸಲಾಗುವುದು.
–ಟಿ.ಎಸ್. ರಾಘವೇಂದ್ರ, ಅಧ್ಯಕ್ಷರು, ಉದಯ ಕಲಾವಿದರು, ಸಾಗರ
ನಾಟಕ ತಂಡವಾದುದರಿಂದ ಬಾಡಿಗೆ, ಇನ್ನಿತರ ವಿಷಯದಲ್ಲಿ ಯಾವ ನಿರೀಕ್ಷೆ ಇರಲಿಲ್ಲ. ಆದರೂ ವಾರ್ಷಿಕವಾಗಿ ತಪ್ಪದೇ ಬಾಡಿಗೆ ನೀಡಲಾಗುತ್ತಿತ್ತು. ಅನಿವಾರ್ಯ ಕಾರಣಗಳಿಂದಾಗಿ ಕಟ್ಟಡ ನೆಲಸಮ ಮಾಡಲಾಗುತ್ತಿದೆ. ಸದ್ಯಕ್ಕೆ ನಮ್ಮ ಮನೆಯಲ್ಲಿ ನಾಟಕದ ಪರಿಕರಗಳನ್ನು ಇಡಲು ಸಂಸ್ಥೆಗೆ ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ಪದಾಧಿಕಾರಿಗಳ ಜತೆ ಚರ್ಚಿಸಿ ಅವಕಾಶ ಕಲ್ಪಿಸಲಾಗುವುದು.
–ಎಸ್. ಶಶಿಧರ ಯಾಗೈನ್, ಕಟ್ಟಡ ಮಾಲೀಕರು, ಸಾಗರ