Advertisement

ಉದನೆ ತೂಗು ಸೇತುವೆ: ಕಾಂಕ್ರೀಟ್‌ ಹಲಗೆ ಅಲ್ಲಲ್ಲಿ ಬಿರುಕು

09:17 PM Aug 28, 2021 | Team Udayavani |

ಸುಬ್ರಹ್ಮಣ್ಯ: ಉದನೆಯಲ್ಲಿ ಸುಮಾರು 24 ವರ್ಷಗಳ ಹಿಂದೆ ಗುಂಡ್ಯ ಹೊಳೆಗೆ ನಿರ್ಮಾಣ ಗೊಂಡಿ ರುವ ತೂಗುಸೇತುವೆಯು ಶಿಥಿಲಾವಸ್ಥೆಯಲ್ಲಿದ್ದು, ಕಾಂಕ್ರೀಟ್‌ ಹಲಗೆ ನಾಲ್ಕೈದು ಕಡೆಗಳಲ್ಲಿ ಬಿರುಕು ಬಿಟ್ಟಿದ್ದು ಜನರ ಓಡಾಟಕ್ಕೆ ಅಪಾಯಕಾರಿಯಾಗಿದೆ. ದುರಸ್ತಿಗೆ ಆಗ್ರಹ ವ್ಯಕ್ತವಾಗಿದೆ.

Advertisement

ಶಿರಾಡಿ ಹಾಗೂ ಕೊಣಾಜೆ ಗ್ರಾಮ ಸಂಪರ್ಕಕ್ಕೆ ಈ ಭಾಗದ ಜನರು ಸುತ್ತು ಬಳಸಿ ಬರಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಈ ಭಾಗದ ಜನರ ಬೇಡಿಕೆಯಂತೆ 1997ರಲ್ಲಿ ತೂಗು ಸೇತುವೆ ನಿರ್ಮಾಣಗೊಂಡಿತ್ತು. ತೂಗು ಸೇತುವೆ ಸರದಾರ ಸುಳ್ಯದ ಗಿರೀಶ್‌ ಭಾರದ್ವಾಜ್‌ ಅವರು ಈ ತೂಗು ಸೇತುವೆ ನಿರ್ಮಾಣ ಮಾಡಿದ್ದಾರೆ. ಅವರ 2ನೇ ತೂಗು ಸೇತುವೆ ಇದಾಗಿದೆ. ಈಗ ತೂಗು ಸೇತುವೆ ನಿರ್ಮಾಣಗೊಂಡು ಬರೋಬ್ಬರಿ 24 ವರ್ಷಗಳಾಗುತ್ತಿದೆ.

ಬಿರುಕು ಬಿಟ್ಟ ಹಲಗೆ
ಬಹುಪಯೋಗಿ ಆಗಿರುವ ಉದನೆ ತೂಗು ಸೇತುವೆಯ ನಾಲ್ಕೈದು ಕಡೆಗಳಲ್ಲಿ ಕಾಂಕ್ರಿಟ್‌ ಹಲಗೆ ಬಿರುಕು ಬಿಟ್ಟಿದೆ. ಬಿರುಕು ಬಿಟ್ಟ ಹಲಗೆ ಮೂಲಕ ನದಿ ನೀರು ಕಾಣಿಸುತ್ತಿದೆ. ಜನರು ಓಡಾಟ ನಡೆಸುವ ವೇಳೆ ತಪ್ಪಿ ಹಲಗೆಯಲ್ಲಿ ಕಾಲು ಸಿಲುಕಿಕೊಂಡಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಭಯದಲ್ಲೇ ಸಂಚರಿಸಬೇಕಾಗಿದೆ. ತೂಗು ಸೇತುವೆಯ ಎರಡೂ ಬದಿಗೆ ಹಾಕಲಾಗಿರುವ ಬಲೆಗೂ ಅಲ್ಲಲ್ಲಿ ತುಕ್ಕು ಹಿಡಿದಿದೆ. ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಂಡು ಬಿರುಕು ಬಿಟ್ಟ ಕಾಂಕ್ರೀಟ್‌ ಹಲಗೆ ಬದಲಾಯಿಸಿ ಹೊಸ ಹಲಗೆ ಅಳವಡಿಸಬೇಕಾಗಿದೆ. ನಾಲ್ಕು ವರ್ಷಗಳ ಹಿಂದೆ ತೂಗುಸೇತುವೆಯ ಕೆಲವು ಕಡೆಗಳ ಕಾಂಕ್ರೀಟ್‌ ಹಲಗೆ ಬಿರುಕು ಬಿಟ್ಟಿತ್ತು. ಇದನ್ನು ಕೊಣಾಜೆ ಗ್ರಾಮ ಪಂಚಾಯತ್‌ ವತಿಯಿಂದ ಸರಿಪಡಿಸಲಾಗಿತ್ತು. ಕಳೆದ ವರ್ಷವೂ ಈ ತೂಗುಸೇತುವೆಯ ಹಲಗೆ ಮುರಿದು ಹೋಗಿತ್ತು. ಈ ವೇಳೆ ಯಾವುದೇ ಇಲಾಖೆಯಿಂದ ಸ್ಪಂದನೆ ಸಿಗದೆ ಇದ್ದಾಗ ಊರಿನವರೇ ಸೇರಿಕೊಂಡು ಧನ ಸಂಗ್ರಹಿಸಿ ಹಲಗೆ ಅಳವಡಿಸಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಗೃಹ ಸಚಿವರು ಹೆಣ್ಣುಮಕ್ಕಳು ಸುರಕ್ಷಿತವಾಗಿ ಓಡಾಡಬಹುದಾದ ಸಮಯ ತಿಳಿಸಲಿ:ಅಮ್ರಪಾಲಿ ಸುರೇಶ್

