Advertisement

ಉದನೂರು ಜೋಡು ಬಸವೇಶ್ವರ ರಥೋತ್ಸವ

10:29 AM Feb 01, 2018 | Team Udayavani |

ಕಲಬುರಗಿ: ಗುರುವಿನಲ್ಲಿ, ಪವಾಡ ಪುರುಷರಲ್ಲಿ, ಆಧ್ಯಾತ್ಮಿಕ ಚಿಂತಕರ ಮೇಲೆ ಹೊಂದಿರುವ ಭಕ್ತಿ ಮುಂದೆ ಮತ್ತೂಂದು ದೊಡ್ಡದಿಲ್ಲ ಎಂದು ಕೋಟನೂರ-ಮುಗುಳಖೋಡದ ಮಠದ ಡಾ| ಮುರುಘ ರಾಜೇಂದ್ರ ಮಹಾಸ್ವಾಮೀಜಿ ನುಡಿದರು.

Advertisement

ಬುಧವಾರ ನಗರದ ಹೊರ ವಲಯ ಉದನೂರ ಗ್ರಾಮದ ರಥೋತ್ಸವಕ್ಕೆ ಚಾಲನೆ ನೀಡಿ ತದನಂತರ ನಡೆದ ಧಾರ್ಮಿಕ ಸಭೆಯನ್ನುದ್ದೇಶಿಸಿ ಅವರು ಆಶೀರ್ವಚನ ನೀಡಿದರು.

ಮಹಾತ್ಮರು, ಸತ್ಪುರುಷರಿಗೆ ಶ್ರೀಮಂತಿಕೆ ಯಾವುದೇ ಇಲ್ಲ. ಭಕ್ತರೇ ಎಲ್ಲ . ಲಿಂಗೈಕ್ಯ ಷಡಕ್ಷರಿ ಸಿದ್ಧರಾಮೇಶ್ವರ
ಶಿವಯೋಗಿಗಳು ಉದನೂರ ಜನತೆ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದರು. ರಾಜಕಾರಣಿ ಒಂದು ಗ್ರಾಮದ ಕೆಲವರ ಮೇಲೆ, ಅಧಿಕಾರಿಗಳು ಒಂದು ಬಡಾವಣೆ ಮೇಲೆ ಪ್ರೀತಿ ಹೊಂದಿರಬಹುದು. ಆದರೆ ಪವಾಡ ಪುರುಷ, ಮಹಾನ್‌ ಯೋಗಿ ಸಿದ್ಧರಾಮೇಶ್ವರ ಅವರು ಇಡೀ ಉದನೂರ ಗ್ರಾಮದ ಮೇಲೆ ಪ್ರೀತಿ ಹಾಗೂ ಅಪಾರ ನಂಬಿಕೆ ಹೊಂದಿದ್ದರು ಎಂದು ಅವರ ಲೀಲೆಗಳ ಕುರಿತಾಗಿ ವಿವರಣೆ ನೀಡಿದರು. 

ಉದನೂರ ಜೋಡು ಬಸವೇಶ್ವರ ಜಾತ್ರೆಯು ಮುಂದಿನ ದಿನಗಳಲ್ಲಿ ಮಹಾದಾಸೋಹಿ ಶರಣಬಸವೇಶ್ವರ
ಜಾತ್ರೆಯಂತೆ ಸುಪ್ರಸಿದ್ಧಿಯಾಗಲಿದೆ. ಒಂದೇ ನಾಣ್ಯದ ಎರಡು ಮುಖಗಳಾಂತಾಗಲಿವೆ ಎಂದು ಡಾ| ಮುರುಘ ರಾಜೇಂದ್ರ ಮಹಾಸ್ವಾಮೀಜಿ ಹೇಳಿದರು. ಚಿನ್ಮಯಗಿರಿ-ಚೌಡಾಪುರ ಮಹಾಂತೇಶ್ವರ ಮಠದ ನೂತನ ಪಟ್ಟಾಧಿಕಾರಿಗಳಾಗಿರುವ ಅಣ್ಣಯ್ಯ ದೇವರು ಮಾತನಾಡಿ, ಗುರು ಹಿರಿಯರ ಆಶೀರ್ವಾದದೊಂದಿಗೆ ಸನ್ಮಾರ್ಗದಲ್ಲಿ ಮುನ್ನಡೆದರೆ, ತಿಳಿಯಾದ ಮನಸ್ಸು ಹೊಂದಿದ್ದಲ್ಲಿ ಬಯಸಿದ್ದನ್ನು ಪಡೆಯಬಹುದು ಎಂದು ಹೇಳಿದರು.

ಮಾಜಿ ಶಾಸಕ ಶಶೀಲ ಜಿ. ನಮೋಶಿ, ಬಸವರಾಜ ಡಿಗ್ಗಾವಿ, ದೇವೇಗೌಡ ತೆಲ್ಲೂರ, ಪವನಕುಮಾರ ವಳಕೇರಿ, ಗ್ರಾಮದ ಮುಖಂಡರಾದ ಶಿವರಾಜ ಪೊಲೀಸ್‌ ಪಾಟೀಲ, ಶ್ರೀಮಂತ ಉದನೂರ ಮುಂತಾದವರಿದ್ದರು. ಶಿವಶಂಕರ
ಬಿರಾದಾರ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಗ್ರಾಮದ ಅಪ್ಪಾಜಿ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ರಾಜಕುಮಾರ ಉದನೂರ ನಿರೂಪಿಸಿದರು. ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next