ಹೊಳೆಗೆ ಇಳಿದು ಮೀನು ಹಿಡಿಯದಂತೆ ತೂಗುಸೇತುವೆ ಪಕ್ಕದ ಉದನೆ ಭಾಗದಲ್ಲಿ ಹಾಕಲಾಗಿರುವ ಎಚ್ಚರಿಕೆ ಫ‌ಲಕದಲ್ಲಿನ ಅಕ್ಷರಗಳೆಲ್ಲವೂ ಅಳಿಸಿಹೋಗಿದ್ದು ಫ‌ಲಕವೂ ತುಕ್ಕು ಹಿಡಿದಿದೆ. ಇಲ್ಲಿ ಹೊಸತಾಗಿ ಎಚ್ಚರಿಕೆ ಫ‌ಲಕ ಅಳವಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

ಅಂತಿಮ ಹಂತದಲ್ಲಿ
ತೂಗುಸೇತುವೆ ಪಕ್ಕದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಸರ್ವ ಋತು ಸೇತುವೆ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಅದು ಪೂರ್ಣಗೊಂಡು ಸಂಚಾರಕ್ಕೆ ಮುಕ್ತಗೊಂಡಲ್ಲಿ, ಎಲ್ಲ ವಾಹನಗಳು ಇಲ್ಲಿಂದಲೇ ಕಡಬ ಕಡೆಗೆ ಸಂಚರಿಸಬಹುದಾಗಿದೆ.

ಗ್ರಾ.ಪಂ.ಗೆ ತಿಳಿಸಿದ್ದೇವೆ
ಈ ತೂಗುಸೇತುವೆಯಲ್ಲಿ ದಿನಂಪ್ರತಿ ನೂರಾರು ಜನರು ಸೇರಿದಂತೆ ಬೈಕ್‌ ಸವಾರರು ಓಡಾಟ ನಡೆಸುತ್ತಾರೆ. ಲಾಕ್‌ಡೌನ್‌ಗೆ ಮುಂಚೆಯೇ ತೂಗು ಸೇತುವೆಯ ನಾಲ್ಕೈದು ಕಡೆಗಳಲ್ಲಿ ಕಾಂಕ್ರೀಟ್‌ ಹಲಗೆ ಬಿರುಕು ಬಿಟ್ಟಿದೆ. ಈ ಬಗ್ಗೆ ಗ್ರಾಮ ಪಂಚಾಯತ್‌ ಗಮನಕ್ಕೆ ತಂದಿದ್ದೇವೆ
-ಜಯಂತ ಹೂವಿನಮಜಲು, ಗ್ರಾಮಸ್ಥರು.

ಗಮನಕ್ಕೆ ಬಂದಿದೆ
ಕಾಂಕ್ರೀಟ್‌ ಹಲಗೆ ಬಿರುಕು ಬಿಟ್ಟಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ 10 ಕಾಂಕ್ರೀಟ್‌ ಹಲಗೆಗೆ ಪುತ್ತೂರಿನ ಮಾಸ್ಟರ್‌ ಪ್ಲಾನರಿಯಲ್ಲಿ ಆರ್ಡರ್‌ ಮಾಡಲಾಗಿದೆ. ಶೀಘ್ರ ಅಳವಡಿಸುತ್ತೇವೆ. ಗ್ರಾಮ ಪಂಚಾಯತ್‌ನಲ್ಲಿ ಇದಕ್ಕೆ ಅನುದಾನವಿಲ್ಲ. 15ನೇ ಹಣಕಾಸು ಯೋಜನೆಯಡಿ ಅನುದಾನ ಭರಿಸಲಾಗುವುದು
-ಪದ್ಮನಾಭ ಪಿ., ಪಿಡಿಒ ಗ್ರಾ.ಪಂ. ಕಡ್ಯ ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next